ದೆಹಲಿ, ಫೆ.15: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಬಾಂಬ್ ಬ್ಲಾಸ್ಟ್ (Red Fort Bomb Blast) ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ದೇಶದಲ್ಲಿ ಪಾಕಿಸ್ತಾನಿ ಪ್ರಚೋದಿತ ವೈಟ್-ಕಾಲರ್ ಭಯೋತ್ಪಾದನೆ ಬಗ್ಗೆ ಮತ್ತೆ ಆತಂಕ ಮನೆ ಮಾಡಿದ್ದು, ಕಟ್ಟೆಚ್ಚರ ಹೆಚ್ಚಿಸಲಾಗಿದೆ. ಭಯೋತ್ಪಾದನಾ ಸಂಚಿನ ಬಗ್ಗೆ ಎನ್ಐಎ ತನಿಖೆಗಿಳಿದಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇತ್ತೀಚೆಗೆ ಭೇದಿಸಿದ ವೈಟ್ ಕಾಲರ್ ಭಯೋತ್ಪಾದನಾ ಮಾಡ್ಯೂಲ್‌ನ ಪ್ರಕಾರ, ಪ್ರಕರಣದಲ್ಲಿ ಬಂಧನಕ್ಕೊಳಗಾದ ವೈದ್ಯರು 2016ರಿಂದ ಮೂಲಭೂತವಾದಕ್ಕೆ ಒಳಗಾಗಿದ್ದರು ಮತ್ತು ವಿಧ್ವಂಸಕ ಕೃತ್ಯಗಳನ್ನು ಎಸಗಲು ಅನ್ಸಾರ್ ಇಂಟರಿಂ (Ansar Interim) ಎಂಬ ಹೊಸ ಉಗ್ರ ಸಂಘಟನೆಯನ್ನು ರಚಿಸಿದ್ದರು ಎಂದು ತಿಳಿದುಬಂದಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿರುವ ಈ ಪ್ರಕರಣವು, ನವೆಂಬರ್ 10ರಂದು ಕೆಂಪು ಕೋಟೆಯ ಬಳಿ ಆತ್ಮಾಹುತಿ ದಾಳಿ ನಡೆಸಿದ್ದ ಡಾ. ಉಮರ್-ಉನ್ ನಬಿ 2016 ಮತ್ತು 2018ರಲ್ಲಿ ಭಯೋತ್ಪಾದಕ ಗುಂಪುಗಳನ್ನು ಸೇರಲು ಪ್ರಯತ್ನ ಮಾಡಿ ವಿಫಲನಾಗಿದ್ದ ಎಂಬುದು ತಿಳಿದುಬಂದಿದೆ.
ಇಲ್ಲಿಯವರೆಗೆ ಸಂಗ್ರಹಿಸಿದ ಸಾಕ್ಷ್ಯಗಳನ್ನು ಒಟ್ಟುಗೂಡಿಸಿ, ಆರೋಪಿ ಮುಜಾಮಿಲ್ ಗನ್ನಿ, ಉಮರ್-ಉನ್ ನಬಿ (ಈಗಾಗಲೇ ಮೃತಪಟ್ಟಿದ್ದಾನೆ) ಮತ್ತು ಅದೀಲ್ ರಾಥರ್, ಅವನ ಸಹೋದರ ಮುಝಾಫರ್ ರಾಥರ್ (ತಪ್ಪಿಸಿಕೊಂಡಿದ್ದಾನೆ), ಮೌಲ್ವಿ ಇರ್ಫಾನ್, ಖಾರಿ ಆಮಿರ್ ಮತ್ತು ತುಫೈಲ್ ಗಾಜಿ 2022ರ ಏಪ್ರಿಲ್‌ನಲ್ಲಿ ಶ್ರೀನಗರದ ಡೌನ್‌ಟೌನ್‌ನಲ್ಲಿರುವ ಈದ್ಗಾದಲ್ಲಿ ಪರಸ್ಪರ ಭೇಟಿಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ರಷ್ಯಾ ಒಟ್ಟಾಗಿ ನಿಂತಿವೆ: ಮೋದಿ
ಸಭೆಯ ವೇಳೆ ಅವರು ಅನ್ಸಾರ್ ಇಂಟರಿಂ (Ansar Interim) ಎಂಬ ಉಗ್ರ ಸಂಘಟನೆಯನ್ನು ರಚಿಸಲು ನಿರ್ಧರಿಸಿದ್ದು, ಅದರಲ್ಲಿ ಆದೀಲ್‌ನನ್ನು ಅಮೀರ್ (ಮುಖ್ಯಸ್ಥ) ಆಗಿ, ಮೌಲ್ವಿ ಇರ್ಫಾನ್‌ನನ್ನು ಉಪ ಅಮೀರ್ ಆಗಿ ಹಾಗೂ ಗನ್ನಿಯನ್ನು ಖಜಾಂಚಿಯಾಗಿ ನೇಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ವೈದ್ಯರು ಹಾಗೂ ಧರ್ಮೋಪದೇಶಕರು ವಿಚಾರಣೆ ವೇಳೆ, ಸಕ್ರಿಯ ಉಗ್ರರೊಂದಿಗೆ ಹೊಂದಿದ್ದ ಎಲ್ಲ ಸಂಪರ್ಕಗಳು ಕಡಿದುಹೋಗಿದ್ದರಿಂದ ಹೊಸ ಸಂಘಟನೆಯನ್ನು ರಚಿಸುವ ಅಗತ್ಯ ಉಂಟಾಯಿತು ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.
