ಹೊಸದಿಲ್ಲಿ: ಪಾಕಿಸ್ತಾನದ (Pakistan) ಗುಪ್ತಚರ ಕಾರ್ಯಕರ್ತರಿಗೆ ಸೂಕ್ಷ್ಮ ಮಾಹಿತಿ ನೀಡುತ್ತಿದ್ದ ಹರಿಯಾಣ ಮೂಲದ ಟ್ರಾವೆಲ್ ಯುಟ್ಯೂಬರ್ ಜ್ಯೋತಿ ಮಲ್ಹೋತ್ರಾ (Jyoti Malhotra) ಮತ್ತು ಇತರ 6 ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ. ಅದರಲ್ಲಿಯೂ ಟ್ರಾವೆಲ್ ವಿತ್ ಜೋ (Travel with Jo) ಎನ್ನುವ ಟ್ರಾವೆಲ್ ಯುಟ್ಯೂಬ್ ಚಾನಲ್ ಹೊಂದಿರುವ ಜ್ಯೋತಿ ಹಲವು ತಿಂಗಳಿಂದ ಪಾಕಿಸ್ತಾನಕ್ಕೆ ಭಾರತದ ಸೂಕ್ಷ್ಮ ಮಾಹಿತಿಯನ್ನು ನೀಡುತ್ತಿದ್ದಾಳೆ. ಸುಮಾರು ಯುಟ್ಯೂಬ್‌ನಲ್ಲಿ 3,77,000 ಚಂದಾದಾರರನ್ನು ಹೊಂದಿರುವ ಜ್ಯೋತಿ ಈ ವಿವಾದದ ಕೇಂದ್ರಬಿಂದು ಎನಿಸಿಕೊಂಡಿದ್ದಾಳೆ. ಹಾಗಾದರೆ ಯಾರಿವಳು? ಏನಿವಳ ಹಿನ್ನೆಲೆ? ಇಲ್ಲಿದೆ ವಿವರ.
ಹಿಸಾರ್‌ನ ಮೂಲದ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಉತ್ತರ ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನ ಪರವಾದ ಬೇಹುಗಾರಿಕೆ ಜಾಲದ ಬಗ್ಗೆ ನಡೆಯುತ್ತಿರುವ ತನಿಖೆಯಲ್ಲಿ ಆಕೆಯತ್ತ ಹೆಚ್ಚಿನ ಗಮನ ಹರಿಸಲಾಗಿದೆ.
ಜ್ಯೋತಿ ಮಲ್ಹೋತ್ರಾ ಇನ್‌ಸ್ಟಾಗ್ರಾಮ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: ಆಪರೇಷನ್ ಸಿಂದೂರ್ ಬಗ್ಗೆ ಪಾಕ್ ಸೇನೆಗೆ ಮಾಹಿತಿ; ಹರಿಯಾಣದ 25 ವರ್ಷದ ಯುವಕ ಅರೆಸ್ಟ್
ಪಾಕಿಸ್ತಾನದ ಗುಪ್ತಚರ ಕಾರ್ಯಕರ್ತರಿಗೆ ಭಾರತದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದ ಮತ್ತು ಬೇಹುಗಾರಿಕೆ ನಡೆಸಿದ ಜ್ಯೋತಿಯನ್ನು ಹಿಸಾರ್ ಪೊಲೀಸರು ಬಂಧಿಸಿದ್ದಾರೆ. ಆಕೆಯ ವಿರುದ್ಧ 1923ರ ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 3, 4 ಮತ್ತು 5 ಹಾಗೂ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 152ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಕೆ ತಪ್ಪೊಪ್ಪಿಕೊಂಡಿದ್ದು, 5 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈ ಪ್ರಕರಣವನ್ನು ಈಗ ಹೆಚ್ಚಿನ ತನಿಖೆಗಾಗಿ ಆರ್ಥಿಕ ಅಪರಾಧಗಳ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.
