ಓದುಗರ ಓಣಿ
ಮುಂಗಾರು ಮಳೆಯು ಆರಂಭದಲ್ಲಿ ಸಂತೋಷದಿಂದ ಪ್ರಾರಂಭವಾಗಿ ರೈತರ ಮೊಗದಲ್ಲಿ ನಗು ವನ್ನು ತರಿಸಿತ್ತು. ಮಳೆಯನ್ನೆ ನಂಬಿದ ರೈತರು ಹತ್ತಿ ತೊಗರಿ ಮೆಕ್ಕೆಜೋಳದಂತಹ ಮುಂಗಾರು ಬೀತ್ತನೆಯ ಬೀಜವನ್ನು ಭೂಮಿತಾಯಿಯ ಮಡಿಲಿಗೆ ಹಾಕಿ ಖುಷಿಯಿಂದ ಹೊಲಗಳಲ್ಲಿ ಕೆಲಸ ಮಾಡತೊಡಗಿದ್ದರು. ರೈತರ ಮುಖದಲ್ಲಿನ ಖುಷಿ ಮಳೆರಾಯ ಬಹಳ ದಿನ ಇರಗೊಡಲಿಲ್ಲ. ದಿನ ಕಳೆದಂತೆ ಭೂಮಿಯ ತೇವಾಂಶ ಕಡಿಮೆಯಾಗುತ್ತಾ ಹೋಗಿ ಬೆಳೆಗಳು ಒಣಗಿ ನಿಂತಿವೆ. ಮೋಡಗಳು ಬರುತ್ತವೆ ಮಾಯವಾಗುತ್ತಿವೆ. ಬೆಳೆಗಳು ಒಣಗುತ್ತಿರುವುದು ನೋಡಿ ರೈತರ ಮುಖದ ಮೇಲಿನ ಕಳೆ ಬತ್ತಿ ಹೋಗಿದೆ. ರೈತರು ಮಳೆಯನ್ನೇ ನಂಬಿ ಸಾಲಶೂಲ ಮಾಡಿ ಭೂಮಿಗೆ ಬೀಜ ಹಾಕಿದ್ದಾರೆ. ಮಳೆ ಬರುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಜನಪ್ರತಿನಿಧಿಗಳು ಮೋಡ ಬಿತ್ತನೆಗೆ ಮುಂದಾಗಿ ಬೆಳೆಗಳನ್ನು ರಕ್ಷಣೆ ಮಾಡಬೇಕು.
- ವಿಠಲ ಆರ್. ಯಂಕಂಚಿ, ಬಮ್ಮನಜೋಗಿ
ಒಲ್ಲದ ಮದುವೆಗೆ ವಿಘ್ನ
ಹಲವು ಇದೊಂದು ಕನ್ನಡದ ಹಳೆಯ ಗಾದೆ. ಬೃಹತ್ ಬೆಂಗಳೂರು ಪ್ರಾಧಿಕಾರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೆ ಹೋಗುತ್ತಿರುವ ಪರಿಯನ್ನು ನೊಡಿದಾಗ ಈ ಗಾದೆ ಬೇಡವೆಂದರೂ ನೆನಪಾಗುತ್ತದೆ. ಬೃಹತ್ ಬೆಂಗಳೂರು ಪ್ರಾಧಿಕಾರದಲ್ಲಿ ಜನಪ್ರತಿನಿಧಿಗಳ ಅಡಳಿತ ಮುಗಿದು ಸುಮಾರು ಐದು ವರ್ಷಗಳಾಗುತ್ತಿದ್ದು, ಇನ್ನೂ ಯಾವಾಗ ಚುನಾವಣೆ ನಡೆಯುತ್ತದೆ ಎನ್ನುವ ಬಗೆಗೆ ನಿಖರವಾದ ಮಾಹಿತಿ ಕಾಣುತ್ತಿಲ್ಲ. ಈ ಚುನಾವಣೆ ಎಷ್ಟು ಬಾರಿ ಮುಂದೆ ಹೋಗಿದೆ ಎನ್ನುವ ಲೆಕ್ಕವನ್ನು ಜನತೆ ಮರೆತಿದ್ದಾರೆ. ವಿಪಕ್ಷದಲ್ಲಿದ್ದಾಗ ಕೂಡಲೇ ಚುನಾವಣೆ ನಡೆಸಿ ಎಂದು ಕೂಗಾಡು ವವರು, ಅಡಳಿತ ಪಕ್ಷಕ್ಕೆ ಬಂದಾಗ ಜಾಣ ಮೌನ ವಹಿಸುತ್ತಾರೆ ಅಥವಾ ಚುನಾವಣೆ ಮುಂದೆ ಹೋಗುವುದನ್ನು ಸಮರ್ಥಿಸಿಕೊಳ್ಳುತ್ತಾರೆ. ಇದು ಸದ್ಯ ಭವಿಷ್ಯದಲ್ಲಿ ಅಂತ್ಯ ಕಾಣಬಹುದೇ ಎನ್ನುವ ಪ್ರಶ್ನೆಗೆ ಉತ್ತರ ದೊರಕುತ್ತಿಲ್ಲ.
ಇದನ್ನೂ ಓದಿ: Jayashri kalkundri Column: ಮಣ್ಣಿನ ಮಕ್ಕಳ ಮಣ್ಣೆತ್ತಿನ ಅಮವಾಸ್ಯೆ
- ರಮಾನಂದ ಎಸ್, ಬೆಂಗಳೂರು
ಬಡಪಾಯಿ ಮೇಲೆ ಪಾಶುಪತಾಸ್ತ್ರ !
ನೂತನ ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಮಾ ಧರಿಸಿ ಮಾರುವೇಷದಲ್ಲಿ ತಮ್ಮ ಇಲಾಖೆಗೆ ಸೇರಿದ ಬೆಂಗಳೂರು ನಗರ ಸಾರಿಗೆ ಬಸ್ ಏರಿ 12 ರೂ. ಟಿಕೆಟ್ಟಿಗೆ ರೂ.100ರ ನೋಟು ಕೊಟ್ಟು ಚಿಲ್ಲರೆ ಇಲ್ಲದ ಕಾರಣ ತಮ್ಮನ್ನು ಬಸ್ಸಿಂದ ಇಳಿಸಿದ ಕಂಡಕ್ಟರನಿಗೆ ಅಮಾನತು ಭಾಗ್ಯ ನೀಡಿzರೆ! ಬಿಟ್ಟಿ ಟಿಆರ್‌ಪಿ ಗಳಿಸಬಹುದೆಂಬ ಆಶಯ ಅವರದಾಗಿತ್ತೇನೋ? ಎಲ್ಲ ಪ್ರಯಾಣಿಕರಿಗೆ ಯುಪಿಐ ಮೂಲಕ ಹಣ ನೀಡಲು ಕಂಡಕ್ಟರ್ ಹೇಳಬೇಕಂತೆ. ಹಳ್ಳಿಗರು, ವೃದ್ಧರು, ಆ ಬಗ್ಗೆ ಅರಿವಿಲ್ಲದವರು ಏನು ಮಾಡಬೇಕು? ಬಸ್‌ಗಳಲ್ಲಿ ಫಲಕಗಳಿರುತ್ತವೆ. ವೃದ್ಧರಿಗೆ, ಅಂಗವಿಕಲರಿಗೆ ಸೀಟು ನೀಡಿ, ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ. ಅದರಂತೆ ‘ದಯವಿಟ್ಟು ಚಿಲ್ಲರೆಯನ್ನೇ ಕೊಟ್ಟು ಸಹಕರಿಸಿ’ ಕೂಡಾ! ಆದರೆ ಪ್ರಯಾಣಿಕರು 100, 500ರ ನೋಟುಗಳನ್ನೇ ತಂದರೆ ಆ ಬಡಪಾಯಿ ನಿರ್ವಾಹಕ ಎಲ್ಲಿಂದ ಚಿಲ್ಲರೆ ಜೋಡಿಸುವುದು? ಹಾಗೂ ಹೀಗೂ ಮನೆಯಿಂದ ಕೊಂಚ ಚಿಲ್ಲರೆ ಹಿಡಿದುಕೊಂಡು ಬಂದರೆ ದಾರಿಯಲ್ಲಿ ಚೆಕಿಂಗ್ ಬರುವ ಇನ್‌ಸ್ಪೆಕ್ಟರ್, ಆ ಹಣ ಟಿಕೆಟ್ ಕೊಡದೇ ಕದ್ದ ಹಣ ಎಂದು ಕೇಸ್ ಹಾಕುವ ಪ್ರಮೇಯ ಬೇರೆ!
ಶಕ್ತಿ ಯೋಜನೆ ಜಾರಿಯ ಬಳಿಕ ಮಹಿಳೆಯರಿಂದ ತುಂಬಿ ತುಳುಕುತ್ತಿರುವ ಬಸ್ಸುಗಳಲ್ಲಿ ಬೆದರಿದ ಹುಯಂಥ ನಿರ್ವಾಹಕ ಸೀಟುಗಳ ಮೇಲೆ ಏರಿ, ಹಾರಿ, ಬಿದ್ದು ಟಿಕೆಟ್ ವಿತರಿಸಿ ಏದುಸಿರು ಬಿಡುತ್ತ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾನೆ.
