ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅತಂತ್ರ ವಿಧಾನಸಭೆ ಎದುರಾದಾಗ ರಾಜ್ಯಪಾಲರು ಏನು ಮಾಡಬೇಕು? ಈ ಬಗ್ಗೆ ನಿಯಮ ಹೇಳೋದೇನು?

Vijay: ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆಯಲ್ಲಿ ದಳಪತಿ ವಿಜಯ್‌ ಅವರ ಟಿವಿಕೆ 107 ಸ್ಥಾನಗಳಲ್ಲಿ ಜಯ ಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಬಹುಮತ ಇಲ್ಲ ಎನ್ನುವ ಕಾರಣಕ್ಕೆ ಆರಂಭದಲ್ಲಿ ಸರ್ಕಾರ ರಚಿಸಲು ಆಹ್ವಾನಿಸಿರಲಿಲ್ಲ. ಹಾಗಾದರೆ ಸರ್ಕಾರ ರಚನೆಯಲ್ಲಿ ರಾಜ್ಯಪಾಲರಿಗೆ ಇರುವ ಪಾತ್ರವೇನು? ಈ ಬಗ್ಗೆ ನಿಯಮ ಏನು ಹೇಳುತ್ತದೆ? ಇಲ್ಲಿದೆ ವಿವರ.

ರಾಜ್ಯಪಾಲರನ್ನು ಭೇಟಿಯಾದ ದಳಪತಿ ವಿಜಯ್‌

ಚೆನ್ನೈ, ಮೇ 10: ತಮಿಳುನಾಡಿನಲ್ಲಿ 5 ದಿನ ನಡೆದ ಬಹುಮತದಾಟಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಟಿವಿಕೆ ನಾಯಕ ಜೋಸೆಫ್‌ ವಿಜಯ್‌ (Vijay) ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್‌, ಎಡಪಕ್ಷಗಳು, ವಿಸಿಕೆ ಮತ್ತು ಮುಸ್ಲಿಂ ಲೀಗ್‌ ಪಕ್ಷಗಳ ಬೇಷರತ್‌ ಬೆಂಬಲದೊಂದಿಗೆ, 120 ಸಂಖ್ಯಾಬಲದೊಂದಿಗೆ ಟಿವಿಕೆ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ 108 ಕಡೆಗಳಲ್ಲಿ ಜಯಗಳಿಸುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಅಗತ್ಯ ಬಹುಮತ ಇಲ್ಲ ಎನ್ನುವ ಕಾರಣಕ್ಕೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಕೆಲವು ದಿನಗಳ ಕಾಲ ಸರ್ಕಾರ ರಚನೆಗೆ ವಿಜಯ್‌ ಅವರಿಗೆ ಆಹ್ವಾನ ನೀಡಿರಲಿಲ್ಲ. ಒಟ್ಟು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಾದ 118 ಶಾಸಕರ ಬೆಂಬಲ ಸಾಬೀತುಪಡಿಸುವಂತೆ ಸೂಚಿಸಿದ್ದರು. ಇದು ದೇಶಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಯಿತು.

ಚುನಾವಣೆಯ ನಂತರ ಅತಂತ್ರ ವಿಧಾನಸಭೆ ಉಂಟಾದರೆ ಹೊಸ ಸರ್ಕಾರ ರಚನೆಯಲ್ಲಿ ರಾಜ್ಯಪಾಲರ ಪಾತ್ರವೇನು? ರಾಜ್ಯಪಾಲರು ಯಾವಗೆಲ್ಲ ಸರ್ಕಾರ ರಚನೆಗೆ ಅತೀ ದೊಡ್ಡ ಪಕ್ಷವನ್ನು ಆಹ್ವಾನಿಸಬೇಕು? ಈ ಬಗ್ಗೆ ಸುಪ್ರೀಂ ಕೋರ್ಟ್‌ ಹೇಳೋದೇನು? ಮುಂತಾದ ಪ್ರಶ್ನೆಗಳಿಗೆಲ್ಲ ಇಲ್ಲಿದೆ ಉತ್ತರ.

ಸಂವಿಧಾನದ 164ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಿಸುತ್ತಾರೆ. ಆದರೆ ಅತಂತ್ರ ವಿಧಾನಸಭೆ ಎದುರಾದಾಗ ಅಂದರೆ ಯಾವುದೇ ಒಂದು ಪಕ್ಷಕ್ಕೆ ಅಗತ್ಯ ಬಹುಮತ ಸಿಗದ ಸಂದರ್ಭದಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಬಗ್ಗೆ ಸಂವಿಧಾನದಲ್ಲಿ ನಿರ್ದಿಷ್ಟ ನಿಯಮವಿಲ್ಲ. ಈ ವೇಳೆ ರಾಜ್ಯಪಾಲರು ಸಂಯಮದಿಂದ ಮಾರ್ಗದರ್ಶನ ನೀಡಬೇಕೆಂದು ನಿಯಮ ಸೂಚಿಸಿದೆ.

