ಓದುಗರ ಓಣಿ
ಕಳೆದ ಒಂದು ತಿಂಗಳ ಅವಽಯಲ್ಲಿ, ದೇಶದ ಪ್ರಮುಖ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಸುಮಾರು 120 ಮಂದಿ ತಂತ್ರಜ್ಞರು ರಾಜೀನಾಮೆ ಕೊಟ್ಟು ಖಾಸಗಿ ಬಾಹ್ಯಾಕಾಶ ಸಂಸ್ಥೆ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆ. ದೇಶದಲ್ಲಿ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳಿಗೆ ಅವಕಾಶ ನೀಡಿದ ನಂತರ, ಖಾಸಗಿ ಬಾಹ್ಯಾಕಾಶ ಸಂಸ್ಥೆಗಳು ಒಡ್ಡುತ್ತಿರುವ ಅತಿ ಹೆಚ್ಚಿನ ಸಂಬಳ ಮತ್ತು ಇತರ ಸವಲತ್ತುಗಳಿ ಗಾಗಿ ತಂತ್ರಜ್ಞರು ಮತ್ತು ವಿಜ್ಞಾನಿಗಳು ಖಾಸಗಿ ಬಾಹ್ಯಾಕಾಶ ಸಂಸ್ಥೆಗಳನ್ನು ಸೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಜ್ಞಾನಿಗಳು ಇಸ್ರೋದ ತಂತ್ರಜ್ಞಾನವನ್ನೇ ಹೆಚ್ಚಿನ ಹಣದ ಆಸೆಗೆ ಮಾರಿಕೊಳ್ಳಲಾರರೆ? ವಿಜ್ಞಾನಿಗಳಿಗೂ ಸಹ ಹಣವೇ ಮುಖ್ಯವಾಯಿತೆ?
- ಬೂಕನಕೆರೆ ವಿಜೇಂದ್ರ, ಮೈಸೂರು
ಇದಕ್ಕೂ ಹೈಕಮಾಂಡ್ ಏಕೆ?
ಪ್ರತಿ ಬಾರಿಯೂ ಆಗುವಂತೆ ಈ ಬಾರಿಯೂ ಸಹ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ನಡೆಯುತ್ತಿದೆ. ಯಾರನ್ನು ಸೇರಿಸಿಕೊಳ್ಳಬೇಕು ಎಂಬ ವಿಚಾರಕ್ಕೆ ಮಾನ್ಯ ಸಿಎಂ ಡಿಕೆ. ಶಿವಕುಮಾರ್ ಅವರು ಹಲವು ಬಾರಿ ಹೈಕಮಾಂಡ್ ಒಪ್ಪಿಗೆ ಪಡೆಯಲು ದೆಹಲಿ ಯಾತ್ರೆ ಮಾಡಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಸಂಪುಟದಲ್ಲಿ ಮಂತ್ರಿಗಳಾಗಿ ಯಾರನ್ನು ಇಟ್ಟುಕೊಳ್ಳಬೇಕು ಎಂಬ ಪರಮಾಧಿಕಾರವನ್ನು ಮುಖ್ಯಮಂತ್ರಿಗಳಿಗೇ ಬಿಡಬೇಕು. ಇಷ್ಟ ಇಲ್ಲದವರನ್ನು ಬಲವಂತವಾಗಿ ಅಥವಾ ಹೈಕಮಾಂಡ್ ನಿರ್ದೇಶನದಂತೆ ಸಂಪುಟಕ್ಕೆ ಸೇರಿಸಿಕೊಂಡರೆ ಸರಕಾರದ ರಥ ಸರಾಗವಾಗಿ ಸಾಗುವುದೇ? ಅಂತಹವರು ಮುಖ್ಯಮಂತ್ರಿಗಳ ಮಾತು ಕೇಳುವರೇ? ನಾನು ಹೈಕಮಾಂಡ್ ಆಯ್ಕೆ ಎಂದು ಭಿನ್ನವಾಗಿ ವರ್ತಿಸಬಹುದಾದ ಸಾಧ್ಯತೆ ಇದೆ. ಎಲ್ಲದಕ್ಕೂ ಹೈಕಮಾಂಡ್ ಮೂಗು ತೂರಿಸದೆ ಇಂತಹವನ್ನು ಮುಖ್ಯಮಂತ್ರಿಯ ವಿವೇಚನೆಗೆ ಬಿಡುವುದು ಒಳಿತು. ಆಗ ಮು. ಮಂ ಸರಾಗವಾಗಿ ಕಾರ್ಯ ನಿರ್ವಹಿಸುವಂತೆ ಆಗುತ್ತದೆ. ಅಗತ್ಯವೆನಿಸಿದರೆ ಹೈಕಮಾಂಡ್ ಸರಕಾರದ ನಡೆಗಳ ಮೇಲೆ ಕಣ್ಣಿಟ್ಟು ತನ್ನ ಸಲಹೆ ಸೂಚನೆ ನೀಡಲಿ. ಎಲ್ಲದಕ್ಕೂ ದೆಹಲಿ ಯಾತ್ರೆ ಮಾಡುವ ಪದ್ದತಿ ಕೊನೆಗಾಣಲಿ.
