ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡಿಲಿಮಿಟೇಶನ್‌‌ನಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯ; ಮೋದಿ ಹೇಳಿದ್ದೇನು?

Narendra Modi: ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಮರುವಿಂಗಡನೆ ಮಸೂದೆ-2026 ನಂತರ ದಕ್ಷಿಣ ಭಾರತ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎನ್ನುವ ವಿಪಕ್ಷಗಳ ಆರೋಪಕ್ಕೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದರು. "ಯಾವುದೇ ರಾಜ್ಯಕ್ಕೆ ತಾರತಮ್ಯ ಮಾಡುವುದಿಲ್ಲ" ಎಂದರು.

ನರೇಂದ್ರ ಮೋದಿ (ಸಂಗ್ರಹ ಚಿತ್ರ)

ದೆಹಲಿ, ಏ. 16: ಮಹಿಳಾ ಮೀಸಲಾತಿ ಮಸೂದೆ (Women's Quota) ಮತ್ತು ಕ್ಷೇತ್ರ ಮರುವಿಂಗಡನೆ ಮಸೂದೆ-2026 (Delimitation) ನಂತರ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎನ್ನುವ ವಿಪಕ್ಷಗಳ ಆರೋಪಕ್ಕೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ತಿರುಗೇಟು ನೀಡಿದರು. "ನಮ್ಮ ಸರ್ಕಾರ ಭಾರತವನ್ನು ಒಂದಾಗಿ ನೋಡುತ್ತದೆ. ಭಾಗಗಳಾಗಿ ಅಲ್ಲ. ಮಸೂದೆ ಯಾರಿಗೂ ಅನ್ಯಾಯ ಮಾಡುವುದಿಲ್ಲʼʼ ಎಂದು ಅವರು ಹೇಳಿದರು. "ಯಾವುದೇ ರಾಜ್ಯಕ್ಕೆ ತಾರತಮ್ಯ ಮಾಡುವುದಿಲ್ಲ" ಎಂದು ಪ್ರಧಾನಿ ಹೇಳುತ್ತಿದ್ದಂತೆ ವಿರೋಧ ಪಕ್ಷದ ಸಂಸದರು ಗದ್ದಲ ಎಬ್ಬಿಸಿದರು.

"ಪೂರ್ವದಿಂದ ಪಶ್ಚಿಮದವರೆಗೆ, ಉತ್ತರದಿಂದ ದಕ್ಷಿಣದವರೆಗೆ ಯಾವುದೇ ರಾಜ್ಯಕ್ಕೂ ಅನ್ಯಾಯವಾಗುವುದಿಲ್ಲ ಎಂದು ನಾನು ಖಾತರಿ ನೀಡುತ್ತೇನೆ" ಎಂದು ಮೋದಿ ಭರವಸೆ ನೀಡಿದರು. ದಕ್ಷಿಣ ರಾಜ್ಯಗಳು ಈ ವಿಚಾರದಲ್ಲಿ ಪದೇ ಪದೆ ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೋದಿ ಈ ಭರವಸೆ ನೀಡಿದರು. ಕ್ಷೇತ್ರಗಳ ಗಡಿಗಳನ್ನು ಪುನರ್‌ರಚಿಸುವುದರಿಂದ ಬಿಜೆಪಿಯ ಭದ್ರಕೋಟೆಗಳೆಂದು ಪರಿಗಣಿಸಲಾಗುವ ಉತ್ತರ ಪ್ರದೇಶದಂತಹ ಹಿಂದಿ ಮಾತನಾಡುವ ಉತ್ತರ ರಾಜ್ಯಗಳು ಸಂಸತ್ತಿನಲ್ಲಿ ಹೆಚ್ಚಿನ ಸ್ಥಾನ ಗಳಿಸುತ್ತವೆ ಎನ್ನುವುದು ವಿಪಕ್ಷಗಳ ವಾದ.

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ:



ಮಹಿಳಾ ಮೀಸಲಾತಿ ಬಗ್ಗೆ ಮೋದಿ ಹೇಳಿದ್ದೇನು?

ಲೋಕಸಭೆಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡುವ ಮಸೂದೆಯ ವಿರುದ್ಧ ಕೇಳಿ ಬಂದ ಟೀಕೆಗೆ ಪ್ರತಿಕ್ರಿಯಿಸಿದ ಮೋದಿ, ಹಿಂದೆ ಇದನ್ನು ವಿರೋಧಿಸಿದವರನ್ನು ದೇಶದ ಮಹಿಳೆಯರು ಕ್ಷಮಿಸಲಿಲ್ಲ ಮತ್ತು ನಂತರದ ಚುನಾವಣೆಗಳಲ್ಲಿ ಅವರು ಹೀನಾಯವಾಗಿ ಸೋತರು ಎಂದು ಹೇಳಿದರು.

ಮಹಿಳಾ ಮೀಸಲಾತಿ ಬಗ್ಗೆ ಮಾಹಿತಿ ನೀಡಿದ ಮೋದಿ, ಇದನ್ನು 25-30 ಹಿಂದೆಯೇ ಜಾರಿಗೊಳಿಸಬೇಕಿತ್ತು ಎಂದರು. "25-30 ವರ್ಷಗಳ ಹಿಂದೆಯೇ ಇದನ್ನು ಕಾರ್ಯಗತಗೊಳಿಸಬೇಕಾಗಿತ್ತು. ನಾವು ಈಗ ಅನುಷ್ಠಾನಕ್ಕೆ ತರುತ್ತಿದ್ದೇವೆ. ಕಾಲಕಾಲಕ್ಕೆ ಸುಧಾರಣೆಗಳನ್ನು ಕಾಣುವುದೇ ಪ್ರಜಾಪ್ರಭುತ್ವದ ವೈಶಿಷ್ಟ್ಯ" ಎಂದು ತಿಳಿಸಿದರು.

ವಿಪಕ್ಷಗಳ ವಾದವೇನು?

2023ರಲ್ಲಿ ಸರ್ವ ಪಕ್ಷಗಳ ಬೆಂಬಲದೊಂದಿಗೆ ಮಸೂದೆಯನ್ನು ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದ್ದರೂ, ಸರ್ಕಾರ ಅದನ್ನು ಕಾರ್ಯಗತಗೊಳಿಸಲು ವಿಫಲವಾಗಿದೆ ಎನ್ನುವುದು ವಿಪಕ್ಷಗಳ ವಾದ. ಅಸ್ತಿತ್ವದಲ್ಲಿರುವ 543 ಲೋಕಸಭಾ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಜಾರಿಗೆ ತರಬಹುದಿತ್ತು ಎಂದು ಹೇಳಿವೆ.

ʼʼಮಹಿಳಾ ಮೀಸಲು ಕಾಯ್ದೆ ವಿರೋಧಿಸಿದರೆ...ʼʼ: ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ

ಸಂಸದರ ಸಂಖ್ಯೆ 850ಕ್ಕೇರಿಕೆ

ಸಂವಿಧಾನ ತಿದ್ದುಪಡಿ ಮೂಲಕ ಲೋಕಸಭಾ ಸದಸ್ಯರ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವುದು ಸರ್ಕಾರದ ಯೋಜನೆ. 850 ಸದಸ್ಯರ ಪೈಕಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡಲು ಉದ್ದೇಶಿಸಲಾಗಿದೆ. ಪ್ರಸ್ತುತ ಲೋಸಕಸಭೆಯಲ್ಲಿ 543 ಸಂಸದರಿದ್ದಾರೆ. ಹೊಸ ಮಸೂದೆಯ ಪ್ರಕಾರ ರಾಜ್ಯಗಳ ಮೂಲಕ ಲೋಕಸಭೆಗೆ ಆಯ್ಕೆಯಾಗುವ ಸದಸ್ಯರ ಸಂಖ್ಯೆ 815. ಕೇಂದ್ರಾಡಳಿತ ಪ್ರದೇಶಗಳಿಗೆ 35 ಸಂಸದರು ಇರಲಿದ್ದಾರೆ. ಪ್ರಸ್ತುತ ಕೇಂದ್ರಾಡಳಿತ ಪ್ರದೇಶದಲ್ಲಿ 19 ಸಂಸದರಿದ್ದಾರೆ. ಹೊಸ ವಿಧೇಯಕ ಅಂಗೀಕಾರವಾದರೆ ಪ್ರಸ್ತುತ ಇರುವ ಸಂಸದರ ಸಂಖ್ಯೆಯ ಅರ್ಧದಷ್ಟು ಅಂದರೆ ಶೇಕಡಾ 50ರಷ್ಟು ಹೆಚ್ಚಳವಾಗಲಿದೆ. ಮೂಲಗಳ ಪ್ರಕಾರ ಹೊಸ ಕಾಯ್ದೆ ಬಂದರೆ ಕರ್ನಾಟಕದ ಸಂಸದರ ಸಂಖ್ಯೆ 42ಕ್ಕೆ ಏರಿಕೆಯಾಗಲಿದೆ. ಪ್ರಸ್ತುತ ಇಲ್ಲಿ 28 ಸಂಸದರಿದ್ದಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author