ಓದುಗರ ಓಣಿ
ಇತ್ತೀಚೆಗೆ ನಡೆದ ಹಲವು ರಾಜ್ಯಗಳ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಪಕ್ಷಗಳು ಆಶ್ವಾಸನೆ ಕೊಟ್ಟಂತೆ ಮಹಿಳೆಯರಿಗೆ ಉಚಿತ ಪ್ರಯಾಣ, ತಿಂಗಳಿಗಿಷ್ಟು ಹಣ, ಉಚಿತ ವಿದ್ಯುತ್ ಮುಂತಾದವು ಗಳನ್ನು ಜಾರಿಗೆ ತಂದಿವೆ. ಈ ಉಚಿತಭಾಗ್ಯಗಳಿಂದ ಕರ್ನಾಟಕವೂ ಸೇರಿದಂತೆ ಸೊರಗುತ್ತಿರುವ ರಾಜ್ಯಗಳಿಂದ ಉಳಿದ ರಾಜ್ಯಗಳು ಪಾಠ ಕಲಿಯಬೇಕಿತ್ತು. ಆದರೆ, ಅವು ಇನ್ನೂ ಹೆಚ್ಚು ಮಾಡುತ್ತಾ ಸಾಗಿವೆಯೇ ಹೊರತು ನಿಲ್ಲಿಸಿಲ್ಲ.
ಹೀಗೇ ಆದರೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಎಲ್ಲಿಂದ ದೊರಕುತ್ತದೆ? ಬಿಟ್ಟಿ ಭಾಗ್ಯಗಳ ವಿರುದ್ಧ ಇದ್ದ ಬಿಜೆಪಿ ಕೂಡಾ ಪಶ್ಚಿಮ ಬಂಗಾಳದಲ್ಲಿ ಉಚಿತ ಭಾಗ್ಯಗಳನ್ನು ಜಾರಿಗೆ ತರುತ್ತಿರುವುದು ಗಮನಾರ್ಹ. ರಾಜ್ಯಗಳು ತಮ್ಮ ಖಜಾನೆ ತುಂಬಿಸಿಕೊಳ್ಳಲು ಎಲ್ಲಿ ಸಾಧ್ಯವೋ ಅಲ್ಲಾ ದರ ಹೆಚ್ಚಳ ಮಾಡುತ್ತಾ ಸಾಗುತ್ತವೆ. ಆಗ ನಲುಗುವವರು ಜನರೇ ಹೊರತು ರಾಜಕಾರಣಿಗಳಲ್ಲ.
ಇಂತಹ ಯೋಜನೆಗಳು ಹೆಳವನಿಗೆ ಊರು ಗೋಲಿನಂತೆ ಇರಬೇಕೇ ಹೊರತು ಎಲ್ಲರಿಗೂ ಅಲ್ಲ. ಇಂತಹವುಗಳ ಘೋಷಣೆಗೂ ಮುನ್ನ ಪಕ್ಷಗಳು ನೂರು ಬಾರಿ ಚಿಂತಿಸಬೇಕಿದೆ. ಬಿಟ್ಟಿ ಕೊಟ್ಟರೆ ಮಾತ್ರ ಜನ ಮತ ಹಾಕುತ್ತಾರೆ ಇಲ್ಲವಾದರೆ ಇಲ್ಲ ಎಂಬ ಭಯ ಕಾಡುವುದೇ ಇಂತಹವುಗಳಿಗೆ ಕಾರಣ. ಜನರಿಗೆ ವಾಸ್ತವಾಂಶ ತಿಳಿಸಿ ಏರಿಸಿದ ಬೆಲೆಗಳನ್ನು ಇಳಿಸಿ ಬಿಟ್ಟಿ ಭಾಗ್ಯಗಳನ್ನು ನಿಲ್ಲಿಸು ವುದು ಸೂಕ್ತ.
- ಪತ್ತಂಗಿ ಎಸ್. ಮುರಳಿ, ಬೆಂಗಳೂರು
ವನ್ಯ ಜೀವಿಗಳ ಜತೆ ಆಟ ಬೇಡ!
ದುಬಾರೆ ಆನೆ ಶಿಬಿರದ ಸಾಕಾನೆಗಳಿಗೆ ಮಾವುತರು ಕಾವೇರಿ ನದಿಯಲ್ಲಿ ಸ್ನಾನ ಮಾಡಿಸುತ್ತಿದ್ದ ವೇಳೆ, ಬೇರೊಂದು ಆನೆ ದಾಳಿಯ ವೇಳೆ ಆಕಸ್ಮಿಕವಾಗಿ ಕೆಳಗೆ ಸಿಲುಕಿದ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ನಿಜಕ್ಕೂ ವಿಷಾದಕರ ಸಂಗತಿ. ಈ ಘಟನೆ ನೋಡಲು ಆಕಸ್ಮಿಕ ಎನಿಸಿದರೂ ಪರೋಕ್ಷವಾಗಿ ಮಾನವನ ಅತಿಯಾದ ಹಸ್ತ ಕ್ಷೇಪ ಎಂದರೂ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಪ್ರಕೃತಿ ಮತ್ತು ವನ್ಯಜೀವಿಗಳ ಮೇಲೆ ಮಾನವನ ಹಸ್ತಕ್ಷೇಪ ಮಿತಿಮೀರುತ್ತಿದೆ.
