ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Readers Colony: ಶಿಕ್ಷಣ ಸಿರಿವಂತರ ಸ್ವತ್ತಾ?

ಕೋಟಿ ಕೋಟಿ ಹಣದ ಐದು ಗ್ಯಾರಂಟಿ ಘೋಷಿಸಿ ಅದನ್ನು ಕಾರ್ಯಗತ ಮಾಡಿರುವುದು ಸರಕಾರದ ಆರ್ಥಿಕ ಸ್ಥಿರತೆಗೆ ಸಾಕ್ಷಿ. ಆದರೆ ಕೆಲವೇ ಕೋಟಿ ವೆಚ್ಚದ ಗ್ರಂಥಾಲಯ ಏಕಗವಾಕ್ಷಿ ಯೋಜನೆಯನ್ನು ಸರಕಾರ ಮರೆತಿದೆಯೋ ತಿಳಿಯದು. ಪುಸ್ತಕಜ್ಯೋತಿ ಇಲ್ಲದೆ ಕತ್ತಲ ಗೂಡಾಗಿರುವ ಸಾರ್ವಜನಿಕ ಗ್ರಂಥಾಲಯಗಳು ನೂತನ ಸಿಎಂ ಅವರ ಕಣ್ಣು ಕುಕ್ಕಿರದಿರುತ್ತವೆಯೇ? 2021ರ ಪುಸ್ತಕ ಖರೀದಿ ಏಕಗವಾಕ್ಷಿ ಯೋಜನೆ ಅಡಿಯಲ್ಲಿ ಆಗಿಲ್ಲ.

ಓದುಗರ ಓಣಿ

ರಾಜ್ಯದಲ್ಲಿ ಶಿಕ್ಷಣ ಎಂಬುವುದು ಸಿರಿವಂತರ ಸ್ವತ್ತಾಗಿದೆ. ಏಕೆಂದರೇ ರಾಜ್ಯದ ಎಲ್ಲ ಪಕ್ಷಗಳಲ್ಲಿಯೂ ಶಿಕ್ಷಣ ಸಂಸ್ಥೆಗಳನ್ನು ನಡೆಸುವವರೇ ಶಾಸಕರು, ಸಂಸದರು, ಮಂತ್ರಿಗಳು, ಮುಖ್ಯಮಂತ್ರಿಗಳಾಗು ತ್ತಿದ್ದಾರೆ. ಕರ್ನಾಟಕದಲ್ಲಿ ಸರಕಾರಿ ಶಾಲೆಗಳಿಗಿಂತ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ಜೋರಾಗಿದೆ. ಈ ಹಿನ್ನೆಲೆಯಿಂದ ಬಂದವರೇ ಸರಕಾರದ ವಿವಿಧ ಹುದ್ದೆಯಲ್ಲಿ ಇದ್ದಾರೆ. ಅವರೆ ಲ್ಲರು ತಮಗೆ ಅನಕೂಲವಾಗುವ ರೀತಿಯಲ್ಲಿ ಶೈಕ್ಷಣಿಕ ಕಾಯ್ದೆ ಕಾನೂನಗಳನ್ನು ರೂಪಿಸುತ್ತಿದ್ದು, ಸರಕಾರಿ ಶಾಲಾ ಕಾಲೇಜುಗಳು ಇದ್ದರೂ ಕೊಡಾ ಅವು ಹಲವಾರು ಮೂಲಭೂತ ಸೌಕರ್ಯಗಳ ಕೊರತೆ ಯಿಂದ ಕಾರ್ಯನಿರ್ವಹಿಸುತ್ತಿವೆ.

ಇದರಿಂದ ಜನಸಾಮಾನ್ಯರಿಗೆ ಶಿಕ್ಷಣ ದುಭಾರಿಯಾಗುತ್ತಿದೆ. ಆದ್ದರಿಂದ ಒಡಿಶಾ ಸರಕಾರದಂತೆ ಕರ್ನಾಟಕದಲ್ಲಿಯೂ ಎಲ್‌ಕೆಜಿಯಿಂದ ಸ್ನಾತಕೋತ್ತರ ಶಿಕ್ಷಣದ ವರೆಗೆ ಉಚಿತವಾಗಿ ಶಿಕ್ಷಣ ಸಿಗುವಂತೆ ಮಾಡಿದಾಗ ಜನಸಾಮಾನ್ಯರಿಗೂ ಉನ್ನತ ಶಿಕ್ಷಣ ದೊರೆಯಲು ಸಾಧ್ಯ.

