ತಿರುವನಂತಪುರಂ, ಮೇ 10: ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭಾರಿ ಗೆಲುವು ಸಾಧಿಸಿದ್ದರೂ, ಕೇರಳಂನ (Keralam) ಮುಂದಿನ ಮುಖ್ಯಮಂತ್ರಿ ಬಗ್ಗೆ ಕಾಂಗ್ರೆಸ್ (Congress) ಪಕ್ಷ ಇನ್ನೂ ನಿರ್ಧಾರವನ್ನು ಅಂತಿಮಗೊಳಿಸಿಲ್ಲ. ಹೊಸ ಮುಖ್ಯಮಂತ್ರಿ ಆಯ್ಕೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶನಿವಾರ (ಮೇ 9) ದೆಹಲಿಯಲ್ಲಿ ನಡೆದ ಮ್ಯಾರಥಾನ್ ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಪಾ ದಾಸ್ ಮುನ್ಶಿ, ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ತೆಗೆದುಕೊಳ್ಳಲಿದ್ದು, ಶೀಘ್ರದಲ್ಲೇ ಘೋಷಣೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದರು. ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಎಲ್ಲಾ ಕಾಂಗ್ರೆಸ್ ಶಾಸಕರು ಪಕ್ಷದ ಹೈಕಮಾಂಡ್‌ಗೆ ಅಧಿಕಾರ ನೀಡಿದ್ದಾರೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ರೇಸ್‌ನಲ್ಲಿರುವ ಮೂವರು ಅಭ್ಯರ್ಥಿಗಳಾದ ಕೆ.ಸಿ. ವೇಣುಗೋಪಾಲ್, ರಮೇಶ್ ಚೆನ್ನಿತ್ತಲ ಮತ್ತು ವಿ.ಡಿ. ಸತೀಶನ್ ಅವರ ಕುರಿತು ನಾಯಕತ್ವ ಸಭೆಯಲ್ಲಿ ಚರ್ಚಿಸಲಾಯಿತು. ಚರ್ಚೆಯ ಸಮಯದಲ್ಲಿ ಪ್ರತಿಯೊಬ್ಬ ನಾಯಕರು ತಮ್ಮ ವಾದವನ್ನು ಬಲವಾಗಿ ಮಂಡಿಸಿದರು. ಆದರೆ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇರಳಂ ಮುಖ್ಯಮಂತ್ರಿ ಪಟ್ಟ ಯಾರಿಗೆ? ರೇಸ್‌ನಲ್ಲಿ ಕೆ.ಸಿ. ವೇಣುಗೋಪಾಲ್, ಸತೀಶನ್; ಮುಂದಿನ ವಾರ ಪ್ರಮಾಣ ವಚನ?
ಪಕ್ಷದ ಮೂಲಗಳ ಪ್ರಕಾರ, ಕಾಂಗ್ರೆಸ್‌ನ ಬಹುಪಾಲು ಶಾಸಕರು ವೇಣುಗೋಪಾಲ್ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅಂತಿಮ ಹೆಸರನ್ನು ಪ್ರಕಟಿಸುವ ಮೊದಲು ಎಲ್ಲ ಹಿರಿಯ ನಾಯಕರ ನಡುವೆ ಒಮ್ಮತ ಮೂಡಿಸಲು ಹೈಕಮಾಂಡ್ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ವೇಣುಗೋಪಾಲ್ ಅವರನ್ನು ಕೇರಳಕ್ಕೆ ಮುಖ್ಯಮಂತ್ರಿಯಾಗಿ ಕಳುಹಿಸಬೇಕೇ ಅಥವಾ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ದೆಹಲಿಯಲ್ಲೇ ಉಳಿಸಿಕೊಳ್ಳಬೇಕೇ ಎಂದು ರಾಹುಲ್ ಗಾಂಧಿ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಕಾಂಗ್ರೆಸ್ ಹೈಕಮಾಂಡ್ ಪಕ್ಷದ ನಾಯಕರು ಮತ್ತು ಬೆಂಬಲಿಗರಿಗೆ ವೈಯಕ್ತಿಕ ಅಭ್ಯರ್ಥಿಗಳ ಪರವಾಗಿ ಸಾರ್ವಜನಿಕ ಪ್ರಚಾರ, ಪೋಸ್ಟರ್‌ಗಳು ಮತ್ತು ಪ್ರದರ್ಶನಗಳನ್ನು ಮಾಡದಂತೆ ಪರೋಕ್ಷವಾಗಿ ಸಲಹೆ ನೀಡಿತು. ವಿವಿಧ ನಾಯಕರ ಬೆಂಬಲಿಗರ ಪೋಸ್ಟರ್ ಅಭಿಯಾನಗಳು ಮತ್ತು ಘೋಷಣೆ ಕೂಗುವಿಕೆಗಳ ಬಗ್ಗೆ ರಾಹುಲ್ ಗಾಂಧಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚುನಾವಣಾ ಗೆಲುವಿನ ಹೊರತಾಗಿಯೂ ಇಂತಹ ಚಟುವಟಿಕೆಗಳು ಪಕ್ಷದ ವರ್ಚಸ್ಸಿಗೆ ಹಾನಿ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.
ಸಭೆಯು ಸೋನಿಯಾ ಗಾಂಧಿಯವರಿಗೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಿದೆ ಎಂದು ವರದಿಯಾಗಿದೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು ಔಪಚಾರಿಕ ಘೋಷಣೆ ಮಾಡುವ ನಿರೀಕ್ಷೆಯಿದೆ.
ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ರಾಹುಲ್ ಗಾಂಧಿ, ಕೇರಳದ ಹಿರಿಯ ನಾಯಕರಾದ ಚೆನ್ನಿತ್ತಲ ಮತ್ತು ಸತೀಶನ್, ಕೇರಳ ಕಾಂಗ್ರೆಸ್ ಮುಖ್ಯಸ್ಥ ಸನ್ನಿ ಜೋಸೆಫ್ ಮತ್ತು ಇತರ ಪ್ರಮುಖ ನಾಯಕರು ಭಾಗವಹಿಸಿದ್ದರು. ಕೇರಳದಲ್ಲಿ ಸರ್ಕಾರ ರಚನೆಗೆ ಮೇ 23 ಕೊನೆಯ ದಿನಾಂಕವಾಗಿರುವುದರಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆದಷ್ಟು ಬೇಗನೆ ಅಂತಿಮಗೊಳಿಸಬೇಕಾದ ಒತ್ತಡ ಕಾಂಗ್ರೆಸ್‌ಗಿದೆ.