ಇರಾನ್ ಮೇಲೆ ದಾಳಿ ವಿಳಂಬಕ್ಕೆ ಇಂಗ್ಲೆಂಡ್ ಕಾರಣ: ಡೊನಾಲ್ಡ್ ಟ್ರಂಪ್ ಬೇಸರ
ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವಿಗೆ ಕಾರಣವಾದ ಯುಎಸ್ ಮತ್ತು ಇಸ್ರೇಲ್ ನಡೆಸಿದ ದಾಳಿಗೆ ತನ್ನ ವಾಯುನೆಲೆಯನ್ನು ಬಳಸಲು ಅನುಮತಿ ನೀಡುವಲ್ಲಿ ಇಂಗ್ಲೆಂಡ್ ವಿಳಂಬ ಮಾಡಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ದಾಳಿಯಲ್ಲಿ ಇಂಗ್ಲೆಂಡ್ ಭಾಗಿಯಾಗಿಲ್ಲ. ರಕ್ಷಣಾತ್ಮಕ ಕಾರ್ಯಾಚರಣೆಗಳಿಗಾಗಿ ಯುಎಸ್ ಗೆ ತನ್ನ ವಾಯುನೆಲೆಯನ್ನು ಬಳಸಲು ಅನುಮತಿ ನೀಡಿರುವುದಾಗಿ ಸ್ಪಷ್ಟಪಡಿಸಿದೆ.
ಸಂಗ್ರಹ ಚಿತ್ರ -
ವಾಷಿಂಗ್ಟನ್: ಇರಾನ್ ಮೇಲೆ ಯುಎಸ್ ಮತ್ತು ಇಸ್ರೇಲ್ ನಡೆಸಿದ ದಾಳಿಗೆ (Israel-US strikes) ಇಂಗ್ಲೆಂಡ್ (england) ತನ್ನ ವಾಯುನೆಲೆಯನ್ನು (airbase) ಬಳಸಲು ಅನುಮತಿ ನೀಡುವಲ್ಲಿ ವಿಳಂಬ ಮಾಡಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಬೇಸರ ವ್ಯಕ್ತಪಡಿಸಿದ್ದಾರೆ. ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಹತ್ಯೆಗೂ ಮೊದಲು ಇರಾನ್ ಮೇಲೆ ದಾಳಿ ನಡೆಸಲು ಇಂಗ್ಲೆಂಡ್ ವಾಯುನೆಲೆಯನ್ನು ಬಳಸಲು ಯುಎಸ್ ಅನುಮತಿ ಕೋರಿತ್ತು. ಆದರೆ ಇದಕ್ಕೆ ಅನುಮತಿ ನೀಡುವಲ್ಲಿ ಇಂಗ್ಲೆಂಡ್ ವಿಳಂಬ ಮಾಡಿದೆ ಎಂದು ಟ್ರಂಪ್ ದೂರಿದ್ದಾರೆ. ಈ ದಾಳಿಯಲ್ಲಿ ಯುಕೆ ಭಾಗಿಯಾಗಿಲ್ಲ. ರಕ್ಷಣಾತ್ಮಕ ಕಾರ್ಯಾಚರಣೆಗಳಿಗಾಗಿ ಯುಎಸ್ ಗೆ ತನ್ನ ವಾಯುನೆಲೆಯನ್ನು ಸೀಮಿತವಾಗಿ ಬಳಸಲು ಅನುಮತಿ ನೀಡಿರುವುದಾಗಿ ಇಂಗ್ಲೆಂಡ್ ಸ್ಪಷ್ಟಪಡಿಸಿದೆ.
ಯುಎಸ್ ಮತ್ತು ಇಸ್ರೇಲ್ ದಾಳಿಯಲ್ಲಿ ಬ್ರಿಟನ್ ಭಾಗಿಯಾಗಿಲ್ಲ ಎಂದು ಹೇಳಿರುವ ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್, ರಕ್ಷಣಾತ್ಮಕ ಕಾರ್ಯಾಚರಣೆಗಳಿಗಾಗಿ ಯುಎಸ್ ಗೆ ತನ್ನ ವಾಯುನೆಲೆಗಳನ್ನು ಸೀಮಿತವಾಗಿ ಬಳಸಲು ಅನುಮೋದಿಸಿರುವುದಾಗಿ ಹೇಳಿದ್ದಾರೆ.
ಜಸ್ಟೀನ್ ಟ್ರೋಡೊ ಹದಗೆಡಿಸಿದ್ದ ಕೆನಡಾ-ಭಾರತ ಸಂಬಂಧಕ್ಕೆ ಈಗ ಮೈತ್ರಿಯ ಬೆಸುಗೆ
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಇರಾನಿನ ಮೇಲೆ ದಾಳಿ ನಡೆಸಲು ಅಮೆರಿಕವು ಡಿಯಾಗೋ ಗಾರ್ಸಿಯಾ ವಾಯುನೆಲೆಯನ್ನು ಬಳಸಲು ಬಯಸಿತ್ತು. ಇದಕ್ಕಾಗಿ ಅನುಮತಿ ನೀಡುವಲ್ಲಿ ವಿಳಂಬವಾಗಿತ್ತು. ಇದಕ್ಕಾಗಿ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಬಗ್ಗೆ ತೀವ್ರ ನಿರಾಶೆಯಾಗಿದೆ ಎಂದು ತಿಳಿಸಿದರು.