- ವಿ.ಜಿ. ಇನಾಮದಾರ, ಸಾರವಾಡ

ಇದನ್ನೂ ಓದಿ: Readers Colony: ರೈಲು ಸೇವೆಯ ಅಭಿವೃದ್ಧಿಗೆ ಕಲ್ಲು

ಬೇಜವಾಬ್ದಾರಿತನಕ್ಕೆ ಮಕ್ಕಳು ಬಲಿ

ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳ 40,000 ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ಸರಕಾರ ಅಧ್ವಾನಗೊಳಿಸಿದೆ. 7ನೇ ತರಗತಿಯವರೆಗೆ ಇಂಗ್ಲಿಷ್ ಕಲಿಸಿ ಈಗ 8ನೇ ತರಗತಿಗೆ ವಿಸ್ತರಿಸದೆ ಕೈಬಿಟ್ಟಿರುವುದು ಸರಕಾರದ ಕುರುಡು ಆಡಳಿತಕ್ಕೆ ಸಾಕ್ಷಿ. ಜೂನ್ ಮುಗಿಯುತ್ತಿದ್ದರೂ ಯಾವುದೇ ಮಾಹಿತಿ ನೀಡದ ಶಿಕ್ಷಣ ಇಲಾಖೆಯ ನಡೆ ಅತ್ಯಂತ ನಾಚಿಕೆಗೇಡು ಹಾಗೂ ವಂಚನಾತ್ಮಕವಾಗಿದೆ. ಕೆಪಿಎಸ್ ಶಾಲೆಗಳಿಗೆ 3700 ಕೋಟಿ ರು. ಸುರಿಯುವ ಸರಕಾರಕ್ಕೆ ಈ 40000 ಮಕ್ಕಳ ಕಣ್ಣೀರು ಕಾಣುತ್ತಿಲ್ಲವೇ? ಖಾಸಗಿ ಶಾಲೆಗಳ ದುಬಾರಿ ಶುಲ್ಕ ಕಟ್ಟಲಾಗದ ನಿರ್ಗತಿಕ ಪೋಷಕರ ಆಶಯಗಳಿಗೆ ಸರಕಾರ ಬೆಂಕಿ ಇಟ್ಟಿದೆ. ಇದು ಕೇವಲ ನಿರ್ಲಕ್ಷ್ಯವಲ್ಲ ಬಡ ಮಕ್ಕಳ ಭವಿಷ್ಯದ ಕೊಲೆ. ಅಧಿಕಾರಿಗಳ ಮತ್ತು ರಾಜಕಾರಣಿಗಳ ಈ ಕುಂಭಕರ್ಣ ನಿದ್ರೆಯಿಂದಾಗಿ ಸಾವಿರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸರಕಾರ ತಕ್ಷಣ ಈ ಗೊಂದಲ ನಿವಾರಿಸಬೇಕು.

- ಡಾ. ವಿಜಯಕುಮಾರ್ ಎಚ್.ಕೆ., ರಾಯಚೂರು

ಸ್ಟ್ಯಾಂಡಪ್ ಕಾಮಿಡಿಗೆ ಕಡಿವಾಣ

‘ಹೆಣವನ್ನೂ ಬಿಡದ ಹಾಸ್ಯ’ ಅಂತ ಕಿರಣ್ ಉಪಾಧ್ಯಾಯ ಅವರ ಲೇಖನ ಸಕಾಲಿಕ ಹಾಗೂ ಸಾಂದರ್ಭಿಕ. ಇಂದಿನ ಅತ್ಯಂತ ಶಿಕ್ಷಿತ ಯುವ ಪೀಳಿಗೆ ಹಾಸ್ಯದ ಹೆಸರಿನಲ್ಲಿ ಸ್ಟ್ಯಾಂಡಪ್ ಕಾಮಿಡಿ ನಿಜಕ್ಕೂ ಸಭ್ಯತೆಯ ಗಡಿ ದಾಟಿದೆ. ಅಲ್ಲಿ ಸೇರುವವರೆಲ್ಲ ಹೆಚ್ಚು ಓದಿದ ಯುವಕ - ಯುವತಿಯರು, ಆದರೆ ಅಷ್ಟೇ ಅಸಂಸ್ಕೃತರು ಅಂತ ಹೇಳಬಹುದು. ದೇಶದ ಉನ್ನತ ಸ್ಥಾನದಲ್ಲಿ ಇರುವವರ ಅಣಕ ಮಾಡುವುದು, ಅವರ ಕುರಿತು ಕೀಳಾಗಿ ಮಾತನಾಡುವುದು, ಹೆಣ್ಣು- ಗಂಡು ಎಂಬ ಭೇದವಿಲ್ಲದೆ ಎಲ್ಲವನ್ನೂ ಮುಕ್ತವಾಗಿ ಹಂಚಿ ನಗುವುದು, ಪರಂಪರೆ, ಸಂಪ್ರದಾಯ ಬಗ್ಗೆ ಮನಬಂದಂತೆ ಟೀಕಿಸುವುದು ಇತ್ಯಾದಿ ಮಂಗ ಚೇಷ್ಟೆಗಳನ್ನು ಮಾಡುವುದೇ ಇವರ ಹಾಸ್ಯದ ವಸ್ತು. ಯಾರಾದರೂ ಇವರನ್ನು ತೀಡಿ-ತಿದ್ದಲು ಹೋದರೋ, ಇವರ ಬೆನ್ನು ತಟ್ಟುವ ದೊಡ್ಡ ದೊಡ್ಡ ಸಂಘಟನೆಗಳು, ನಾಮಾಂಕಿತ ಪತ್ರಕರ್ತರು, ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿ ಅಂತ ಬೊಬ್ಬೆ ಇಡುತ್ತಾರೆ. ಸರಕಾರವೇ ಇದಕ್ಕೊಂದು ಯೋಗ್ಯ ಉಪಾಯ ಹುಡುಕಿ ಈ ಹುಚ್ಚಾಟಕ್ಕೆ ಕಡಿವಾಣ ಹಾಕಬೇಕು.