ಮಾನ್ಯ ಸಚಿವರೇ, ಬಡಪಾಯಿ ಡ್ರೈವರ್, ಕಂಡಕ್ಟರುಗಳ ಮೇಲೆ ಪಾಶುಪತಾಸ ಹೂಡುವ ಬದಲು ಬೆಂಗಳೂರಿನ ರಸ್ತೆಗಳನ್ನು ಸರಿಪಡಿಸಿ. ದಾರಿಯಲ್ಲಿಯೇ ಕೆಟ್ಟು ನಿಲ್ಲುವ, ಪ್ರಯಾಣಿಕರ ಮೊಬೈಲ್ ಬೆಳಕಿನಲ್ಲಿ ಮುಂದೆ ಸಾಗುವ ಬಸ್ಸುಗಳನ್ನು ಗುಜರಿಗೆ ಹಾಕಿ ಹೊಸ ಬಸ್ಸುಗಳನ್ನು ಬಿಡಿ. ಗಬ್ಬು ನಾರುವ, 10 ರೂ. ಪೀಕುವ ಮೂತ್ರಾಲಯಗಳ ಬದಲಿಗೆ ಉಚಿತ, ಸ್ವಚ್ಛ ಶೌಚಾಲಯ ಒದಗಿಸಿ. ಉದ್ಯೋಗಿಗಳಿಗೆ ಸಕಾಲಕ್ಕೆ ಪ್ರತಿ ತಿಂಗಳ ವೇತನ, ಹಿಂಬಾಕಿ, ಆರೋಗ್ಯವಿವೆ ಒದಗಿಸಿ. ಡಿಪೋದಿಂದ ಬಸ್ ಹೊರಡುವ ಮುನ್ನ ಪ್ರತಿ ನಿರ್ವಾಹಕರಿಗೆ ಚಿಲ್ಲರೆ ಒದಗಿಸಿ.
- ಕೆ. ಶ್ರೀನಿವಾಸ
ಪುಸ್ತಕ ಓದುವ ಸಂಸ್ಕ ತಿ ಬೆಳೆಸಿ
ಓದುವ ಹವ್ಯಾಸ ಕ್ಷೀಣಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪುಸ್ತಕ ಸಂಸ್ಕ ತಿಯ ರಾಯಭಾರಿಗಳಂತೆ ಸಾರ್ವಜನಿಕ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಶಹರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಓದುಗರು ತಮ್ಮ ಓದಿನ ಹಸಿವೆಯನ್ನು ಗ್ರಂಥಾಲಯಗಳ ಮೂಲಕ ತೀರಿಸಿಕೊಳ್ಳು ತ್ತಿದ್ದಾರೆ. ಆದರೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯು 2022ರಿಂದ ಇಂದಿನವರೆಗೆ ಪುಸ್ತಕಗಳನ್ನು ಖರೀದಿಸಿಲ್ಲ. ಇದರಿಂದ ಲೇಖಕರು- ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊಸ ಪುಸ್ತಕಗಳು ಸೇರ್ಪಡೆಗೊಳ್ಳದೆ ಗ್ರಂಥಾಲಯಗಳು ಓದುಗರನ್ನು ಆಕರ್ಷಿಸುತ್ತಿಲ್ಲ. ನಾಗರಿಕರು ಗ್ರಂಥಾಲಯ ಸೆಸ್ ಕೊಡುತ್ತಿದ್ದಾರೆ. ಪುಸ್ತಕ ಓದುವ ಹವ್ಯಾಸ ಉತ್ತೇಜಿಸಿದರೆ ಸುಸಂಸ್ಕ ತ ಸಮಾಜ ನಿರ್ಮಾಣ ವಾಗುತ್ತದೆ. ಸರಕಾರ ನೆಪ ಹೇಳದೆ ಏಕಗವಾಕ್ಷಿ ಯೋಜನೆ ಮೂಲಕ ಪುಸ್ತಕ ಖರೀದಿ ಮಾಡಬೇಕು.