ಕೊನೆಗೂ ರಚನೆಯಾಯ್ತು ಜನನಾಯಕ ವಿಜಯ್‌ ಸರ್ಕಾರ; ತಮಿಳುನಾಡಿನಲ್ಲಿ ರಾಜಕೀಯ ಪ್ರಹಸನ ಹೇಗಿತ್ತು?

ಸ್ಥಿರ ಸರ್ಕಾರ ರಚನೆಯ ಉದ್ದೇಶ

ಸ್ಥಿರ ಸರ್ಕಾರ ರಚನೆಯನ್ನು ಖಚಿತಪಡಿಸಿಕೊಳ್ಳುವುದು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥ ರಾಜ್ಯಪಾಲರ ಮುಖ್ಯ ಕರ್ತವ್ಯ. ಇದನ್ನೇ ಕೇಂದ್ರ ಸರ್ಕಾರ 1983ರಲ್ಲಿ ನೇಮಿಸಿದ ಸರ್ಕಾರಿಯಾ ಆಯೋಗ ತಿಳಿಸಿದೆ. ಅಲ್ಲದೆ 1970ರಲ್ಲಿ ನವದೆಹಲಿಯಲ್ಲಿ ನಡೆದ ರಾಜ್ಯಪಾಲರ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಧಾರದ ಪ್ರಕಾರ ರಾಷ್ಟ್ರಪತಿ ನೇಮಿಸಿದ ಐವರು ರಾಜ್ಯಪಾಲರ ಸಮಿತಿ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳು ಇದನ್ನೇ ಪ್ರತಿಪಾದಿಸುತ್ತವೆ. ರಾಜ್ಯಪಾಲರು ತಮ್ಮ ವೈಯಕ್ತಿಕ ನಿಲುವುಗಳ ಆಧಾರದಲ್ಲಿ ಸರ್ಕಾರ ರಚನೆಯ ನಿರ್ಧಾರ ಕೈಗೊಳ್ಳಬಾರದು ಎಂದು ನಿಯಮ ಹೇಳುತ್ತದೆ.

ಯಾವಾಗ ರಾಷ್ಟ್ರಪತಿ ಆಡಳಿತ ?

ಲೋಕ ಭವನವು (ರಾಜ್ಯಪಾಲರ ಕಚೇರಿ) ಕಾನೂನುಬದ್ಧವಾಗಿ ಮುಂದುವರಿಯಬೇಕು ಮತ್ತು ರಾಜಕೀಯ ಪಕ್ಷಗಳು, ಸಚಿವರು ಮತ್ತು ಸ್ವತಂತ್ರ ಶಾಸಕರೊಂದಿಗೆ ಸರ್ಕಾರ ರಚನೆಯ ಎಲ್ಲ ಸಾಧ್ಯತೆಗಳನ್ನು ಸೂಕ್ತ ಸಮಯದೊಳಗೆ ಕಂಡುಕೊಳ್ಳಬೇಕು. ಎಲ್ಲ ಪರ್ಯಾಯ ಮಾರ್ಗಗಳು ವಿಫಲವಾದಾಗ ಮಾತ್ರ ರಾಜ್ಯಪಾಲರು ಕೊನೆಯದಾಗಿ ಸಂವಿಧಾನದ 356ನೇ ವಿಧಿಯ ಅಡಿಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಘೋಷಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು.

ಸ್ಥಿರ ಸರ್ಕಾರ ರಚನೆಗೆ ರಾಜ್ಯಪಾಲರು ತೆಗೆದುಕೊಳ್ಳಬೇಕಾದ ಸಮಯವನ್ನು ಸಂವಿಧಾನವು ತಿಳಿಸಿಲ್ಲ. ಹಾಗಂತ ರಾಜ್ಯಪಾಲರು ಸರ್ಕಾರ ರಚನೆಯ ಪ್ರಕ್ರಿಯೆಯನ್ನು ವಿಳಂಬ ಮಾಡುವಂತಿಲ್ಲ. ಯಾಕೆಂದರೆ ಈ ವೇಳೆ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆಯೂ ಇದೆ. ಸುಪ್ರೀಂ ಕೋರ್ಟ್ ತನ್ನ ಬಿ.ಆರ್. ಕಪೂರ್ (2001) ಮತ್ತು ರಾಮೇಶ್ವರ್ ಪ್ರಸಾದ್ (2006) ಪ್ರಕರಣದ ತೀರ್ಪುಗಳಲ್ಲಿ ರಾಜ್ಯ ಶಾಸಕಾಂಗದ ಮೊದಲ ಸಭೆಗೂ ಮೊದಲೇ 174(2)(b) ವಿಧಿಯ ಅಡಿಯಲ್ಲಿ ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಬಹುದು ಎಂದು ವ್ಯಾಖ್ಯಾನಿಸಿದೆ.

