ನವದೆಹಲಿ: ನವೆಂಬರ್ 1 ರಂದು ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಪಕ್ಷಗಳ ‘ಇಂಡಿಯಾ’ ಒಕ್ಕೂಟದ (INDIA Rally) ಬೃಹತ್ ಜಂಟಿ ರ್ಯಾಲಿಗೆ ಗೈರುಹಾಜರಾದ ಹಿನ್ನೆಲೆಯಲ್ಲಿ, ಭಾರತೀಯ ಯೂತ್ ಕಾಂಗ್ರೆಸ್ (Indian Youth Congress) ತನ್ನ ಸಂಘಟನೆಯಲ್ಲಿ ಭಾರಿ ಶಿಸ್ತು ಕ್ರಮ ಜರುಗಿಸಿದೆ. ಶಿಸ್ತು ಉಲ್ಲಂಘನೆಯ ಆರೋಪದ ಮೇಲೆ ದೇಶದ 7 ರಾಜ್ಯಗಳ ಸುಮಾರು 200 ಪದಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಆದರೆ, ಈ ಕಠಿಣ ಶಿಸ್ತು ಕ್ರಮದ ಬೆನ್ನಲ್ಲೇ ಯೂತ್ ಕಾಂಗ್ರೆಸ್ನ ಆಂತರಿಕ ವಲಯದಲ್ಲಿ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ. ತನ್ನ ಚಿಕ್ಕಪ್ಪನ ನಿಧನದ ಹಿನ್ನೆಲೆಯಲ್ಲಿ ಅಂತಿಮ ವಿಧಿವಿಧಾನ ಹಾಗೂ 13ನೇ ದಿನದ ಶ್ರಾದ್ಧ ಕಾರ್ಯಕ್ರಮದಲ್ಲಿ ಭಾಗಿಯಾಗಲು ರ್ಯಾಲಿ ತಪ್ಪಿಸಿಕೊಂಡಿದ್ದ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರೋಹಿತ್ ರಾಜೋರಿಯಾ ಅವರನ್ನೂ ಸಹ ಪಕ್ಷ ಯಾವುದೇ ಮುನ್ಸೂಚನೆ ಇಲ್ಲದೆ ಹುದ್ದೆಯಿಂದ ವಜಾಗೊಳಿಸಿದೆ.
ಹುದ್ದೆಯಿಂದ ವಜಾಗೊಂಡಿರುವ ರೋಹಿತ್ ರಾಜೋರಿಯಾ ಪಕ್ಷದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಪಕ್ಷಕ್ಕಾಗಿ ನಾವು 15 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದೇವೆ. ಪ್ರತಿಭಟನೆಗಳಲ್ಲಿ ಭಾಗವಹಿಸಿ 15 ಎಫ್ಐಆರ್ ಎದುರಿಸಿದ್ದೇವೆ, 3-4 ಬಾರಿ ಜೈಲಿಗೂ ಹೋಗಿದ್ದೇವೆ. ಇಷ್ಟೆಲ್ಲಾ ತ್ಯಾಗ ಮಾಡಿದ ನಮಗೆ, ಕೇವಲ ಒಂದು ಕೌಟುಂಬಿಕ ಅನಿವಾರ್ಯತೆಯಿಂದಾಗಿ ಕಾರ್ಯಕ್ರಮಕ್ಕೆ ಬರಲಾಗದಿದ್ದಕ್ಕೆ ಯಾವುದೇ ವಿವರಣೆ ಕೇಳದೆ ಏಕಾಏಕಿ ವಜಾ ಮಾಡಲಾಗಿದೆಯೇ?" ಎಂದು ರಾಜೋರಿಯಾ ಪ್ರಶ್ನಿಸಿದ್ದಾರೆ. ತಾವು ಚಿಕ್ಕಪ್ಪನ ನಿಧನದ ಬಗ್ಗೆ ಪಕ್ಷದ ಹಿರಿಯ ನಾಯಕತ್ವಕ್ಕೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.
ಯೂತ್ ಕಾಂಗ್ರೆಸ್ ಮೂಲಗಳ ಪ್ರಕಾರ, ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 60 ಸದಸ್ಯರನ್ನು, ಗುಜರಾತ್ನಲ್ಲಿ 49, ಪಶ್ಚಿಮ ಬಂಗಾಳದಲ್ಲಿ 26, ತೆಲಂಗಾಣದಲ್ಲಿ 14, ಉತ್ತರ ಪ್ರದೇಶದಲ್ಲಿ 13, ಹಿಮಾಚಲ ಪ್ರದೇಶದಲ್ಲಿ 13 ಮತ್ತು ಹರಿಯಾಣದಲ್ಲಿ 10 ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ರ್ಯಾಲಿಯಲ್ಲಿ ಭಾಗವಹಿಸುವ ಪದಾಧಿಕಾರಿಗಳ ಹಾಜರಾತಿಯನ್ನು ಡಿಜಿಟಲ್ ಆಗಿ ಪತ್ತೆಹಚ್ಚಲು 'With IYC' ಎಂಬ ವಿಶೇಷ ಮೊಬೈಲ್ ಆಪ್ ಬಳಸಿ ಮಿಂಟೋ ರೋಡ್ ಬಳಿ ಬಾರ್ಕೋಡ್ ಸ್ಕ್ಯಾನರ್ಗಳನ್ನು ಅಳವಡಿಸಲಾಗಿತ್ತು.
ಕಾಂಗ್ರೆಸ್ ಸರ್ಕಾರ ಸಂಪದ್ಭರಿತ ರಾಜ್ಯವನ್ನು ಆರ್ಥಿಕ ಅಧಃಪತನದತ್ತ ಕೊಂಡೊಯ್ದಿದೆ: ಜೋಶಿ ವಾಗ್ದಾಳಿ
ರ್ಯಾಲಿಗೆ ಸುಮಾರು 15,000 ಕಾರ್ಯಕರ್ತರು ಬಂದಿದ್ದಾರೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಹಕ್ಕು ಸಾಧಿಸಿದ್ದಾರಾದರೂ, ಡಿಜಿಟಲ್ ಆಪ್ನಲ್ಲಿ ಕೇವಲ 2,831 ಜನರು ಮಾತ್ರ ನೋಂದಾಯಿಸಿಕೊಂಡಿರುವುದು ಆಂತರಿಕ ಸಮೀಕ್ಷೆಯಲ್ಲಿ ಬಯಲಾಗಿದೆ. ತಾಂತ್ರಿಕ ಅರಿವಿನ ಕೊರತೆ ಹಾಗೂ ಇಂಟರ್ನೆಟ್ ಸಮಸ್ಯೆ ಇದ್ದರೂ ಸಹ, ದೊಡ್ಡ ಸಂಖ್ಯೆಯ ಪದಾಧಿಕಾರಿಗಳು ಯಾವುದೇ ಮಾಹಿತಿ ನೀಡದೆ ರ್ಯಾಲಿಗೆ ಗೈರಾಗಿದ್ದರು ಎಂದು ಪಕ್ಷ ಹೇಳಿದೆ.