After Navaratri 2025: ನವರಾತ್ರಿ ನಂತರ ತ್ವಚೆಯನ್ನು ಉಸಿರಾಡಲು ಬಿಡಿ!
After Navaratri 2025: ನವರಾತ್ರಿಯ ನಿರಂತರ ಮೇಕಪ್‌ನಿಂದಾಗಿ ತ್ವಚೆಯು ನಿಸ್ತೇಜವಾಗುತ್ತದೆ. ಸೋ, ತ್ವಚೆ ಮತ್ತೊಮ್ಮೆ ರಿಫ್ರೆಶ್ ಆಗಲು ಕೆಲಕಾಲ ಮೇಕಪ್ ಮರೆತು ಬಿಡಿ. ಸಿಂಪಲ್ ಆರೈಕೆ ಮಾಡಿ ಎನ್ನುತ್ತಾರೆ ಸೌಂದರ್ಯ ತಜ್ಞರು. ಈ ಕುರಿತಂತೆ ಒಂದಿಷ್ಟು ಬ್ಯೂಟಿ ಟಿಪ್ಸ್ ನೀಡಿದ್ದಾರೆ.
ನವರಾತ್ರಿ ಮುಗಿದಿದೆ. ಸೋ, ನಿಮ್ಮ ಮುಖದ ಮೇಕಪ್‌ಗೆ ಕೆಲಕಾಲ ಕೋಕ್ ನೀಡಿ. ತ್ವಚೆಯು ಕೊಂಚ ರಿಲ್ಯಾಕ್ಸ್ ಮಾಡಲು ಬಿಡಿ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್.
ಪ್ರತಿದಿನವೂ ಒಂದಲ್ಲ ಒಂದು ಕಲರ್‌ಫುಲ್ ಫ್ಯಾಷನ್‌ನಿಂದಾಗಿ ಮಾನಿನಿಯರು ಮೇಕಪ್ ಮಾಡುವುದು ಹೆಚ್ಚಾಗಿತ್ತು. ಇದೀಗ ಮುಖವನ್ನು ಕೆಲಕಾಲ ಮೇಕಪ್‌ನಿಂದ ದೂರವಿಡಿ. ತ್ವಚೆ ರಿಲ್ಯಾಕ್ಸ್ ಆಗಲು ಸಮಯ ನೀಡಿ, ಒಂದಿಷ್ಟು ಆರೈಕೆ ಮಾಡಿ ಎನ್ನುತ್ತಾರೆ ಅವರು.
ಮುಖವನ್ನು ರಿಲ್ಯಾಕ್ಸ್ ಮಾಡಲು ಏನೆಲ್ಲಾ ಮಾಡಬಹುದು? ಎಂಬುದರ ಬಗ್ಗೆ ಸಿಂಪಲ್ ಟಿಪ್ಸ್ ಕೂಡ ನೀಡಿದ್ದಾರೆ.
ತಾತ್ಕಲಿಕವಾಗಿ ಮೇಕಪ್‌ನಿಂದ ಮುಕ್ತಿ ಕಲ್ಪಿಸಿ
ನವರಾತ್ರಿಯಲ್ಲಿ ಪ್ರತಿದಿನವೂ ಹಬ್ಬದ ಹೆಸರಲ್ಲಿ ಫೌಂಡೇಷನ್, ಕನ್ಸಿಲರ್, ಐ ಶ್ಯಾಡೋ, ಲಿಪ್ಸ್ಟಿಕ್ ಎಂದೆಲ್ಲಾ ಮುಖದ ಮೇಲೆ ಸಾಕಷ್ಟು ಲೇಯರ್‌ನ ಮೇಕಪ್ ಮಾಡಿರುವುದರಿಂದ ಮುಖದ ತ್ವಚೆಗೆ ಉಸಿರಾಡಲು ಆಗಿರುವುದಿಲ್ಲ. ಹಾಗಾಗಿ ರಂಧ್ರಗಳು ಮುಚ್ಚಿಕೊಂಡಿರುತ್ತವೆ. ಪರಿಣಾಮ, ಮೊಡವೆಗಳು ಮೂಡುವ ಸಾಧ್ಯತೆಗಳು ಹೆಚ್ಚು. ಇದಕ್ಕೆ ಪರಿಹಾರವೊಂದೇ, ಒಂದಿಷ್ಟು ದಿನ ಮೇಕಪ್ ಇಲ್ಲದೇ ಮುಖವನ್ನು ಹಾಗೆಯೇ ರಿಲ್ಯಾಕ್ಸ್ ಆಗಲು ಬಿಡಿ.