ಸುಪ್ರೀಂ ಕೋರ್ಟ್ ಅನುಮೋದಿಸಿದ ಸರ್ಕಾರಿಯಾ ಆಯೋಗದ ವರದಿಯು ಸರ್ಕಾರ ರಚಿಸಲು ರಾಜ್ಯಪಾಲರು ಮೊದಲು ಬಹುಮತ ಗಳಿಸಿದ‌ ಪಕ್ಷವನ್ನು, ಚುನಾವಣಾ ಪೂರ್ವ ಮೈತ್ರಿಕೂಟವನ್ನು ಆಹ್ವಾನಿಸಬೇಕು ಎಂದು ಹೇಳಿದೆ. ತಮಿಳುನಾಡಿನಲ್ಲಿ ಯಾವುದೇ ಪಕ್ಷ ಸರ್ಕಾರ ರಚನೆಗೆ ಅಗತ್ಯ ಬಹುಮತ ಗಳಿಸದ ಹಿನ್ನೆಲೆಯಲ್ಲಿ ರಾಜ್ಯಪಾಲರು ಟಿವಿಕೆಗೆ ಆಹ್ವಾನ ನೀಡಿರಲಿಲ್ಲ ಎನ್ನಲಾಗಿದೆ.

ಎಸ್.ಆರ್. ಬೊಮ್ಮಾಯಿ ತೀರ್ಪಿನಲ್ಲಿ ಏನಿದೆ?

1994ರ ಎಸ್.ಆರ್. ಬೊಮ್ಮಾಯಿ ತೀರ್ಪಿನಲ್ಲಿ 9 ನ್ಯಾಯಾಧೀಶರ ಪೀಠವು, ಸರ್ಕಾರ ಬಹುಮತ ಹೊಂದಿದೆಯೇ ಇಲ್ಲವೇ ಎಂಬುದನ್ನು ವಿಧಾನಸಭೆಯ ಅಧಿವೇಶನವೇ ನಿರ್ಧರಿಸಬೇಕು. ಲೋಕ ಭವನ ಅಥವಾ ರಾಷ್ಟ್ರಪತಿ ಭವನದಲ್ಲಿ ಇದನ್ನು ನಿರ್ಧರಿಸಬಾರದು ಎಂದು ಹೇಳಿತ್ತು.

ಯಾವುದೇ ಆಯ್ಕೆ ಇಲ್ಲದಿದ್ದಾಗ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು. ನ್ಯಾಯಾಲಯವು "ರಾಜ್ಯದಲ್ಲಿ ಸಾಂವಿಧಾನಿಕ ವ್ಯವಸ್ಥೆಯನ್ನು ಸಾಧ್ಯವಾದಷ್ಟು ಕಾಪಾಡಿಕೊಳ್ಳಬೇಕು" ಎಂದು ಸಲಹೆ ನೀಡಿದೆ. ಇತ್ತೀಚಿನ ವರ್ಷಗಳಲ್ಲಿ ಈ ಸಲಹೆಯನ್ನು ದುರುಪಯೋಗಪಡಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ರಾಜ್ಯಪಾಲರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ರಾಜಕೀಯ ಹಿತಾಸಕ್ತಿಗಳನ್ನು ಉತ್ತೇಜಿಸಲು ರಾಷ್ಟ್ರಪತಿ ಆಳ್ವಿಕೆಯನ್ನು ಶಿಫಾರಸು ಮಾಡುತ್ತಿದ್ದಾರೆ ಎನ್ನುವ ದೂರು ಹೆಚ್ಚುತ್ತಿದೆ.

ವಿಶ್ವಾಸ ಮತ ಯಾಚನೆ ಯಾವಾಗ?