- ಪತ್ತಂಗಿ ಎಸ್. ಮುರಳಿ, ಬೆಂಗಳೂರು
ಕೆಟ್ಟ ಸುದ್ದಿ ಬೇಡ
ಸಮಾಜ ಬೆಳೆದಂತೆಲ್ಲ ಯಾಕೋ ಮನುಷ್ಯತ್ವ, ಮಾನವೀಯತೆ ನಮ್ಮಲ್ಲಿ ಮರೆಯಾಗುತ್ತಿದೆ ಏನು ಎನಿಸುತ್ತಿದೆ. ಆಸ್ತಿಗಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ, ಪ್ರೀತಿ ನಿರಾಕರಣೆಗೆ ಪ್ರೇಯಸಿಯನ್ನೇ ಕೊಚ್ಚಿ ಕೊಂದ ಪ್ರಿಯಕರ, ಈ ರೀತಿಯ ಅಪರಾಧ ಸುದ್ದಿಗಳನ್ನು ಟಿವಿ ಚಾನೆಲ್‌ಗಳು ವಿಜೃಂಭಣೆ ಗೊಳಿಸಿ ಸುದ್ದಿ ಪ್ರಸಾರ ಮಾಡುತ್ತಿರುವುದು ನಿಜಕ್ಕೂ ದುರದೃಷ್ಟಕರ.
ದೃಶ್ಯ ಮಾಧ್ಯಮಗಳಲ್ಲಿ ಇವುಗಳನ್ನು ನೋಡಿದರೆ ಇವು ನಕಾರಾತ್ಮಕ ಪರಿಣಾಮವನ್ನೇ ಬಿಂಬಿಸುತ್ತವೆ. ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವ ಬದಲು ಆದಷ್ಟು ಸಕಾರಾತ್ಮಕ ಚಿಂತನೆಯ ಕಾರ್ಯಕ್ರಮಗಳನ್ನು ನೀಡುವಲ್ಲಿ ನಮ್ಮ ಸುದ್ದಿ ಟಿವಿ ವಾಹಿನಿಗಳು ಮುಂದಡಿ ಯಿಡಲಿ.
- ಟಿ.ಎಸ್. ಪ್ರತಿಭಾ, ಚಿತ್ರದುರ್ಗ
ನಿರೀಕ್ಷೆಯೇ ದುಃಖಕ್ಕೆ ಮೂಲ
ಜುಲೈ 19ರ ‘ಇದೇ ಅಂತರಂಗ ಸುದ್ದಿ’ ಬರಹ, ಅತ್ಯಂತ ಮಹತ್ವದ ವಿಷಯದ ಕುರಿತು ಚರ್ಚಿಸಿದೆ. ಅದೇನೆಂದರೆ, ‘ನಿರೀಕ್ಷೆ ’! ಈ ನಿರೀಕ್ಷೆ ಎಂಬುದಿದೆಯಲ್ಲ, ನೆಮ್ಮದಿಯನ್ನೇ ಹಾಳು ಗೆಡವುತ್ತದೆ. ನಿರೀಕ್ಷೆ ಮಾಡುವವರು ಯಾರನ್ನಾದರೂ ಕೇಳಿ ಮಾಡುತ್ತಾರೆಯೆ? ಇತರರಿಗೆ ಇಷ್ಟವಾಗೇ ಆಗುತ್ತದೆ ಎಂದು ಅಥವಾ ನಾವೆಣಿಸಿದಂತೆ ಎಲ್ಲವೂ ಸಾಗುತ್ತದೆ ಎಂದುಕೊಳ್ಳುವುದು. ನಿರೀಕ್ಷೆ, ನಿಜಕ್ಕೂ ಅಪಾಯ ಕಾರಿ. ಫೇಸ್‌ಬುಕ್ ಪೋಸ್ಟೋ ಅಥವಾ ಇನ್ನಾವುದೋ ಕಾರ್ಯ ನಾವು ಮಾಡುವಾಗ, ಇತರರ ಇಷ್ಟ - ಕಷ್ಟಗಳಿಗನುಗುಣ ಇರಲೇ ಕೂಡದು.
