ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉಪ ಚುನಾವಣಾ ಆಯುಕ್ತರ ವಿರುದ್ಧ ಕ್ರಮಕ್ಕೆ ಕೇಂದ್ರ ಸಚಿವಾಲಯ ನಿರಾಕರಿಸಿರುವುದು ಏಕೆ? ಆರ್‌ಟಿಐ ಮಾಹಿತಿಯಲ್ಲೇನಿದೆ?

ಚುನಾವಣಾ ಆಯೋಗದ ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ವಿರುದ್ಧ ಆರೋಪಗಳು ಕೇಳಿ ಬಂದ ಬಳಿಕ ಇದೀಗ ಉಪ ಚುನಾವಣಾ ಆಯುಕ್ತರ ವಿರುದ್ಧ ಕೆಲವು ಆರೋಪಗಳು ಕೇಳಿ ಬಂದಿವೆ. ಆದರೆ ಅವರ ವಿರುದ್ಧ ಕೇಂದ್ರ ಸಚಿವಾಲಯ ಕ್ರಮಕ್ಕೆ ನಿರಾಕರಿಸಿದೆ. ಇದು ಯಾಕೆ ಎನ್ನುವುದಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬಹಿರಂಗಗೊಂಡ ವರದಿಯ ವಿವರಗಳು ಇಲ್ಲಿವೆ.

ಸಂಗ್ರಹ ಚಿತ್ರ

ನವದೆಹಲಿ: ಚುನಾವಣಾ ಆಯೋಗದ (Election Commission) ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಇಬ್ಬರು ಚುನಾವಣಾ ಆಯುಕ್ತರು ಸಲ್ಲಿಸಿದ ದೂರುಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಕೇಂದ್ರ ಸಚಿವಾಲಯ (Cabinet Secretariat) ನಿರಾಕರಿಸಿದೆ. ಚುನಾವಣಾ ಆಯೋಗದ ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ (Election Commission chief Gyanesh Kumar) ವಿರುದ್ಧ ಆರೋಪಗಳು ಕೇಳಿ ಬಂದ ಬಳಿಕ ಇದೀಗ ಉಪ ಚುನಾವಣಾ ಆಯುಕ್ತ ಮನೀಶ್ ಗಾರ್ಗ್ (senior Deputy Election Commissioner Maneesh Garg) ಅವರ ವಿರುದ್ಧ ಸಚಿವ ಸಂಪುಟ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರಿಗೆ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಜುಲೈ 29 ರಂದು ದೂರು ನೀಡಿದ್ದರು.

ಭಾರತೀಯ ನೌಕಾಪಡೆಯ ನಿವೃತ್ತ ಕಮೋಡೋರ್ ಮತ್ತು ಪ್ರಮುಖ ಮಾಹಿತಿ ಹಕ್ಕು ಕಾರ್ಯಕರ್ತರಾಗಿರುವ ಲೋಕೇಶ್ ಕೆ. ಬಾತ್ರಾ ಅವರು ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಗಳಿಗೆ ಸಂಬಂಧಿಸಿ ಸಚಿವ ಸಂಪುಟ ಸಚಿವಾಲಯವು, ಚುನಾವಣಾ ಆಯೋಗದಿಂದ ಯಾವುದೇ ಔಪಚಾರಿಕ ಸಂವಹನವಿಲ್ಲದೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಇದರಿಂದ ಸಾಂವಿಧಾನಿಕ ಸಂಸ್ಥೆಯೊಂದರ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂದು ತಿಳಿಸಿದೆ.

ಸಿದ್ದರಾಮಯ್ಯ ವಿರುದ್ಧದ ರಹಸ್ಯ ಕಾರ್ಯಾಚರಣೆ ಪ್ರಕರಣ: ಇಂದು ಸುದ್ದಿವಾಹಿನಿ ಮುಖ್ಯಸ್ಥರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ

ಸಚಿವ ಸಂಪುಟ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರಿಗೆ ಜುಲೈ 29 ರಂದು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಪ್ರತ್ಯೇಕ ಪತ್ರಗಳನ್ನು ಬರೆದು ಹಿರಿಯ ಉಪ ಚುನಾವಣಾ ಆಯುಕ್ತ ಮನೀಶ್ ಗಾರ್ಗ್ ಅವರ ಕಾರ್ಯವೈಖರಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಅವರು ನೀಡಿರುವ ದೂರಿನ ಪ್ರಕಾರ ಚುನಾವಣಾ ಆಯೋಗದೊಂದಿಗೆ ಅಥವಾ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸದೆ ಮನೀಶ್ ಗಾರ್ಗ್ ಅವರು ಮಹಾನಿರ್ದೇಶಕರು ಮತ್ತು ಸಮಾನ ಶ್ರೇಣಿಯ ಅಧಿಕಾರಿಗಳ ನಡುವಿನ ಕೆಲಸದ ಹಂಚಿಕೆಯನ್ನು ಬದಲಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮಾಹಿತಿ ಹಕ್ಕಿನಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸಚಿವಾಲಯ ಈ ಆರೋಪ ಗಂಭೀರವಾಗಿ ಪರಿಗಣಿಸಬೇಕಾದರೆ ಚುನಾವಣಾ ಆಯೋಗದಿಂದ ಅಧಿಕೃತ ನಿವೇದನೆ ಸಿಗಬೇಕು. ಇಲ್ಲವಾದರೆ ಇದನ್ನು ಗಂಭೀರ ಪ್ರಕರಣವೆಂದು ಪರಿಗಣಿಸಲು ಸಾಧ್ಯವಿಲ್ಲ. ಚುನಾವಣಾ ಆಯುಕ್ತರು ವೈಯಕ್ತಿಕ ಆಧಾರದಲ್ಲಿ ದೂರು ನೀಡಿದ್ದಾರೆ. ಅವರ ಪತ್ರಗಳನ್ನು ಸ್ವೀಕರಿಸಲಾಗಿದೆ. ಈ ಕುರಿತು ಮಾಹಿತಿಗಾಗಿ ಮುಖ್ಯ ಚುನಾವಣಾ ಆಯುಕ್ತರ ಪ್ರಧಾನ ಖಾಸಗಿ ಕಾರ್ಯದರ್ಶಿಗೆ ಅದರ ಪ್ರತಿಯನ್ನು ಕಳುಹಿಸಲು ಸಚಿವಾಲಯ ಶಿಫಾರಸು ಮಾಡಿದೆ ಎಂದು ಹೇಳಿದೆ.