ಕಮಿಷನ್ ಏಜೆಂಟ್‌ಗಳ ಮೂಲಕ ವೀಸಾ ಪಡೆದ ನಂತರ ಜ್ಯೋತಿ ಮಲ್ಹೋತ್ರಾ 2023ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಳು. ನಂತರ ಹೊಸದಿಲ್ಲಿಯ ಪಾಕಿಸ್ತಾನ ಹೈಕಮಿಷನ್‌ನ ಸಿಬ್ಬಂದಿ ಸದಸ್ಯ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್‌ನೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡ್ಯಾನಿಶ್ ಆಕೆಯ ಹ್ಯಾಂಡ್ಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನೆಂದು ಆರೋಪಿಸಲಾಗಿದೆ. ಆಕೆಯನ್ನು ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳಿಗೆ ಪರಿಚಯಿಸಿದ್ದ ಡ್ಯಾನಿಶ್ ವಾಟ್ಸ್‌ಆ್ಯಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಎನ್‌ಕ್ರಿಪ್ಟ್ ಮಾಡಲಾದ ಪ್ಲಾಟ್‌ಫಾರ್ಮ್‌ಗಳ ಮೂಲಕ ನಿಯಮಿತವಾಗಿ ಸಂವಹನ ನಡೆಸುತ್ತಿದ್ದ.
ಜ್ಯೋತಿ ಮಲ್ಹೋತ್ರಾ 2023ರಲ್ಲಿ ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಳು ಎಂದು ವರದಿಯಾಗಿದೆ. ಅಲ್ಲಿ ಆಕೆ ಅಲಿ ಎಹ್ವಾನ್, ಶಕೀರ್ ಮತ್ತು ರಾಣಾ ಶಹಬಾಜ್ ಸೇರಿದಂತೆ ಹಲವು ಪಾಕ್ ಗುಪ್ತಚರ ಕಾರ್ಯಕರ್ತರನ್ನು ಭೇಟಿಯಾಗಿದ್ದಳು ಎನ್ನಲಾಗಿದೆ. ಅಲ್ಲದೆ ಆಕೆ ಗುಪ್ತಚರ ಕಾರ್ಯಕರ್ತರಲ್ಲಿ ಒಬ್ಬರೊಂದಿಗೆ ಇಂಡೋನೇಷ್ಯಾದ ಬಾಲಿಗೆ ಪ್ರಯಾಣ ಬೆಳೆಸಿದ್ದಳು ಎಂದು ಹೇಳಲಾಗಿದೆ. ಈ ಬಗ್ಗೆಯೂ ಹೆಚ್ಚಿನ ತನಿಖೆ ನಡೆಯುತ್ತಿದೆ.
ಜ್ಯೋತಿ ಮಲ್ಹೋತ್ರಾ ಹರಿಯಾಣ ಮತ್ತು ಪಂಜಾಬ್‌ನಾದ್ಯಂತ ಹರಡಿರುವ ದೊಡ್ಡ ಮಟ್ಟದ ಬೇಹುಗಾರಿಕೆ ಜಾಲದ ಭಾಗವಾಗಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜ್ಯೋತಿ ಮಲ್ಹೋತ್ರಾ ಸೇರಿದಂತೆ 6 ವ್ಯಕ್ತಿಗಳನ್ನು ಇದುವರೆಗೆ ಬೇಹುಗಾರಿಕೆ, ಸೂಕ್ಷ್ಮ ಮಾಹಿತಿಯನ್ನು ರವಾನಿಸುವುದು ಮತ್ತು ಪಾಕಿಸ್ತಾನಿ ಹ್ಯಾಂಡ್ಲರ್‌ಗಳಿಗೆ ಹಣಕಾಸು, ಲಾಜಿಸ್ಟಿಕಲ್ ಬೆಂಬಲವನ್ನು ಒದಗಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ಟ್ರಾವೆಲ್ ವಿತ್ ಜೊ ಎಂದ ಟ್ರಾವೆಲ್ ಯುಟ್ಯೂಬ್ ಚಾನಲ್ ಹೊಂದಿರುವ 33 ವರ್ಷದ ಜ್ಯೋತಿ ಪಾಕಿಸ್ತಾನದ ಬಗ್ಗೆ ಪಾಸಿಟಿವ್ ಸಂದೇಶ ಸಾರುವ ವಿಡಿಯೊವನ್ನು ಪೋಸ್ಟ್ ಮಾಡುತ್ತಲೇ ಬಂದಿದ್ದಾಳೆ.