ಓದುಗರ ಓಣಿ
‘ಅಪ್ಪನ ಕೊನೆಯುಸಿರಿನ ಹಾದಿಯಲ್ಲಿ ಮಗನ ಜೊತೆ ಭಾವಪೂರ್ಣ ಪಯಣ’ ನೂರೆಂಟು ವಿಶ್ವ ಅಂಕಣದಲ್ಲಿ ವಿಶ್ವೇಶ್ವರ ಭಟ್ಟರು ಬರೆದುದು ಕೇವಲ ಒಂದು ಲೇಖನವಲ್ಲ, ಅದು ಓದುಗರ ಹೃದಯದೊಳಗೆ ನಿಧಾನವಾಗಿ ಇಳಿದು, ಅಪ್ಪ ಎಂಬ ಅಮೂಲ್ಯ ಸಂಬಂಧದ ನೆನಪುಗಳನ್ನು ಎಚ್ಚರಿಸುವ ಭಾವಯಾನ. ಲೇಖನ ಓದುತ್ತಿದ್ದಂತೆ ಕಣ್ಣುಗಳು ತೇವವಾದವು, ಹೃದಯ ತುಂಬಿ ಬಂತು. ಅರವತ್ತು ವರುಷ ಹಿಂದೆ ಪಾಕಿಸ್ತಾನದೊಡನೆ ಯುದ್ಧ ಗೆದ್ದ ನಂತರ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಲು ಹೋದ, ದೇಶ ಕಂಡ ಸರಳ ವ್ಯಕ್ತಿತ್ವದ ಆದರೆ ಅಷ್ಟೇ ದೃಢ ನಿರ್ಧಾರಗಳ ನೆಚ್ಚಿನ ಪ್ರಧಾನಿ ನಿಗೂಢ ರೀತಿಯಲ್ಲಿ ಹೊರದೇಶದ ಮಣ್ಣಿನಲ್ಲಿ ಮಣ್ಣಾದ ಕಥೆ ನೆನಪಿಗೆ ಬಂದು ಕಣ್ಣು ಮಂಜಾಯಿತು.
ಅಪ್ಪನ ಅಂತಿಮ ಪಯಣವನ್ನು ಮಗನ ಕಣ್ಣಿನ ಮೂಲಕ ಇಷ್ಟು ಸೂಕ್ಷ್ಮವಾಗಿ, ಆತ್ಮೀಯವಾಗಿ ಮತ್ತು ನೋವಿನ ನಡುವೆಯೂ ಪ್ರೀತಿಯ ಬೆಳಕನ್ನು ಉಳಿಸಿಕೊಂಡು ಕಟ್ಟಿಕೊಟ್ಟಿರುವುದು ಅಪರೂ ಪದ ಬರವಣಿಗೆ. ಕೆಲವು ಬರಹಗಳನ್ನು ನಾವು ಓದುತ್ತೇವೆ; ಕೆಲವು ಬರ ಹಗಳು ನಮ್ಮನ್ನು ಓದುತ್ತವೆ. ಈ ಲೇಖನ ಎರಡನೆಯ ಸಾಲಿಗೆ ಸೇರು ತ್ತದೆ. ಸುನಿಲ್ ಶಾಸ್ತ್ರಿಯವರು ತಮ್ಮ ತಂದೆ ಲಾಲ್‌ಬಹಾದ್ದೂರ್ ಶಾಸ್ತ್ರಿಯವರ ಬಗೆಗೆ ಬರೆದ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸುವ ಜವಾಬ್ದಾರಿಯನ್ನು ವಿಶ್ವೇಶ್ವರ ಭಟ್ಟರಿಗೆ ವಹಿಸಿರುವುದು ಸಂತಸದ ಸಂಗತಿ.
