ಓದುಗರ ಓಣಿ
ಇತ್ತೀಚೆಗೆ ನಡೆದ ವಿಧಾನ ಪರಿಷತ್ತಿನ ಶಿಕ್ಷಕ ಹಾಗೂ ಪದವಿ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶಿಕ್ಷಕರು ಹಾಗೂ ಸುಶಿಕ್ಷತರೆಂದು ಕರೆಯಿಸಿಕೊಳ್ಳುವ ವಿವಿಧ ಪದವಿ ಮತದಾರರು ಚುನಾವಣೆ ಯಲ್ಲಿ ಹಣ ಹಾಗೂ ಬೆಲೆಬಾಳುವ ಕಾಣಿಕೆ ಪಡೆದು ಮತದಾನ ಮಾಡಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಇದು ನಿಜವಾಗಿದ್ದರೆ ಇದರಂಥ ಆಘಾತಕಾರಿ ಮತ್ತು ಲಜ್ಜೆಗೇಡಿತನ ಮತ್ತೊಂದಿಲ್ಲ. ಇಂತಹ ವಾಮಮಾರ್ಗಗಳ ಮೂಲಕ ಸದನ ಪ್ರವೇಶ ಬಯಸುವ ವ್ಯಕ್ತಿಗಳು ಚಿಂತಕರ ಚಾವಡಿ ಸದಸ್ಯರಾಗಲು ಯೋಗ್ಯರೇ? ಇಂಥವರಿಂದ ಸದನದಲ್ಲಿ ಮಂಡನೆ ಆಗುವ ವಿಷಯಗಳು ಗಂಭೀರತೆ ಪಡೆಯುವುದು ಅಸಾಧ್ಯ. ಆದ್ದರಿಂದ ಇಂಥ ಆಯ್ಕೆಗಳನ್ನು ರದ್ದುಪಡಿಸುವುದೇ ಸೂಕ್ತ.
- ವಿ.ಜಿ ನಾಮದಾರ, ಸಾರವಾಡ
ಸರ್ಕಾರದ ಕೆಲಸ!
ಇತ್ತೀಚಿನ ದಿನಗಳಲ್ಲಿ ಸರ್ಕಾರ ಕೆಲಸ ಮಾಡುತ್ತಿದೆಯೇ? ಅಥವಾ ಕೆಲಸ ಮಾಡಲು ಬಿಡುತ್ತಿಲ್ಲವೇ? ಎಂಬ ಅನುಮಾನ ಜನಸಾಮಾನ್ಯರಿಗೆ ಕಾಡುತ್ತಿರಬಹುದು. ಆಡಳಿತ ಮತ್ತು ವಿರೋಧ ಪಕ್ಷಗಳವರ ನಡುವೆ ಬರೀ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಅಧಿವೇಶನಗಳಲ್ಲಿ ಆಗಬೇಕಾದ ಚರ್ಚೆ ಗಳು ಆಗದೆ ವೃಥಾ ಕಾಲಹರಣವಾಗಿ ಜನರ ತೆರಿಗೆ ಹಣ ಅಪವ್ಯಯ ಆಗುತ್ತಿದೆ. ಎಸ್ಐಆರ್ ಗಲಾಟೆ, ಫಾರಂ ಏಳರ ಪ್ರತಿಭಟನೆ, ಕಬ್ಬು ಬೆಳೆಗಾರರ ಪ್ರತಿಭಟನೆ, ಕೆಪಿಎಸ್ಸಿ ಹಗರಣ, ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಗಳ ವಿರುದ್ಧ ಕೂಗಾಟ, ಸ್ಟಿಂಗ್ ಆಪರೇಷನ್, ಇತ್ಯಾದಿಗಳಿಂದ ಸರ್ಕಾರದ ಗಾಲಿ ಚಲಿಸುತ್ತಿಲ್ಲ ಎಂಬ ಭಾವ ಮೂಡುತ್ತದೆ. ಇದು ಹೀಗೇ ಮುಂದುವರೆದರೆ ಜನಸಾಮಾನ್ಯರಿಗೆ ನೆಮ್ಮದಿ ಶಾಂತಿಯ ಜೀವನ ಸಿಗುವುದೆಂದು?
