ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA Rudrappa Lamani: ರಾಜಕೀಯ ವಿರೋಧಿಗಳಿಂದ ಅಪಪ್ರಚಾರ; ಕ್ಷೇತ್ರದ ಜನರಲ್ಲಿ ಯಾವುದೇ ವಿರೋಧವಿಲ್ಲ ಎಂದ ಶಾಸಕ ರುದ್ರಪ್ಪ ಲಮಾಣಿ

Haveri News: ನನ್ನ ಅಭಿವೃದ್ಧಿ ಕೆಲಸಗಳಿಂದ ವಿಚಲಿತರಾದ ರಾಜಕೀಯ ವಿರೋಧಿಗಳು ಹಾಗೂ ವಿಪಕ್ಷ ಈ ರೀತಿಯ ಅಪಪ್ರಚಾರಗಳಿಂದ ನಾನು ವಿಚಲಿತನಾಗುವುದಿಲ್ಲ. ಸದಾ ನಾನು ಕ್ಷೇತ್ರದ ಜನರೊಂದಿಗೆ ಇದ್ದುಕೊಂಡು ಅವರ ನೋವು- ನಲಿವು, ಕಷ್ಟದಲ್ಲಿ ಭಾಗಿಯಾಗಿ ನಿರಂತರ ಕೆಲಸ ಕಾರ್ಯಗಳನ್ನು ಮುಂದುವರಿಸಿದ್ದೇನೆ. ಕಿಡಿಗೇಡಿಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಕ್ಷೇತ್ರದ ಜನರಿಗೆ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಮನವಿ ಮಾಡಿದ್ದಾರೆ.

ನನ್ನ ವಿರುದ್ಧ ರಾಜಕೀಯ ವಿರೋಧಿಗಳಿಂದ ಅಪಪ್ರಚಾರ: ರುದ್ರಪ್ಪ ಲಮಾಣಿ

ಹಾವೇರಿ ಶಾಸಕ ರುದ್ರಪ್ಪ ಲಮಾಣಿ -

Profile
Siddalinga Swamy Nov 18, 2025 11:04 PM

ಹಾವೇರಿ, ನ.18: ನನ್ನ ಬಗ್ಗೆ ಕ್ಷೇತ್ರದ ಜನರಲ್ಲಿ ಯಾವುದೇ ವಿರೋಧವಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ರಾಜಕೀಯ ವಿರೋಧಿಗಳು ಅಪ್ರಚಾರ ನಡೆಸಿದ್ದಾರೆ. ಕೆಲ ಕಿಡಿಗೇಡಿಗಳು ನನ್ನ ಅಭಿವೃದ್ಧಿ ಕೆಲಸಗಳನ್ನು ಸಹಿಸಿಕೊಳ್ಳಲಾಗದೇ ವಿಚಲಿತಗೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಇಲ್ಲಸಲ್ಲದ ಅಪಪ್ರಚಾರ ನಡೆಸಿದ್ದಾರೆ. ಇದು ಖಂಡನೀಯ ಎಂದು ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ (Rudrappa Lamani) ಸ್ಪಷ್ಟನೆ ನೀಡಿದ್ದಾರೆ.‌

