ಆಪರೇಷನ್ ಸಿಂದೂರ್ ಬಗ್ಗೆ ಪಾಕ್ ಸೇನೆಗೆ ಮಾಹಿತಿ; ಹರಿಯಾಣದ 25 ವರ್ಷದ ಯುವಕ ಅರೆಸ್ಟ್
ಹರಿಯಾಣ ಮೂಲದ ದೇವೇಂದ್ರ ಸಿಂಗ್ ಎಂಬ ಯುವಕನೊಬ್ಬ ಪಾಕಿಸ್ತಾನದ ಗುಪ್ತಚರ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು. ಭಾರತ ಸೂಕ್ಷ್ಮ ಮಾಹಿತಿ ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಈತ ಕಳೆದ ನವೆಂಬರ್‌ನಿಂದಲೂ ಪಾಕಿಸ್ತಾನ ಸೇನೆಯ ಗುಪ್ತಚರ ಇಲಾಖೆಯ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ.

ಚಂಡೀಗಢ: ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಸಮಯದಲ್ಲಿ ಹರಿಯಾಣದ 25 ವರ್ಷದ ಸ್ನಾತಕೋತರ ಪದವಿ ವಿದ್ಯಾರ್ಥಿ ದೇವೇಂದ್ರ ಸಿಂಗ್ (Devendra Singh) ಪಾಕ್ ಸೇನೆ ಮತ್ತು ಐಎಸ್‌ಐಗೆ ಮಾಹಿತಿ ಒದಗಿಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದ್ದು, ಆತನನ್ನು ಬಂಧಿಸಲಾಗಿದೆ. ನಂತರ ತನಿಖೆಗೊಳಪಡಿಸಿದಾಗ ಕಳೆದ ವರ್ಷ ನವೆಂಬರ್‌ನಿಂದ ಪಾಕಿಸ್ತಾನಿ ಗುಪ್ತಚರ ಇಲಾಖೆಯ ಸಂಪರ್ಕದಲ್ಲಿದ್ದ ಎನ್ನುವುದು ತಿಳಿದು ಬಂದಿದೆ. ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆಯ ಬಗ್ಗೆ ಸಂದೇಶಗಳನ್ನು ರವಾನಿಸಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಈ ಹಿನ್ನಲೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಡಿಎಸ್‌ಪಿ ಕೈತಾಲ್ ವೀರಭನ್, ʼʼಈ ಕುರಿತು ನಮಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿತ್ತು. ಈ ಆಧಾರದ ಮೇಲೆ ನಮ್ಮ ಸಿಬ್ಬಂದಿ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ನಂತರ ಆರೋಪಿಯನ್ನು ತನಿಖೆಗೆ ಒಳಪಡಿಸಿದಾಗ ಯುದ್ಧದ ಕುರಿತು ಇಲ್ಲಿನ ಎಲ್ಲ ಬೆಳವಣಿಗೆಗಳನ್ನು ಪಾಕಿಸ್ತಾನ ಸೇನೆಗೆ ಸಂದೇಶಗಳ ಮೂಲಕ ಹಂಚಿಕೊಂಡಿರುವುದು ತಿಳಿಸು ಬಂದಿದೆʼʼ ಎಂದು ತಿಳಿಸಿದ್ದಾರೆ.
ʼʼಸೈಬರ್ ಪೊಲೀಸ್ ಠಾಣೆಯಲ್ಲಿರುವ ನಮ್ಮ ಸಿಬ್ಬಂದಿ ಆತನ ಬಳಿ ಪತ್ತೆಯಾದ ಸಾಧನಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಹೊರ ಬೀಳಲಿದೆ. ಏನೇ ಸತ್ಯ ಹೊರಬಂದರೂ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದುʼʼ ಎಂದು ಹೇಳಿದ್ದಾರೆ.
ಡಿಎಸ್‌ಪಿ ಕೈತಾಲ್ ವೀರಭನ್ ನೀಡಿದ ಮಾಹಿತಿ:
#WATCH | Kaithal, Haryana | A resident of village Mastgarh Cheeka, Devendra has been arrested by the district police of Kaithal for allegedly passing information to the Pakistan army and ISI during the recent Indo-Pak conflict.
