ಚೆನ್ನೈ: ಏಪ್ರಿಲ್ 23 ರಂದು ನಡೆಯಲಿರುವ ಚುನಾವಣೆಯ ಕಾವು ತಮಿಳು ನಾಡಿನಲ್ಲಿ ರಂಗೇರಿದೆ. ನಟ- ರಾಜಕಾರಣಿ ವಿಜಯ್ ನೇತೃತ್ವದ (TVK Vijay) ಟಿವಿಕೆ ಪಕ್ಷದತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ. ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಆರಂಭದಿಂದಲೂ, ಈ ಸಮೀಕ್ಷೆಯು ಕೇವಲ ಚುನಾವಣೆಯಲ್ಲ, ಬದಲಾಗಿ "ಪ್ರಜಾಪ್ರಭುತ್ವದ ಯುದ್ಧ" ಎಂದು ವಿಜಯ್ ಸಮರ್ಥಿಸಿಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ವಿಜಯ್ ಪೆರಂಬೂರು ಮತ್ತು ತಿರುಚ್ಚಿ ಪೂರ್ವ ಎಂಬ ಎರಡು ಸ್ಥಾನಗಳಿಂದ ಸ್ಪರ್ಧಿಸುತ್ತಿದ್ದಾರೆ . ಪುದುಚೇರಿಯಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲೂ ಟಿವಿಕೆ ಸ್ಪರ್ಧಿಸುತ್ತಿದೆ.
ಟಿವಿಕೆ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಕೂಡ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಪಕ್ಷದ ನಿರ್ಧಾರವನ್ನು ಸಮರ್ಥಿಸಿಕೊಂಡರು, ಇದು ಬಲವಂತಕ್ಕಿಂತ ಹೆಚ್ಚಾಗಿ ಪ್ರಜ್ಞಾಪೂರ್ವಕ ಸೈದ್ಧಾಂತಿಕ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ. ನಮಗೆ ಮೈತ್ರಿ ಮಾಡಿಕೊಳ್ಳುವ ಅವಕಾಶವಿತ್ತು ಮತ್ತು ಆಫರ್‌ಗಳು ಬಂದಿದ್ದವು, ಆದರೆ ಅದನ್ನು ವಿಜಯ್ ತಿರಸ್ಕರಿಸಿದರು ಎಂದು ಅವರು ಹೇಳಿದ್ದಾರೆ.
ಸಿನಿಮಾದಿಂದ ದೂರ; ರಾಜಕೀಯ ಪ್ರವೇಶ
ತಮಿಳುನಾಡಿನ ರಾಜಕಾರಣ ಸಿನಿಮಾದೊಂದಿಗೆ ನಂಟು ಹೊಂದಿದೆ. ಮಾಜಿ ಸಿಎಂ ಎಂ ಜಿ ರಾಮಚಂದ್ರನ್, ಜೆ ಜಯಲಲಿತಾ, ವಿಜಯಕಾಂತ್‌ರಂತಹ ಹಲವು ಕಲಾವಿದರು ಚಿತ್ರರಂಗದಿಂದ ರಾಜಕೀಯಕ್ಕೆ ಧುಮುಕಿ ಯಶಸ್ವಿಯಾದ ಇತಿಹಾಸ ಇದೆ. ನಟ ಕಮಲ್ ಹಾಸನ್ ಕೂಡ ಸ್ವಂತ ಪಕ್ಷ ಕಟ್ಟಿಕೊಂಡು, ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯನ್ನು ಎದುರಿಸಿದ್ದರು. ಇದೀಗ ವಿಜಯ್ ಕೂಡ ಇದೇ ಹಾದಿಯಲ್ಲಿದ್ದಾರೆ. ದಳಪತಿ (ಕಮಾಂಡರ್) ಎಂದೇ ಪ್ರಸಿದ್ಧರಾಗಿರುವ ನಟ ಜೋಸೆಫ್ ವಿಜಯ್, 2024 ರಲ್ಲಿ ಫೆಬ್ರವರಿ 2 ರಂದು ತಮಿಳಗ ವೆಟ್ರಿ ಕಳಗಂ ಎಂಬ ತಮ್ಮದೇ ಆದ ಪಕ್ಷವನ್ನು ಪ್ರಾರಂಭಿಸುವ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆ.
ಚುಕ್ಕಾಣಿ ಯಾರಿಗೆ? ಸಮೀಕ್ಷೆ ಹೇಳೋದೇನು?
ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ, ಆಡಳಿತಾರೂಢ ಡಿಎಂಕೆ ಮೈತ್ರಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಲೋಕ್ ಪೋಲ್ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಮೈತ್ರಿ 234 ಕ್ಷೇತ್ರಗಳಲ್ಲಿ 181ರಿಂದ 189ರಷ್ಟು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಟಿವಿಕೆ ಪಕ್ಷಕ್ಕೆ 19.2 ಶೇಕಡಾ ಮತಗಳು ದೊರಕುವ ಸಾಧ್ಯತೆ ಇದ್ದು, ಇದು 6ರಿಂದ 12 ಸ್ಥಾನಗಳನ್ನು ಪಡೆದುಕೊಳ್ಳಹುದು ಎಂದು ಹೇಳಲಾಗಿದೆ.