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಾವೇರಿ ತಾಲೂಕಿನ ಶಾಸಕ ರುದ್ರಪ್ಪ ಲಮಾಣಿಗೆ ಘೇರಾವ್‌ ಹಾಕುತ್ತಿದ್ದಾರೆ, ಕ್ಷೇತ್ರದ ಅಭಿವೃದ್ಧಿಯನ್ನು ರುದ್ರಪ್ಪ ಲಮಾಣಿ ಮರೆತಿದ್ದಾರೆ. ಸಾರ್ವಜನಿಕರು ರುದ್ರಪ್ಪ ಲಮಾಣಿ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ... ಹೀಗೆ ಇತ್ಯಾದಿ ಶೀರ್ಷಿಕೆಗಳಡಿ ಸಾಮಾಜಿಕ ಜಾಲತಾಣಗಳಡಿ ಮಾಧ್ಯಮಗಳಲ್ಲಿ ನನ್ನ ಅಭಿವೃದ್ಧಿ ಕೆಲಸಗಳನ್ನು ಸಹಿಸಿಕೊಳ್ಳದ ಕಿಡಿಗೇಡಿಗಳು ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಆದರೆ ನನ್ನ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು 50 ಕೋಟಿ ವಿಶೇಷ ಅನುದಾನ ನೀಡಿದ್ದಾರೆ. ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ, ಸಣ್ಣ ಸಮುದಾಯಗಳ ಸಮುದಾಯ ಭವನಗಳ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಪ್ರಮುಖ ಮೂಲಭೂತ ಸೌಕರ್ಯಗಳಿಗೆ ಆದ್ಯತೆ‌ ನೀಡಿದ್ದು ಕೆಲಸಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ್ದಾರೆ.

ಪಕ್ಷ ನನಗೆ ವಿಧಾನಸಭೆಯ ಉಪಸಭಾಧ್ಯಕ್ಷರ ಜವಾಬ್ದಾರಿಯನ್ನು ನೀಡಿದ್ದು, ಈ ಹುದ್ದೆಯ ಕಾರ್ಯಭಾರದ ಒತ್ತಡ, ನನಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಇರುವುದರಿಂದ ಕ್ಷೇತ್ರದಲ್ಲಿ ಮತದಾರರು, ಪಕ್ಷದ ಕಾರ್ಯಕರ್ತರು ಹಾಗೂ ಕೆಲ ಮುಖಂಡರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗಿಲ್ಲ. ಆದರೆ ಈಗ ನಾನು ಸಂಪೂರ್ಣ ಗುಣಮುಖನಾಗುತ್ತಿದ್ದು, ಹೆಚ್ಚಿನ ಸಮಯವನ್ನು ಕ್ಷೇತ್ರದ ಮತದಾರರೊಂದಿಗೆ ಇರಲು ಸದಾ ಬಯಸುತ್ತೇನೆ ಮತ್ತು ಕ್ಷೇತ್ರದಲ್ಲಿ ಇದ್ದಾಗ ಕ್ಷೇತ್ರದ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Mekedatu Project: ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿ.ಕೆ. ಶಿವಕುಮಾರ್

ನನ್ನ ಅಭಿವೃದ್ಧಿ ಕೆಲಸಗಳಿಂದ ವಿಚಲಿತರಾದ ರಾಜಕೀಯ ವಿರೋಧಿಗಳು ಹಾಗೂ ವಿಪಕ್ಷ ಈ ರೀತಿಯ ಅಪಪ್ರಚಾರಗಳಿಂದ ನಾನು ವಿಚಲಿತನಾಗುವುದಿಲ್ಲ. ಸದಾ ನಾನು ಕ್ಷೇತ್ರದ ಜನರೊಂದಿಗೆ ಇದ್ದುಕೊಂಡು ಅವರ ನೋವು- ನಲಿವು ಕಷ್ಟದಲ್ಲಿ ಭಾಗಿಯಾಗಿ ನಿರಂತರ ಕೆಲಸ ಕಾರ್ಯಗಳನ್ನು ಮುಂದುವರಿಸಿದ್ದೇನೆ. ನನ್ನ ಅಭಿಮಾನಿಗಳು, ಮತದಾರರು, ಕಾರ್ಯಕರ್ತರು, ಕಿಡಿಗೇಡಿಗಳ ಅಪಪ್ರಚಾರಕ್ಕೆ ಕಿವಿಗೊಡದೇ ಯಾವುದೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ಮತ್ತು ನಮ್ಮ ಪಕ್ಷದ ಮುಖಂಡರನ್ನು ಆಪ್ತ ಶಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ತಿಳಿಸಿದ್ದಾರೆ.