ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಮಹಿಳಾ ಮೀಸಲು ಕಾಯ್ದೆ ವಿರೋಧಿಸಿದರೆ...ʼʼ: ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ

Narendra Modi: 3 ದಿನಗಳ ವಿಶೇಷ ಸಂಸತ್‌ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನದಲ್ಲಿ ದೇಶದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವುದು, ಮಹಿಳಾ ಸದಸ್ಯರಿಗೆ ಶೇಕಡಾ 33ರಷ್ಟು ಮೀಸಲಾತಿ ಒದಗಿಸುವ ಸಂವಿಧಾನಕ್ಕೆ 131ನೇ ತಿದ್ದುಪಡಿ ವಿಧೇಯಕ ಮಂಡಿಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸತ್‌ ಸದಸ್ಯರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ʼʼಮಹಿಳಾ ಮೀಸಲು ಕಾಯ್ದೆ ವಿರೋಧಿಸಿದರೆ...ʼʼ: ಮೋದಿ ಎಚ್ಚರಿಕೆ

ಸಂಸತ್‌ ಅಧಿವೇಶನ ಮತ್ತು ನರೇಂದ್ರ ಮೋದಿ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Apr 16, 2026 3:21 PM

ದೆಹಲಿ, ಏ. 16: ಲೋಕಸಭೆಯಲ್ಲಿ(Lok Sabha) ಗದ್ದಲದ ನಡುವೆಯೇ ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡನೆ ಮಸೂದೆ 2026 ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ 2026 ಮಂಡನೆಯಾಗಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತನಾಡಿದರು. "ನಮ್ಮ ಶಾಸನವನ್ನು ಹೆಚ್ಚು ಸೂಕ್ಷ್ಮವಾಗಿಸುವ ಪ್ರಯತ್ನ ಇದು. 21ನೇ ಶತಮಾನದಲ್ಲಿ, ಭಾರತವು ಹೊಸ ಆತ್ಮವಿಶ್ವಾಸದೊಂದಿಗೆ ಮುಂದುವರಿಯುತ್ತಿದೆ. ಜಾಗತಿಕವಾಗಿ ಭಾರತದ ಸ್ಥಾನಮಾನ ಬೆಳೆಯುತ್ತಿರುವುದನ್ನು ನಾವು ನೋಡಬಹುದು" ಎಂದು ಅವರು ಮಹಿಳಾ ಮೀಸಲಾತಿ ಮಸೂದೆಯ ಕುರಿತು ಮಾತನಾಡುತ್ತಾ ಹೇಳಿದರು.

ಮಹಿಳಾ ಮೀಸಲಾತಿ ಕಾಯ್ದೆಯು ದೇಶದ ಅಭಿವೃದ್ದಿಗೆ ಪೂರಕ ಎಂದು ಅವರು ಬಣ್ಣಿಸಿದರು. ʼʼಮೀಸಲಾತಿಗೆ ರಾಜಕೀಯ ಬಣ್ಣ ಬಳಿಯುವುದು ಬೇಡ. ಇಂದು ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುವವರು ದೀರ್ಘಕಾಲದವರೆಗೆ ಬೆಲೆ ತೆರಬೇಕಾಗುತ್ತದೆ" ಎಂದು ಎಂದು ಅವರು ವಿಪಕ್ಷಕ್ಕೆ ಎಚ್ಚರಿಕೆ ನೀಡಿದರು. ʼʼಅಭಿವೃದ್ಧಿ ಹೊಂದಿದ ಭಾರತ ಎಂದರೆ ಮೂಲ ಸೌಕರ್ಯಗಳ ಹೆಚ್ಚಳ ಮಾತ್ರವಲ್ಲ ಆಡಳಿತದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕೂಡ ಹೌದುʼʼ ಎಂದು ಅಭಿಪ್ರಾಯಪಟ್ಟರು.

ಲೋಕಸಭೆಯಲ್ಲಿ ಮೋದಿ ಭಾಷಣ:



"25-30 ವರ್ಷಗಳ ಹಿಂದೆ, ಈ ಕಲ್ಪನೆ ಮೊದಲು ಹೊರಹೊಮ್ಮಿದಾಗ, ನಾವು ಅದನ್ನು ಆಗಲೇ ಕಾರ್ಯಗತಗೊಳಿಸಬೇಕಾಗಿತ್ತು. ಇದೀಗ ತಡವಾಗಿಯಾದರೂ ಮಹಿಳೆಯರಿಗೆ ಅವಕಾಶ ಸಿಗುತ್ತಿದೆ. ಒಂದು ರಾಷ್ಟ್ರಕ್ಕೆ ಸಂಬಂಧಿಸಿ ಕೆಲವು ನಿರ್ಣಾಯಕ ಕ್ಷಣಗಳು ಬರುತ್ತವೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ನಾಯಕತ್ವವು ಬಲವಾದ ಪರಂಪರೆಯನ್ನು ಸೃಷ್ಟಿಸುತ್ತದೆ. ಇದು ಕೂಡ ಅಂತಹದ್ದೇ ಒಂದು ಕ್ಷಣ" ಎಂದು ಪ್ರಧಾನಿ ಮೋದಿ ಹೇಳಿದರು.

ಎಲ್ಲ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇಕಡಾ 50ರಷ್ಟು ಹೆಚ್ಚಿಸಲು ಮುಂದಾದ ಕೇಂದ್ರ

"ಮಹಿಳೆಯರು ಈಗ ಎಲ್ಲ ಕ್ಷೇತ್ರದಲ್ಲೂ ಸಬಲರಾಗಿದ್ದಾರೆ. ಅವರು ಮಹತ್ವಾಕಾಂಕ್ಷೆಯುಳ್ಳವರು. ಅವರು ಆಡಳಿತ ಮತ್ತು ಕಾನೂನು ರಚನೆಯ ಭಾಗವಾಗಲು ಬಯಸುತ್ತಾರೆ" ಎಂದು ನರೇಂದ್ರ ಮೋದಿ ವಿವರಿಸಿದರು. "ರಾಜಕೀಯವಾಗಿ ಮಾತ್ರ ಯೋಚಿಸುವವರಿಗೆ ನಾನು ಸಲಹೆ ನೀಡಲು ಬಯಸುತ್ತೇನೆ. ನಮ್ಮ ದೇಶದಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಚರ್ಚೆ ಪ್ರಾರಂಭವಾದಾಗಿನಿಂದ ಮತ್ತು ನಂತರದ ಪ್ರತಿಯೊಂದು ಚುನಾವಣೆಯಲ್ಲೂ ಮಹಿಳೆಯರ ಈ ಹಕ್ಕನ್ನು ವಿರೋಧಿಸಿದ ಯಾರೇ ಆಗಿರಲಿ, ದೇಶ ಅವರನ್ನು ಕ್ಷಮಿಸಿಲ್ಲ" ಎಂದು ಪ್ರಧಾನಿ ಮೋದಿ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದರು.

"ನಾವು ಈಗಾಗಲೇ ಮೀಸಲಾತಿ ಜಾರಿಗೆ ವಿಳಂಬ ಮಾಡಿದ್ದೇವೆ. ಕಾರಣ ಏನೇ ಇರಲಿ, ಯಾರೇ ಜವಾಬ್ದಾರರಾಗಿದ್ದರೂ, ನಾವು ಈ ವಾಸ್ತವವನ್ನು ಒಪ್ಪಿಕೊಳ್ಳಬೇಕು. ಈ ಪ್ರಕ್ರಿಯೆ ನಡೆಯುತ್ತಿರುವಾಗ ಎಲ್ಲ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿತ್ತು. ಒಂದು ಪಕ್ಷವನ್ನು ಹೊರತುಪಡಿಸಿ, ನಾವು ಭೇಟಿಯಾದ ಪ್ರತಿಯೊಬ್ಬರೂ ಯಾವುದೇ ತಾತ್ವಿಕ ವಿರೋಧವನ್ನು ವ್ಯಕ್ತಪಡಿಸಲಿಲ್ಲ. ನಂತರ ಇದು ರಾಜಕೀಯ ತಿರುವು ಪಡೆದುಕೊಂಡಿದೆʼʼ ಎಂದರು.

“ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದರೆ ಇದು ಇಡೀ ರಾಷ್ಟ್ರಕ್ಕೆ ಸಿಗುವ ಸಾಮೂಹಿಕ ಯಶಸ್ಸು. ಇದು ಯಾವುದೇ ಒಂದು ಪಕ್ಷಕ್ಕೆ ಸಿಕ್ಕ ವಿಜಯವಾಗಿರುವುದಿಲ್ಲ. ಹೀಗಾಗಿ ಈ ಮಸೂದೆಗೆ ರಾಜಕೀಯ ಬಣ್ಣ ನೀಡುವ ಅಗತ್ಯವಿಲ್ಲ” ಎಂದು ಅವರು ಪುನರುಚ್ಚರಿಸಿದರು.

ಮಹಿಳಾ ಮೀಸಲಾತಿ ಕಾಯ್ದೆ ವಿರೋಧಿಸಲು ಸಜ್ಜಾದ ವಿಪಕ್ಷಗಳ ಇಂಡಿಯಾ ಒಕ್ಕೂಟ

ಸಂಸದರ ಸಂಖ್ಯೆ 850ಕ್ಕೆ ಏರಿಸುವ ಗುರಿ

ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿ ಲೋಕಸಭಾ ಸದಸ್ಯರ ಸಂಖ್ಯೆಯನ್ನು 850ಕ್ಕೇರಿಸುವುದು, ಮಹಿಳಾ ಸದಸ್ಯರಿಗಾಗಿಯೇ ಶೇಕಡಾ 33 ಮೀಸಲಾತಿ ನೀಡುವ ಅಂಶ ಸೇರಿದೆ. ಪ್ರಸ್ತುತ ಲೋಕಸಭೆಯಲ್ಲಿ 543 ಸದಸ್ಯ ಬಲವಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.