- ಲಕ್ಷ್ಮೀಕಾಂತ ಪಾಟೀಲ, ಮೈಸೂರು

ಗ್ರಂಥಾಲಯ ಬೆಳಗಿಸಿ

ಕೋಟಿ ಕೋಟಿ ಹಣದ ಐದು ಗ್ಯಾರಂಟಿ ಘೋಷಿಸಿ ಅದನ್ನು ಕಾರ್ಯಗತ ಮಾಡಿರುವುದು ಸರಕಾರದ ಆರ್ಥಿಕ ಸ್ಥಿರತೆಗೆ ಸಾಕ್ಷಿ. ಆದರೆ ಕೆಲವೇ ಕೋಟಿ ವೆಚ್ಚದ ಗ್ರಂಥಾಲಯ ಏಕಗವಾಕ್ಷಿ ಯೋಜನೆಯನ್ನು ಸರಕಾರ ಮರೆತಿದೆಯೋ ತಿಳಿಯದು. ಪುಸ್ತಕಜ್ಯೋತಿ ಇಲ್ಲದೆ ಕತ್ತಲ ಗೂಡಾ ಗಿರುವ ಸಾರ್ವಜನಿಕ ಗ್ರಂಥಾಲಯಗಳು ನೂತನ ಸಿಎಂ ಅವರ ಕಣ್ಣು ಕುಕ್ಕಿರದಿರುತ್ತವೆಯೇ? 2021ರ ಪುಸ್ತಕ ಖರೀದಿ ಏಕಗವಾಕ್ಷಿ ಯೋಜನೆ ಅಡಿಯಲ್ಲಿ ಆಗಿಲ್ಲ. ಲೇಖಕರಿಗೆ ಒಂದು ಕಡೆ ಆರ್ಥಿಕ ನಷ್ಟ ಇನ್ನೊಂದು ಕಡೆ ತಾವು ಬರೆದ ಕೃತಿ ಯಾರಿಗೂ ಓದಲು ಸಿಗಲಿಲ್ಲ ಎನ್ನುವ ನಿರಾಶೆ. 2022ರಲ್ಲಿ ಪ್ರಕಟವಾದ ಕೃತಿಗಳೂ ಕಾದಿವೆ. 2023-24-25 ಪ್ರಕಟವಾದ ಕೃತಿಗಳ ಆಯ್ಕೆಯ ಸುಳಿ ವಿಲ್ಲ. ಹೊಸ ಮುಖ್ಯಮಂತ್ರಿಗಳು ಇದನ್ನು ಗಮನಿಸಿ ಸೂಕ್ತ ಕ್ರಮ ಕೈಗೊಂಡು ಸತ್ತಂತಿರುವ ಗ್ರಂಥಾಲಯಗಳಿಗೆ ಜೀವ ತುಂಬಬೇಕಿದೆ.

