ದೆಹಲಿ, ಮಾ. 11: ಭಾರತೀಯ ಸೇನೆ ಅಪಾಯಕಾರಿ ಗಡಿಗಳನ್ನು ಕಾಯುವುದಲ್ಲದೆ ನಾಗರಿಕರಿಗೆ ಸಹಾಯ ಮಾಡುವುದಲ್ಲಿಯೂ ದೇಶದ ಜನರತ್ತ ಅಚಲ ಬದ್ಧತೆಯನ್ನು ತೋರಿಸುತ್ತಿದೆ. ಈ ಮನೋಭಾವ ಇತ್ತೀಚೆಗೆ ವೈರಲ್ ಆಗಿರುವ ಒಂದು ವಿಡಿಯೊ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ. ರೂಪ್ ಎಂಬ ಇನ್‌ಸ್ಟಾಗ್ರಾಮ್ (Instagram) ಬಳಕೆದಾರರು ಹಂಚಿಕೊಂಡ ಈ ವಿಡಿಯೊದಲ್ಲಿ (viral video), ಅವರು ಮಥುರಾದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಎದುರಿಸಿದ ಒತ್ತಡದ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.
ತನ್ನ ಫೋನ್ ಬ್ಯಾಟರಿ ಬಹುತೇಕ ಖಾಲಿಯಾಗಿದ್ದ ವೇಳೆ, ತಾಯಿ-ತಂದೆಗೆ ಸ್ಥಳದ ಮಾಹಿತಿ ಕಳುಹಿಸಲು ಸಾಧ್ಯವಾಗದೆ ರೂಪ್ ಚಡಪಡಿಸುತ್ತಿದ್ದರು. ಈ ವೇಳೆ ಮಥುರಾ ಜಂಕ್ಷನ್‌ನಲ್ಲಿ ಸೈನಿಕರೊಬ್ಬರು ರೂಪ್‌ಗೆ ನೆರವಾದರು. ಅವರು ತಮ್ಮ ಪವರ್ ಬ್ಯಾಂಕ್ ನೀಡುವ ಮೂಲಕ ಆಕೆಯ ಫೋನ್‌ನ್ನು ಚಾರ್ಜ್ ಮಾಡಲು ಸಹಾಯ ಮಾಡಿದರು. ಇದರಿಂದ ಆಕೆ ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಯಿತು.
ಇಲ್ಲಿದೆ ವಿಡಿಯೊ:
ಹೋಳಿ ಹಬ್ಬದ ನಂತರ ಬ್ರಜ್‌ನಿಂದ ಹಿಂದಿರುಗುತ್ತಿದ್ದಾಗ, ಮಥುರಾ ಜಂಕ್ಷನ್‌ನಿಂದ ದೆಹಲಿಗೆ ಹೋಗುವ ರೈಲು ರಾತ್ರಿ 8:45ಕ್ಕೆ ಇತ್ತು. ಈ ವೇಳೆ ತನ್ನ ಫೋನ್‌ನಲ್ಲಿ ಕೇವಲ ಶೇಕಡಾ 2ರಷ್ಟು ಬ್ಯಾಟರಿ ಬ್ಯಾಕಪ್ ಮಾತ್ರ ಉಳಿದಿತ್ತು. ಹೋಳಿ ಆಚರಣೆಯ ವೇಳೆ ಪವರ್ ಬ್ಯಾಂಕ್ ನೀರಿಗೆ ಬಿದ್ದು ಹಾಳಾಗಿತ್ತು. ಹೀಗಾಗಿ ತಾಯಿ-ತಂದೆಗೆ ಲೈವ್ ಲೊಕೇಶನ್ ಕಳುಹಿಸಲು ಕೇವಲ 5 ನಿಮಿಷ ಚಾರ್ಜಿಂಗ್ ಬೇಕಿತ್ತು ಎಂದು ರೂಪ್ ಹೇಳಿದರು.