ಚುನಾವಣಾ ಆಯೋಗದ ಆಂತರಿಕ ವ್ಯವಸ್ಥೆಗಳ ಕುರಿತಾಗಿ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸುವುದನ್ನು ಬಿಟ್ಟು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಸಚಿವ ಸಂಪುಟ ಕಾರ್ಯದರ್ಶಿಯನ್ನು ಸಂಪರ್ಕಿಸಿದ್ದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ.

ಉಪ ಚುನಾವಣಾ ಆಯುಕ್ತ ಮನೀಶ್ ಗಾರ್ಗ್ ಅವರು ಸಂಪರ್ಕ ಅಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಯಾವುದೇ ಚರ್ಚೆ ನಡೆಸದೆ ಹಿರಿಯ ಅಧಿಕಾರಿಗಳ ನಡುವೆ ಕೆಲಸದ ಹಂಚಿಕೆಯನ್ನು ಬದಲಾಯಿಸುವ ಆದೇಶವನ್ನು ಹೊರಡಿಸಿದ್ದಾರೆ. ಆಯೋಗದೊಂದ ಅನುಮೋದನೆ ಪಡೆಯದೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಪದೇ ಪದೇ ಮೌಖಿಕ ಹಾಗೂ ಲಿಖಿತ ಸೂಚನೆಗಳನ್ನು ನೀಡಿದ್ದರೂ ಕೂಡ ಅವರು ಈ ಬದಲಾವಣೆಗಳನ್ನು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿ ಅಗತ್ಯವಿದ್ದ ಕಡತವನ್ನು ಕೇಳಿದಾಗ ಆಡಳಿತ ವಿಭಾಗವು ಅದನ್ನು ನೀಡಲಿಲ್ಲ ಎಂದು ವಿವೇಕ್ ಜೋಶಿ ಆರೋಪಿಸಿದ್ದಾರೆ.

ಅವರ ಈ ನಿರ್ಧಾರವು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವೆಯ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯಿದೆ 2023ರ ನಿಬಂಧನೆಗಳನ್ನು ಉಲ್ಲಂಘಿಸುತ್ತವೆ ಎಂದು ಇಬ್ಬರು ಚುನಾವಣಾ ಆಯುಕ್ತರು ವಾದಿಸಿದ್ದಾರೆ.

ಭಾರತೀಯ ಆಡಳಿತ ಸೇವೆ ಅಧಿಕಾರಿಯಾಗಿದ್ದ ಮನೀಶ್ ಗಾರ್ಗ್ ಅವರನ್ನು 2024ರ ಸೆಪ್ಟೆಂಬರ್ 2ರಂದು ಸಚಿವ ಸಂಪುಟದ ನೇಮಕಾತಿ ಸಮಿತಿಯು ಚುನಾವಣಾ ಆಯೋಗಕ್ಕೆ ನಿಯೋಜಿಸಿತ್ತು. ಆಗಸ್ಟ್ 5 ರಂದು ಅವರ ವಿರುದ್ಧ ಎರಡು ದೂರು ಪತ್ರಗಳು ಬಂದಿವೆ. ಆ ಪತ್ರಗಳ ಪ್ರತಿಗಳನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಎಸ್ಟಾಬ್ಲಿಷ್‌ಮೆಂಟ್ ಆಫೀಸರ್ ಮತ್ತು ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ರವಾನಿಸಲಾಗಿದೆ.

ಜ್ಞಾನೇಶ್ ಕುಮಾರ್ ವಜಾ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಮಹತ್ವದ ಹೇಳಿಕೆ

ಈ ದೂರುಗಳಿಗೆ ಪ್ರತಿಕ್ರಿಯೆಯಾಗಿ ಸಚಿವ ಸಂಪುಟ ಸಚಿವಾಲಯವು ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ಎತ್ತಿಹಿಡಿದಿದೆ. ಅದು ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಸ್ವತಂತ್ರವಾಗಿ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಮುಕ್ತವಾಗಿದೆ. ಚುನಾವಣಾ ಆಯೋಗದ ಕಾರ್ಯನಿರ್ವಹಣೆಯು ಅದರದೇ ಆದ ನಿಯಮಗಳು ಮತ್ತು ಮಾರ್ಗಸೂಚಿಗಳಿಂದ ನಿಯಂತ್ರಿಸಲ್ಪಡುತ್ತದೆ. ಸಚಿವಾಲಯವು 2023ರ ಕಾಯಿದೆಯ ಸೆಕ್ಷನ್ 18ನ್ನೂ ಉಲ್ಲೇಖಿಸಿ ಆಯೋಗದ ಕಾರ್ಯಕಲಾಪಗಳು ಸಾಧ್ಯವಾದಷ್ಟು ಸರ್ವಾನುಮತದಿಂದ ನಡೆಯಬೇಕು ಮತ್ತು ಭಿನ್ನಾಭಿಪ್ರಾಯಗಳು ಉಂಟಾದಲ್ಲಿ ಬಹುಮತದ ಮೂಲಕ ಅವುಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author