ಜಮ್ಮು, ಜೂ.4: ದೇವಾಲಯಗಳಲ್ಲಿ ದೇವರಿಗೆ ಪೂಜೆ, ಆರತಿ ಮಾಡುವುದು ಅರ್ಚಕರು. ಇದರಲ್ಲೇನು ವಿಶೇಷ ಎನ್ನಬಹುದು. ಜಮ್ಮುವಿನ (Jammu) ರಘುನಾಥ ದೇವಾಲಯದಲ್ಲಿ (Raghunath Temple) ಆರತಿ ಮಾಡುವುದು ಪುರುಷ ಅರ್ಚಕರಲ್ಲ, ಮಹಿಳೆಯರು! ಕೇಸರಿ ಬಣ್ಣದ ಸೀರೆಗಳನ್ನು ಧರಿಸಿ, ಕೈಯಲ್ಲಿ ದೀಪಗಳನ್ನು ಹಿಡಿದ ಯುವತಿಯರ ಗುಂಪೊಂದು ಸ್ತೋತ್ರಗಳನ್ನು ಪಠಿಸುತ್ತಾ ಆರತಿ ಎತ್ತುತ್ತಿರುವ ಸುಂದರ ದೃಶ್ಯ ಈ ದೇಗುಲದ (temple) ಗರ್ಭಗುಡಿಯಲ್ಲಿ ಕಂಡುಬಂದಿದೆ. ಈ ದೃಶ್ಯವು ಬದಲಾವಣೆಯ ಸಂಕೇತವಾಗಿದೆ.
ಮೊದಲ ಬಾರಿಗೆ ಇಲ್ಲಿ ಅರ್ಚಕಿಯರಾಗಿ ತರಬೇತಿ ಪಡೆಯುತ್ತಿರುವ ಯುವತಿಯರು ಸಂಜೆ ಆರತಿಗೆ ನೇತೃತ್ವ ವಹಿಸುತ್ತಿದ್ದಾರೆ. ಈ ಯುವತಿಯರು ಮಂತ್ರೋಚ್ಚಾರಣೆ ಮಾಡುತ್ತಾ ಶತಮಾನಗಳಷ್ಟು ಹಳೆಯ ಸಂಪ್ರದಾಯದವನ್ನು ಮುರಿದು ಬದಲಾವಣೆಯ ಹೊಸ ದಾರಿಯತ್ತ ನಡೆಯುತ್ತಿದ್ದಾರೆ. 1835ರಲ್ಲಿ ನಿರ್ಮಾಣಗೊಂಡ ಈ ದೇವಾಲಯವು ರಾಜರು, ಯುದ್ಧಗಳು ಮತ್ತು ಅಸಂಖ್ಯಾತ ಪ್ರಾರ್ಥನೆಗಳಿಗೆ ಸಾಕ್ಷಿಯಾಗಿದೆ. ಇಂದು ಅದು ಮತ್ತೊಂದು ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗುತ್ತಿದೆ.
ಇಲ್ಲಿದೆ ವಿಡಿಯೊ:
ಈ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ. ಮಹಿಳೆಯರು ದೇಗುಲದಲ್ಲಿ ಪೂಜೆ ಮಾಡಲು ಹಲವಾರು ಅಡೆತಡೆಗಳು ಇದ್ದವು. ಆದರೆ ಮಹಾರಾಜ ಹರಿ ಸಿಂಗ್ ಅವರ ಮೊಮ್ಮಗಳು ಕುಂವರಣಿ ರಿತು ಸಿಂಗ್, ಈ ಬದಲಾವಣೆಯನ್ನು ಸ್ವೀಕರಿಸುವಂತೆ ಜನರಿಗೆ ಮನವರಿಕೆ ಮಾಡಲು ಧೈರ್ಯಶಾಲಿ ಹೆಜ್ಜೆ ಇಟ್ಟರು.
ಹಾಗಂತ ಪುರುಷರನ್ನು ಬದಿಗಿಡುವುದು ಇದರ ಉದ್ದೇಶವಲ್ಲ. ಬದಲಾಗಿ ಶಿವ ಮತ್ತು ಶಕ್ತಿಯ ಪರಿಕಲ್ಪನೆಯನ್ನು ಉತ್ತೇಜಿಸಲು ಈ ಬದಲಾವಣೆಯನ್ನು ತರಲಾಗಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಮಾನರು ಎಂದು ರಿತು ಸಿಂಗ್ ವಿವರಿಸಿದರು.
