ಓದುಗರ ಓಣಿ
ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಗಳಿಂದಾಗಿ ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ಎಲ್ಲಕ್ಕಿಂತ ಆಘಾತಕಾರಿ ವಿಷಯವೆಂದರೆ ಮಾರುಕಟ್ಟೆಯ ಏರಿಳಿತಗಳಿಗಿಂತ ಹೆಚ್ಚಾಗಿ ಸರ್ಕಾರವೇ ವಿವಿಧ ಸೇವೆಗಳು, ತೆರಿಗೆಗಳು ಮತ್ತು ಸಾರಿಗೆ ದರಗಳನ್ನು ಹೆಚ್ಚಿಸುವ ಮೂ ಲಕ ಬೆಲೆ ಏರಿಕೆಗೆ ನೇರ ಕಾರಣವಾಗುತ್ತಿರುವುದು ನಿಜಕ್ಕೂ ಕಳವಳ ಕಾರಿ ಸಂಗತಿ. ಬಸ್ ದರಗಳ ಏರಿಕೆ, ವಿದ್ಯುತ್ ಶುಲ್ಕ ಹೆಚ್ಚಳ, ಹಾಲಿ ನ ದರ ಏರಿಕೆ ಮತ್ತು ಆಸ್ತಿ ತೆರಿಗೆಗಳ ಹೆಚ್ಚಳದಿಂದಾಗಿ ಬಡ ಹಾಗೂ ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಬೀಳುತ್ತಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸಬೇಕಾದ ಸರ್ಕಾರವೇ ಅದಕ್ಕೆ ಮುಂಚೂಣಿ ವಹಿಸಿದರೆ ಸಾಮಾನ್ಯರು ಯಾರನ್ನು ನಂಬಬೇಕು? ಇನ್ನಾದರೂ ಸರ್ಕಾರ ಹೆಚ್ಚುವರಿ ಶುಲ್ಕಗಳನ್ನು ಕೈಬಿಟ್ಟು, ತೆರಿಗೆ ಹೊರೆ ತಗ್ಗಿಸುವ ಮೂಲಕ ಜನಸಾಮಾನ್ಯರಿಗೆ ನಿಟ್ಟುಸಿರು ಬಿಡಲು ಅವಕಾಶ ಮಾಡಿಕೊಡಬೇಕು.
- ಉದಯ ಮ. ಯಂಡಿಗೇರಿ, ಧಾರವಾಡ
ಹಾಲಲ್ಲ ಹಾಲಾಹಲ
ನವೆಂಬರ್ ಒಂದರಿಂದ, ಪ್ರತಿ ಲೀಟರ್ ಹಾಲಿನ ಬೆಲೆಯನ್ನು 8 ರೂಪಾಯಿ ಹೆಚ್ಚು ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ. ಇತಿಹಾಸದ ಒಂದೇ ಬಾರಿಗೆ ಎಂಟು ರೂ. ಹೆಚ್ಚಿಸಿರುವ ಉದಾಹರಣೆ ಇಲ್ಲ. ಇದು ಗ್ರಾಹಕರಿಗೆ ರಾಜ್ಯ ಸರ್ಕಾರ ಹಾಕುತ್ತಿರುವ ದೊಡ್ಡ ಬರೆ. ಅವಶ್ಯಕ ಉತ್ಪನ್ನಗಳ ಬೆಲೆ ಏರಿಸುವಾಗ ಉತ್ಪಾದಕರು ಮತ್ತು ಗ್ರಾಹಕರು, ಇಬ್ಬರನ್ನೂ ದೃಷ್ಟಿ ಯಲ್ಲಿ ಇಟ್ಟುಕೊಂಡು ಏರಿಕೆ ಮಾಡಬೇಕು. ಒಂದೇ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡಿರುವುದು ಅವೈಜ್ಞಾನಿಕ ನಿರ್ಧಾರ. ಈ ಬೆಲೆ ಏರಿಕೆ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿದರೆ, ಒಂದೆರಡು ರೂಪಾಯಿ ಕಡಿಮೆ ಮಾಡಿ ಸಾರ್ವಜನಿಕ ಪ್ರತಿಭಟನೆಗೆ ಗೌರವ ನೀಡುತ್ತೇವೆ ಎಂದು ಹೇಳಿಕೊಳ್ಳುವ ತಂತ್ರಗಾರಿಕೆಯೂ ಈ ಏರಿಕೆಯ ಹಿಂದೆ ಇರಬಹುದು.
- ಬೂಕನಕೆರೆ ವಿಜೇಂದ್ರ, ಮೈಸೂರು
ಇದನ್ನೂ ಓದಿ: Dr Shalini Rajaneesh Column: ಪರಂಪರೆಯ ಪುಟಗಳಲ್ಲಿ ಸುಂದರ ಮೈಸೂರು ದಸರಾ
ದೃಶ್ಯ ಮಾಧ್ಯಮಗಳೇಕೆ ಹೀಗೆ?