- ಸತ್ಯಬೋಧ, ಬೆಂಗಳೂರು

ಗ್ರಾಮೀಣ ರಸ್ತೆಗಳು ಬೇಕು

ರಸ್ತೆ ಸಂಪರ್ಕ ಜಾಲದಲ್ಲಿ ಭಾರತ ನಂಬರ್ 1 ಎಂಬ ವಿಷಯ ನಿಜಕ್ಕೂ ಖುಷಿ ಹಾಗು ಹೆಮ್ಮೆಯ ಸಂಗತಿ. ಭಾರತ 67 ಲಕ್ಷ ಕಿ.ಮೀ.ನ ರಸ್ತೆ ಹೊಂದಿ ವಿಶ್ವದ ಮೊದಲ ಸ್ಥಾನದಲ್ಲಿದೆ. ಒಂದು ದೇಶದಲ್ಲಿ ರಸ್ತೆಗಳು ಕೇವಲ ಸಂಪರ್ಕ ಮಾಧ್ಯಮಗಳಷ್ಟೇ ಅಲ್ಲ ಒಂದು ಪ್ರದೇಶದ ಅಭಿರುಚಿ, ಸಂಪ್ರದಾಯ, ಜೀವನಶೈಲಿ, ಆಚರಣೆಗಳು ಮುಂತಾದ ಅನೇಕ ವೈವಿಧ್ಯಮಯ ಅಂಶಗಳನ್ನು ಸಂಪರ್ಕಿಸುವ ಸೇತುವೆ. ಪ್ರಪಂಚದ ಅತೀ ಹೆಚ್ಚು ಜನಸಂಖ್ಯೆಯ ರಾಷ್ಟ್ರವಾದ ಭಾರತದಲ್ಲಿ ರಸ್ತೆಗಳೇ ಮುಖ್ಯ ಪಾತ್ರ ವಹಿಸುತ್ತವೆ. ಒಂದು ಪ್ರದೇಶದ ನಾಗರಿಕತೆ ಮತ್ತೊಂದು ಸ್ಥಳದಲ್ಲಿ ತೆರೆದುಕೊಳ್ಳಲು ರಸ್ತೆ ಸಂಪರ್ಕಜಾಲವಾಗಿ ಕಾರ್ಯ ನಿರ್ವಹಿಸುತ್ತದೆ. ಈ ನಿಟ್ಟಿನಲ್ಲಿ ಭಾರತದ ಗ್ರಾಮೀಣ ಪ್ರದೇಶದಲ್ಲಿನ ರಸ್ತೆಗಳ ಸಂಪರ್ಕಸೇತು ಇನ್ನೂ ಹೆಚ್ಚಲಿ ಹಾಗು ಜನಸಾಮಾನ್ಯರಿಗೆ ದಿನನಿತ್ಯದ ಪ್ರಯಾಣ ತ್ರಾಸದಾಯಕವಾಗದಿರಲಿ.

- ರಾ. ರಾಮಾರಾಧ್ಯ, ಮೈಸೂರು

ಲಂಚವಿಲ್ಲದೆ ಏನೂ ಇಲ್ಲ

ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಮಾಡಲು ಸರಕಾರಿ ನೌಕರರಿಗೆ ಅಥವಾ ಅಧಿಕಾರಿ ಗಳಿಗೆ 10 ರೂಪಾಯಿ ಲಂಚವನ್ನು ಕೂಡ ನೀಡಬೇಡಿ ಎಂದು ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಪ್ಪಣೆ ಕೊಡಿಸಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಲಂಚ ಎಂಬ ಹಗಲು ದರೋಡೆ ಯಿಂದ ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ. ಒಂದೆರಡು ವರ್ಷಗಳ ಹಿಂದೆ ಜಾರಿಗೆ ತಂದ ಇ- ಖಾತೆ ಅಥವಾ ಇ-ಸ್ವತ್ತು ಮಾಡಿಸಿಕೊಳ್ಳಲು ಅಥವಾ ಎ- ಖಾತೆ, ಬಿ- ಖಾತೆ ಪಡೆದುಕೊಳ್ಳಲು ಸಾರ್ವಜನಿಕರು ಹತ್ತಾರು ಸಾವಿರ ರೂಪಾಯಿಗಳನ್ನು ಲಂಚದ ರೂಪದಲ್ಲಿ ಸಂಬಂಧಪಟ್ಟ ನೌಕರನಿಗೆ ಅಥವಾ ಅಧಿಕಾರಿಗೆ ನೀಡಲೇಬೇಕು. ಲಂಚ ನೀಡದ ವ್ಯಕ್ತಿಗಳ ಅರ್ಜಿಗಳು ಎಲ್ಲಾ ಒಂದು ಕಡೆ ಬಿಸಾಡಲ್ಪಡುತ್ತವೆ. ಲಂಚ ಸಾರ್ವಜನಿಕ ರಂಗದಲ್ಲಿ ಬೃಹದಾಕಾರವಾಗಿ ಬೆಳೆದು ಬಂದಿದೆ. ಅದಕ್ಕೆ ರಾಜಕಾರಣಿಗಳ ಪರೋಕ್ಷ ಕುಮ್ಮಕ್ಕು ಇರುತ್ತದೆ. ಲಂಚ ನಿರ್ಮೂಲನೆಗೆ ಹೊರಟಿರುವ ಸಿಎಂ ಪ್ರಯತ್ನ ವ್ಯರ್ಥ ಕಸರತ್ತಲ್ಲದೇ ಬೇರೇನೂ ಅಲ್ಲ.

- ಕೆ.ವಿ.ವಾಸು, ಮೈಸೂರು