ವನ್ಯಜೀವಿಗಳ ಹೆಸರಿನಲ್ಲಿ ದಿನಂಪ್ರತಿ ಲಕ್ಷ ಲಕ್ಷ ಆದಾಯ ಗಳಿಸುವ ಸರಕಾರ, ದಿನನಿತ್ಯ ಸಾವಿರಾರು ಸಂಖ್ಯೆಯ ಪ್ರವಾಸಿಗರು ಆಗಮಿಸುವ ಸ್ಥಳದಲ್ಲಿ ತುರ್ತಾಗಿ ಸ್ಪಂದಿಸಲು ಯಾವುದೇ ರೀತಿಯ ವ್ಯವಸ್ಥೆ ಇಲ್ಲದಿರುವುದು, ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಇದರಲ್ಲಿ ಸರಕಾರದ ಅವೈಜ್ಞಾನಿಕ ನಿಯಮಗಳೋ ಅಥವಾ ಅರಣ್ಯ ಇಲಾಖೆಯ ನಿರ್ಲಕ್ಷವೋ ಅಥವಾ ಪ್ರವಾಸಿಗರ ಮೊಬೈಲ್ ಹುಚ್ಚಿನ ವ್ಯಾಮೋಹವೋ ಒಟ್ಟಿನಲ್ಲಿ ಒಂದು ಜೀವವಂತೂ ಬಲಿಯಾಗಿದೆ. ಸಾರ್ವಜನಿಕ ಸ್ಥಳ ಗಳಲ್ಲಿ ಸರಕಾರದ ನಿಯಮಗಳು ಎಷ್ಟಿರುತ್ತದೆಯೋ, ಪ್ರವಾಸಿಗರೂ ಕೂಡ ಅವುಗಳನ್ನು ಪಾಲಿ ಸುವ ಮೂಲಕ ಜವಾಬ್ದಾರಿ ಮೆರೆಯಬೇಕಾಗಿದೆ.
- ಮುರುಗೇಶ ಡಿ., ದಾವಣಗೆರೆ
ರಸ್ತೆ ಅಪಘಾತ: ಬೇಕು ಕ್ರಮ
ರಾಜ್ಯದಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ 11,265 ರಸ್ತೆ ಅಪಘಾತಗಳು ಸಂಭವಿಸಿ, 2,917 ಮಂದಿ ಮೃತಪಟ್ಟಿರುವುದು ಆತಂಕಕಾರಿ. ಅಂದರೆ, ಸರಾಸರಿ ಪ್ರತಿ ದಿನ 32 ಜನರು ರಸ್ತೆ ಅಪಘಾತ ದಲ್ಲಿ ಜೀವ ಕಳೆದುಕೊಂಡಿದ್ದಾರೆ. ಅದರಲ್ಲಿ 30 ವರ್ಷ ವಯಸ್ಸಿನ ಒಳಗಿನವರೇ ಹೆಚ್ಚು ಎಂಬುದು ದುರಂತದ ಸಂಗತಿ, ದೇಶದ ರಸ್ತೆ ಅಪಘಾತಗಳಲ್ಲಿ ರಾಜ್ಯ 4ನೇ ಸ್ಥಾನದಲ್ಲಿದೆ. ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣ, ಅತಿಯಾದ ವೇಗದ ಚಾಲನೆ, ರಸ್ತೆ ಸಂಚಾರ ನಿಯಮಗಳ ಉಲ್ಲಂಘನೆ, ವಾಹನ ಓಡಿಸುವಾಗ ಮೊಬೈಲ್ ಬಳಕೆ, ಹೆಲ್ಮೆಟ್ ಧರಿಸದೇ ವಾಹನ ಓಡಿಸುವುದು, ಕೆಲವರು ಶೋಕಿಗಾಗಿ ವೇಗವಾಗಿ ವಾಹನ ಓಡಿಸುವುದು, ಅಪ್ರಾಪ್ತ ವಯಸ್ಸಿನವರು ಪರವಾನಗಿ ಇಲ್ಲದೆ ವಾಹನ ಓಡಿಸುವುದು, ಕುಡಿದು ವಾಹನ ಓಡಿಸುವುದು, ವೀಲಿಂಗ್ ಮಾಡುವುದು, ಇವೆಲ್ಲ ವೂ ಸ್ವಯಂ ಕೃತ್ಯದಿಂದ ಪ್ರಾಣ ಕಳೆದುಕೊಂಡರೇ, ಮತ್ತೊಂದು ಕಡೆ ಗುಂಡಿ ಬಿದ್ದ ರಸ್ತೆಗಳು, ಕಿತ್ತು ಹೋಗಿರುವ ಡಾಂಬರು, ಕಾಣದ ರಸ್ತೆಗಳು, ರಾತ್ರಿ ವೇಳೆ ಸಮರ್ಪಕವಾದ ಬೀದಿ ದೀಪಗಳು ಇಲ್ಲದೆ ಇರುವುದು, ಭೂಗತ ಕೇಬಲ್‌ಗಳನ್ನು ಅಳವಡಿಸುವಾಗ ತೆಗೆದಿರುವ ಗುಂಡಿಗಳನ್ನು ಅರ್ಧಂಬರ್ಧ ಮುಚ್ಚಿರುವುದು, ಮಳೆ ಬಂದಾಗ ರಸ್ತೆ ಯಾವುದು ಗುಂಡಿ ಯಾವುದು ಎಂದು ತಿಳಿಯದೇ ಗುಂಡಿ ಗಳಿಗೆ ಬಿದ್ದು ಪ್ರಾಣ ಕಳೆದುಕೊಂಡವರು ಇದ್ದಾರೆ. ರಸ್ತೆ ಅಪಘಾತಗಳು ಕಡಿಮೆ ಆಗಲು ಮುಖ್ಯ ವಾಗಿ ನಮ್ಮ ಸಂಚಾರ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು.
- ಬೂಕನಕೆರೆ ವಿಜೇಂದ್ರ, ಮೈಸೂರು