ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Readers Colony: ನೀಟ್ ಸುಧಾರಣೆ ನಿರೀಕ್ಷೆ

ಈ ವರ್ಷದ ನೀಟ್- ಯುಜಿ ಪ್ರಶ್ನೆ ಪತ್ರಿಕೆಯ ಸೋರಿಕೆ ಮತ್ತು ನಂತರದಲ್ಲಿ ನಡೆದ ರಾಜಕೀಯ ಗೊಂದಲಗಳ ನಂತರ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸುವ ಪರೀಕ್ಷೆಗಳಲ್ಲಿ ಮಹತ್ವದ ಸುಧಾರಣೆಗಳನ್ನು ತರಲು, ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತಾಧಿ ಕಾರಿಗಳ ಕಾರ್ಯಪಡೆ ರಚನೆಗೆ ಕೇಂದ್ರ ಸರಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ.

ಓದುಗರ ಓಣಿ

ಈ ವರ್ಷದ ನೀಟ್- ಯುಜಿ ಪ್ರಶ್ನೆ ಪತ್ರಿಕೆಯ ಸೋರಿಕೆ ಮತ್ತು ನಂತರದಲ್ಲಿ ನಡೆದ ರಾಜಕೀಯ ಗೊಂದಲಗಳ ನಂತರ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸುವ ಪರೀಕ್ಷೆಗಳಲ್ಲಿ ಮಹತ್ವದ ಸುಧಾರಣೆಗಳನ್ನು ತರಲು, ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ನೇತೃತ್ವ ದಲ್ಲಿ ಉನ್ನತಾಧಿಕಾರಿಗಳ ಕಾರ್ಯಪಡೆ ರಚನೆಗೆ ಕೇಂದ್ರ ಸರಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ.

ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಸುಧಾರಣೆಯನ್ನು ಸಾರ್ವಜನಿಕರು ಮತ್ತು ಶಿಕ್ಷಣ ತಜ್ಞರು ನಿರೀಕ್ಷೆ ಮಾಡಿದ್ದಾರೆ. ನಿಲೇಕಣಿ ಅವರ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ವ್ಯವಸ್ಥೆ ಸುಧಾರಣೆ ಕಂಡು ದೇಶದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಬೇಕು.

- ಬೂಕನಕೆರೆ ವಿಜೇಂದ್ರ, ಮೈಸೂರು

ಸಿದ್ದರಾಮಯ್ಯ ಅನುಭವ ಬೇಕು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿ ನಿವೃತ್ತಿ ಘೋಷಿಸಿದ್ದಾರೆ. ಅದಕ್ಕೆ ಸಮರ್ಥನೆ ನೀಡುತ್ತಾ ‘ಅಂದು ಜನರೇ ದುಡ್ಡು ಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ ಈಗ ನಾವೇ ದುಡ್ಡು ಕೊಡಬೇಕು. ಅಲ್ಲದೇ, ರಾಜಕೀಯ ಕ್ಷೇತ್ರ ಕಲುಷಿತ ಗೊಂಡಿದೆ’ ಎಂದಿzರೆ. ಕೇವಲ ಮೂರು ವರ್ಷಗಳ ಹಿಂದೆಯೂ ಇದೇ ಪರಿಸ್ಥಿತಿ ಇತ್ತಲ್ಲವೆ? ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಇದನ್ನೂ ಓದಿ: NEET-UG 2026 Paper Leak: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಸಿಎಂ ಆಗ್ರಹ

ರಾಜ್ಯದ ಸುದೀರ್ಘ ಕಾಲ ಮುಖ್ಯಮಂತ್ರಿ ಮತ್ತು ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿಗೆ ಭಾಜನರಾದ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷ ಮೂಲೆಗುಂಪು ಮಾಡದೆ ಗುರುತರ ಸ್ಥಾನವನ್ನು ನೀಡಿ ಗೌರವಿಸಲಿ. ಅವರ ಅಪಾರ ಅನುಭವವನ್ನು ಬಳಸಿಕೊಳ್ಳಲಿ.

- ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಎಐ ವಿಶ್ವಾಸಾರ್ಹತೆ ಎಷ್ಟು?

