ಅಫ್ಘಾನಿಸ್ತಾನದ ತಾಲಿಬಾನ್ ಸೇನಾ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದ ಪಾಕಿಸ್ತಾನ
ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದೊಳಗೆ ಪಾಕಿಸ್ತಾನವು ಶನಿವಾರ ರಾತ್ರಿಯಿಡೀ ವಾಯುದಾಳಿ ನಡೆಸಿದೆ. ತಾಲಿಬಾನ್ ಸೇನಾ ಶಿಬಿರದ ಮೇಲೆ ಆಪರೇಷನ್ ಗಜಬ್ ಲಿಲ್-ಹಕ್ ಅಡಿಯಲ್ಲಿ ದಾಳಿ ನಡೆಸಿರುವ ಪಾಕಿಸ್ತಾನ ಈ ಮೂಲಕ ಶುಕ್ರವಾರ ಪಾಕಿಸ್ತಾನದ ಮೂರು ಸ್ಥಳಗಳ ಮೇಲೆ ಅಫ್ಘಾನಿಸ್ತಾನ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಂಡಿತ್ತು.
ಸಂಗ್ರಹ ಚಿತ್ರ -
ಇಸ್ಲಾಮಾಬಾದ್: ಅಫ್ಘಾನಿಸ್ತಾನದ (Afghanistan) ಮೇಲೆ ಮತ್ತೆ ಪಾಕಿಸ್ತಾನ ಬಾಂಬ್ ದಾಳಿ (Pakistan attack) ನಡೆಸಿದೆ. ಪಾಕಿಸ್ತಾನದ ಮೂರು ಸ್ಥಳಗಳ ಮೇಲೆ ಶುಕ್ರವಾರ ರಾತ್ರಿ ಅಫ್ಘಾನಿಸ್ತಾನ ನಡೆಸಿದ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಶನಿವಾರ ರಾತ್ರಿಯಿಡೀ ಭಯೋತ್ಪಾದಕ ಅಡಗುತಾಣಗಳು (Terrorist hideouts) ಎಂದು ಕರೆಯಲ್ಪಡುವ ಕಂದಹಾರ್‌ನಲ್ಲಿನ ತಾಲಿಬಾನ್ ಸೇನಾ ಶಿಬಿರದ ಮೇಲೆ ವಾಯುದಾಳಿ ನಡೆಸಿತ್ತು. ಆಪರೇಷನ್ ಗಜಬ್ ಲಿಲ್-ಹಕ್ (Operation Ghazab lil-Haq) ಅಡಿಯಲ್ಲಿ ಈ ದಾಳಿ ನಡೆಸಲಾಗಿದೆ. ಇದಕ್ಕೆ ಪ್ರತೀಕಾರವಾಗಿ ತಾಲಿಬಾನ್ ವಜಿರಿಸ್ತಾನದಲ್ಲಿರುವ ಪಾಕಿಸ್ತಾನಿ ಸೇನಾ ಶಿಬಿರದ ಮೇಲೆ ಗುರಿ ಇಟ್ಟಿತ್ತು.
ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದೊಳಗೆ ರಾತ್ರಿಯಿಡೀ ವಾಯುದಾಳಿ ನಡೆಸಿದ ಪಾಕಿಸ್ತಾನ ಭಯೋತ್ಪಾದಕರ ಅಡಗುತಾಣಗಳು ಮತ್ತು ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಿದೆ. ಇದು ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ದುಬೈ, ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ: ಕೇಳಿಬಂತು ಭಾರಿ ಸ್ಫೋಟದ ಸದ್ದು
ಪಾಕಿಸ್ತಾನಿ ಭೂಪ್ರದೇಶದ ಮೇಲೆ ಅಫ್ಘಾನಿಸ್ತಾನದ ನೆಲದಿಂದ ದಾಳಿ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಗ್ರಗಾಮಿ ಗುಂಪುಗಳ ವಿರುದ್ಧ ನಡೆಯುತ್ತಿರುವ ಗಡಿಯಾಚೆಗಿನ ಕಾರ್ಯಾಚರಣೆಯ ಭಾಗವಾಗಿ ಪಾಕಿಸ್ತಾನ ಈ ದಾಳಿಗಳನ್ನು ನಡೆಸಿರುವುದಾಗಿ ಇಸ್ಲಾಮಾಬಾದ್ ಹೇಳಿದೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಯಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿದ್ದು, ಈ ನಡುವೆಯೇ ಮಿಲಿಟರಿ ಸಂಘರ್ಷ ಉಂಟಾಗಿದೆ. ಆರೋಪ ಪ್ರತ್ಯಾರೋಪ ಮಾಡಿಕೊಂಡು ಎರಡು ಕಡೆಯವರು ದಾಳಿ, ಪ್ರತಿ ದಾಳಿಯನ್ನು ಮುಂದುವರಿಸಿದ್ದಾರೆ. ಇದು ಇಲ್ಲಿ ಉಂಟಾಗಿರುವ ದೀರ್ಘಕಾಲದ ಉದ್ವಿಗ್ನತೆಯಾಗಿದ್ದು, ತೀವ್ರ ಸಂಘರ್ಷಕ್ಕೂ ಕಾರಣವಾಗುವ ಆತಂಕವನ್ನು ಉಂಟು ಮಾಡಿದೆ.