ನಮ್ಮ ಸಂತೋಷಕ್ಕೆ, ಆತ್ಮತೃಪ್ತಿಗೆ ಮಾಡು ವಂತಾದಾಗ ನಿರಾಸೆಯೂ ಇಲ್ಲ, ಅಸಂತೋಷವೂ ಇಲ್ಲ, ಬೇಸರವೂ ಇಲ್ಲ, ನಿರ್ಲಿಪ್ತತೆಯೂ ಇಲ್ಲ. ಆದರೆ, ಇಂದು ನಾವೆಲ್ಲ ಇತರರನ್ನು ಸಂತುಷ್ಟಿ ಗೊಳಿಸುವ ಹೆಚ್ಚು ಆಸಕ್ತರಾಗಿದ್ದೇವೆ. ಇತರರಿಂದ ಅತಿಯಾದ ನಿರೀಕ್ಷೆ. ಸಾಮಾಜಿಕ ಜಾಲತಾಣ ಕ್ಕಷ್ಟೇ ಸೀಮಿತವಲ್ಲ. ನಮ್ಮ ದಿನ ನಿತ್ಯದ ಬದುಕಿ ನಲ್ಲೂ ನಾವೆಲ್ಲ ನಿರೀಕ್ಷೆಯ ಮೇಲೇ ಜೀವಿಸು ವಂತಿದೆ. ಆದರೆ ನಾವಂದು ಕೊಂಡಂತೆ ಯಾವುದೂ ನಡೆಯದು. ಕಾರಣ ನಿರೀಕ್ಷೆಗಳು ನಿವಾಗು ವುದು ಅಪರೂಪ. ನಮ್ಮ ಬದುಕಿನ ಇಷ್ಟೊಂದು ಮಹತ್ವದ ಪಾತ್ರ ವಹಿಸು ವಾಗ, ಫೇಸ್‌ಬುಕ್ ಲೈಕಿಂಗ್, ಕ್ಲಿಕ್ ಸಿಗಲಿಲ್ಲವೆಂದು ನಿರಾಸೆಗೊಳ್ಳುವುದು ನಮ್ಮ ದೌರ್ಬಲ್ಯವೇ ಸರಿ.
- ಶಂಕರನಾರಾಯಣ ಭಟ್, ಹೊನ್ನಾವರ
ಜಂಕ್ ಫುಡ್ ನಿಷೇಧ ಸಾಕಾರವಾಗಲಿ
ಶಾಲೆ ಹಾಗೂ ಆಸ್ಪತ್ರೆ ಆವರಣಗಳಲ್ಲಿ ಜಂಕ್ ಫುಡ್ ನಿಷೇಧಿಸುವ ಸರಕಾರದ ತೀರ್ಮಾನ ಸ್ವಾಗತಾರ್ಹವಾದರೂ, ಇದರ ಕಟ್ಟುನಿಟ್ಟಿನ ಅನುಷ್ಠಾನದ ಬಗ್ಗೆ ತೀವ್ರ ಸಂಶಯವಿದೆ. ಇಂದು ಶೇ.90ಕ್ಕಿಂತ ಹೆಚ್ಚು ಶಾಲಾ ಕ್ಯಾಂಟೀನ್‌ಗಳಲ್ಲಿ ರಾಜಾರೋಷವಾಗಿ ಮಾರಕ ಕಾಯಿಲೆಗಳನ್ನು ತರುವ ಸಕ್ಕರೆ ಮತ್ತು ಕೊಬ್ಬಿನಂಶದ ಆಹಾರಗಳನ್ನು ಮಾರಲಾಗುತ್ತಿದೆ. ಕೇವಲ ನಿಯಮಗಳನ್ನು ಕಾಗದದ ಮೇಲೆ ತಂದರೆ ಸಾಲದು.
