Shiva Rajkumar: ಯಕ್ಷಗಾನ ವೇಷ ತೊಟ್ಟ ಹ್ಯಾಟ್ರಿಕ್ ಹೀರೋ; 'ವೀರ ಚಂದ್ರಹಾಸ' ಚಿತ್ರದಲ್ಲಿ ಶಿವಪುಟ್ಟ ಸ್ವಾಮಿಯಾಗಿ ಶಿವಣ್ಣ
Veera Chandrahasa: ಸ್ಯಾಂಡಲ್ವುಡ್ನಲ್ಲಿ ಹೊಸದೊಂದು ಪ್ರಯೋಗ ಮಾಡಲು ರವಿ ಬಸ್ರೂರು ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಂಪೂರ್ಣ ಯಕ್ಷಗಾನವನ್ನು ತೆರೆಗೆ ತರುತ್ತಿದ್ದಾರೆ. ʼವೀರ ಚಂದ್ರಹಾಸʼದ ಮೂಲಕ ಯಕ್ಷಗಾನ ಸಿನಿಮಾ ನಿರ್ದೇಶಿಸಿದ್ದಾರೆ. ಏ. 18ರಂದು ಇದು ತೆರೆಗೆ ಬರಲಿದ್ದು, ಮುಖ್ಯ ಪಾತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ.

ʼವೀರ ಚಂದ್ರಹಾಸʼ ಚಿತ್ರದ ಪೋಸ್ಟರ್ ಮತ್ತು ಶಿವ ರಾಜ್ಕುಮಾರ್.


ನಾಡ ಪ್ರಭು ಶಿವಪುಟ್ಟ ಸ್ವಾಮಿಯಾಗಿ ಶಿವಣ್ಣ
ಸುಮಾರು 4 ದಶಕಗಳಿಂದ ಚಿತ್ರರಂಗದಲ್ಲಿ ಸಕಿಯರಾಗಿರುವ ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್ ಇದೇ ಮೊದಲ ಬಾರಿಗೆ ಯಕ್ಷಗಾನಕ್ಕೆ ಬಣ್ಣ ಹಚ್ಚಿದ್ದಾರೆ. ಕರಾವಳಿಯ ಜನಪ್ರಿಯ ಕಲೆ ಯಕ್ಷಗಾನ ಸಿನಿಮಾ ರೂಪದಲ್ಲಿ ಹೊರಬರುತ್ತಿದ್ದು, ರವಿ ಬಸ್ರೂರು ಆ್ಯಕ್ಷನ್ ಕಟ್ ಹೇಳಿದ್ದಾರೆ. ʼವೀರ ಚಂದ್ರಹಾಸʼ ಹೆಸರಿನ ಈ ಯಕ್ಷಗಾನ ಸಿನಿಮಾದಲ್ಲಿ ಶಿವಣ್ಣ ನಾಡ ಪ್ರಭು ಶಿವಪುಟ್ಟ ಸ್ವಾಮಿಯಾಗಿ ಕಾಣಿಸಿಕೊಂಡಿದ್ದಾರೆ.

ಮೇಕಿಂಗ್ ವಿಡಿಯೊ ಔಟ್
ಸದ್ಯ ʼವೀರ ಚಂದ್ರಹಾಸʼದ ಮೇಕಿಂಗ್ ವಿಡಿಯೊ ಹೊರಬಿದ್ದಿದ್ದು ವೈರಲ್ ಆಗಿದೆ. ಈ ಮೇಕಿಂಗ್ ವಿಡಿಯೊದಲ್ಲಿ ಶಿವಣ್ಣ ಕಂಡುಬಂದಿದ್ದು, ಅವರ ಹೊಸ ಪ್ರಯೋಗಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಶಿವಣ್ಣ ಅವರದ್ದು ಇದರಲ್ಲಿ ಅತಿಥಿ ಪಾತ್ರ ಎನ್ನಲಾಗಿದೆ. ಈ ಚಿತ್ರ ಏ. 18ರಂದು ತೆರೆಗೆ ಬರಲಿದೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಬಂದ ನಂತರ ಬಿಡುಗಡೆಯಾಗುತ್ತಿರುವ ಶಿವಣ್ಣ ಅವರ ಮೊದಲ ಸಿನಿಮಾ ಇದಾಗಿದೆ.

400-500 ಕಲಾವಿದರು
ವಿಶೇಷ ಎಂದರೆ ಈ ಸಿನಿಮಾದಲ್ಲಿ ಸುಮಾರು 400-500 ಯಕ್ಷಗಾನ ಕಲಾವಿದರು ಅಭಿನಯಿಸಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಬಳಿ ಬೃಹತ್ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿದೆ. ಸಹಜ ಬೆಳಕಿನಲ್ಲಿ ಶೂಟಿಂಗ್ ನಡೆಸಲಾಗಿದ್ದು, ಸಾಂಪ್ರದಾಯಿಕ ಬೆಳಕಿನ ಮೂಲ ಬಿಟ್ಟರೆ ಯಾವುದೇ ಆಧುನಿಕ ಲೈಟ್ ಬಳಸಿಲ್ಲ. 8-10 ಕೋಟಿ ರೂ. ಬಜೆಟ್ನಲ್ಲಿ ಚಿತ್ರ ತಯಾರಾಗಿದ್ದು, 35ರಿಂದ 40 ದಿನ ಶೂಟ್ ಮಾಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

ಕರಾವಳಿ ಕರ್ನಾಟಕದ ಸಂಸ್ಕೃತಿಯ ಪ್ರತೀಕ
ಎಸ್.ಎಸ್. ರಾಜಕುಮಾರ್ ನಿರ್ಮಾಣದ, ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ಅರ್ಪಿಸುತ್ತಿರುವ ಈ ಸಿನಿಮಾ ಮೂಲಕ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ, ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಯಕ್ಷಗಾನವನ್ನು ಬೆಳ್ಳಿ ಪರದೆಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.

ವೀರ ಚಂದ್ರಹಾಸನ ಕಥೆ
ʼಜೈಮಿನಿ ಭಾರತʼದ ಒಂದು ಭಾಗವಾದ ವೀರ ಚಂದ್ರಹಾಸನ ಕಥೆಯನ್ನು ಈ ಯಕ್ಷಗಾನ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಈ ಯಕ್ಷಗಾನದಲ್ಲಿ ಚಂದ್ರಹಾಸನ ಪಾತ್ರದಲ್ಲಿ ಶಿಥಿಲ್ ಶೆಟ್ಟಿ, ದುಷ್ಟಬುದ್ಧಿ ಪಾತ್ರದಲ್ಲಿ ಪ್ರಸನ್ನ ಶೆಟ್ಟಿಗಾರ್, ಯಕ್ಷ ಕಿಂಕರನಾಗಿ ನವೀನ್ ಶೆಟ್ಟಿ ಐರ್ಬೈಲ್, ವಿಷಯೆಯಾಗಿ ನಾಗಶ್ರೀ, ಸಮುದ್ರ ಸೇನನಾಗಿ ಚಂದನ್ ಶೆಟ್ಟಿ ಮತ್ತಿತರರು ಕಾಣಿಸಿಕೊಂಡಿದ್ದಾರೆ.