2023ರಲ್ಲಿ ಈ ಗುಂಪು ಹರಿಯಾಣದ ಸೋಹ್ನಾ ಮತ್ತು ನುಹ್ ಪ್ರದೇಶಗಳಿಂದ ರಸಗೊಬ್ಬರವನ್ನು ಖರೀದಿಸಲು ನಿರ್ಧರಿಸಿತು. ಉಮರ್‌ನ ಸೂಚನೆ ಮೇರೆಗೆ, ಪೊಟ್ಯಾಸಿಯಮ್ ನೈಟ್ರೇಟ್ ಅನ್ನು ಫರಿದಾಬಾದ್‌ನ ರಾಸಾಯನಿಕ ಅಂಗಡಿಯಿಂದ ಖರೀದಿಸಲಾಯಿತು.
ವಿಚಾರಣೆಯ ಸಮಯದಲ್ಲಿ, ಬಂಧಿತ ವೈದ್ಯರು ಉಮರ್ ಆರಂಭಿಕ ಸುಧಾರಿತ ಸ್ಫೋಟಕ ಸಾಧನ (IED) ಕಲಿಯಲು ಆನ್‌ಲೈನ್ ವಿಡಿಯೊಗಳನ್ನು ವೀಕ್ಷಿಸುತ್ತಿದ್ದ. ಹಾಗೆಯೇ ಪೆರಾಕ್ಸೈಡ್ ಸ್ಫೋಟಕಗಳಲ್ಲಿ ಒಂದಾದ ಟ್ರಯಾಸೆಟೋನ್ ಟ್ರೈಪೆರಾಕ್ಸೈಡ್ (TATP) ಅನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದ.
ಭಾರತದಲ್ಲಿ ಭಯೋತ್ಪಾದನೆ ಸಂಚು: ಜೈಶ್‌ನ ವಾಟ್ಸ್‌ಆ್ಯಪ್ ಚಾನೆಲ್ ಸ್ಥಗಿತ
ಅಧಿಕಾರಿಗಳ ಪ್ರಕಾರ, ಅದೀಲ್ ಹೊಸ ಭಯೋತ್ಪಾದಕ ಗುಂಪಿನ ಸದಸ್ಯರನ್ನು ಹುಡುಕಲು ಪ್ರಾರಂಭಿಸಿದ್ದ. ಈ ವೇಳೆ ದಕ್ಷಿಣ ಕಾಶ್ಮೀರದ ಡ್ಯಾನಿಶ್ ಅಲಿಯಾಸ್ ಜಾಸಿರ್ ಎಂಬಾತನ ಪರಿಚಯನಾಗಿ ಆತನನ್ನು ತನ್ನ ಗುಂಪಿಗೆ ಸೇರಿಸಿಕೊಂಡಿದ್ದ. ನಂತರ ಉಮರ್ ಡ್ಯಾನಿಶ್‌ನನ್ನು ಆತ್ಮಹತ್ಯಾ ದಾಳಿ ನಡೆಸುವಂತೆ ಮನವೊಲಿಸಲು ಪ್ರಯತ್ನಿಸಿದ. ಆದರೆ ಕೊನೆಯ ಕ್ಷಣದಲ್ಲಿ ಇಸ್ಲಾಂನಲ್ಲಿ ಆತ್ಮಹತ್ಯೆ ನಿಷಿದ್ಧ ಎಂಬ ನೆಪವನ್ನೊಡ್ಡಿ ಆತ ದಾಳಿಯಿಂದ ಹಿಂದೆ ಸರಿದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಒಬ್ಬೊಬ್ಬ ಉಗ್ರರ ಬಂಧನವಾಗುತ್ತಿದ್ದಂತೆ, ಹಾಗೂ ಉಗ್ರ ಜಾಲವನ್ನು ಜಮ್ಮು-ಕಾಶ್ಮೀರ ಪೊಲೀಸರು ಭೇದಿಸುತ್ತಿದ್ದಂತೆ ಭಯಗೊಂಡ ವೈದ್ಯ ಉಮರ್ ದೆಹಲಿಯಲ್ಲಿ ಆತ್ಮಾಹತಿ ಬಾಂಬ್ ಸ್ಫೋಟಿಸಿದ.
ಶ್ರೀನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಮೂವರು ಸ್ಥಳೀಯರನ್ನು ಬಂಧಿಸಲಾಗಿದೆ. ಆರಿಫ್ ನಿಸಾರ್ ದಾರ್ ಅಲಿಯಾಸ್ ಸಾಹಿಲ್, ಯಾಸಿರ್-ಉಲ್-ಅಶ್ರಫ್ ಮತ್ತು ಮಕ್ಸೂದ್ ಅಹ್ಮದ್ ದಾರ್ ಅಲಿಯಾಸ್ ಶಾಹಿದ್ ಬಂಧಿತರು. ಇವರೆಲ್ಲರೂ ಈ ಹಿಂದೆ ಕಲ್ಲು ತೂರಾಟದ ಪ್ರಕರಣಗಳನ್ನು ಹೊಂದಿದ್ದರು.