ಸ್ಟಾರ್ಮರ್ ಅವರು ತುಂಬಾ ಸಮಯ ತೆಗೆದುಕೊಂಡರು. ಯುಎಸ್ ತನ್ನ ನೆಲೆಗಳಿಂದ ಕಾರ್ಯನಿರ್ವಹಿಸಲು ಕೋರಿರುವ ಅನುಮತಿಯನ್ನು ಮೊದಲು ತಡೆ ಹಿಡಿದ ಬ್ರಿಟನ್, ಬಳಿಕ ಸೀಮಿತ ಬಳಕೆಗೆ ಒಪ್ಪಿಕೊಂಡಿತು. ಈ ಕುರಿತು ಬಳಿಕ ಹೇಳಿಕೆ ನೀಡಿದ ಸ್ಟಾರ್ಮರ್, ಇರಾನ್ ವಿರುದ್ಧದ ಕಾರ್ಯಾಚರಣೆಗಳಿಗೆ ಸೀಮಿತವಾಗಿ ತನ್ನ ವಾಯುನೆಲೆಯನ್ನು ಬಳಸಲು ಅನುಮತಿ ನೀಡಿರುವುದಾಗಿ ತಿಳಿಸಿದರು.
ಇದಕ್ಕೆ ಟ್ರಂಪ್ ಉತ್ತರಿಸಿ, ಎರಡು ಮಿತ್ರರಾಷ್ಟ್ರಗಳ ನಡುವೆ ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದ್ದು, ನಮ್ಮ ದೇಶಗಳ ನಡುವೆ ಇದುವರೆಗೆ ಅಂತಹ ಘಟನೆ ನಡೆದಿಲ್ಲ. ಸ್ಟಾರ್ಮರ್ ಅವರು ನಮ್ಮ ವಿನಂತಿಯನ್ನು ಅನುಮೋದಿಸುವುದರಿಂದ ಉಂಟಾಗುವ ಕಾನೂನು ಪರಿಣಾಮಗಳ ಬಗ್ಗೆ ಚಿಂತಿತರಾಗಿದ್ದಾರೆಂದು ತೋರುತ್ತದೆ ಎಂದು ಹೇಳಿದರು.
ಇರಾನ್ ಮೇಲೆ ಯುಎಸ್-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಬ್ರಿಟನ್ ಭಾಗಿಯಾಗಿಲ್ಲ ಎಂದು ಹೇಳಿರುವ ಸ್ಟಾರ್ಮರ್, ಗಲ್ಫ್ ನಲ್ಲಿರುವ ನಮ್ಮ ಪಾಲುದಾರರು, ಪ್ರಜೆಗಳನ್ನು ರಕ್ಷಿಸುವುದು ನನ್ನ ಮೊದಲ ಕರ್ತವ್ಯ. ಇರಾನಿನ ದಾಳಿಗಳನ್ನು ಈಗಾಗಲೇ ಯಶಸ್ವಿಯಾಗಿ ತಡೆದಿರುವ ಸಂಘಟಿತ ರಕ್ಷಣಾತ್ಮಕ ಕಾರ್ಯಾಚರಣೆಗಳ ಭಾಗವಾದ ಬ್ರಿಟಿಷ್ ಜೆಟ್‌ಗಳು ನಮ್ಮ ಬಳಿ ಇವೆ ಎಂದು ತಿಳಿಸಿದರು.
ಇರಾನ್- ಇಸ್ರೇಲ್ ಸಮರ: ಪೆಟ್ರೋಲ್ ಬೆಲೆ 200 ರುಪಾಯಿ ಆಗುತ್ತಾ?
ಬೆದರಿಕೆಯನ್ನು ನಿಲ್ಲಿಸುವ ಏಕೈಕ ಮಾರ್ಗವೆಂದರೆ ಕ್ಷಿಪಣಿಗಳನ್ನು ಮೂಲದಲ್ಲಿಯೇ ಅಂದರೆ ಅವುಗಳ ಸಂಗ್ರಹಣಾ ಡಿಪೋಗಳಲ್ಲಿ ಅಥವಾ ಕ್ಷಿಪಣಿಗಳನ್ನು ಹಾರಿಸಲು ಬಳಸಿದ ಲಾಂಚರ್‌ಗಳಲ್ಲಿ ನಾಶಪಡಿಸುವುದು. ಹೀಗಾಗಿ ಆ ನಿರ್ದಿಷ್ಟ ಮತ್ತು ಸೀಮಿತ ರಕ್ಷಣಾತ್ಮಕ ಉದ್ದೇಶಕ್ಕಾಗಿ ಬ್ರಿಟಿಷ್ ನೆಲೆಗಳನ್ನು ಬಳಸಲು ಯುನೈಟೆಡ್ ಸ್ಟೇಟ್ಸ್ ಗೆ ಅನುಮತಿ ನೀಡಲಾಯಿತು ಎಂದು ಅವರು ಹೇಳಿದರು.