ಕ್ಯಾನ್ಸರ್, ಮೂತ್ರಪಿಂಡ ಕಾಯಿಲೆಗಳನ್ನು ಹೆಚ್ಚಿಸುತ್ತಿರುವ ಇಂತಹ ವಿಷಕಾರಿ ಆಹಾರ ಮಾಫಿಯಾ ವನ್ನು ಬುಡಸಹಿತ ಕಿತ್ತೆಸೆಯಬೇಕು. ನಿಯಮ ಉಲ್ಲಂಸುವವರ ಮೇಲೆ ಕಟ್ಟುನಿಟ್ಟಿನ ದಂಡ ಹಾಗೂ ಆಡಳಿತ ಮಂಡಳಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಸರಕಾರದ ಈ ಆದೇಶ ವೂ ಹಲ್ಲಿಲ್ಲದ ಹಾವಾಗಿಯೇ ಉಳಿಯುತ್ತದೆ. ಭವಿಷ್ಯದ ಪೀಳಿಗೆಯ ಆರೋಗ್ಯದ ವಿಷಯದಲ್ಲಿ ಇನ್ನು ಮುಂದೆ ಯಾವುದೇ ರಾಜಿ ಸಲ್ಲದು.
- ಡಾ.ವಿಜಯಕುಮಾರ್ ಎಚ್.ಕೆ., ರಾಯಚೂರು
ಪ್ಲಾಸ್ಟಿಕ್ ನೋಟು ಸ್ವಾಗತಾರ್ಹ
ಭಾರತೀಯ ರಿಸರ್ವ್ ಬ್ಯಾಂಕ್ 10, 20 ರೂ.ಗಳ ಮುಖ ಬೆಲೆಯ ಪಾಲಿಮರ್ (ಪ್ಲಾಸ್ಟಿಕ್) ನೋಟು ಗಳನ್ನು ಪ್ರಾಯೋಗಿಕವಾಗಿ ಚಲಾವಣೆ ಮಾಡಲು ಸಿದ್ಧತೆ ನಡೆಸಿದ್ದು, ಇದಕ್ಕೆ ಬೇಕಾದ ಅಗತ್ಯ ಕಚ್ಚಾ ವಸ್ತುಗಳ ಖರೀದಿಗೆ ಜಾಗತಿಕವಾಗಿ ಟೆಂಡರ್ ಕರೆದಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಈ ಪ್ಲಾಸ್ಟಿಕ್ ನೋಟುಗಳು ತುಂಬಾ ದಿನಗಳವರೆಗೆ ಬಾಳಿಕೆ ಬರುವಂತವುಗಳಾಗಿದ್ದು ಇದನ್ನು ನಕಲು ಮಾಡಲು ಕಷ್ಟಕರವಾಗಿದೆ. ಶೀಘ್ರವಾಗಿ ದೇಶಾದ್ಯಂತ ಈ ನೋಟುಗಳ ಚಲಾವಣೆ ಅರಂಭವಾಗ ಲೆಂದು ಅಶಿಸೋಣ.
