ನವದೆಹಲಿ, ಆ.7: ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ಒಡೆತನದ ವಾಟ್ಸ್ಆ್ಯಪ್ (WhatsApp), ತನ್ನ ಅತಿದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ, ಬಳಕೆದಾರರು ತಮ್ಮ ಜನ್ಮ ದಿನಾಂಕವನ್ನು ನಮೂದಿಸಲು ಅವಕಾಶ ನೀಡುವ ಹೊಸ ಫೀಚರ್ ಅನ್ನು ಪರೀಕ್ಷಿಸುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ (social media) ಹರಿದಾಡುತ್ತಿರುವ ಸ್ಕ್ರೀನ್‌ಶಾಟ್‌ಗಳಲ್ಲಿ, ಕೆಲವು ಬಳಕೆದಾರರಿಗೆ ಆ್ಯಪ್‌ನ ಮೇಲ್ಭಾಗದಲ್ಲಿ “ನಿಮ್ಮ ಜನ್ಮ ದಿನಾಂಕವನ್ನು ಸೇರಿಸಿ. ಭಾರತದಲ್ಲಿ ಜಾರಿಗೆ ಬರಲಿರುವ ಕಾನೂನುಗಳ ಪ್ರಕಾರ ನಿಮ್ಮ ವಯಸ್ಸನ್ನು ಕೇಳುವುದು ಅಗತ್ಯವಿದೆ” ಎಂಬ ಸಂದೇಶ ಕಾಣಿಸಿಕೊಂಡಿದೆ.
“ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಕಾಯ್ದೆ (DPDP Act) ಸೇರಿದಂತೆ ಭಾರತದಲ್ಲಿ ಜಾರಿಗೆ ಬರಲಿರುವ ಕಾನೂನುಗಳನ್ನು ಪಾಲಿಸುವ ಉದ್ದೇಶದಿಂದ, ಬಳಕೆದಾರರು ತಮ್ಮ ವಯಸ್ಸನ್ನು ದೃಢೀಕರಿಸಲು ಗೌಪ್ಯತೆಗೆ ಆದ್ಯತೆ ನೀಡುವ ವಿಧಾನಗಳನ್ನು ನಾವು ಪರೀಕ್ಷಿಸುತ್ತಿದ್ದೇವೆ” ಎಂದು ವಾಟ್ಸ್ಆ್ಯಪ್ ವಕ್ತಾರರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ತಿಳಿಸಿದ್ದಾರೆ.
ಈ ಕಾಯ್ದೆಯಲ್ಲಿನ ಮಕ್ಕಳ ವೈಯಕ್ತಿಕ ದತ್ತಾಂಶದ ಸಂಸ್ಕರಣೆಗೆ ಸಂಬಂಧಿಸಿದ ನಿಯಮದ ಪ್ರಕಾರ, ಬಳಕೆದಾರರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಎಂಬುದನ್ನು ನಿರ್ಧರಿಸಲು ವಯಸ್ಸಿನ ಪರಿಶೀಲನಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ವಾಟ್ಸಾಪ್ ಬಳಿಕ ಟೆಲಿಗ್ರಾಂ, ಸಿಗ್ನಲ್‌ಗೂ ಕೇಂದ್ರದ ನೋಟಿಸ್! ಯೂಸರ್‌ನೇಮ್ ಫೀಚರ್ ಭದ್ರತೆ ಬಗ್ಗೆ ವರದಿ ಕೇಳಿದ ಸರ್ಕಾರ
ಭಾರತದಲ್ಲಿ ವಾಟ್ಸಾಪ್ 600 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಪ್ರಪಂಚದಾದ್ಯಂತದ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ ಬಳಸುವುದನ್ನು ದೇಶಗಳ ಸರ್ಕಾರಗಳು ನಿಷೇಧಿಸಿವೆ. ಆದರೆ ಆಸ್ಟ್ರೇಲಿಯಾದಂತಹ ಕೆಲವು ದೇಶಗಳು ತಮ್ಮ ನಿಯಮಗಳಲ್ಲಿ ವಾಟ್ಸ್ಆ್ಯಪ್ ಅನ್ನು ಸೇರಿಸಿಲ್ಲ.
ಭಾರತ ಸರ್ಕಾರದೊಂದಿಗಿನ ಉದ್ವಿಗ್ನತೆ ಹೆಚ್ಚಿರುವ ಸಂದರ್ಭದಲ್ಲೇ ಈ ಹೊಸ ಫೀಚರ್ ಬಂದಿದೆ. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾಡಿದ್ದ ಫೇಸ್‌ಬುಕ್ ಪೋಸ್ಟ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದಕ್ಕಾಗಿ ಮೆಟಾ ಕ್ಷಮೆಯಾಚಿಸಿದೆ. ಈ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಗಿತ್ತು.
ಮೆಟಾ, ಇನ್‌ಸ್ಟಾಗ್ರಾಮ್ ಸೇರಿದಂತೆ ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ಮಕ್ಕಳ ಕುರಿತಾದ ಲೈಂಗಿಕ ವಿಷಯಗಳ ಕುರಿತಾಗಿ ಭಾರತದ ಸರ್ಕಾರದ ಪರಿಶೀಲನೆಗೆ ಒಳಗಾಗಿದೆ. ಇಂತಹ ವಿಷಯಗಳ ವಿರುದ್ಧದ ರಕ್ಷಣಾ ಕ್ರಮಗಳನ್ನು ನಿರಂತರವಾಗಿ ಸುಧಾರಿಸುತ್ತಿದ್ದು, ಅಂತಹ ವಿಷಯಕ್ಕೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಎಂದು ಮೆಟಾ ಹೇಳಿದೆ. ಇದೇ ವೇಳೆ, ಫೋನ್ ನಂಬರ್ ಹಂಚಿಕೊಳ್ಳದೆ ಬಳಕೆದಾರರು ಪರಸ್ಪರ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುವ ಹೊಸ ಯೂಸರ್‌ನೇಮ್ ಫೀಚರ್ ಬಿಡುಗಡೆ ಮಾಡುವುದನ್ನು ವಿಳಂಬಗೊಳಿಸುವಂತೆ ಕೇಂದ್ರ ತಂತ್ರಜ್ಞಾನ ಸಚಿವಾಲಯವು ವಾಟ್ಸ್ಆ್ಯಪ್ಗೆ ಸೂಚಿಸಿದೆ. ನಕಲಿ ಗುರುತು ಸೃಷ್ಟಿಸುವುದು ಮತ್ತು ಡಿಜಿಟಲ್ ಅರೆಸ್ಟ್ ವಂಚನೆಗಳ ಆತಂಕದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ಇನ್ನು ಹೊಸ ವಯಸ್ಸಿನ ಪರಿಶೀಲನೆ ವೈಶಿಷ್ಟ್ಯವು ಐಚ್ಛಿಕವಾಗಿದ್ದು, ಬಳಕೆದಾರರು ವಾಟ್ಸ್ಆ್ಯಪ್ ಬಳಸುವುದನ್ನು ಮುಂದುವರಿಸಲು ತಮ್ಮ ವಯಸ್ಸನ್ನು ದೃಢೀಕರಿಸುವ ಅಗತ್ಯವಿಲ್ಲ ಎಂದು ಕಂಪನಿ ತಿಳಿಸಿದೆ.