- ಉದಯ ಮ. ಯಂಡಿಗೇರಿ, ಧಾರವಾಡ ರಾವ್, ಹರಪನಹಳ್ಳಿ
ಪಾರ್ಕಿಂಗ್ ನಿಯಮ ಪಾಲಿಸಿ
ರಾಜಧಾನಿಯಲ್ಲಿ ನಿಂತ ನಿಂತ ವಾಹನಗಳ ವಿರುದ್ಧ ಕಾರ್ಯಾಚರಣೆ ಆರಂಭವಾಗಿ. ನಿತ್ಯ ಬಳಕೆಯ ವಾಹನಗಳು ಈ ಕಾರ್ಯಚರಣೆಯ ವ್ಯಾಪ್ತಿಯಲ್ಲಿ ಈಗ ಇಲ್ಲ ಎಂದು ಹೇಳಲಾಗಿದೆ. ಮನೆಗಳನ್ನು ನಿರ್ಮಿಸುವಾಗಲೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸ ಬೇಕೆಂಬ ಕಾನೂನು ಹಲವು ವರ್ಷಗಳಿಂದ ಇದ್ದರೂ ಅದು ಸಮರ್ಪಕವಾಗಿ ಜಾರಿಯಾಗಿಲ್ಲವೆಂದು ಸಚಿವ ಕೃಷ್ಣೇಗೌಡರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಏಪ್ರಿಲ್ 2021ರಲ್ಲಿ ರಾಮಚಂದ್ರ ರೆಡ್ಡಿ ವರ್ಸಸ್ ಕಮಿಷನರ್ ಆಫ್ ಪೊಲೀಸ್, ಬೆಂಗಳೂರು ಪ್ರಕರಣದಲ್ಲಿ ನೀಡಿದ ಸ್ಪಷ್ಟ ಆದೇಶವನ್ನೂ ಸಹ ಸಚಿವರು ಗಮನಿಸಬೇಕು. ಪಾರ್ಕಿಂಗ್ ಸೌಲಭ್ಯ ಕಡ್ಡಾಯ ಗೊಳಿಸಿ ರೂಪಿಸಿದ ನಿಯಮಗಳು 2021ಕ್ಕೆ ಆರೇಳು ವರ್ಷಗಳ ಮುಂಚೆಯೇ ಜಾರಿಗೆ ಬಂದಿರಬೇಕು. ಆದ್ದರಿಂದ, ಅಂದಿನಿಂದ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿದ ಮನೆಗಳನ್ನು ಗುರ್ತಿಸಿ ಅಂತಹ ಮನೆಗಳ ಮಾಲಿಕರ ವಿರುದ್ಧ ಶಿಕ್ಷೆಯ ರೂಪದ ದಂಡವನ್ನು ವಿಧಿಸಲು ಮತ್ತು ನಿಯಮದ ಉಲ್ಲಂಘನೆಯನ್ನು ನಿರ್ಲಕ್ಷಿಸಿ ಕರ್ತವ್ಯ ಲೋಪವೆಸಗಿದ ಅಂದಿನ ನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಈಗಲಾದರೂ ಕ್ರಮ ಕೈಗೊಳ್ಳಲು ಕಾನೂನಿನ ತೊಡಕುಗಳಿವೆಯೇ ಎನ್ನುವುದನ್ನು ಪರಿಶೀಲಿಸಬೇಕು. ಮತ್ತು ಈಗ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯ ನಿಯಮಗಳ ಉಲ್ಲಂಘನೆಯಾಗಿದ್ದಲ್ಲಿ ತಕ್ಷಣವೇ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿ ಕ್ರಮ ಜರುಗಿಸ ಬೇಕು. ಬೆಂಗಳೂರಿನ ಯಾವುದೇ ಬಡಾವಣೆಗೆ ಹೋದರೂ ಅಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸುವುದನ್ನು ಕಾಣಬಹುದು. ಇವು ನಿತ್ಯ ಬಳಕೆಯವೇ ಇರಬಹುದು. ಆದಾಗ್ಯೂ, ಎಡೆಯೂ ಜನರು ರಸ್ತೆಗೆ ಇಳಿಯುವ ಅನಿವಾರ್ಯತೆ ಉದ್ಭವಿಸಿದೆ. ನಗರದ ಜನಸಂಖ್ಯೆಗೆ ಸವಾಲೆಸೆ ಯುವ ರೀತಿಯಲ್ಲಿ ವಾಹನಗಳು ರಸ್ತೆಗೆ ಇಳಿಯುತ್ತಿವೆ. ಒಂದು ಕಡೆ ಕಟ್ಟುನಿಟ್ಟಿನ ನಿಯಮಗಳು ಹಾಗೂ ನ್ಯಾಯಾಲಯದ ಸ್ಪಷ್ಟ ಆದೇಶ, ಇನ್ನೊಂದು ಕಡೆ ಈ ಎರಡನ್ನೂ ಕಡೆಗಣಿಸಿರುವ ವ್ಯವಸ್ಥೆ. ಇಂತಹ ಅವ್ಯವಸ್ಥೆಯಲ್ಲಿ ನಗರ ಬದುಕಬೇಕಾಗಿದೆ!
- ಸಾಮಗ ದತ್ತಾತ್ರಿ, ಬೆಂಗಳೂರು