- ಬಾಲಚಂದ್ರ ಹೆಗಡೆ, ಬೆಂಗಳೂರು
ಇದನ್ನೂ ಓದಿ: Readers Colony: ಸಂಗ್ರಹಯೋಗ್ಯ ತೋರಣ
ಮೆಚ್ಚತಕ್ಕ ನಡೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಲ್ನಡಿಗೆಯ ಪ್ರವಾಸ ಮಾಡುತ್ತಿದ್ದು ಬಡಬಗ್ಗರ ಸಮಸ್ಯೆ ಯನ್ನು ಸ್ವತಃ ಆಲಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಸಂದರ್ಭದಲ್ಲಿ ಬೀದಿ ಬದಿಯ ಹೋಟೆಲಿನಲ್ಲಿ ಆಹಾರ ಸೇವಿಸಿ ನಾನೂ ಒಬ್ಬ ಪ್ರಜೆ ಅಷ್ಟೆ ಎಂದು ಅನ್ಯರಿಗಿಂತ ಭಿನ್ನವಾಗಿ ನಡೆದುಕೊಂಡಿದ್ದಾರೆ. ನಾಡಿನ ಅಭಿವೃದ್ಧಿಗೆ ಕೃಷ್ಣಭೈರೇಗೌಡ ಮುಂತಾದ ಉತ್ಸಾಹಿ ಸಚಿವರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು ಅವರು ಮಾಡುವ ಜನಪರ ಕೆಲಸಗಳಿಗೆ ಬೆಂಬಲ ನೀಡುತ್ತಿರು ವುದೂ ಸ್ವಾಗತಾರ್ಹ.
ಕೇಂದ್ರ ಸರ್ಕಾರದೊಂದಿಗೆ ಅನಗತ್ಯ ತಿಕ್ಕಾಟ ಮಾಡಿಕೊಳ್ಳದೆ ಸಾಮರಸ್ಯ ಸಾಧಿಸಿದರೆ ನಾಡಿಗೆ ಹೆಚ್ಚು ಪ್ರಯೋಜನ ಎಂಬುದನ್ನು ಅರಿತು ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ, ಇದು ಆರಂಭ ಶೂರತ್ವ ಆಗದಿರಲಿ ಎಂಬುದಷ್ಟೇ ನಿರೀಕ್ಷೆ.
- ಪತ್ತಂಗಿ ಎಸ್. ಮುರಳಿ, ಬೆಂಗಳೂರು
ಆಹಾ! ಪವಾಡ?
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ, ಸ್ಥಳಾಂತರಕ್ಕಾಗಿ ತೆರವುಗೊಳಿಸುವ ವೇಳೆ, ಹನುಮಂತನ ವಿಗ್ರಹ ವೊಂದು ಜೆಸಿಬಿ ಯಂತ್ರಕ್ಕೂ ಕದಲಲಿಲ್ಲವೆಂಬ ಸುದ್ದಿ ಕ್ಷಣಾರ್ಧದಲ್ಲಿ ಜಾಲತಾಣಗಳಲ್ಲಿ ವೈರಲ್ ಆಯಿತು. ‘ಇದು ಪವಾಡ’ವೆಂದು ದಂಡಿಯಾಗಿ ಕಮೆಂಟುಗಳು ದಾಖಲಾಗತೊಡಗಿದವು. ಇನ್ನೊಂದು ವರ್ಗವು, ‘ಮುಸ್ಲಿಮರ ನಿರ್ಮಾಣವಾಗಿದ್ದರೆ ಜೆಸಿಬಿ ಕೆಡವಿ ಬಿಡುತ್ತಿತ್ತು’ ಎಂದು ಹೇಳತೊಡಗಿತು.
