ಮುಖ್ಯಮಂತ್ರಿಯಾಗಿ ಇಂದು ದಳಪತಿ ವಿಜಯ್ ಪ್ರಮಾಣ ವಚನ ಸ್ವೀಕಾರ; ತ್ರಿಶಾ, ರಾಹುಲ್ ಗಾಂಧಿ ಸೇರಿ ಹಲವರು ಭಾಗಿ
ರಾಜಕೀಯ ಹೈಡ್ರಾಮಾದ ಬಳಿಕ ತಮಿಳಗ ವೆಟ್ರಿ ಕಳಗಂದ ನಾಯಕ ದಳಪತಿ ವಿಜಯ್ ಇಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಲೋಕಸಭಾ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇನ್ನು ವಿಜಯ್ ಆಪ್ತೆಯಾಗಿರುವ ಚಿತ್ರ ನಟಿ ತ್ರಿಶಾ ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಸಂಗ್ರಹ ಚಿತ್ರ -
ಚೆನ್ನೈ: ರಾಜಕೀಯ ಹೈಡ್ರಾಮಾದ ಬಳಿಕ ತಮಿಳಗ ವೆಟ್ರಿ ಕಳಗಂದ ನಾಯಕ ದಳಪತಿ ವಿಜಯ್ (Vijay) ಇಂದು ತಮಿಳುನಾಡಿನ (Tamil Nadu CM Oath Ceremony) ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೇ 13 ರಂದು ಅಥವಾ ಅದಕ್ಕೂ ಮೊದಲು ತಮ್ಮ ಬಹುಮತವನ್ನು ಸಾಬೀತುಪಡಿಸುವಂತೆ ರಾಜ್ಯಪಾಲರು ಅವರಿಗೆ ಸೂಚಿಸಿದ್ದಾರೆ.
ಹಲವು ಬಾರಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದ ವಿಜಯ್‌ಗೆ ತೋಲ್ ತಿರುಮಾವಳವನ್ ನೇತೃತ್ವದ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಪಕ್ಷ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ತನ್ನ ಬೇಷರತ್ ಬೆಂಬಲವನ್ನು ಘೋಷಿಸಿದೆ. ವಿಸಿಕೆ ಬೆಂಬಲದ ನೆರವಿನೊಂದಿಗೆ, ಟಿವಿಕೆ ನೇತೃತ್ವದ ಒಕ್ಕೂಟದ ಬಲ ಈಗ ಬಹುಮತಕ್ಕೆ ಅಗತ್ಯವಾದ118ನ್ನು ತಲುಪಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 118 ಸ್ಥಾನಗಳನ್ನು ಗಳಿಸಿರುವ ಟಿವಿಕೆ, ಕಾಂಗ್ರೆಸ್ (5), ಸಿಪಿಐ (2), ಸಿಪಿಎಂ (2) ಮತ್ತು ವಿಸಿಕೆ (2) ಪಕ್ಷಗಳ ಬೆಂಬಲ ಪಡೆದುಕೊಂಡಿದೆ. ಟಿವಿಕೆ ಸಂಖ್ಯಾಬಲ ಈಗ 119 ಆಗಿದ್ದು, ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ಈ ಬಾರಿಯ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ವಿಜಯ್, ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಲಿದ್ದಾರೆ. ಹೀಗಾಗಿ ಟಿವಿಕೆ ಸಂಖ್ಯಾಬಲ ಮತ್ತೆ 118 ಆಗಲಿದೆ.
#WATCH | Tamil Nadu: Actor Trisha Krishnan at the Jawaharlal Nehru Stadium in Chennai, where TVK Chief C Joseph Vijay will take oath as the Chief Minister of Tamil Nadu, shortly. pic.twitter.com/oCevs6N1Wx
— ANI (@ANI) May 10, 2026
ಇಂದು ವಿಜಯ್ ಜೊತೆ ಕೆ.ಎ. ಸೆಂಗೊಟ್ಟೈಯನ್, ಆಧವ್ ಅರ್ಜುನ್, ಎನ್ ಆನಂದ್ ಅರುಣ್‌ರಾಜ್, ರಾಜ್ ಮೋಹನ್, ವೆಂಕಟರಾಮನ್, ಟಿ.ಕೆ. ಪ್ರಭು, ಕೀರ್ತನಾ, ಸಿಟಿಆರ್ ನಿರ್ಮಲ್ ಕುಮಾರ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ಲೋಕಸಭಾ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇನ್ನು ವಿಜಯ್ ಆಪ್ತೆಯಾಗಿರುವ ಚಿತ್ರ ನಟಿ ತ್ರಿಶಾ ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.