ಜುಲೈ 25ರ ವಿಶ್ವವಾಣಿಯಲ್ಲಿ ಪ್ರಕಟವಾದ ಡಾ.ಜನಾರ್ದನ ಹೆಗಡೆ ಅವರ ‘ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿಜವೆಂದೇ ನಂಬಿಸುವ ಎಐ!’ ಲೇಖನ ಆಸಕ್ತಿಕರವಾಗಿತ್ತು. ಕೃತಕ ಬುದ್ಧಿಮತ್ತೆ ಕೆಲವೊಮ್ಮೆ ಅಸ್ತಿತ್ವದ ಇಲ್ಲದ ಉಲ್ಲೇಖಗಳು, ದಾಖಲೆಗಳು ಅಥವಾ ಮಾಹಿತಿಯನ್ನು ನಿಜವೆಂಬಂತೆ ಮಂಡಿಸುವ ಸಾಧ್ಯತೆ ಇದೆ ಎಂಬ ಲೇಖಕರ ಎಚ್ಚರಿಕೆ ಅತ್ಯಂತ ಪ್ರಸ್ತುತ ಹಾಗೂ ಉಪಯುಕ್ತ. ಕೃ.ಬು ಬಳಸುವ ಪ್ರತಿಯೊಬ್ಬರೂ ಅದರ ಈ ಮಿತಿಯನ್ನು ಅರಿತುಕೊಳ್ಳಬೇಕು. ಆದರೆ, ಈ ಮಿತಿಯೊಂದನ್ನೇ ಆಧರಿಸಿ ಎಐ ಸಂಪೂರ್ಣ ಅವಿಶ್ವಾಸಾರ್ಹ ಎಂದು ಪರಿಗಣಿಸುವುದು ಸಮಂಜಸ ವಲ್ಲ. ಆದ್ದರಿಂದ ಅದು ನೀಡುವ ಮಾಹಿತಿಯನ್ನು ಅಗತ್ಯವಿದ್ದಲ್ಲಿ ವಿಶ್ವಾಸಾರ್ಹ ಮೂಲ ಗಳೊಂದಿಗೆ ಪರಿಶೀಲಿಸಿಕೊಳ್ಳುವುದು ವಿವೇಕಯುತ ಬಳಕೆ.

ನನ್ನ ಅನುಭವದಲ್ಲಿ ಎಐ ಅಧ್ಯಯನ, ಬರವಣಿಗೆ, ಭಾಷಾಂತರ, ವಿಚಾರ ವಿನಿಮಯ ಹಾಗೂ ಮಾಹಿತಿ ಸಂಗ್ರಹಣೆಯಲ್ಲಿ ಅತ್ಯುತ್ತಮ ಸಹಾಯಕ. ಅದರ ಸಾಮರ್ಥ್ಯ ಮತ್ತು ಮಿತಿಗಳೆರಡನ್ನೂ ಅರ್ಥ ಮಾಡಿಕೊಂಡು ಜವಾಬ್ದಾರಿಯಿಂದ ಬಳಸುವುದು ಹೆಚ್ಚು ಸೂಕ್ತ. ಹೆಗಡೆ ಅವರ ಲೇಖನ ಈ ಬಗ್ಗೆ ಅಗತ್ಯವಾದ ಚರ್ಚೆಗೆ ನಾಂದಿ ಹಾಡಿದೆ.

- ಆಮೇಯ್ ಚಂದ್ರಶೇಖರ್, ಬೆಂಗಳೂರು

ಕುಡಿಯುವ ನೀರು ಕೊಡಿ

ಬರಗಾಲದಿಂದ ತತ್ತರಿಸಿದ ಜನತೆಗೆ ಹಾಗೂ ಜಾನುವಾರುಗಳಿಗೆ ಕುಡಿಯಲು ಅನುಕೂಲವಾಗುವಂತೆ ದೇವರ ಹಿಪ್ಪರಗಿ ತಾಲೂಕಿನ ಕೆರೆಗಳನ್ನು ಕಾಲುವೆಗಳ ಮೂಲಕ ತುಂಬಿರುವುದು ಸಂತೋಷದ ವಿಷಯ. ಆದರೆ ಕೆಲವೊಂದು ಹಳ್ಳಿಗಳಿಗೆ ಕುಡಿಯುವ ನೀರಿನ ಬಾವಿಗಳು ಕೆರೆಯ ಜಾಗದಲ್ಲಿಯೇ ತೋಡಿರುವುದರಿಂದ ಕೆರೆಯ ನೀರು ಬಾವಿಯೊಳಗೆ ಹೋಗಿ ಸೇರಿವೆ. ಕೆನಾಲ್ ನೀರು ಬಹಳಷ್ಟು ಮಲಿನವಾಗಿರುತ್ತವೆ. ಕಾಲುವೆಗಳಲ್ಲಿ ಜನ ಸ್ನಾನ ಮಾಡುವುದು, ಬಟ್ಟೆ ತೊಳೆಯುವುದು, ದನಕರು ಗಳ ಮೈ ತೊಳೆಯುವುದು, ವಾಹನ ತೊಳೆಯುವುದು ಸಾಮಾನ್ಯ. ಅದೇ ನೀರು ಕೆರೆಯ ಬಾವಿಯೊಳಗೆ ಸೇರುವುದರಿಂದ ಜನರಿಗೆ ರೋಗರುಜಿನಗಳು ಬರುತ್ತವೆ. ಶಾಲೆಯ ಮಕ್ಕಳಿಗೂ ಇದೇ ನೀರೇ ಗತಿ. ಹಾಗಾಗಿ ನೀರು ಸರಬರಾಜು ಇಲಾಖೆಯವರು ಬಾವಿಯೊಳಗಿನ ನೀರನ್ನು ಶುದ್ಧೀಕರಿಸಿ ಜನರಿಗೆ ತಲುಪುವ ವ್ಯವಸ್ಥೆ ಮಾಡಿಕೊಡಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ.

- ವಿಠಲ ಆರ್. ಯಂಕಂಚಿ