- ರಾಸುಮ ಭಟ್, ಚಿಕ್ಕಮಗಳೂರು
ಅಕ್ಕರಿಗ ನೀಡಿದ ತೋಷ
‘ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛ ತಿ ಧಿಮತಾಮ’ ಎಂಬ ಸುಭಾಷಿತ ಭಾಗವನ್ನು ಕಳೆದ ವಾರದ ತಮ್ಮ ‘ತಿಳಿರು ತೋರಣ’ ಅಂಕಣದ ಕೊನೆಯಲ್ಲಿ ಉಲ್ಲೇಖಿಸಿದ್ದ ಮಿತ್ರ ಶ್ರೀವತ್ಸ ಜೋಶಿ ಅವರು ಆ ಸೂಕ್ತಿಗೆ ನಿದರ್ಶನವೆಂಬಂತೆ ಈ ವಾರವೂ ಕಾವ್ಯಶಾಸ್ತ್ರ ವಿನೋದ ಫಲವನ್ನು ಓದುಗರಿಗೆ ಉಣಿಸಿದ್ದಾರೆ (‘ವಿಶ್ವವಾಣಿ’, ಜು.19). ನಮ್ಮನ್ನು ಕಬ್ಬಿನ ಗದ್ದೆಗೆ ಕರೆದುಕೊಂಡುಹೋಗಿ, ಆ ಸಕ್ಕರೆ ತೋಟದಲ್ಲಿ ಸಿಹಿ ಉಣಿಸಿ, ಆ (ಶಬ್ದ)ಮಧುರೋದ್ಯಾನದಲ್ಲಿ ನಾವೆಲ್ಲ ವಿಹರಿಸಲು ಅನುವು ಮಾಡಿಕೊಟ್ಟಿದ್ದಾರೆ.
ಮಿತ್ರ ನೀಲಕಂಠಪ್ಪ ಚಿಕ್ಕಮುz ಅವರು ನನ್ನೊಡನೆ ನಡೆಸಿದ ಒಂದು ಕಿರುಸಂವಾದದ ಎಳೆಯನ್ನು ಇಟ್ಟುಕೊಂಡು ಜೋಶಿ ಅವರು ವಿಶ್ವೇಶ್ವರ ಭಟ್ಟರ ‘ಸಂಪಾದಕರ ಸದ್ಯಶೋಧನೆ’ಯ ಸಕ್ಕರೆ ತೋಟವನ್ನು ಹೊಗ್ಗಿ, ಎಲ್ಲಿಂದಲೋ ಅಮೂಲ್ಯ-ಅಪೂರ್ವ ಮಾಹಿತಿಗಳನ್ನು, ಉಲ್ಲೇಖಗಳನ್ನು ಎಳೆದುತಂದು, ತಮ್ಮ ನವಿರಾದ- ಹದವಾದ ಅವಲೋಕನವೆಂಬ ದಾರದಲ್ಲಿ ಪೋಣಿಸಿ, ‘ಸಕ್ಕರೆ ತೋಟ’ ಎಂಬ ನುಡಿಗಟ್ಟಿನ ಕುರಿತ ಒಂದು ಸುಂದರ ಹೂಮಾಲೆಯನ್ನು ಓದುಗರಿಗೆ ಅರ್ಪಿಸಿದ್ದಾರೆ. ಹಾರದೊಡನೆ, ನನಗೆ ಮತ್ತು ನೀಲಕಂಠಪ್ಪ ಅವರಿಗೆ ಉಲ್ಲೇಖವೆಂಬ ತುರಾಯಿಯನ್ನೂ ಜೋಶಿ ಯವರು ನೀಡಿದ್ದಾರೆ.
ಜೋಶಿಯವರ ಗಣಿತವೇ ವಿಶಿಷ್ಟ. ಗಣಿಜ (‘ಖನಿಜ’ವನ್ನು ನಾನು ಕನ್ನಡೀಕರಿಸಿದ ಬಗೆ, ಸಂಸ್ಕೃತ-ಕನ್ನಡ ಸಾಮರಸ್ಯ) ಒಂದರ ಸುಳಿವು ಸಿಕ್ಕಾಗ ಅವರು ಆ ಗಣಿಯನ್ನು ಅಗೆದು ಅದರೊಳಗಣ ಸಂಪೂರ್ಣ ಖನಿಜ ಸಂಪತ್ತನ್ನೇ ನಮ್ಮೆದುರು ಇಡಬಲ್ಲರು. ಅಂಥ ದೊಂದು ಅದ್ಭುತ ‘ಮಣ್ಣಿನ ಸೊಗಡನ್ನು’ ಓದುಗರ ಅನುಭವಕ್ಕೆ ದಕ್ಕಿಸುವ ಅಗಣಿತಗುಣಯುತ ಗಣಿತ ಜೋಶಿಯವರದು. - ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು