ಓದುಗರ ಓಣಿ
ಕೇಂದ್ರ ಸರ್ಕಾರ ಶೇ.100 ಎಥೆನಾಲ್ ಫ್ಲೆಕ್ಸ್-ಇಂಧನ ವಾಹನಗಳಿಗೆ ಅನುಮೋದನೆ ನೀಡಿರುವುದು ಪರಿಸರ ಸ್ನೇಹಿ ಮತ್ತು ಆರ್ಥಿಕ ಸುಸ್ಥಿರತೆಯತ್ತ ಇಟ್ಟ ದಿಟ್ಟ ಹೆಜ್ಜೆ. ಬ್ರೆಜಿಲ್ ನಂತಹ ದೇಶಗಳಲ್ಲಿ ಯಶಸ್ವಿಯಾಗಿರುವ ಈ ತಂತ್ರಜ್ಞಾನ ಭಾರತದ ತೈಲ ಆಮದು ಹೊರೆಯನ್ನು ಗಣನೀಯವಾಗಿ ತಗ್ಗಿಸಲಿದೆ. ಆದರೆ ಪ್ರಸ್ತುತ ಚಾಲ್ತಿಯಲ್ಲಿರುವ ಇ20 ಇಂಧನದಿಂದಲೇ ವಾಹನಗಳ ಮೈಲೇಜ್ ಶೇ.7ರಷ್ಟು ಕಡಿಮೆಯಾಗುತ್ತಿದೆ ಮತ್ತು ಎಂಜಿನ್ ಸವೆತ ಹೆಚ್ಚುತ್ತಿದೆ ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇ100 ಇಂಧನ ಬೆಲೆ ಹಾಗೂ ಲಭ್ಯತೆಯ ಸ್ಪಷ್ಟತೆ ಸಾರ್ವಜನಿಕರಿಗೆ ಅಗತ್ಯವಿದೆ. ಸರ್ಕಾರ ಕೇವಲ ನಿಯಮಗಳನ್ನು ರೂಪಿಸುವುದಷ್ಟೇ ಅಲ್ಲದೆ ರೈತರಿಗೆ ಸೂಕ್ತ ಬೆಂಬಲ ನೀಡಿ ಎಥೆನಾಲ್ ಉತ್ಪಾದನೆ ಹೆಚ್ಚಿಸಬೇಕು ಮತ್ತು ಗ್ರಾಹಕರ ಹಿತರಕ್ಷಣೆಗಾಗಿ ಕಟ್ಟುನಿಟ್ಟಿನ ಇಂಧನ ಗುಣಮಟ್ಟ ತಪಾಸಣಾ ವ್ಯವಸ್ಥೆಯನ್ನು ಜಾರಿಗೆ ತರಬೇಕು.
- ಡಾ.ವಿಜಯಕುಮಾರ್ ಎಚ್. ಕೆ., ರಾಯಚೂರು
ಜಾತ್ಯತೀತತೆ ಎಲ್ಲಿದೆ?
ಈ ಪತ್ರ ಅ.27ರಂದು ರಂಜಿತ್ ಎಚ್. ಅವರ ‘ಅಶ್ವತ್ಥಕಟ್ಟೆ’ ಅಂಕಣಕ್ಕೆ ಸ್ಪಂದನೆ. 1976ರ ತುರ್ತು ಪರಿಸ್ಥಿತಿ ಸಮಯದಲ್ಲಿ ಸಂವಿಧಾನದ ಪೀಠಿಕೆಗೆ ತಿದ್ದುಪಡಿ ಮಾಡಿ ಜಾತ್ಯತೀತ ರಾಷ್ಟ್ರ ಎಂಬ ಪದ ಸೇರಿಸಲಾಯಿತು. ಆದರೆ ಅದನ್ನು ದೇಶ ಹಾಗೂ ರಾಜ್ಯಗಳನ್ನು ಆಳಿದ ಪಕ್ಷಗಳು ತಮ್ಮ ಹಿತಾಸಕ್ತಿಗೆ ತಕ್ಕಂತೆ ಬೇರೆಬೇರೆ ರೀತಿಯಲ್ಲಿ ಅರ್ಥ ಮಾಡಿದವು. ಸಾಮಾನ್ಯವಾಗಿ ಜಾತ್ಯತೀತತೆ ಅಂದರೆ ಯಾವುದೇ ಜಾತಿ ಭೇಧಭಾವ ವಿಲ್ಲದೆ ಚುನಾವಣೆ, ನೇಮಕಾತಿ, ಆಡಳಿತ, ಕಾನೂನು ಮುಂತಾದವು ಗಳನ್ನು ನಡೆಸುವುದು. ಆದರೆ ನಮ್ಮಲ್ಲಿ ಎಲ್ಲಾ ಹಂತಗಳಲ್ಲೂ ಜಾತಿಯನ್ನು ಮಧ್ಯವರ್ತಿಯನ್ನಾಗಿ ಉಪಯೋಗಿಸಿ ‘ಜಾತಿಯನ್ನು ಅತಿಯಾಗಿ ಉಪಯೋಗಿಸುವುದು’ ಎಂಬಂತೆ ಮಾಡಿದ್ದಾರೆ.
ಅದರಿಂದಾಗಿಯೇ ಮೈಸೂರು ದಸರಾದಲ್ಲಿ ಮಂತ್ರಿಗಳನ್ನು ತಡೆದಿದ್ದಾಗಲಿ, ಮುಂಬೈ ಐಐಟಿಯಲ್ಲಿ ಆದ ಆತ್ಮಹತ್ಯೆ ಮುಂತಾದವುಗಳಲ್ಲಿ ಜಾತಿಯ ವಿಷಯವನ್ನು ಮುನ್ನೆಲೆಗೆ ತರಲಾಗುತ್ತದೆ. ಭ್ರಷ್ಟಾಚಾರ, ಆಡಳಿತ ವೈಫಲ್ಯ ಬಯಲಿಗೆ ಬಂದರೂ ಅದನ್ನು ಮಾಡಿದವರ ಜಾತಿ, ಅದರಿಂದಲೇ ಅವರನ್ನು ಗುರಿಯಾಗಿಸಿzರೆ ಎಂಬ ಹೇಳಿಕೆ. ಅಷ್ಟರಮಟ್ಟಿಗೆ ದೇಶದಲ್ಲಿ ಜಾತ್ಯತೀತತೆ ಹರಡಿದೆ!
- ಮುಕುಂದ, ದಾವಣಗೆರೆ
ಇದನ್ನೂ ಓದಿ: Fuel pump fraud: ರಾಜ್ಯದ 768 ಪೆಟ್ರೋಲ್ ಬಂಕ್ಗಳಲ್ಲಿ ಭಾರಿ ಗೋಲ್ಮಾರ್; ಅಳತೆಯಲ್ಲಿ ದೋಷ, ಲೀಟರ್ಗಟ್ಟಲೇ ವಂಚನೆ!
ರೈತರ ಸಮಸ್ಯೆಗಳಿಗೆ ಮುಕ್ತಿ
ಹನ್ನೆರಡು ವರ್ಷ ಹಿಂದೆ ವಾಹಿನಿಯೊಂದರಲ್ಲಿ ಪ್ರಸಾರವಾದ ಟಿ.ಎನ್. ಸೀತಾರಾಮ್ ಅವರ ಮುಕ್ತ ಮುಕ್ತ ಧಾರಾ ವಾಹಿಯ ಒಂದು ಸಂಚಿಕೆಯಲ್ಲಿ ರೈತರ ಆತ್ಮಹತ್ಯೆ, ಕಬ್ಬಿನ ಬೆಳೆಗಾರರ ಸಮಸ್ಯೆ ಹಾಗೂ ಎಸ್ಇಜೆಡ್ ವಿಷಯ ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾಪ ಆಗುತ್ತದೆ. ಇದೊಂದು ಉದಾಹರಣೆ ಅಷ್ಟೆ. ಇಂತಹ ಸಮಸ್ಯೆಗಳ ಕುರಿತು ದಶಕಗಳ ಹಿಂದಿನಿಂದಲೂ ಹಲವಾರು ಚಲನ ಚಿತ್ರಗಳು ಬಂದು ಸರ್ಕಾರಗಳಿಗೆ ವಿಚಾರ ಮುಟ್ಟಿಸಿವೆ. ಆದರೆ ಫಲಿತಾಂಶ? ಇಂದಿಗೂ ಕಬ್ಬಿನ ಬೆಲೆಗಾಗಿ ರೈತರು ಹೋರಾಡುತ್ತಿದ್ದಾರೆ. ಹಿಂದಿ ನ ಹೋರಾಟಗಳಲ್ಲಿ ರೈತರ ಮೇಲೆ ಲಾಠಿಚಾರ್ಜ್, ಗೋಲಿಬಾರ್ ಗಳೂ ನಡೆದಿವೆ. ಹೀಗೆ ಆದರೆ ರೈತರ ಪಾಡೇನು? ದೇಶದೆಡೆ ಎಸ್ ಇಜೆಡ್ನಿಂದಾಗಿ ರೈತರು ಗುಳೆ ಹೋಗಿ ಹಳ್ಳಿಗಳು ವೃದ್ಧಾಶ್ರ ಮಗಳಾಗಿವೆ. ಬೆಳೆ ಬೆಳೆಯಲು ಜನರಿಲ್ಲ. ರೈತರು ಹಳ್ಳಿಗಳಿಂದ ಗುಳೆ ಹೋಗುವ ಸ್ಥಿತಿ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು. ಆದ್ಯತೆಯ ಮೇರೆಗೆ ಈ ಕುರಿತು ಚಿಂತಿಸಿ ಕಾರ್ಯರೂಪಕ್ಕೆ ತರಲಿ.
- ಪತ್ತಂಗಿ ಎಸ್. ಮುರಳಿ, ಬೆಂಗಳೂರು
ಮೂರು ದಿನದಲ್ಲಿ ಆಗದು
ಮೈಸೂರು ನಗರ ಪಾಲಿಕೆ ಅ.28ರಂದು ಪ್ರಜಾಸೇವಾ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ ಇ-ಖಾತಾ ಅಭಿಯಾನ ಹಮ್ಮಿಕೊಂಡಿದೆ. ಅರ್ಜಿ ಸಲ್ಲಿಸಿದ 72 ಗಂಟೆಯೊಳಗೆ ಇ-ಖಾತಾ ನೀಡಲಾಗುವುದೆಂದು ವ್ಯಾಪಕ ಪ್ರಚಾರ ನೀಡಿದೆ. ಸಾವಿರಾರು ರೂಪಾಯಿ ಕೊಟ್ಟು ತಿಂಗಳುಗಟ್ಟಲೆ ನಗರ ಪಾಲಿಕೆಯ ವಲಯ ಕಚೇರಿಗಳಿಗೆ ಅಲೆದು, ಚಪ್ಪಲಿ ಸವೆದರೂ ಸಿಗದ ಇ-ಖಾತಾ ಕೇವಲ ಮೂರು ದಿನಗಳ ಒಳಗೆ ಸಿಗುವುದೆಂದು ಜನ ಖುಷಿ ಪಡುತ್ತಿದ್ದಾರೆ. ಆದರೆ, ಅರ್ಜಿ ಜೊತೆ ಮನೆಯ ಅಥವಾ ನಿವೇಶನದ ಇಸಿಯನ್ನು (ಋಣಭಾರ ರಾಹಿತ್ಯ ಪತ್ರ) ಕಡ್ಡಾಯವಾಗಿ ಸಲ್ಲಿಸಲೇ ಬೇಕು. ಇಸಿ ತೆಗೆದುಕೊಳ್ಳಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಬೇಕು. ಅಲ್ಲಿಗೆ ಹೋದರೆ ಸರ್ವರ್ ಡೌನ್ ಅಥವಾ ಬ್ಯುಸಿ. ಸಾವಿರಾರು ಜನ ಅರ್ಜಿ ಸಲ್ಲಿಸಿದ್ದಾರೆ. ಇಸಿ ಸಿಗಲು ಕನಿಷ್ಠ ಒಂದು ವಾರದಿಂದ ಹದಿನೈದು ದಿನ ಬೇಕು ಎನ್ನುತ್ತಾರೆ. ಹೀಗಾದಾರೆ ಜನ 28ರಂದು ಅರ್ಜಿ ಸಲ್ಲಿಸುವುದಾದರೂ ಹೇಗೆ? ನಗರ ಪಾಲಿಕೆ ಈ ಬಗ್ಗೆ ಸಾರ್ವಜನಿಕರಿಗೆ ಕನಿಷ್ಠ ಹದಿನೈದು ದಿನಗಳ ಹಿಂದೆಯೇ ತಿಳಿಸಬೇಕಿತ್ತ ಲ್ಲವೆ? ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿzರಾ? ಪಾಲಿಕೆ ಆಯುಕ್ತರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
- ಬೂಕನಕೆರೆ ವಿಜೇಂದ್ರ, ಮೈಸೂರು
ರ್ಯಾಲಿ ಮುಂದೂಡಲಿ
ನವೆಂಬರ್ ಒಂದು ಕರ್ನಾಟಕ ರಾಜ್ಯೋತ್ಸವ. ಕನ್ನಡ ಜೈಕಾರ ಎಲ್ಲ ಕಡೆ ಮೊಳಗುತ್ತಿರುತ್ತದೆ. ಸಿಎಂ, ಮಂತ್ರಿಗಳು ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಆದರೆ ಈ ಸಲ ನವಂಬರ್ 1ರಂದು ದೆಹಲಿಯಲ್ಲಿ ಕಾಂಗ್ರೆಸ್ ಎಸ್ಐಆರ್ ವಿರೋಧಿಸಿ ರ್ಯಾಲಿಯನ್ನು ಹಮ್ಮಿಕೊಂಡಿದೆ. ಕಾಂಗ್ರೆಸ್ಸಿನ ಎಲ್ಲಾ ಮುಖಂಡರು ಅಲ್ಲಿ ಸೇರುವುದು ಅಗತ್ಯ. ಕರ್ನಾಟಕದ ಕಾಂಗ್ರೆಸ್ ರಾಜಕಾರಣಿ ಗಳು ಅಲ್ಲಿಗೆ ಹೋದರೆ ಇಲ್ಲಿ ರಾಜ್ಯೋತ್ಸವ ಬಿಕೋ ಎನ್ನುತ್ತದೆ. ಈಗ ಕರ್ನಾಟಕದ ರಾಜಕಾರಣಿ ಗಳಿಗೆ ಕನ್ನಡ ಮುಖ್ಯವೋ, ರಾಹುಲ್ ಗಾಂಧಿ ರ್ಯಾಲಿ ಮುಖ್ಯವೋ ಎನ್ನುವುದನ್ನು ಕಾದು ನೋಡಬೇಕು! ರಾಜ್ಯೋತ್ಸವ ಮುಂದೂಡುವುದು ಅಸಾಧ್ಯ. ರ್ಯಾಲಿ ಮುಂದೂಡಲಿ.