Gauribidanur News: ಕಾದಲವೇಣಿಯಲ್ಲಿ ಕೈವಾರ ತಾತಯ್ಯ ನವರ ದೇವಾಲಯ ನಿರ್ಮಾಣ
ನಾವು ಕನ್ಯಾ ಪೂಜೆ ಮತ್ತು ದೇವಿ ಪೂಜೆಯನ್ನು ಮಾಡುತ್ತಿದ್ದರೆ, ಮಹಿಳೆಯರು ಪೂಜೆ ನಡೆಸುವುದನ್ನು ಏಕೆ ನಿರ್ಬಂಧಿಸಬೇಕು? ಎಂಬುದು ಕುಂವರಣಿ ರಿತು ಸಿಂಗ್ ಅವರ ಪ್ರಶ್ನೆಯಾಗಿದೆ. ಹೀಗಾಗಿ ಸುಮಾರು ಒಂದು ವರ್ಷದ ಹಿಂದೆ ಮಹಿಳೆಯರಿಗೆ ವೇದ ಮಂತ್ರಗಳು, ಪೂಜಾ ವಿಧಾನಗಳು ಮತ್ತು ಧಾರ್ಮಿಕ ಆಚರಣೆಗಳ ಕುರಿತು ತರಬೇತಿ ನೀಡುವ ಕಾರ್ಯಕ್ರಮ ಆರಂಭಿಸಲಾಯಿತು.
ಪ್ರಸ್ತುತ ಸುಮಾರು 150 ಯುವತಿಯರು ಈ ತರಬೇತಿಯಲ್ಲಿ ಭಾಗವಹಿಸುತ್ತಿದ್ದು, ಅವರು ದೇವಾಲಯದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಂಖ್ಯೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ. ಮುಂದಿನ ಹಂತದ ತರಬೇತಿಯಲ್ಲಿ ಅವರಿಗೆ ಹವನ ಮಾಡುವುದು ಮತ್ತು ಮಂತ್ರಗಳನ್ನು ಪಠಿಸುವುದು ಹೇಗೆ ಎಂಬುದನ್ನು ಕಲಿಸಲಾಗುತ್ತದೆ, ಇದರಿಂದ ಅವರು ವಿವಿಧ ದೇವಾಲಯಗಳಲ್ಲಿ ಪೂಜಾರಿಗಳಾಗಿ ಸೇವೆ ಸಲ್ಲಿಸಬಹುದು. ಇದು ಮಹಿಳಾ ಸಬಲೀಕರಣದತ್ತ ಒಂದು ಹೆಜ್ಜೆಯಾಗಲಿದೆ ಎಂದು ರಿತು ಸಿಂಗ್ ಹೇಳಿದರು.
1835ರಲ್ಲಿ ನಿರ್ಮಾಣವಾದ ರಘುನಾಥ ದೇವಸ್ಥಾನವು ಜಮ್ಮು ಪ್ರದೇಶದ ಪ್ರಮುಖ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಇಂತಹ ಐತಿಹಾಸಿಕ ದೇವಾಲಯದಲ್ಲಿ ಮಹಿಳೆಯರಿಗೆ ಅರ್ಚಕರ ಜವಾಬ್ದಾರಿ ನೀಡಿರುವುದು ಧಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಹೊಸ ದಿಕ್ಕು ತೋರಿಸಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹಿಳೆಯರು ಆರತಿಯನ್ನು ಮುನ್ನಡೆಸುತ್ತಿರುವ ದೃಶ್ಯವು ಸ್ಪೂರ್ತಿದಾಯಕವಾಗಿದೆ ಎಂದು ಜಮ್ಮುವಿನ ರಘುನಾಥ ದೇವಾಲಯದ ಭಕ್ತರು ಹೇಳಿದ್ದಾರೆ. “ನಾನು ಎಷ್ಟು ಧನ್ಯಳಾಗಿದ್ದೇನೆಂದು ಹೇಳಲು ಸಾಧ್ಯವಿಲ್ಲ. ನನ್ನ ಜೀವಿತಾವಧಿಯಲ್ಲಿ ಎಂದಿಗೂ ಮಹಿಳೆಯರು ಆರತಿ ನಡೆಸುವುದನ್ನು ನಾನು ನೋಡುತ್ತೇನೆ ಎಂದು ನಾನು ಭಾವಿಸಿರಲಿಲ್ಲ” ಎಂದು ಭಕ್ತೆ ಮಿನಿ ಬಗೋತ್ರಾ ಎಂಬುವವರು ಹೇಳಿದರು.