ಕೇರಳದಲ್ಲಿ ಪ್ರಾಥಮಿಕ ಶಾಲೆಯಿಂದ ಪದವಿ ಹಂತದವರೆಗೆ ಉಚಿತ ಶಿಕ್ಷಣ ನೀಡಲಾಗುವುದು ಎಂಬುದಾಗಿ ಅಲ್ಲಿನ ಸರಕಾರ ಘೋಷಿಸಿದ್ದು, ಇದು ಸರಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಿಗೆ ಅನ್ವಯ ವಾಗುವುದಂತೆ. ಇದಕ್ಕಾಗಿ ಸರಕಾರವು 259 ಕೋಟಿ ರುಪಾಯಿಗಳನ್ನು ಮೀಸಲಿರಿಸಿದೆ. ಸರಕಾರದ ಈ ಕ್ರಮವನ್ನು ಅಲ್ಲಿನ ಜನರು ಹಾರ್ದಿಕವಾಗಿ ಸ್ವಾಗತಿಸಿದ್ದಾರೆ.
ಜನರಿಗೆ ‘ಉಚಿತ’ಗಳ ಭಾಗ್ಯವನ್ನು ನೀಡುವುದಕ್ಕಿಂತ, ಉಚಿತ ಶಿಕ್ಷಣ ಮತ್ತು ಆರೋಗ್ಯ ಚಿಕಿತ್ಸೆಯ ಭಾಗ್ಯವನ್ನು ನೀಡಬೇಕು ಎನ್ನುವ ಕೂಗು ಬಹುದಿನಗಳಿಂದ ಅಲ್ಲಿ ಕೇಳಿ ಬರುತ್ತಿತ್ತು; ಈ ಪೈಕಿ ಇನ್ನೊಂದು ಬೇಡಿಕೆಯೂ ಈಡೇರಲಿದೆ ಎಂಬ ಆಶಾಭಾವನೆ ಯಲ್ಲಿದ್ದಾರೆ ಅಲ್ಲಿನ ಜನರು. ವಿಪರ್ಯಾಸವೆಂದರೆ, ‘ಉಚಿತ’ ಭಾಗ್ಯಗಳನ್ನು ಯಥಾವತ್ತಾಗಿ ನಕಲು ಮಾಡಿ ‘ಡಿವಿಡೆಂಡ್’ ಪಡೆಯುತ್ತಿರುವ ಇತರ ರಾಜ್ಯಗಳು ಕೇರಳದ ಈ ಮಾದರಿ ಯನ್ನು ಅನುಸರಿಸಲು ಹಿಂದೇಟು ಹಾಕುತ್ತಿವೆ.
- ರಮಾನಂದ ಎಸ್., ಬೆಂಗಳೂರು
ಕಠಿಣ ಕಾನೂನು ಬೇಕು
ಮಕ್ಕಳ ಅಶ್ಲೀಲ ಚಿತ್ರಗಳನ್ನು ಮೊಬೈಲ್ ಫೋನ್‌ನಲ್ಲಿ ಸಂಗ್ರಹಿಸಿಡುವುದು ಕೂಡ ಪೋಕ್ಸೋ ಕಾಯ್ದೆಯಡಿ ಗಂಭೀರ ಅಪರಾಧ ಎಂದು ಎಚ್ಚರಿಸಿದೆ ನ್ಯಾಯಾಲಯದ ಇತ್ತೀಚಿನ ತೀರ್ಪು. ಇದು ಸ್ವಾಗತಾರ್ಹ ನಡೆ. ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಸೈಬರ್ ಅಪರಾ ಧಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಿದ್ದು, ಆ ಪೈಕಿ ಮುಗ್ಧ ಮಕ್ಕಳ ಮೇಲಿನ ದೌರ್ಜನ್ಯದ ಡಿಜಿಟಲ್ ರೂಪಗಳು ಶೇ.20ಕ್ಕಿಂತಲೂ ಹೆಚ್ಚಿವೆ.
ಇದನ್ನೂ ಓದಿ: Readers Colony: ಮನುಷ್ಯನಿಗೆ ಜೇನು ಅಮೃತ, ನಾಯಿಯ ಪಾಲಿಗೆ ಯಮ!
ಇಂಥ ಚಿತ್ರಗಳನ್ನು ಪ್ರಸಾರ ಮಾಡುವ ಮತ್ತು ಸಂಗ್ರಹಿಸಿಟ್ಟುಕೊಳ್ಳುವ ವಿಕೃತ ಮನಸ್ಥಿ ತಿಯು ಜನರ ನೈತಿಕ ಅಧಃಪತನವನ್ನು ತೋರಿಸುತ್ತದೆ. ಇಂಥ ಪ್ರಕರಣಗಳ ತನಿಖೆಗೆ ಸರಕಾರವು ವಿಶೇಷ ಸೈಬರ್ ತಂಡಗಳನ್ನು ರಚಿಸಿ, ಅಪರಾಧಿಗಳಿಗೆ ಕ್ಷಿಪ್ರಗತಿಯಲ್ಲಿ ಶಿಕ್ಷೆ ಯಾಗುವಂತೆ ನೋಡಿಕೊಳ್ಳಬೇಕು.
ಡಿಜಿಟಲ್ ಸ್ವರೂಪದಲ್ಲಿ ಮಕ್ಕಳ ಅಶ್ಲೀಲ ಚಿತಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂಥ ಕೃತ್ಯಗಳಿಗೆ ಐಟಿ ಕಾಯ್ದೆ 2000ದ ಸೆಕ್ಷನ್ 67 (ಬಿ) ಅಡಿಯಲ್ಲಿ ಕಠಿಣ ಶಿಕ್ಷೆಯಿದೆ ಎಂಬ ಅರಿವು ಜನರಲ್ಲಿ ಮೂಡಬೇಕಿದೆ. ತಂತ್ರಜ್ಞಾನ ಎಂಬುದು ಮಕ್ಕಳನ್ನು ಶೋಷಿಸುವ ಸಾಧನವಾಗದೆ, ಅವರ ರಕ್ಷಣಾ ಕವಚವಾಗಬೇಕು.
- ಡಾ.ವಿಜಯಕುಮಾರ ಎಚ್.ಕೆ., ರಾಯಚೂರು
ಇಸ್ರೇಲ್‌ನ ರಣತಂತ್ರ
ವಿಶ್ವೇಶ್ವರ ಭಟ್ಟರ ‘ನೂರೆಂಟು ವಿಶ್ವ’ ಅಂಕಣ ಬರಹವು (ಮಾ.12) ಇಸ್ರೇಲ್‌ನ ರಣತಂತ್ರದ ಮೇಲೆ ಬೆಳಕು ಚೆಲ್ಲುವಂತಿದೆ. ಯುದ್ಧದ ವಿಷಯ ಬಂದರೆ ಇಸ್ರೇಲ್ ಯಾಕೆ ಮುಂಗಾಲ ಪುಟಕಿ? ಎನ್ನುವ ಪ್ರಶ್ನೆಗೆ ಭಟ್ಟರು ನೀಡಿರುವ ವಿವರಣೆ ಅದ್ಭುತ ಹಾಗೂ ರೋಮಾಂಚ ಕಾರಿ. ಪುಟ್ಟ ರಾಷ್ಟ್ರವೊಂದು ತನ್ನ ಸುತ್ತಲೂ ವೈರಿಗಳನ್ನು ಇಟ್ಟುಕೊಂಡು, ದಶಕದಿಂದ ಜಯಭೇರಿ ಬಾರಿಸುತ್ತಿರುವುದು ಅಚ್ಚರಿ ತರಿಸುವ ಸಂಗತಿ.
‘ರಕ್ಷಣೆಯೇ ಅತ್ಯುತ್ತಮ ಆಕ್ರಮಣ’ ಎಂಬ ನೀತಿಯನ್ನು ಇಸ್ರೇಲ್ ಪಾಲಿಸುತ್ತಿರುವುದು ಅದರ ಅಸ್ತಿತ್ವದ ಅನಿವಾರ್ಯತೆ. ಶತ್ರುವು ಬಂದು ಬಾಗಿಲು ತಟ್ಟುವವರೆಗೆ ಕಾಯದೆ, ಅಪಾಯದ ಸೂಚನೆ ಸಿಕ್ಕ ಕೂಡಲೇ ಸದೆಬಡಿಯುವ ಅದರ ಎದೆಗಾರಿಕೆ ಯಾವ ದೇಶಕ್ಕಾ ದರೂ ಒಂದು ಪಾಠವೇ ಸರಿ.
ದೇಶಪ್ರೇಮದ ಜತೆಗೆ ತಂತ್ರಜ್ಞಾನವು ಮೇಳೈಸಿದರೆ ಎಂಥ ಸವಾಲನ್ನೂ ಎದುರಿಸಬಹುದು ಎಂಬುದಕ್ಕೆ ಇಸ್ರೇಲ್ ಒಂದು ಮಾದರಿ. ರೋಮಾಂಚಕಾರಿ ಅಂಶಗಳನ್ನು ಒಳಗೊಂಡ ಇಂಥ ಅದ್ಭುತ ಲೇಖನವನ್ನು ನೀಡಿದ್ದಕ್ಕೆ ಧನ್ಯವಾದಗಳು.
- ಬಾಲಚಂದ್ರ ಹೆಗಡೆ, ಬೆಂಗಳೂರು