ಓದುಗರ ಓಣಿ
ಕೆಲವು ಔಷಧ ಕಂಪೆನಿಗಳು ನೈಜ ಬೆಲೆಗಿಂತ ಸುಮಾರು ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದರ ಬಗ್ಗೆ ದೇಶದ ಅತ್ಯುನ್ನತ ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರಬಹುದು. ಈಗ ರಾಜ್ಯ ಔಷಧ ನಿಯಂತ್ರಣ ಮಂಡಳಿ ಕಣ್ಣು ತೆರೆದಿದೆ.
ಇದು ಔಷಧಿ ಕಂಪನಿಗಳ ಹಗಲು ದರೋಡೆ. ಇಷ್ಟು ವರ್ಷಗಳಿಂದ ಔಷಧಿ ನಿಯಂತ್ರಣ ಮಂಡಳಿಯವರು ಏನು ಮಾಡುತ್ತಿದ್ದರು? ಈ ದಂಧೆಯಲ್ಲಿ ಅವರು ಸಹ ಶಾಮೀಲಾಗಿರುವ ಶಂಕೆ ಇದೆ. ಇದರಲ್ಲಿ ಕೆಲವು ಡಾಕ್ಟರ್‌ಗಳಿಗೂ ಕಮಿಷನ್ ಇರಬಹುದು. ಒಂದು ಕಡೆ ದುಬಾರಿ ಬೆಲೆ ತೆತ್ತು ಔಷಧಿ ಖರೀದಿ, ಮತ್ತೊಂದು ಕಡೆ ನಕಲಿ ಔಷಧಿ ಮಾರಾಟ, ಇನ್ನೊಂದು ಕಡೆ ನಕಲಿ ವೈದ್ಯರು, ಇವೆಲ್ಲದರಿಂದ ರೋಗಿ ಪಾರಾಗುವುದು ಹೇಗೆ?
- ಬೂಕನಕೆರೆ ವಿಜೇಂದ್ರ, ಮೈಸೂರು
ಕಂಬಳ ಅಗತ್ಯ ಇತ್ತೆ?
ಈ ಬಾರಿ ದಸರಾ ಮಹೋತ್ಸವದ ಭಾಗವಾಗಿ ಕಂಬಳ ಸ್ಪರ್ಧೆ ಆಯೋಜಿಸಿರುವುದು ದಸರಾದ ಮೂಲ ಸ್ವರೂಪಕ್ಕೆ ಹೊಂದಿಕೆಯಾಗುತ್ತಿಲ್ಲ ಎನಿಸುತ್ತಿದೆ. ಕಂಬಳವು ತುಳುನಾಡಿನ ವಿಶಿಷ್ಟ, ರೋಮಾಂಚಕ ಜಾನಪದ ಕ್ರೀಡೆ. ಅದಕ್ಕೆ ತನ್ನದೇ ಆದ ಭೌಗೋಳಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದೆ. ಕರಾವಳಿಯ ಕೆಸರು ಗzಗಳಲ್ಲಿ ನಡೆ ಯುವ ಆ ಕ್ರೀಡೆಯನ್ನು ಮೈಸೂರಿನ ದಸರಾ ವಾತಾವರಣಕ್ಕೆ ತಂದು ನಿಲ್ಲಿಸುವುದು ದಸರಾದ ಸಾಂಪ್ರದಾಯಿಕ ವೈಭವಕ್ಕೆ ಸೂಕ್ತವಲ್ಲ.