ದೃಶ್ಯ ಮಾಧ್ಯಮಗಳು ತೋರಿಸಿದ ಸುದ್ದಿಯನ್ನೇ ಪದೇ ಪದೆ ಪ್ರಸಾರ ಮಾಡುತ್ತವೆ. ದಿನಕ್ಕೆ ಒಂದೇ ಸುದ್ದಿಯನ್ನು ಹಲವು ಗಂಟೆಗಳ ಕಾಲ ಪ್ರಸಾರ ಮಾಡುವುದೂ ಉಂಟು. ಅದನ್ನೇ ತಿರುಗಿಸಿ ಮುರುಗಿಸಿ ಹಲವು ದಿನಗಳವರೆಗೆ ಪ್ರಸಾರ ಆಗುತ್ತದೆ. ಇದರಿಂದ ಸಮಾಜಕ್ಕೆ ಉಪಯೋಗವಾದರೂ ಏನು? ಉದಾಹರ ಣೆಗೆ ನಟ ದರ್ಶನ್ ಸುದ್ದಿ. ಅದರಲ್ಲೂ ನಿರೂಪಕರೇ ನ್ಯಾಯಾ ಧೀಶರಂತೆ ವರ್ತಿಸುವುದು ಸರಿಯೇ? ಜನರ ಒಳಿತಿಗೆ, ನಾಡಿನ ಅಭಿವೃದ್ಧಿಗೆ ಅಗತ್ಯವಾದ ಅನ್ಯ ಸುದ್ದಿಗಳೇ ಇಲ್ಲವೇ? ಆಹಾರ ಮತ್ತು ವೈರಸ್ ಕುರಿತ ವರದಿಗಳಂತೂ ಜನರಲ್ಲಿ ಭಯ ಹುಟ್ಟಿಸುವಂತೆ ಇರುತ್ತವೆ. ಮಾಹಿತಿ ನೀಡುವಂತೆ ಇರುವುದಿಲ್ಲ. ಇನ್ನು ಇವಕ್ಕೆ ‘ನಮ್ಮ ಮೊದಲು’ ಎಂಬ ಕ್ಯಾಪ್ಷನ್ ಬೇರೆ! ‘ಬ್ರೇಕಿಂಗ್ ನ್ಯೂಸ್’ ಎನ್ನುವುದಕ್ಕೆ ಅರ್ಥವೇ ಇಲ್ಲದಂತಾಗಿ ಆ ಸಾಲೇ ಸವಕಲಾಗಿದೆ. ಮುದ್ರಣ ಮಾಧ್ಯಮಗಳ ಗಂಭೀರತೆ, ವಿಶ್ವಾಸಾರ್ಹತೆ ಮಾದರಿ ಅನುಸರಿರದೇಕೆ?
- ಪತ್ತಂಗಿ ಎಸ್. ಮುರಳಿ, ಬೆಂಗಳೂರು
ಗುರುತಿನ ಚೀಟಿಯ ಶಿಕ್ಷೆ
ಕೃಷಿ ಕ್ಷೇತ್ರದ ಸುಧಾರಣೆಯ ಹೆಸರಿನಲ್ಲಿ ಸರ್ಕಾರಗಳು ಒಂದರ ಮೇಲೊಂದರಂತೆ ಡಿಜಿಟಲ್ ಹಾಗೂ ಗುರುತಿನ ಚೀಟಿಗಳ ನಿಬಂಧನೆಗಳನ್ನು ಹೇರುತ್ತಿರುವುದು ಅನಕ್ಷರಸ್ಥ ಮತ್ತು ಬಡ ರೈತರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ಈಗಾಗಲೇ ಆಧಾರ್, ಪಹಣಿ, ಬ್ಯಾಂಕ್ ಖಾತೆ ಹಾಗೂ ಫ್ರೂಟ್ಸ್ ತಂತ್ರಾಂಶದ ನೋಂದಣಿಗೆ ಅಲೆಯುತ್ತಿರುವ ರೈತನಿಗೆ ಇದೀಗ ಮತ್ತೊಂದು ಕಡ್ಡಾಯ ಐಡಿ ಕಾರ್ಡ್ ಜಾರಿಗೆ ತರುವುದು ಅಮಾನವೀಯ. ಕೃಷಿ ಸಹಾಯಧನ ಸಾಲ ಮತ್ತು ಬೆಳೆ ಪರಿಹಾರ ಪಡೆಯಲು ತಾಂತ್ರಿಕ ಅಡೆತಡೆಗಳನ್ನೇ ದೊಡ್ಡ ಗೋಡೆಯಾಗಿ ನಿರ್ಮಿಸಿದರೆ ನೈಜ ಅನ್ನದಾತರು ಸೌಲಭ್ಯ ಗಳಿಂದ ವಂಚಿತರಾಗುತ್ತಾರೆ. ದಿನವಿಡೀ ಸರ್ಕಾರಿ ಕಚೇರಿಗಳ ಅಲೆಯುವಿಕೆಯ ಕಾಲ ಕಳೆಯುವ ರೈತ ಹೊಲದಲ್ಲಿ ಶ್ರಮಿಸುವುದಾದರೂ ಹೇಗೆ?
- ಡಾ. ವಿಜಯಕುಮಾರ್ ಎಚ್.ಕೆ., ರಾಯಚೂರು