ವಿಗ್ರಹ ಭಗ್ನಗೊಳ್ಳಬಾರದೆಂಬ ಉದ್ದೇಶದಿಂದ, ಕದಲಿಸುವ ಗಟ್ಟಿ ಪ್ರಯತ್ನ ಮಾಡಿಲ್ಲವೆಂದು ಸ್ಥಳದಲ್ಲಿದ್ದ ಅಧಿಕಾರಿ ಹೇಳಿದರೂ ‘ದೇವರ ಮಹಿಮೆ’ಯ ಕೊಂಡಾಟ ಕಡಿಮೆಯಾಗಲಿಲ್ಲ. ವಿಗ್ರಹವನ್ನು ಪರಿಶೀಲಿಸಿದ ಪುರಾತತ್ತ್ವ ಶಾಸ್ತ್ರಜ್ಞರು, ‘ಅದು ಮಾಲ್ವಾ ಬಸಾಲ್ಟ್ ಎಂಬ, ಲಾವಾ ಮೂಲದ ಶಿಲೆಯಾಗಿದ್ದು ಸಾವಿರ ವರ್ಷ ಹಳೆಯದಿರಬಹುದು, ನೆಲದ ಸಾಕಷ್ಟು ಆಳಕ್ಕೆ ಇಳಿದಿರಬಹುದು, ಆ ಕಾಲದಲ್ಲಿ ಪ್ರಚಲಿತವಿದ್ದ, ಪರಸ್ಪರ ಕೊಂಡಿ ಬೆಸೆಯುವ (ಇಂಟರ್ಲಾಕ್) ವಿಧಾನದಲ್ಲಿ ಸ್ಥಾಪಿಸಿರಬಹುದಾದ್ದರಿಂದ ವಿಗ್ರಹವು ಮುಕ್ಕಾಗದಂತೆ ತೆಗೆಯುವುದು ಕಠಿಣವಾಗ ಬಹುದು’ ಎಂದು ಅಭಿಪ್ರಾಯಪಟ್ಟರು. ಅದರಿಂದಾಗಿ ಈಗ ಅಲ್ಲಿಗೆ ತಜ್ಞರನ್ನು ಕರೆಸಲಾಗುತ್ತಿದೆ. ಇಷ್ಟೆಲ್ಲ ಗೊತ್ತಾದನಂತರವೂ ‘ದೇವರ ಮಹಿಮೆ’ಯ ಕೊಂಡಾಟ ಏರುಗತಿಯಲ್ಲಿ ಸಾಗಿದೆ! ನಮ್ಮ ಜನರಿಗೆ ಪೂರ್ವಗ್ರಹರಹಿತ ಮನೋಭಾವ, ಇತಿಹಾಸಪ್ರe, ವೈeನಿಕ ಚಿಂತನೆ ಬರುವುದು ಯಾವಾಗ?
- ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
ಪಾದಪಥದ ಹಿತ
ಬೆಂಗಳೂರು ನಗರದಲ್ಲಿ ಫುಟ್‌ಪಾತ್‌ಗಳನ್ನು ತೆರವು ಮಾಡಿರುವದು ಶ್ಲಾಘನೀಯ. ಆದರೆ ಇನ್ನೊಂದು ಸಮಸ್ಯೆ ಎಂದರೆ ವಾಹನ ನಿಬಿಡ ರಸ್ತೆಗಳ ಬದಿಯ ಫುಟ್‌ಪಾತ್‌ಗಳಲ್ಲಿ ಪಾರ್ಕ್ ಮಾಡುವ ವಾಹನಗಳು. ಜೊತೆಗೆ ಪಾದಚಾರಿ ಮಾರ್ಗದ ಮೇಲೆಯೇ ಬೈಕ್ ಚಲಾಯಿಸಿಕೊಂಡು ಬರುವ ಭಂಡರು. ಇವರಿಂದಾಗಿ ಹಾದಿಹೋಕರ ಜೀವನ ದುರ್ಭರವಾಗಿದೆ. ಸರಕಾರ, ಸಚಿವರು ಈ ಬಗೆಗೂ ಗಮನ ಹರಿಸಬೇಕು.
- ಆಕಾಂಕ್ಷಾ ಜೈನ್, ರಾಜಾಜಿನಗರ