ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎಸ್ಮಾ ಜಾರಿ: ಸರಕಾರಿ ನೌಕರರ ಮೇಲೆ ಯಾವ ಪ್ರಭಾವ ಬೀರುತ್ತದೆ ?

ಎಸ್ಮಾ ಜಾರಿ: ಸರಕಾರಿ ನೌಕರರ ಮೇಲೆ ಯಾವ ಪ್ರಭಾವ ಬೀರುತ್ತದೆ ?

Profile Vishwavani News Apr 16, 2021 7:17 AM
ಅಭಿಮತ ಮರಿಗೌಡ ಬಾದರದಿನ್ನಿ ಅಗತ್ಯ ಸೇವೆ ನಿರ್ವಹಣೆ ಕಾಯಿದೆ (Essential Services Maintenance Act) (ESMA) ಎನ್ನುವುದು ಕೆಲವು ಸೇವೆಗಳ ವಿತರಣೆ ಯನ್ನು ಖಚಿತಪಡಿಸಿಕೊಳ್ಳಲು ಸ್ಥಾಪಿಸಲಾದ ಭಾರತದ ಸಂಸತ್ತಿನ ಒಂದು ಕಾರ್ಯವಾಗಿದೆ, ಸರಕಾರಿ ನೌಕರರ ಮೇಲೆ ಅಂಕುಶ ಹಾಕುವ ಕಾಯಿದೆ 1968ರಿಂದ ಜಾರಿಯಲ್ಲಿದೆ. ಜಮ್ಮು ಕಾಶ್ಮೀರದ ಕೆಲ ಭಾಗಕ್ಕೆ ವಿನಾಯಿತಿ ನೀಡಲಾಗಿದೆ. ಕರ್ನಾಟಕದಲ್ಲಿ 1994ರಲ್ಲಿ ಈ ಕಾನೂನಿನ ಮೊದಲು ಉಲ್ಲೇಖ ವಾಯಿತು. ಜೂನ್ 2013ರಿಂದ ಕರ್ನಾಟಕ ರಾಜ್ಯದಲ್ಲಿ ಕಾನೂನು ಬಳಕೆಗೆ ಅವಕಾಶ ಸಿಕ್ಕಿತು. 2015ರಲ್ಲಿ ಕೆಲ ತಿದ್ದುಪಡಿ ಮಾಡಲಾಯಿತು. ಇದು ಸಾರ್ವಜನಿಕ ಸಾರಿಗೆ (ಬಸ್ ಸೇವೆಗಳು), ಆರೋಗ್ಯ ಸೇವೆಗಳು (ವೈದ್ಯರು ಮತ್ತು ಆಸ್ಪತ್ರೆಗಳು)ಗಳಂಥ ಸೇವೆಗಳನ್ನು ಒಳಗೊಂಡಿದೆ. ಎಸ್ಮಾ ಎಂಬುದು ಕೇಂದ್ರ ಕಾನೂನು, ಭಾರತದ ಸಂಸತ್ತು ಮಾಡಿದ ಕಾನೂನು; ಆದರೆ ಅದರ ಕಾರ್ಯಗತಗೊಳಿಸುವ ವಿವೇಚನೆಯು ಹೆಚ್ಚಾಗಿ ರಾಜ್ಯ ಸರಕಾರಗಳಿಗೆ ಇರುತ್ತದೆ. ಭಾರತದ ಒಕ್ಕೂಟದಲ್ಲಿ ಪ್ರತಿಯೊಂದು ರಾಜ್ಯವು ಕೇಂದ್ರ ಕಾನೂನಿನಿಂದ ಅದರ ನಿಬಂಧನೆಗಳಲ್ಲಿ ಸ್ವಲ್ಪ ವ್ಯತ್ಯಾಸಗಳನ್ನು ಹೊಂದಿರುವ ಪ್ರತ್ಯೇಕ ರಾಜ್ಯ ಎಸೆನ್ಷಿಯಲ್ ಸರ್ವೀಸಸ್ ಮ್ಯಾನೇಜ್ಮೆಂಟ್ ಆಕ್ಟ್ ಅನ್ನು ಹೊಂದಿದೆ. ಈ ಎಸ್ಮಾ ಕಾಯಿದೆ ಜಾರಿ ಯಾವಾಗ?: ಸರಕಾರಿ ನೌಕರರು ಸಾಮೂಹಿಕ ಪ್ರತಿಭಟನೆಗೆ ಮುಂದಾಗಿ ಪರಿಸ್ಥಿತಿ ಸಂಪೂರ್ಣ ಕೈ ಮೀರಿ ಹೋಗುತ್ತಿದೆ ಎಂಬ ಸಂದರ್ಭದಲ್ಲಿ ಸರಕಾರ ಎಸ್ಮಾ ಜಾರಿ ಮಾಡಲು ಮುಂದಾಗುತ್ತದೆ. ಮೂಲ ಸೌಕರ್ಯಗಳಾದ ಆಹಾರ, ಭದ್ರತೆ, ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆಗೆ ಭಂಗ ಬರುವ ಸಂಭವ ಹೆಚ್ಚಿದೆ ಎಂದಾಗ ಸರಕಾರ ಎಸ್ಮಾ ಜಾರಿಗೆ ಮುಂದಾಗುತ್ತದೆ. ಎಸ್ಮಾ ಜಾರಿ ಆದರೆ ಪರಿಣಾಮ ಏನು: ಎಸ್ಮಾ ಎಂದರೆ ‘ಕಡ್ಡಾಯ ಕೆಲಸ’ ಎಂದರ್ಥ. ಸಂವಿಧಾನದ ಅನುಸೂಚಿ 7ರಲ್ಲಿನ 2ನೇ ಪಟ್ಟಿಯಲ್ಲಿರುವ ‘ಸಾರ್ವಜನಿಕ ಸುವ್ಯವಸ್ಥೆ’ ಮತ್ತು ‘ಪೊಲೀಸ್’ಗೆ ಸಂಬಂಧಿಸಿದ ಎಲ್ಲಾ ಸೇವೆಗಳ ಕುರಿತು ರಾಜ್ಯ ಶಾಸಕಾಂಗವು ಕಾನೂನು ರೂಪಿಸುವ ಅಧಿಕಾರ ಹೊಂದಿರುತ್ತದೆ. ಎಸ್ಮಾ ಕಾಯಿದೆ ಉಲ್ಲಂಘನೆ ಮಾಡಿದರೆ ವಾರಂಟ್ ಇಲ್ಲದೇ ಬಂಧನ ಮಾಡಬಹುದು. ಅಲ್ಲದೆ ಆರು ತಿಂಗಳು ಕಾರಾಗೃಹ ವಾಸದ ಸಾಧ್ಯತೆಯೂ ಇರುತ್ತದೆ. ಎಸ್ಮಾ ಜಾರಿಯಾದ ಮೇಲೂ ಉದ್ಯೋಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಆತನ ವೇತನ, ಭತ್ಯೆ, ಬಡ್ತಿ ಮತ್ತು ಇತರ ಸವಲತ್ತು ಗಳ ಮೇಲೆ ಇದರ ಪರಿಣಾಮ ಬೀರುತ್ತದೆ. ಸರಕಾರ ಎಸ್ಮಾ ಜಾರಿ ಮಾಡಿದರೆ ಒಂದು ರೀತಿಯಲ್ಲಿ ಕಟ್ಟಪ್ಪಣೆ ಮಾಡಿದೆ ಎಂದೇ ಅರ್ಥ.