— ANI (@ANI) May 17, 2025
DSP Kaithal Veerbhan says, "Intelligence… pic.twitter.com/qQ1WwqMn3y
ಈ ಸುದ್ದಿಯನ್ನೂ ಓದಿ: All Party Delegation: ಭಯೋತ್ಪಾದನೆ ವಿರುದ್ಧ ಕೇಂದ್ರದ ರಾಜತಾಂತ್ರಿಕ ನಡೆ; ಸರ್ವಪಕ್ಷ ಸದಸ್ಯರ ನಿಯೋಗಕ್ಕೆ ಶಶಿ ತರೂರ್ ಹೆಸರು ಸೂಚಿಸದ ಕಾಂಗ್ರೆಸ್
ಸದ್ಯದ ಮಾಹಿತಿ ಪ್ರಕಾರ, ದೇವೇಂದ್ರ ಸಿಂಗ್ ಪಂಜಾಬ್‌ನ ಕಾಲೇಜಿನಲ್ಲಿ ಎಂಎ ರಾಜ್ಯಶಾಸ್ತ್ರ ವಿದ್ಯಾರ್ಥಿ. ಕಳೆದ ವರ್ಷ ನವೆಂಬರ್‌ನಲ್ಲಿ ಆತ ಪಾಕಿಸ್ತಾನದ ನಂಕಾನಾ ಸಾಹಿಬ್ ಗುರುದ್ವಾರಕ್ಕೆ ತೀರ್ಥಯಾತ್ರೆಗೆ ಹೋಗಿದ್ದ. ಅಲ್ಲಿ ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರ ಸಂಪರ್ಕಕ್ಕೆ ಬಂದಿದ್ದ ಎನ್ನಲಾಗಿದೆ. ಅಂದಿನಿಂದ ಅವರೊಂದಿಗೆ ನಿರಂತರ ಸಂಪರ್ಕ ಬೆಳೆಸಿಕೊಂಡಿದ್ದಾನೆ ಎನ್ನಲಾಗಿದೆ.
ಇದಲ್ಲದೆ ಪಾಕಿಸ್ತಾನಕ್ಕೆ ಮಾಹಿತಿ ನೀಡುತ್ತಿದ್ದ ಆರೋಪದ ಮೇಲೆ ಹರಿಯಾಣದ ಟ್ರಾವೆಲ್ ವ್ಲಾಗರ್ ಸೇರಿ ಒಟ್ಟು 6 ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ʼಟ್ರಾವೆಲ್ ವಿತ್ ಜೋʼ ಯುಟ್ಯೂಬ್ ಚಾನಲ್ ನಡೆಸುತ್ತಿದ್ದ ಜ್ಯೋತಿ ಮಲ್ಹೋತ್ರಾ ಕೂಡ ಸೇರಿದ್ದಾಳೆ.
ಈ ಹಿಂದೆಯೂ ಈ ರೀತಿಯ ದೇಶ ದ್ರೋಹದ ಕೆಲಸ ಆಗಿತ್ತು
ಈ ಹಿಂದೆ ಪಾಕಿಸ್ತಾನದ ಕೆಲವು ವ್ಯಕ್ತಿಗಳಿಗೆ ಸೂಕ್ಷ್ಮ ಮಾಹಿತಿಯನ್ನು ಒದಗಿಸಿದ ಆರೋಪದ ಮೇಲೆ ಹರಿಯಾಣದ ಪಾಣಿಪತ್‌ನಲ್ಲಿ 24 ವರ್ಷದ ನೌಮನ್ ಇಲ್ಲಾಹಿ ಎಂಬ ಯುವಕನನ್ನು ಬಂಧಿಸಲಾಗಿತ್ತು. ಅದಾಗಿ ಕೆಲವು ದಿನಗಳ ನಂತರ ಈ ಘಟನೆ ಹೊರ ಬಿದ್ದಿದೆ.
ಇದಕ್ಕೂ ಮೊದಲು, ಅಮೃತಸರದಲ್ಲಿರುವ ಭಾರತೀಯ ಮಿಲಿಟರಿ ನೆಲೆಗಳ ಬಗ್ಗೆ ಪಾಕಿಸ್ತಾನದ ಐಎಸ್‌ಐಗೆ ಸೂಕ್ಷ್ಮ ಮಾಹಿತಿಯನ್ನು ನೀಡಿದ ಆರೋಪದ ಮೇಲೆ ಪಂಜಾಬ್ ಪೊಲೀಸರು ಪಾಲಕ್ ಶೇರ್ ಮಸಿಹ್ ಮತ್ತು ಸೂರಜ್ ಮಸಿಹ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದರು.