ನವದೆಹಲಿ, ಆ. 10: ಯುವತಿಯೊಬ್ಬಳು ಯಾವ ಉಡುಪು ಧರಿಸಬೇಕು ಎಂಬುದು ಸಂಪೂರ್ಣವಾಗಿ ಆಕೆಯ ವೈಯಕ್ತಿಕ ಆಯ್ಕೆಯಾಗಿದ್ದು, ಜೀನ್ಸ್ ಧರಿಸುವುದರಿಂದ ಯುವಕರನ್ನು ಹಾಳು ಮಾಡಬಹುದು ಎಂಬ ವಾದವು ಅತ್ಯಂತ ಕಳವಳಕಾರಿ ಮತ್ತು ಸ್ವೀಕಾರಾರ್ಹವಲ್ಲದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ದೆಹಲಿ ಹೈಕೋರ್ಟ್ ಸೋಮವಾರ ಹೇಳಿದೆ.
2013ರಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ದೋಷಿ ಎಂದು ಘೋಷಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಚಂದ್ರಶೇಖರನ್ ಸುಧಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುವತಿಯ ಉಡುಪುಗಳನ್ನು ನಿಯಂತ್ರಿಸುವ ಬದಲು, ಪೋಷಕರು ಹಾಗೂ ಸಮಾಜವು ಮಕ್ಕಳಿಗೆ ತಮ್ಮ ನಡವಳಿಕೆಯನ್ನು ನಿಯಂತ್ರಿಸುವುದು, ವೈಯಕ್ತಿಕ ಗಡಿಗಳನ್ನು ಗೌರವಿಸುವುದು ಮತ್ತು ಪ್ರತಿಯೊಬ್ಬರನ್ನೂ ಘನತೆಯಿಂದ ಕಾಣುವುದನ್ನು ಕಲಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಆರೋಪಿಯು ನೆರೆ ಮನೆಯವನಾಗಿದ್ದು, ತನ್ನನ್ನು ಹಿಂಬಾಲಿಸುತ್ತಿದ್ದ. ಲೈಂಗಿಕ ಸ್ವರೂಪದ ಹೇಳಿಕೆಗಳನ್ನು ನೀಡುತ್ತಿದ್ದ ಮತ್ತು ಅನುಚಿತವಾಗಿ ಸ್ಪರ್ಶಿಸುತ್ತಿದ್ದ ಎಂದು ಯುವತಿ ಆರೋಪಿಸಿದ್ದರು. 2014ರಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ವಿಚಾರಣಾ ಹಂತದಲ್ಲಿ ಆರೋಪಿಯ ಪರ ವಕೀಲರು ಯುವತಿಯ ‘ಪಾಶ್ಚಿಮಾತ್ಯ’ ಉಡುಪು, ಆ ಪ್ರದೇಶದ ನಿವಾಸಿಗಳ ಧರ್ಮ ಮತ್ತು ಆಕೆಯ ಉಡುಪಿನ ಬಗ್ಗೆ ಅವರು ಹೊಂದಿದ್ದ ಆಕ್ಷೇಪಣೆಗಳ ಕುರಿತು ಪ್ರಶ್ನೆಗಳನ್ನು ಕೇಳಿದ್ದನ್ನು ಹೈಕೋರ್ಟ್ ತೀವ್ರವಾಗಿ ಆಕ್ಷೇಪಿಸಿದೆ.
“ಹುಡುಗಿ ಅಥವಾ ಮಹಿಳೆ ಏನು ಧರಿಸಬೇಕು ಎಂಬುದು ಆಕೆಯ ವೈಯಕ್ತಿಕ ಆಯ್ಕೆ. ಆಕೆಯ ನೆರೆಹೊರೆಯವರು, ಸಮಾಜ, ಆರೋಪಿ ಅಥವಾ ನ್ಯಾಯಾಲಯದಲ್ಲಿ ವಾದಿಸುವ ವಕೀಲರು ಆಕೆಯ ಉಡುಪನ್ನು ನಿರ್ದೇಶಿಸುವ ಯಾವುದೇ ಹಕ್ಕನ್ನು ಹೊಂದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಜೀನ್ಸ್ ಧರಿಸುವ ಮಹಿಳೆ ‘ಯುವಕರನ್ನು ಹಾಳು ಮಾಡಬಹುದು’ ಎಂಬ ವಾದವು “ಆಳವಾಗಿ ಕಳವಳಕಾರಿ ಮತ್ತು ಸ್ವೀಕಾರಾರ್ಹವಲ್ಲದ ಮನಸ್ಥಿತಿ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮಹಿಳೆಯರ ಉಡುಪುಗಳನ್ನು ನಿಯಂತ್ರಿಸುವುದರಲ್ಲಿ ಪರಿಹಾರವಿಲ್ಲ. ಬದಲಾಗಿ, ಮಕ್ಕಳು ತಮ್ಮ ನಡವಳಿಕೆಯನ್ನು ನಿಯಂತ್ರಿಸುವುದು, ವೈಯಕ್ತಿಕ ಗಡಿಗಳನ್ನು ಗೌರವಿಸುವುದು ಮತ್ತು ಮನೆಯಲ್ಲಾಗಲಿ ಹೊರಗಾಗಲಿ ಪ್ರತಿಯೊಬ್ಬರನ್ನೂ ಘನತೆಯಿಂದ ಕಾಣುವುದನ್ನು ಪೋಷಕರು ಹಾಗೂ ಸಮಾಜ ಕಲಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಮಹಿಳೆಯ ಉಡುಪು, ವ್ಯಕ್ತಿತ್ವ, ಜೀವನಶೈಲಿ, ಧರ್ಮ ಅಥವಾ ವೈಯಕ್ತಿಕ ಆಯ್ಕೆಗಳು ಆ ಪ್ರಕರಣದ ವಿಚಾರಕ್ಕೆ ನೇರವಾಗಿ ಸಂಬಂಧಿಸದಿದ್ದರೆ, ಅವುಗಳ ಆಧಾರದ ಮೇಲೆ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮಹಿಳೆಯ ಉಡುಪು ಆಕೆಯ ಘನತೆಯನ್ನು ಯಾವುದೇ ರೀತಿಯಲ್ಲಿ ಕಡಿಮೆ ಮಾಡುವುದಿಲ್ಲ ಮತ್ತು ಆಕೆಯ ವಿರುದ್ಧ ನಡೆಯುವ ಕಾನೂನುಬಾಹಿರ ಕೃತ್ಯಕ್ಕೆ ಅದು ಯಾವುದೇ ಸಮರ್ಥನೆಯೂ ಅಲ್ಲ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಯುವತಿ ಧರಿಸಿದ್ದ ಬಟ್ಟೆ ಆರೋಪಿ ಅಥವಾ ಸ್ಥಳೀಯ ನಿವಾಸಿಗಳಿಗೆ ಇಷ್ಟವಾಗದಿದ್ದರೂ, ಅದು ಆಕೆಯ ಹೇಳಿಕೆಯನ್ನು ನಂಬದಿರಲು ಕಾರಣವಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಆ ಪ್ರದೇಶದ ನಿವಾಸಿಗಳ ಧರ್ಮ ಹಾಗೂ ಯುವತಿ ಧರಿಸಿದ್ದ ಉಡುಪು ಆರೋಪಕ್ಕೆ ಯಾವುದೇ ಸಂಬಂಧ ಹೊಂದಿಲ್ಲ ಎಂದೂ ಕೋರ್ಟ್ ಹೇಳಿದೆ.
ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿದ ನಿರ್ಧಾರ ತಪ್ಪಾಗಿದೆ ಎಂದು ಹೈಕೋರ್ಟ್ ತೀರ್ಮಾನಿಸಿದೆ. ಜತೆಗೆ ಆರೋಪಿಯನ್ನು ದೋಷಿ ಎಂದು ಘೋಷಿಸಿದೆ. ಆದರೆ ಯುವತಿ ಅಪ್ರಾಪ್ತ ವಯಸ್ಕಳಾಗಿದ್ದಳು ಎಂಬುದನ್ನು ಪ್ರಾಸಿಕ್ಯೂಷನ್ ಸಮರ್ಪಕವಾಗಿ ಸಾಬೀತುಪಡಿಸದ ಹಿನ್ನೆಲೆಯಲ್ಲಿ POCSO ಕಾಯ್ದೆಯನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.