ಬಹುಮತದ ಕಳೆದುಕೊಂಡಿದ್ದಾರೆಂದು ಹೇಳಲಾಗುವ ಮುಖ್ಯಮಂತ್ರಿಯ ಬಲಾಬಲವನ್ನು ಪರೀಕ್ಷಿಸುವುದಕ್ಕೆ ಮಾತ್ರ ವಿಶ್ವಾಸ ಮತ ಪರೀಕ್ಷೆ ಸೀಮಿತವಾಗಿರಬೇಕು ಮತ್ತು ಚುನಾವಣೆಗಳ ನಂತರ ಹೊಸ ಸರ್ಕಾರ ರಚನೆಯಲ್ಲಿ ಇದನ್ನು ಬಳಸಬಾರದು ಎಂದೂ ಎಸ್.ಆರ್. ಬೊಮ್ಮಾಯಿ ತೀರ್ಪಿನಲ್ಲಿ ಸೂಚಿಸಲಾಗಿದೆ. ಮತದಾರರ ಆದೇಶದವನ್ನು ರಾಜ್ಯಪಾಲರ ವೈಯಕ್ತಿಕ ವಿವೇಚನೆಗೆ ಬಿಡಬಾರದು ಎಂಬುದನ್ನು ಸುಪ್ರೀಂ ಕೋರ್ಟ್‌ ತೀರ್ಪುಗಳು ಪದೇ ಪದೆ ಒತ್ತಿ ಹೇಳಿವೆ.

ಮುಖ್ಯಮಂತ್ರಿಯಾಗಿ ಇಂದು ದಳಪತಿ ವಿಜಯ್‌ ಪ್ರಮಾಣ ವಚನ ಸ್ವೀಕಾರ

ಕರ್ನಾಟಕದಲ್ಲಿ 2018ರಲ್ಲಿ ಏನಾಗಿತ್ತು?

2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ 104 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಬಹುಮತಕ್ಕೆ ಅಗತ್ಯವಾದ 113 ಸ್ಥಾನಕ್ಕಿಂತ ಕಡಿಮೆ ಇತ್ತು. ಇದೇ ವೇಳೆ 80 ಸ್ಥಾನಗಳನ್ನು ಪಡೆದ ಕಾಂಗ್ರೆಸ್ 37 ಸ್ಥಾನಗಳನ್ನು ಹೊಂದಿದ್ದ ಜೆಡಿಎಸ್‌ಗೆ ತನ್ನ ಬೆಂಬಲ ನೀಡಿತು. ಅದಾಗ್ಯೂ ರಾಜ್ಯಪಾಲ ವಜುಭಾಯಿ ವಾಲಾ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದರು. ಸುಪ್ರೀಂ ಕೋರ್ಟ್ ತಕ್ಷಣ ಬಹುಮತ ಸಾಬೀತುಪಡಸಿಬೇಕೆಂದು ಸೂಚಿಸಿದ್ದರಿಂದ ಈ ಸರ್ಕಾರ 3 ದಿನ ಮಾತ್ರ ಇತ್ತು.

ಇನ್ನು 2017ರಲ್ಲಿ 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ 17 ಸ್ಥಾನ ಗಳಿಸಿದರೆ, ಬಿಜೆಪಿ 13 ಸ್ಥಾನ ಗಳಿಸಿತು. ಮ್ಯಾಜಿಕ್‌ ನಂಬರ್‌ 21 ತಲುಪಲು ಎರಡೂ ಪಕ್ಷಗಳು ವಿಫಲವಾಗಿದ್ದವು. ಆಗ ರಾಜ್ಯಪಾಲೆ ಮೃದುಲಾ ಸಿನ್ಹಾ ಏಕೈಕ ದೊಡ್ಡ ಪಕ್ಷ ಕಾಂಗ್ರೆಸ್ ಅನ್ನು ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಬಿಜೆಪಿಯ ಮನೋಹರ್ ಪರಿಕ್ಕರ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದರು. ಗೋವಾ ಫಾರ್ವರ್ಡ್ ಪಾರ್ಟಿ, ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ ಮತ್ತು ಮೂವರು ಸ್ವತಂತ್ರ ಅಭ್ಯರ್ಥಿಗಳ ಸಹಾಯದಿಂದ ಬಿಜೆಪಿ ಬಹುಮತ ಪರೀಕ್ಷೆಯಲ್ಲಿ ಪಾರಾಯಿತು.

ಸುಪ್ರೀಂ ಕೋರ್ಟ್ ಹೇಳಿದ್ದೇನು?

ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಲೋಕ ಭವನವಲ್ಲ, ಸದನವು ಪ್ರಜಾಪ್ರಭುತ್ವವು ಕಾರ್ಯನಿರ್ವಹಿಸುವ ಸ್ಥಳ ಎಂದು ಹೇಳಿದೆ. ಅಂದರೆ ಯಾರು ಆಡಳಿತ ನಡೆಸಬೇಕು ಎಂಬ ನಿರ್ಧಾರವನ್ನು ರಾಜ್ಯಪಾಲರಿಗೆ ಬಿಡಬಾರದು, ಬದಲಿಗೆ ಇದು ಸದನದಲ್ಲಿ ನಿರ್ಧರಿಸಬೇಕು ಎಂದಿದೆ.

Ramesh Ballamoole

View all posts by this author