ಇದನ್ನೂ ಓದಿ:Poor-quality medicines: ರಾಜ್ಯದಲ್ಲಿ 40,48,436 ರೂ. ಮೌಲ್ಯದ ಕಳಪೆ ಔಷಧ ಜಪ್ತಿ: ದಿನೇಶ್ ಗುಂಡೂರಾವ್
ಕಂಬಳಕ್ಕೆ ಅದರದ್ದೇ ಆದ ನಿರ್ದಿಷ್ಟ ತಾಣ ಮತ್ತು ವಾತಾವರಣದಲ್ಲಿ ಮಾತ್ರ ಪರಿಪೂರ್ಣ ಶೋಭೆ ಸಿಗುತ್ತದೆ. ದಸರಾ ಉತ್ಸವವು ಮೈಸೂರು ಭಾಗದ ಸ್ಥಳೀಯ ಕಲೆಗಳು, ಜಾನಪದ ಮೇಳಗಳು, ಕುಸ್ತಿ ಪಂದ್ಯಾವಳಿಗಳು ಮತ್ತು ಹಳೆ ಮೈಸೂರು ಭಾಗದ ಸಂಸ್ಕೃತಿಗೆ ಹೆಚ್ಚಿನ ವೇದಿಕೆ ಕಲ್ಪಿಸಬೇಕು. ಒಂದೇ ವೇದಿಕೆಯಲ್ಲಿ ಎಲ್ಲವನ್ನೂ ತುರುಕುವ ಪ್ರಯತ್ನದಲ್ಲಿ ದಸರಾದ ಗಾಂಭೀರ್ಯ ಮತ್ತು ಕಂಬಳದ ನೈಜ ಸೌಂದರ್ಯ ಎರಡೂ ಮಸಕಾಗುವ ಸಾಧ್ಯತೆಯಿದೆ.
- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ವಿದ್ಯುತ್ ಕಟ್ ಸ್ವಾಗತಾರ್ಹ
ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡಿ, ದಂಡ ವಿಧಿಸಿದರೂ ಅದನ್ನು ಪಾವತಿಸದೆ ಉಳಿಸಿ ಕೊಂಡ ಮೊತ್ತ 20000 ಕೋಟಿ ದಾಟಿದ್ದು ದಂಡ ವಸೂಲಿ ಮಾಡುವುದು ಅಸಾಧ್ಯ ವಾಗಿರುವು ದನ್ನು ಮನಗಂಡಿರುವ ಸುಪ್ರೀಂ ಕೋರ್ಟ್, ಟ್ರಾಫಿಕ್ ದಂಡ ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕೆಂಬ ಅಥವಾ ವಿದ್ಯತ್ ಬಿಲ್‌ನ ಜೊತೆಗೆ ದಂಡದ ಮೊತ್ತವನ್ನು ವಸೂಲಿ ಮಾಡಬೇಕೆಂಬ ಕಠಿಣ ಸಲಹೆ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ.
ಟ್ರಾಫಿಕ್ ದಂಡವನ್ನು ಬಾಕಿ ಉಳಿಸಿಕೊಂಡಿರುವ ವಾಹನ ಸವಾರರ ಸಂಚಾರ ದಂಡದ ಮೊತ್ತ ವನ್ನು, ಅವರ ಮಾಸಿಕ ವಿದ್ಯುತ್ ಬಿಲ್ ಜೊತೆ ಸೇರಿಸುವ ಬಗ್ಗೆ ಪರಿಶೀಲಿಸಿ ಎಂದು ನ್ಯಾಯಾಲಯ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕೆ ಸೂಚಿಸಿರುವುದು ಟ್ರಾಫಿಕ್ ದಂಡ ಕಟ್ಟದ ವರಿಗೆ ಬಿಸಿ ಮುಟ್ಟಿಸುತ್ತದೆ ಹಾಗೂ ವಿದ್ಯತ್ ಬಿಲ್ ಕಟ್ಟದಿದ್ದರೆ ಸಂಪರ್ಕ ಕಡಿತದ ಭಯದಿಂದ, ಬಾಕಿ ಉಳಿದಿರುವ ದಂಡ ವಸೂಲಿಯಾಗಬಹುದು ಜೊತೆಗೆ ರಸ್ತೆ ನಿಯಮಗಳ ಉಲ್ಲಂಘನೆ ಸಹ ಕಡಿಮೆಯಾಗಬಹುದು.
