Bengaluru Karaga 2025: ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ಮೆರವಣಿಗೆಯ ಝಲಕ್ ಹೇಗಿತ್ತು ಗೊತ್ತಾ? ಫೋಟೋಗಳು ಇಲ್ಲಿವೆ
Bengaluru Karaga 2025: ಅರ್ಚಕರಾದ ಎ.ಜ್ಞಾನೇಂದ್ರ ಅವರು 15ನೇ ಬಾರಿಗೆ ಕರಗವನ್ನು ಹೊತ್ತು ಹೆಜ್ಜೆ ಹಾಕಿದ್ದು, ಮಧ್ಯರಾತ್ರಿ ಸುಮಾರು 12.30 ರಿಂದ 1ರ ಸುಮಾರಿಗೆ ಕರಗ ಮೆರವಣಿಗೆ ಹೊರಟಿತು. ಉತ್ಸವದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯಿತು.



ವಿಶ್ವವಿಖ್ಯಾತ ಬೆಂಗಳೂರಿನ ಕರಗೋತ್ಸವ ನಿನ್ನೆ ತಡರಾತ್ರಿ ನಡೆಯಿತು. ದ್ರೌಪದಿ ದೇವಿ ಕರಗ ಶಕ್ತ್ಯೋತ್ಸವವು ಶನಿವಾರ ಮಧ್ಯರಾತ್ರಿ ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಿನಲ್ಲಿ ನಡೆದಿದ್ದು, ಲಕ್ಷಾಂತರ ಭಕ್ತರು ದರ್ಶನ ಪಡೆದಿದ್ದಾರೆ. ಅರ್ಚಕರಾದ ಎ.ಜ್ಞಾನೇಂದ್ರ ಅವರು 15ನೇ ಬಾರಿಗೆ ಕರಗವನ್ನು ಹೊತ್ತು ಹೆಜ್ಜೆ ಹಾಕಿದ್ದು, ಮಧ್ಯರಾತ್ರಿ ಸುಮಾರು 12.30 ರಿಂದ 1ರ ಸುಮಾರಿಗೆ ಕರಗ ಮೆರವಣಿಗೆ ಹೊರಟಿತು.

ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟ ಕರಗ, ಗಣಪತಿ ಮತ್ತು ಮುತ್ಯಾಲಮ್ಮ ದೇವಾಲಯ, ಹಲಸೂರು ಪೇಟೆಯ ಆಂಜನೇಯಸ್ವಾಮಿ, ರಾಮ ದೇವಾಲಯದಲ್ಲಿ ಪೂಜೆ ಬಳಿಕ ಮುಂದೆ ಸಾಗಿ ನಗರ್ತಪೇಟೆ, ಸಿದ್ದಣ್ಣ ಗಲ್ಲಿ, ಕಬ್ಬನ್ಪೇಟೆ, ಗಾಣಿಗರ ಪೇಟೆ, ದೊಡ್ಡ ಪೇಟೆಯಿಂದ ಕೆ.ಆರ್.ಮಾರುಕಟ್ಟೆ ತಲುಪಿತು.

ಅಕ್ಕಿಪೇಟೆ ರಸ್ತೆಯ ತವಕ್ಕಲ್ ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ನೀಡಿ, ಬಳೇಪೇಟೆ, ಅಣ್ಣಮ್ಮ ದೇವಾಲಯ, ಕಿಲಾರಿ ರಸ್ತೆ, ಅವೆನ್ಯೂ ರಸ್ತೆ, ಕುಂಬಾರಪೇಟೆ, ತಿಗಳರ ಪೇಟೆಯಲ್ಲಿ ಸಾಗಿತು. ಬೆಂಗಳೂರು ಕರಗ ಶಕ್ತ್ಯೋತ್ಸವದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದರು. ಬೆಂಗಳೂರು ಕರಗೋತ್ಸವ ಇರುವುದರಿಂದ ಎರಡು ದಿನಗಳ ಕಾಲ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.

ಉತ್ಸವದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯಿತು. ಅರ್ಚಕ ಜ್ಞಾನೇಂದ್ರ ಅವರು ಅರಿಶಿನ ಬಣ್ಣದ ಸೀರೆ, ಬಳೆ ತೊಟ್ಟು ಕಬ್ಬನ್ಪಾರ್ಕ್ನ ಕರಗದ ಕುಂಟೆಯಲ್ಲಿ ದ್ರೌಪದಿ ದೇವಿಗೆ ಗಂಗೆ ಪೂಜೆ ಸಲ್ಲಿಸಿದರು. ಅಲ್ಲಿಂದ ಹಸಿಕರಗವನ್ನು ಮಂಟಪಕ್ಕೆ ಹೊತ್ತು ತಂದು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.

ಇನ್ನು ಕರಗೋತ್ಸವದಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿ, ಕರಗ ಶಕ್ತ್ಯೋತ್ಸವ ಮಹಾರಥೋತ್ಸವಕ್ಕೆ ಶುಭ ಕೋರಿ ನಮನ ಸಲ್ಲಿಸಿದರು. ಬಳಿಕ ಯುವಕರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.