- ಸತ್ಯಬೋಧ, ಹೊಸಕೆರೆಹಳ್ಳಿ
ಮಾತು ಶೋಭೆ ತರದು
ದಶಕಗಳ ರಾಜಕೀಯ ಅನುಭವ ಹೊಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕಾರ್ಯಕ್ರಮವೊಂದರಲ್ಲಿ ಸಭಿಕರ ಮಾತಿಗೆ ತಾಳ್ಮೆ ಕಳೆದುಕೊಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂದೆಯ ಅವರ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆ ಅವರ ರಾಜಕೀಯ ಅನುಭವ ಮತ್ತು ಮುತ್ಸದ್ದಿತನಕ್ಕೆ ಶೋಭೆ ತರುವಂಥದ್ದಲ್ಲ. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಗಳು ಸಹಜ. ಸರ್ಕಾರದ ನೀತಿಗಳನ್ನು ಟೀಕಿಸುವುದು ಮತ್ತು ಆಡಳಿತದ ಲೋಪದೋಷಗಳನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಹಕ್ಕು. ಆದರೆ, ಟೀಕೆಗಳು ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಇಳಿಯುವುದು ಆರೋಗ್ಯಕರ ರಾಜಕೀಯ ಸಂಸ್ಕೃತಿಯ ಲಕ್ಷಣವಲ್ಲ. ಹಿರಿಯ ನಾಯಕರ ಮಾತು ಗಳಲ್ಲಿ ಅನುಭವದ ಜೊತೆಗೆ ಸಂಯಮ, ವಿವೇಚನೆ ಮತ್ತು ಘನತೆಯೂ ಪ್ರತಿಫಲಿಸಬೇಕು.
- ಕೆ.ಎನ್ ರಂಗನಾಥ್, ಚಿತ್ರದುರ್ಗ
ಅಜಾಗರೂಕ ವಾಹನ ಚಾಲನೆ
ರಸ್ತೆ ಅಪಘಾತ ದ್ವಿಗುಣ (ವಿಶ್ವವಾಣಿ, ಅ.27) ಸುದ್ದಿ ಓದಿದೆ. ಬೆಂಗಳೂರಿನಲ್ಲಿ ವಾಹನ ಓಡಿಸು ವುದು ದೊಡ್ಡ ಸಾಹಸವೇ ಸರಿ. ಮುಖ್ಯವಾಗಿ ನಿರ್ಲಕ್ಷ ದ ಚಾಲನೆ ಸರ್ವೇ ಸಾಮಾನ್ಯ. ಅತಿ ವೇಗ, ಏಕಮುಖ ಸಂಚಾರದಲ್ಲಿ ಎದುರುಬದಿಯಿಂದ ಅಡ್ಡಾದಿಡ್ಡಿ ಚಾಲನೆ, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಮೂರು ನಾಕು ಜನ ಸವಾರಿ ಸಾಮಾನ್ಯ ದೃಶ್ಯವಾಗಿದೆ. ಮೊನ್ನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಿಧಾನವಾಗಿ ಹೋಗು ಎಂದು ಕೈ ಸನ್ನೆ ಮಾಡಿದವನ ಮೇಲೆ ಕಾರು ಹತ್ತಿಸಿ ಜೀವ ತೆಗೆದಿದ್ದಾರೆ. ಇಂತಹ ಉಡಾಫೆ ಚಾಲನೆಯನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಅಪಘಾತ ಮೂರು ಪಟ್ಟು ನಾಕು ಪಟ್ಟು ಹೆಚ್ಚುತ್ತದೆ. ಇಲ್ಲಿ ಬಹು ಮುಖ್ಯ ಸಂಗತಿ ಬಹುತೇಕ ಚಾಲಕರು ಮೊಬೈಲ್ ಬಳಸುತ್ತ ಒಂದು ಕೈನಲ್ಲಿ ಚಾಲನೆ ಮಾಡುತ್ತಾರೆ. ಇದು ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಸಂಚಾರಿ ಪೊಲೀಸರು ಇವುಗಳ ಬಗ್ಗೆ ಗಮನ ಹರಿಸಿ ತೀವ್ರ ಕ್ರಮ ಕೈಗೊಳ್ಳಬೇಕು.
- ಬಿ.ಎಸ್ ಮೋಹನಕುಮಾರ್, ಬೆಂಗಳೂರು