- ರಾಸುಮ ಭಟ್, ಚಿಕ್ಕಮಗಳೂರು
ಕೆಪಿಎಸ್‌ಸಿ ಕರ್ಮಕಾಂಡ
ಕೇಂದ್ರ ಸರ್ಕಾರದ ನೀಟ್ ಪರೀಕ್ಷೆಯ ವಿರುದ್ಧ ಅಬ್ಬರಿಸಿ ಪ್ರತಿಭಟಿಸಿ ಕೇಂದ್ರ ಸಚಿವರ ರಾಜೀನಾಮೆ ಪಡೆದ ಕಾಂಗ್ರೆಸ್ಸಿನ ಹೈಕಮಾಂಡಿನ ವರಿಷ್ಠರು, ತಮ್ಮದೇ ಪಕ್ಷದ ಕರ್ನಾಟಕ ಸರ್ಕಾರದ ವೈಫಲ್ಯ ದಿಂದ ಕೆಪಿಎಸ್‌ಸಿ ನೇಮಕಾತಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದು ಪ್ರಾಮಾಣಿಕ ಅಭ್ಯರ್ಥಿಗಳಿಗೆ ಘೋರ ಅನ್ಯಾಯವಾಗಿದ್ದರೂ ತುಟಿ ಬಿಚ್ಚದೇ ಮೌನ ವಹಿಸಿದ್ದಾರೆ. ಕೆಪಿಎಸ್‌ಸಿ ಭ್ರಷ್ಟಾಚಾರದ ಸಮಗ್ರ ತನಿಖೆಗೆ ಹೈಕೋರ್ಟ್ ಸಮರ್ಥ ಅಧಿಕಾರಿಗಳ ವಿಶೇಷ ಎಸ್‌ಐಟಿ ರಚಿಸಿದೆ. ವಿಚಿತ್ರವೆಂದರೆ, ಸಿಎಂ ಪ್ರತಿದಿನ ಭ್ರಷ್ಟಾಚಾರದ ವಿರುದ್ಧ ಭಾಷಣ ಮಾಡುತ್ತಿದ್ದರೂ, ಈ ಹೈಕೋರ್ಟಿನ ಆದೇಶದ ವಿರುದ್ಧ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ.
- ಎಸ್.ಎನ್ ರಮೇಶ್, ಮಂಡ್ಯ
ಬ್ರಹ್ಮಾಂಡ ಭ್ರಷ್ಟಾಚಾರ
ಇತ್ತೀಚಿಗೆ ಕೆಪಿಎಸ್‌ಸಿ ಸೇರಿ ಹಲವು ಸಂಸ್ಥೆಗಳ ಅಧಿಕಾರಿಗಳ ಭ್ರಷ್ಟಾ ಚಾರ ಬ್ರಹ್ಮಾಂಡವಾಗಿ ಬೆಳೆದಿದೆ. ತಮಗೆ ಯಾರ ಭಯವೂ ಇಲ್ಲ ಎಂಬ ಭಂಡತನ. ಅಕಸ್ಮಾತ್ ಸಿಕ್ಕಿಬಿದ್ದರೂ ಸಸ್ಪೆಂಡ್ ಮಾಡುತ್ತಾರೆ ಅಷ್ಟೇ, ವಿಚಾರಣೆ ಮುಗಿಯುವುದೇ ಇಲ್ಲ, ನಾವು ಸೇಫ್ ಎಂಬ ಧೈರ್ಯ. ನ್ಯಾಯಾಂಗ ತೀವ್ರವಾಗಿ ಕ್ರಿಯಾಶೀಲವಾದರೆ ಮಾತ್ರ ಇವರನ್ನು ಮಟ್ಟ ಹಾಕಬಹುದು.
- ಸತ್ಯಬೋಧ, ಹೊಸಕೆರೆಹಳ್ಳಿ