ಸನಾ: ಯೆಮನ್ (Yemen)ನಿಂದ ಶನಿವಾರ ಮುಂಜಾನೆ ಇಸ್ರೇಲ್ (Israel) ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆದಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಇರಾನ್ ಬೆಂಬಲಿತ ಹೌತಿ (Houthi) ಬಂಡುಕೋರರು ಈ ಸಂಘರ್ಷದಲ್ಲಿ ನೇರವಾಗಿ ಭಾಗಿಯಾಗುತ್ತಿರುವುದರ ಮೊದಲ ಸೂಚನೆ ಇದಾಗಿದೆ. ಶುಕ್ರವಾರ ತಡರಾತ್ರಿಯಿಂದ ಶನಿವಾರದವರೆಗೆ ಇರಾನ್ ಮತ್ತು ಹಿಜ್ಬೊಲ್ಲಾ (Iran and Hezbollah) ಸಂಘಟನೆಗಳು ನಿರಂತರವಾಗಿ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದ್ದು, ಬೀರ್ ಶೆಬಾ (Beer Sheba) ಮತ್ತು ಇಸ್ರೇಲ್‌ನ ಪ್ರಮುಖ ಪರಮಾಣು ಸಂಶೋಧನಾ ಕೇಂದ್ರದ ಸುತ್ತಮುತ್ತ ಮೂರನೇ ಬಾರಿಗೆ ಸೈರನ್ ಮೊಳಗಿದೆ.
2014ರಿಂದ ಯೆಮನ್ ರಾಜಧಾನಿ ಸನಾವನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿರುವ ಹೌತಿಗಳು, ಈ ದಾಳಿಯ ಹೊಣೆಯನ್ನು ತಕ್ಷಣಕ್ಕೆ ಒಪ್ಪಿಕೊಂಡಿಲ್ಲವಾದರೂ, ಈ ಬೆಳವಣಿಗೆಯು ಪಶ್ಚಿಮ ಏಷ್ಯಾದ ಯುದ್ಧ ಮತ್ತಷ್ಟು ವಿಕೋಪಕ್ಕೆ ಹೋಗುತ್ತಿರುವುದನ್ನು ತೋರಿಸುತ್ತದೆ. ಹೌತಿಗಳ ಪ್ರವೇಶವು ಕೆಂಪು ಸಮುದ್ರದ ಮೂಲಕ ನಡೆಯುವ ಜಾಗತಿಕ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮತ್ತೆ ಕುತ್ತು ತರುವ ಆತಂಕ ಮೂಡಿಸಿದೆ, ಏಕೆಂದರೆ ಈ ಹಿಂದೆ ಅವರು 100ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ ನಡೆಸಿ ಜಾಗತಿಕ ಸಾರಿಗೆ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದ್ದರು.
ಸೌದಿ ಅರೇಬಿಯಾದ ಅಮೆರಿಕನ್ ನೆಲೆ ಮೇಲೆ ಇರಾನ್ ದಾಳಿ; 12 ಸೈನಿಕರಿಗೆ ಗಾಯ, ಯುದ್ಧ ವಿಮಾನಗಳಿಗೆ ಹಾನಿ
ಮತ್ತೊಂದೆಡೆ, ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಕನಿಷ್ಠ 10 ಅಮೆರಿಕನ್ ಸೈನಿಕರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಮೆರಿಕದ ಅಧಿಕಾರಿಗಳು ದೃಢಪಡಿಸಿದ್ದಾರೆ. ಇಸ್ರೇಲ್ ಶುಕ್ರವಾರ ಇರಾನ್‌ನ ಅರಾಕ್ ಮತ್ತು ಯಾಜ್ಡ್ ಪ್ರಾಂತ್ಯಗಳಲ್ಲಿರುವ ಪರಮಾಣು ಸೌಲಭ್ಯಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಈ ಪ್ರತಿಕಾರ ನಡೆದಿದೆ.
ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು "ಇಸ್ರೇಲ್‌ನ ಈ ಅಪರಾಧಗಳಿಗೆ ಇರಾನ್ ಭಾರಿ ಬೆಲೆ ವಸೂಲಿ ಮಾಡಲಿದೆ" ಎಂದು ಎಚ್ಚರಿಸಿದ್ದಾರೆ. ಈ ಮಧ್ಯೆ, ವಿಶ್ವಸಂಸ್ಥೆಯ ಮನವಿಯ ಮೇರೆಗೆ ಹೊರ್ಮುಜ್ ಜಲಸಂಧಿಯ ಮೂಲಕ ಮಾನವೀಯ ನೆರವು ಮತ್ತು ಕೃಷಿ ಉತ್ಪನ್ನಗಳ ಸಾಗಣೆಗೆ ಇರಾನ್ ಒಪ್ಪಿಗೆ ನೀಡಿದೆ ಎಂಬುದು ತುಸು ಸಮಾಧಾನದ ಸಂಗತಿಯಾಗಿದೆ. ಆದರೂ, ಇಸ್ರೇಲ್ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವುದಾಗಿ ಘೋಷಿಸಿರುವುದು ಮತ್ತು ಯೆಮನ್‌ನಿಂದ ದಾಳಿ ಆರಂಭವಾಗಿರುವುದು ಇಡೀ ಪ್ರದೇಶವನ್ನು ಮಹಾಯುದ್ಧದ ಅಂಚಿಗೆ ತಳ್ಳಿದೆ.