ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಇರಾನ್ - ಇಸ್ರೇಲ್- ಅಮೆರಿಕ ಯುದ್ಧದ ಪರಿಣಾಮ ಕಚ್ಚಾ ತೈಲ ದರ ದಿಢೀರ್ ಪ್ರತಿ ಬ್ಯಾರಲ್‌ಗೆ 119 (Crude Oil) ಡಾಲರ್ ತನಕ ಜಿಗಿದು ಜಗತ್ತಿನಾದ್ಯಂತ ತೀವ್ರ ಆತಂಕವನ್ನು ಸೃಷ್ಟಿಸಿತ್ತು. ಹೀಗಿದ್ದರೂ, ರಾತ್ರೋರಾತ್ರಿ ಬ್ರೆಂಟ್ ಕಚ್ಚಾ ತೈಲ ಮಂಗಳವಾರ ಪ್ರತಿ ಬ್ಯಾರಲ್‌ಗೆ 87 ಡಾಲರ್‌ಗೆ ಇಳಿಕೆಯಾಗಿರುವುದು ಗ್ರಾಹಕರಿಗೆ ರಿಲೀಫ್ ನೀಡಿದೆ. ಮತ್ತಷ್ಟು ಇಳಿಕೆ ಆಗಲಿದೆಯೇ ಅಥವಾ ಮತ್ತೆ ಏರಿಕೆಯಾಗಲಿದೆಯೇ ಎಂಬ ಕಾತರ ಸೃಷ್ಟಿಸಿದೆ.
ಈ ಬೆಳವಣಿಗೆಗೆ ಮುಖ್ಯವಾಗಿ 4 ಕಾರಣಗಳಿವೆ. ಅವುಗಳನ್ನು ಒಂದೊಂದಾಗಿ ತಿಳಿಯೋಣ
- ಇರಾನ್ ಯುದ್ಧ ಕೊನೆಯ ಹಂತದಲ್ಲಿದೆ ಎಂಬ ಟ್ರಂಪ್ ಹೇಳಿಕೆ
ಇರಾನ್ ವಿರುದ್ಧದ ಯುದ್ಧ ಅಂತಿಮ ಘಟ್ಟಕ್ಕೆ ತಲುಪಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ತೈಲ ಮಾರುಕಟ್ಟೆಗೆ ರಿಲೀಫ್ ಕೊಟ್ಟಿದೆ. ಇರಾನಿನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದ ಬಳಿಕ ಟ್ರಂಪ್ ನೀಡಿರುವ ಈ ಹೇಳಿಕೆ ಮಹತ್ವ ಪಡೆದಿದೆ. ಇರಾನಿನ ನೌಕಾಪಡೆ, ದೂರಸಂಪರ್ಕ, ವಾಯುಪಡೆಯ ಬಲವನ್ನು ಬಹುತೇಕ ಕುಗ್ಗಿಸಲಾಗಿದೆ. ಆದ್ದರಿಂದ ನಿರೀಕ್ಷೆಗೂ ಬೇಗ ಮಿಲಿಟರಿ ಕಾರ್ಯಾಚರಣೆ ಮುಗಿಯಲಿದೆ ಎಂದು ಟ್ರಂಪ್ ಹೇಳಿದ್ದಾರೆ.
- ಹರ್ಮುಜ್ ಜಲಸಂಧಿಯಲ್ಲಿ ಇರಾನ್‌ಗೆ ಎಚ್ಚರಿಕೆ
ಹರ್ಮುಜ್ ಜಲಸಂಧಿಯ ಮೂಲಕ ಏಷ್ಯಾ ಮತ್ತು ಯುರೋಪಿನ ನಾನಾ ದೇಶಗಳಿಗೆ ಕಚ್ಚಾ ತೈಲ ಮತ್ತು ಅನಿಲವನ್ನು ಗಲ್ಫ್ ದೇಶಗಳು ಹಡಗುಗಳ ಮೂಲಕ ಸಾಗಣೆ ಮಾಡುತ್ತವೆ. ಪರ್ಷಿಯನ್ ಕೊಲ್ಲಿ ಮತ್ತು ಅರಬ್ಬಿ ಸಮುದ್ರ, ಹಿಂದೂ ಮಹಾ ಸಾಗರವನ್ನು ಜೋಡಿಸುವ ಹರ್ಮುಜ್ ಜಲಸಂಧಿಯ ಮೂಲಕ ಜಗತ್ತಿನ 20 ಪರ್ಸೆಂಟ್ ತೈಲ ಸಾಗಣೆಯಾಗುತ್ತದೆ. ಆದರೆ ಇದರ ಒಂದು ಭಾಗದಲ್ಲಿರುವ ಇರಾನ್ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸಿದೆ. ಆದರೆ ಇನ್ನು ಮುಂದೆ ಅಡ್ಡಿಪಡಿಸಿದರೆ ಇರಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ತೀವ್ರ ದಾಳಿ ಮುಂದುವರಿಸಲಾಗುವುದು ಎಂದು ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ.
- ಹೊಂದಾಣಿಕೆಗೆ ರಷ್ಯಾ ಮತ್ತು ಅಮೆರಿಕ ಮಾತುಕತೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಅವರು ಫೋನ್ ಮೂಲಕ ಮಾತುಕತೆ ನಡೆಸಿದ್ದಾರೆ. ಅತಂತ್ರವಾಗಿ ನಿಂತಿರುವ ಲಕ್ಷಾಂತರ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಅನುಕೂಲವಾಗುವಂತೆ ನಿರ್ಬಂಧಗಳನ್ನು ಸಡಿಲಗೊಳಿಸುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.
ಅಮೆರಿಕದಲ್ಲಿ ನವೆಂಬರ್‌ನಲ್ಲಿ ನಡೆಯಲಿದೆ ಚುನಾವಣೆ: ಅಮೆರಿಕದಲ್ಲಿ 2026ರ ನವೆಂಬರ್ 3ರಂದು ಮಧ್ಯಾವಧಿಯ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಜತೆಗೆ ಕಚ್ಚಾ ತೈಲ ದರ ತೀವ್ರ ಏರಿಕೆಯಾದರೆ ಅಲ್ಲಿನ ಉದ್ಯಮಿಗಳಿಗೂ ಸಮಸ್ಯೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರ ಬ್ಯಾರಲ್‌ಗೆ 100 ಡಾಲರ್ ಗಡಿ ದಾಟುವುದು ಟ್ರಂಪ್ ಅವರಿಗೂ ಬೇಡವಾಗಿದೆ. ಆದ್ದರಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲೇಬೇಕಾದ ಒತ್ತಡದಲ್ಲಿದ್ದಾರೆ.