- ಪತ್ತಂಗಿ ಎಸ್. ಮುರಳಿ, ಬೆಂಗಳೂರು
ಇದನ್ನೂ ಓದಿ: Readers Colony: ಸರ್ಕಾರದಿಂದಲೇ ಬರೆ
ನಕಲಿಗೆ ಕಡಿವಾಣ ಅಗತ್ಯ
ಶಿವಮೊಗ್ಗದ ಮುಕ್ತ ವಿವಿ ಪರೀಕ್ಷೆ ವೇಳೆ ಹಣ ಪಡೆದು ನಕಲು ನಡೆದಿದೆ ಎಂಬ ಘಟನೆ ನಿಜಕ್ಕೂ ಅಕ್ಷಮ್ಯ. ಇಂದಿನ ಪರೀಕ್ಷಾ ವ್ಯವಸ್ಥೆಯಲ್ಲಿ ನಕಲು ಮತ್ತು ಅಕ್ರಮಗಳು ಹೆಚ್ಚುತ್ತಿರುವುದು ಶಿಕ್ಷಣದ ಪಾವಿತ್ರ್ಯಕ್ಕೆ ಕಳಂಕ ವಾಗಿದೆ. ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದರೆ, ನಕಲು ಮಾಡಿ ಅಂಕ ಗಳಿಸುವವರಿಗೆ ಅವಕಾಶ ನೀಡುವುದು ಅತ್ಯಂತ ಖಂಡನೀಯ. ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು.
- ಹರಳಹಳ್ಳಿಪುಟ್ಟರಾಜು, ಪಾಂಡವಪುರ
ಸಹಿಸಲು ಆಗುತ್ತಿಲ್ಲ
ಅ.24ರಂದು ವಿಶ್ವವಾಣಿಯಲ್ಲಿ ಪ್ರಕಟವಾದ ಗಣೇಶ್ ಭಟ್ ಅವರು, ಅಮೆರಿಕದವರು ಎಂದು ಹೇಳಿಕೊಳ್ಳುವವರ ಮನಸ್ಥಿತಿಯ ಬಗ್ಗೆ ಹಾಗೂ ಅಮೆರಿಕಕ್ಕೆ ಭಾರತೀಯರ ಕೊಡುಗೆ ಬಗ್ಗೆ ಚೆನ್ನಾಗಿ ಬರೆದಿದ್ದಾರೆ. ನಾವು ಈಗ ಅಮೆರಿಕನ್ನರು ಎಂದು ಹೇಳಿಕೊಳ್ಳುವವರು ಯಾರು ಎಂದು ಮೂಲ ಕೆದಕಿದರೆ ಆಗ ಗೊತ್ತಾಗುವುದು ಅವರೆ ಮೂಲತಃ ಬೇರೆ ಬೇರೆ ಯುರೋಪ್ ಖಂಡದ ದೇಶಗಳಿಂದ ಬಂದವರು. ಅವರು ಮಾಡಿದ ಮೊದಲ ಕೆಲಸ ಅಲ್ಲಿಯ ಮೂಲನಿವಾಸಿಗಳನ್ನು (ರೆಡ್ ಇಂಡಿಯನ್ಸ್) ಮೂಲೆಗುಂಪು ಮಾಡಿ ತಮ್ಮ ಪ್ರಭುತ್ವ ಸ್ಥಾಪಿಸಿಕೊಂಡರು. ಆನಂತರ ತಮ್ಮ ಮೂಲ ದೇಶದ ಸೇನೆ ವಿರುದ್ಧ ದಂಗೆ ಎದ್ದು ಅವರನ್ನು ಸೊಲಿಸಿ ತಮ್ಮ ಸರಕಾರ ಸ್ಥಾಪಿಸಿದರು. ಭಾರತೀಯರ ಉನ್ನತಿ ಅವರಿಗೆ ಸಹಿಸಲು ಆಗುತ್ತಿಲ್ಲ.
- ಮುಕುಂದ, ದಾವಣಗೆರೆ.