ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ಐತಿಹಾಸಿಕ ಸಾಧನೆಯನ್ನು ಮಾಡಿದ್ದು, ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಹಿಂದಿಕ್ಕಿ ದೇಶದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿದ್ದಾರೆ. ಜವಾಹರಲಾಲ್ ನೆಹರು (Jawaharlal nehru) ಅವರ 4,398 ದಿನಗಳ ದಾಖಲೆಯನ್ನು ಮೋದಿ ಮುರಿದಿದ್ದಾರೆ. 2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿ ಅವರು ಇಂದಿಗೆ 4,399 ದಿನಗಳ ನಿರಂತರ ಅಧಿಕಾರಾವಧಿಯನ್ನ ಪೂರೈಸಿದ್ದಾರೆ. ಇದರೊಂದಿಗೆ ಅವರು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನೆಹರು ಆಡಳಿತಾವಧಿಯನ್ನು ನೋಡಿದರೆ, 1952ರ ಮೇ 13ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿ, 1964ರ ಮೇ 27ರವರೆಗೆ ಒಟ್ಟು 4,398 ದಿನಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ್ದರು. ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಜನವರಿ 24, 1966 ರಿಂದ ಮಾರ್ಚ್ 24, 1977 ರವರೆಗೆ 4,077 ದಿನಗಳ ಕಾಲ ಅಧಿಕಾರದಲ್ಲಿದ್ದರು. ಮೋದಿ ಅವರು 2025ರ ಜುಲೈ 25ರಂದು ಇಂದಿರಾ ಗಾಂಧಿ ದಾಖಲೆಯನ್ನು ಮುರಿದಿದ್ದರು.
ಈ ಸಾಧನೆಯ ಕುರಿತು ಭಾವುಕ ನುಡಿಗಳನ್ನಾಡಿರುವ ಮೋದಿ, ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಕಳೆದ 12 ವರ್ಷಗಳ ಈ ಸುದೀರ್ಘ ಪಯಣವು ದೇಶದ ಜನರ ನಂಬಿಕೆ, ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಸಮರ್ಪಿತವಾಗಿದೆ. 140 ಕೋಟಿ ಭಾರತೀಯರ ಆಶೀರ್ವಾದದೊಂದಿಗೆ ನಾವು ಯುವಕರು, ಮಹಿಳೆಯರು ಹಾಗೂ ರೈತ ಬಾಂಧವರ ಸಬಲೀಕರಣಕ್ಕಾಗಿ ಶ್ರಮಿಸಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿಯಿಂದ ಹಿಡಿದು ಡಿಜಿಟಲ್ ಕ್ರಾಂತಿಯವರೆಗೆ ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಹೊಸ ಗುರುತನ್ನು ಪಡೆದುಕೊಂಡಿದೆ” ಎಂದು ಹೇಳಿದ್ದಾರೆ.
ಮೋದಿ ನೇತೃತ್ವದ ಸರ್ಕಾರಕ್ಕೆ 12 ವರ್ಷ ತುಂಬಿದ ಹಿನ್ನೆಲೆ ಬಿಜೆಪಿ ದೇಶಾದ್ಯಂತ ಸಹೋದರತ್ವ ಕಾರ್ಯಕ್ರಮ ಹಮ್ಮಿಕೊಂಡಿದೆ. ಜೂ.5ರಿಂದ 21ರವರೆಗೂ ಕೇಂದ್ರ ಸರ್ಕಾರದ ಯೋಜನೆಗಳು, ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದು, ಎಲ್ಲಾ ರಾಜ್ಯಗಳು ಹಾಗೂ ಜಿಲ್ಲೆ, ತಾಲೂಕುಗಳಲ್ಲೂ ಸುದ್ದಿಗೋಷ್ಠಿ ನಡೆಸಲು ಕೇಂದ್ರ ಸಚಿವರು, ಬಿಜೆಪಿ ಆಡಳಿತದ ರಾಜ್ಯದ ಸಿಎಂಗಳಿಗೆ ಸೂಚಿಸಲಾಗಿದೆ.