ವಧನಕ್ಕೆ ಸ್ಟೀಮ್ ಆರೈಕೆ
ನಿಮ್ಮ ಮುಖಕ್ಕೆ ಬಿಸಿ ನೀರಿನ ಆವಿ ತೆಗೆದುಕೊಳ್ಳಿ. ಇದು ಮುಖದ ಮೇಲಿನ ಕೊಳೆಯನ್ನು ನಿವಾರಿಸುವುದಲ್ಲದೇ, ಕ್ಲಿಯರ್ ಮಾಡುವಲ್ಲಿ ಸಹಕರಿಸುತ್ತದೆ. ದಿನ ಬಿಟ್ಟು ದಿನ ಆವಿಯನ್ನು ತೆಗೆದುಕೊಳ್ಳಿ. ಇದು ಹೆಚ್ಚಾದಲ್ಲಿ ತ್ವಚೆ ಒಣಗಿದಂತಾಗಬಹುದು.
ಫೇಸ್ ಪ್ಯಾಕ್ ಹಚ್ಚಿ
ನಿಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವಂತಹ ಯಾವುದಾದರೂ ಹರ್ಬಲ್ ಫೇಸ್ ಪ್ಯಾಕ್, ಫೇಸ್ ಮಾಸ್ಕ್ ಹಾಕಿ. ಇದು ಚರ್ಮದ ಆರೋಗ್ಯ ಸುಧಾರಿಸಲು ಸಹಕಾರಿಯಾಗುತ್ತದೆ.
ನಿಮ್ಮ ಸ್ಕಿನ್ ಟೋನ್‌ಗೆ ತಕ್ಕಂತೆ ಆರೈಕೆ ಮಾಡಿ
ನಿಮ್ಮ ತ್ವಚೆಗೆ ತಕ್ಕಂತೆ ಆರೈಕೆ ಮಾಡಿ. ಜಿಡ್ಡಿನಂಶ, ಒಣಗಿದ ಹಾಗೂ ಮಿಕ್ಸ್ ತ್ವಚೆ ಹೊಂದಿರುವವರು ಅವರವರ ಸ್ಕಿನ್ ಟೋನ್‌ಗೆ ತಕ್ಕಂತೆ ಮಾಯಿಶ್ಚರೈಸರ್ ಆಯ್ಕೆ ಮಾಡಿ ಹಚ್ಚಿ, ಆರೈಕೆ ಮಾಡಿ. ಆದಷ್ಟೂ ಕೆಮಿಕಲ್ ಕ್ರೀಮ್‌ಗಳಿಂದ ದೂರವಿರಿ.
ಮುಖದ ವ್ಯಾಯಾಮ ರೂಢಿಸಿಕೊಳ್ಳಿ
ನಿಮಗೆ ಗೊತ್ತೇ! ಮುಖದ ಭಾಗಗಳಿಗೂ ವ್ಯಾಯಾಮ ಅಗತ್ಯವಿರುತ್ತದೆ. ಅಂತರ್ಜಾಲದಲ್ಲಿ ಈ ಕುರಿತ ಸಾಕಷ್ಟು ಮಾಹಿತಿ ದೊರಕುತ್ತದೆ. ಇದನ್ನು ನೋಡಿ ಕಲಿತು ಮುಂದುವರಿಸಿ.