ಈ ಕುರಿತು ಹೇಳಿಕೆ ನೀಡಿರುವ ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್, ಪಾಕಿಸ್ತಾನ ಸೇನೆಯು ಕಂದಹಾರ್‌ನಲ್ಲಿ ರಾತ್ರಿಯಿಡೀ ದಾಳಿ ನಡೆಸಿತು. ಇದನ್ನು ಇಸ್ಲಾಮಾಬಾದ್ ಗಡಿಯಾಚೆಯಿಂದ ಅಪ್ರಚೋದಿತ ಗುಂಡಿನ ದಾಳಿ ಎಂದು ತಿಳಿಸಿದ್ದಾರೆ.
ಆಪರೇಷನ್ ಗಜಬ್ ಲಿಲ್-ಹಕ್ ಅಡಿಯಲ್ಲಿ ಯಶಸ್ವಿಯಾಗಿ ದಾಳಿ ನಡೆದಿದೆ. ಇದರಲ್ಲಿ ಅಫ್ಘಾನ್ ತಾಲಿಬಾನ್ ಮತ್ತು ಫಿಟ್ನಾ ಅಲ್-ಖವಾರಿಜ್‌ನ ಭಯೋತ್ಪಾದಕ ಅಡಗುತಾಣಗಳು ಸೇರಿವೆ. ಪಾಕಿಸ್ತಾನದೊಳಗಿನ ಹಲವಾರು ದಾಳಿಗಳಿಗೆ ಕಾರಣವಾದ ಉಗ್ರಗಾಮಿ ಗುಂಪು ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಅನ್ನು ಪಾಕಿಸ್ತಾನ ಫಿಟ್ನಾ ಅಲ್-ಖವಾರಿಜ್ ಎಂದು ಕರೆಯುತ್ತಿರವುದಾಗಿ ಪಾಕಿಸ್ತಾನದ ಸಶಸ್ತ್ರ ಪಡೆಗಳು ಮಾಧ್ಯಮವೊಂದಕ್ಕೆ ತಿಳಿಸಿದೆ.
ಪಾಕಿಸ್ತಾನ ನಡೆಸಿದ ದಾಳಿಯ ಪರಿಣಾಮ ಕಂದಹಾರ್‌ನಲ್ಲಿ ತಾಂತ್ರಿಕ ಬೆಂಬಲ ಮೂಲಸೌಕರ್ಯ ಮತ್ತು ಉಪಕರಣಗಳ ಸಂಗ್ರಹಣಾ ಸೌಲಭ್ಯಗಳು ನಾಶವಾಗಿವೆ. ಈ ಕಾರ್ಯಾಚರಣೆಯನ್ನು ಮುಂದುವರಿಸಲಾಗುತ್ತದೆ ಎಂದು ಭದ್ರತಾ ಮೂಲಗಳು ಪಾಕಿಸ್ತಾನಿ ಮಾಧ್ಯಮ ವರದಿ ಮಾಡಿದೆ.
ಪಾಕಿಸ್ತಾನ ದಾಳಿ ನಡೆಸಿರುವುದಾಗಿ ದೃಢಪಡಿಸಿರುವ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ, ಈ ದಾಳಿಗಳು ಕಂದಹಾರ್‌ನಲ್ಲಿರುವ ಮಾದಕವಸ್ತು ಪುನರ್ವಸತಿ ಕೇಂದ್ರ ಮತ್ತು ಖಾಲಿ ಪಾತ್ರೆಗೆ ಸ್ವಲ್ಪ ಹಾನಿಯನ್ನುಂಟು ಮಾಡಿದೆ ಎಂದು ತಿಳಿಸಿದೆ.
ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಮಾತನಾಡಿ, ಅವರು ಹೇಳಿರುವ ಸ್ಥಳಗಳು ಈ ಎರಡು ಸ್ಥಳಗಳಿಂದ ದೂರದಲ್ಲಿವೆ. ಈ ದಾಳಿಗೆ ಪ್ರತಿಕಾರವಾಗಿ ಅಫ್ಘಾನಿಸ್ತಾನದ ತಾಲಿಬಾನ್ ವಜಿರಿಸ್ತಾನದ ಮಿಲಿಟರಿ ಶಿಬಿರದ ಮೇಲೆ ದಾಳಿ ಮಾಡಿದೆ ಎಂದರು.
ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ಉಪ ವಕ್ತಾರ ಸಾದೀಕುಲ್ಲಾ ನಸ್ರತ್ ಅವರು ಅಫ್ಘಾನ್ ವಾಯುಪಡೆಯ ಘಟಕಗಳು ದಕ್ಷಿಣ ವಜಿರಿಸ್ತಾನದ ವಾನಾದಲ್ಲಿರುವ ಪಾಕಿಸ್ತಾನಿ ಮಿಲಿಟರಿ ಶಿಬಿರದ ಮೇಲೆ ಪ್ರತೀಕಾರದ ದಾಳಿ ನಡೆಸಿರುವುದಾಗಿ ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ತಿಳಿಸಿದ್ದು, ಈ ದಾಳಿಯಿಂದ ಪಾಕಿಸ್ತಾನಿ ಪಡೆಗಳಿಗೆ ಭಾರಿ ಮಾನವ ಮತ್ತು ವಸ್ತು ನಷ್ಟವಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಮೂರು ಸ್ಥಳಗಳಿಗೆ ಶುಕ್ರವಾರ ರಾತ್ರಿ ಅಫ್ಘಾನಿಸ್ತಾನವು ಡ್ರೋನ್‌ಗಳನ್ನು ಹಾರಿಸಿದೆ. ಇವು ಗುರಿಗಳನ್ನು ತಲುಪುವ ಮೊದಲು ತಡೆಹಿಡಿಯಲಾಗಿದೆ ಇದರಿಂದ ಕ್ವೆಟ್ಟಾದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕೆಲವು ಸ್ಥಳೀಯರಿಗೆ ಗಾಯವಾಗಿದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಅಫ್ಘಾನಿಸ್ತಾನ ನಡೆಸಿರುವ ಡ್ರೋನ್ ದಾಳಿಯನ್ನು ಖಂಡಿಸಿದರು. ಅಫ್ಘಾನಿಸ್ತಾನವು ನಮ್ಮ ನಾಗರಿಕರನ್ನು ಗುರಿಯಾಗಿಸಲು ಪ್ರಯತ್ನಿಸುವ ಮೂಲಕ ಕೆಂಪು ರೇಖೆಯನ್ನು ದಾಟಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನವು ಕಾಬೂಲ್, ಪಕ್ತಿಯಾ ಮತ್ತು ಕಂದಹಾರ್ ಪ್ರಾಂತ್ಯಗಳಾದ್ಯಂತ ಸುಮಾರು 70 ಉಗ್ರಗಾಮಿ ಸಂಬಂಧಿತ ಕಟ್ಟಡಗಳನ್ನು ಕಳೆದ ವಾರದ ಆರಂಭದಲ್ಲಿ ಹೊಡೆದುರುಳಿಸಿತ್ತು. ಇದರ ಬಳಿಕ ಎರಡು ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ ಫೆಬ್ರವರಿ 26 ಮತ್ತು ಮಾರ್ಚ್ 5 ರ ನಡುವೆ ಅಫ್ಘಾನಿಸ್ತಾನದಲ್ಲಿ ಕನಿಷ್ಠ 185 ಮಂದಿ ಸಾವನ್ನಪ್ಪಿದ್ದು, ಯುಎನ್ ನಿರಾಶ್ರಿತರ ಸಂಸ್ಥೆ ಅಂದಾಜಿನ ಪ್ರಕಾರ ಸುಮಾರು 1,15,000 ಜನರು ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ ಎನ್ನಲಾಗಿದೆ.