ತನ್ನ ಫೋನ್ ಅನ್ನು ಚಾರ್ಜ್ ಮಾಡಿಕೊಳ್ಳಲು ಆತುರಗೊಂಡ ರೂಪ್, ಪ್ಲಾಟ್‌ಫಾರ್ಮ್‌ನಲ್ಲಿ ಮೂರು ಬೇರೆ ಬೇರೆ ಅಂಗಡಿಗಳ ಬಳಿ ಸಹಾಯ ಕೇಳಿದರು. ಆದರೆ ಪ್ರತಿಯೊಬ್ಬರೂ ಸಹಾಯ ಮಾಡಲು ನಿರಾಕರಿಸಿದರು. ಸಮಯ ಕೈಜಾರಿ ಹೋಗುತ್ತಿದ್ದಂತೆ ಹಾಗೂ ನಿರೀಕ್ಷಣಾ ಕೊಠಡಿ ತುಂಬ ದೂರವಾಗಿದ್ದರಿಂದ, ಕೊನೆಗೆ ಪ್ಲಾಟ್‌ಫಾರ್ಮ್ 6ರ ಪಕ್ಕಕ್ಕೆ ಒಂದು ಸೇನಾ ರೈಲು ಬಂದು ನಿಂತಾಗ ಆಕೆಗೆ ಆಶಾಕಿರಣ ಕಾಣಿಸಿಕೊಂಡಿತು.
ರೈಲಿನಲ್ಲಿ ವಿದೇಶಿ ಮಹಿಳೆಗೆ ಕಿರುಕುಳ: ಶೌಚಾಲಯದವರೆಗೂ ಹಿಂಬಾಲಿಸಿ ಬಾಗಿಲು ತೆರೆಯಲು ಯತ್ನಿಸಿದ ಕಾಮುಕರು!
ʼʼಪ್ಲಾಟ್‌ಫಾರ್ಮ್ 6ರ ಪಕ್ಕದಲ್ಲಿರುವ ಮುಂದಿನ ಪ್ಲಾಟ್‌ಫಾರ್ಮ್‌ನಲ್ಲಿ ಒಂದು ಸೇನಾ ರೈಲು ನಿಂತಿತ್ತು. ಅಲ್ಲಿ ಒಬ್ಬ ಭಾರತೀಯ ಸೇನಾ ಅಧಿಕಾರಿ ತಮ್ಮ ಫೋನ್ ಚಾರ್ಜ್ ಮಾಡುತ್ತಿದ್ದನ್ನು ನಾನು ನೋಡಿದೆ. ಆದ್ದರಿಂದ ಕೇವಲ 5 ನಿಮಿಷಗಳ ಕಾಲ ನನ್ನ ಫೋನ್ ಚಾರ್ಜ್ ಮಾಡಿಕೊಳ್ಳಲು ಸಾಧ್ಯವೇ ಎಂದು ಕೇಳಿದೆ. ಯಾರೂ ಸಹಾಯಕ್ಕೆ ಬರದ ಸಂದರ್ಭದಲ್ಲಿ, ಕೊನೆಗೆ ಒಬ್ಬ ಭಾರತೀಯ ಸೈನಿಕನೇ ಎದ್ದು ಸಹಾಯಕ್ಕೆ ಬಂದರುʼʼ ಎಂದು ಅವರು ಹೇಳಿದ್ದಾರೆ.
ʼʼಯಾವುದೇ ಯೋಚನೆ ಮಾಡದೆ, ಅವರು ತಮ್ಮ ಫೋನ್ ಅನ್ನು ತೆಗೆದು ತಮ್ಮ ಪವರ್‌ಬ್ಯಾಂಕ್ ನನಗೆ ನೀಡಿದರು. ಆ ಕ್ಷಣ ನನ್ನ ಮನಸ್ಸಿನಲ್ಲಿ ಸದಾಕಾಲ ಉಳಿಯಿತು. ಯಾರೂ ಸಹಾಯ ಮಾಡದಾಗ, ಭಾರತೀಯ ಸೈನಿಕ ಮಾತ್ರ ಸ್ವಾರ್ಥವಿಲ್ಲದೆ, ನಿಶ್ಶಬ್ಧವಾಗಿ, ಯಾವುದೇ ಯೋಚನೆ ಮಾಡದೆ ಸಹಾಯ ಮಾಡಿದರುʼʼ ಎಂದು ಬರೆದುಕೊಂಡಿದ್ದಾರೆ.
ರೂಪ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಸೈನಿಕನಿಗೆ ಧನ್ಯವಾದ ತಿಳಿಸಿದ್ದಾರೆ. ಆ ವಿಡಿಯೊಗೆ ಮೂರು ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆಗಳು ಲಭಿಸಿವೆ. ತನಗೆ ಸಹಾಯ ಮಾಡಿದ ಆ ಸೈನಿಕನಿಗೆ ಧನ್ಯವಾದ ಹೇಳುವ ಅವಕಾಶ ದೊರಕಲೆಂದು, ಈ ರೀಲ್ ಮಾಡುತ್ತಿರುವುದಾಗಿ ರೂಪ್ ಹೇಳಿದ್ದಾರೆ.