ಡೆಲ್ಲಿಯನ್ನು ಮಣಿಸಿದ ಗುಜರಾತ್ ಟೈಟನ್ಸ್: ಆರ್ಸಿಬಿ ಸೇರಿ 3 ತಂಡಗಳಿಗೆ ಐಪಿಎಲ್ ಪ್ಲೇಆಫ್ಸ್ ಟಿಕೆಟ್!
ಭಾನುವಾರ ದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 60ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಗುಜರಾತ್ ಟೈಟನ್ಸ್ ತಂಡ 10 ವಿಕೆಟ್ಗಳ ಭರ್ಜರಿ ಗೆಲುವು ಪಡೆಯಿತು. ಈ ಗೆಲುವಿನ ಮೂಲಕ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತು.



ಅಗ್ರ ಸ್ಥಾನವನ್ನು ಅಲಂಕರಿಸಿದ ಗುಜರಾತ್
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 200 ರನ್ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟನ್ಸ್ ತಂಡ, ಸಾಯ್ ಸುದರ್ಶನ್ ಹಾಗೂ ಶುಭಮನ್ ಗಿಲ್ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ 19 ಓವರ್ಗಳಿಗೆ ವಿಕೆಟ್ ನಷ್ಟವಿಲ್ಲದೆ 205 ರನ್ಗಳನ್ನು ಕಲೆ ಹಾಕಿತು. ಆ ಮೂಲಕ ಜಿಟಿ 10 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.

ಆರ್ಸಿಬಿ ಸೇರಿ 3 ತಂಡಗಳಿಗೆ ಪ್ಲೇಆಫ್ಸ್ ಟಿಕೆಟ್
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಗುಜರಾತ್ ಟೈಟನ್ಸ್ ತಂಡ 10 ವಿಕೆಟ್ಗಳಿಂದ ಗೆಲುವು ಪಡೆಯುತ್ತಿದ್ದಂತೆ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಮೂರು ತಂಡಗಳು 2025ರ ಐಪಿಎಲ್ ಟೂರ್ನಿಯ ಪ್ಲೇಆಫ್ಸ್ಗೆ ಅಧಿಕೃತವಾಗಿ ಅರ್ಹತೆ ಪಡೆದಿವೆ. ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕೂಡ ನಾಕ್ಔಟ್ಗೆ ಅರ್ಹತೆಯನ್ನು ಪಡೆದಿವೆ.

ಗಿಲ್-ಸುದರ್ಶನ್ ಜುಗಲ್ಬಂದಿ
ಗುರಿ ಹಿಂಬಾಲಿಸಿದ ಗುಜರಾತ್ ಟೈಟನ್ಸ್ ಪರ ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಡೆಲ್ಲಿ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ 205 ರನ್ಗಳನ್ನು ಕಲೆ ಹಾಕಿತು. ಆ ಮೂಲಕ ಗುಜರಾತ್ ಟೈಟನ್ಸ್ ತಂಡವನ್ನು ಇನ್ನೂ ಒಂದು ಓವರ್ ಬಾಕಿ ಇರುವಂತೆ ಗೆಲುವಿನ ದಡ ಸೇರಿಸಿತು.

ಸಾಯ್ ಸುದರ್ಶನ್ ಎರಡನೇ ಶತಕ
ಭರ್ಜರಿ ಫಾರ್ಮ್ನಲ್ಲಿರುವ ಗುಜರಾತ್ ಆರಂಭಿಕ ಬ್ಯಾಟ್ಸ್ಮನ್ ಸಾಯ್ ಸುದರ್ಶನ್, ಡೆಲ್ಲಿ ಬೌಲರ್ಗಳಿಗೆ ಬೆವರಿಳಿಸಿದರು. ಅವರು ಆಡಿದ 61 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ ಅಜೇಯ108 ರನ್ ಸಿಡಿಸಿದರು. ಆ ಮೂಲಕ ಗುಜರಾತ್ ಟೈಟನ್ಸ್ ತಂಡದ ಪರ ಎರಡನೇ ಶತಕವನ್ನು ಪೂರ್ಣಗೊಳಿಸಿದರು.

ಅಬ್ಬರಿಸಿದ ಶುಭಮನ್ ಗಿಲ್
ಸಾಯ್ ಸುದರ್ಶನ್ ಜೊತೆ ಮತ್ತೊಂದು ತುದಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಶುಭಮನ್ ಗಿಲ್ 53 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ ಅಜೇಯ 93 ರನ್ಗಳನ್ನು ಬಾರಿಸಿದರು. ಆ ಮೂಲಕ ಗುಜರಾತ್ ಟೈಟನ್ಸ್ ತಂಡದ ಗೆಲುವಿಗೆ ನೆರವು ನೀಡಿದರು.

199 ರನ್ ಕಲೆ ಹಾಕಿದ್ದ ಡೆಲ್ಲಿ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಕೆಎಲ್ ರಾಹುಲ್ ಶತಕದ ಬಲದಿಂದ ತನ್ನ ಪಾಲಿನ 20 ಓವರ್ಗಳಿಗೆ ಮೂರು ವಿಕೆಟ್ಗಳ ನಷ್ಟಕ್ಕೆ 199 ರನ್ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಗುಜರಾತ್ ಟೈಟನ್ಸ್ ತಂಡಕ್ಕೆ 200 ರನ್ಗಳ ಸವಾಲಿನ ಗುರಿಯನ್ನು ನೀಡಿತ್ತು.

ಕೆ ಎಲ್ ರಾಹುಲ್ ಭರ್ಜರಿ ಶತಕ
ಜೇಕ್ ಮೆಗರ್ಕ್ ಅಲಭ್ಯತೆಯಲ್ಲಿ ಫಾಫ್ ಡು ಪ್ಲೆಸಿಸ್ ಜೊತೆ ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ 65 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 14 ಬೌಂಡರಿಗಳೊಂದಿಗೆ ಅಜೇಯ 112 ರನ್ಗಳನ್ನು ಕಲ ಹಾಕಿದ್ದರು. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ತಮ್ಮ ಐದನೇ ಶತಕವನ್ನು ಪೂರ್ಣಗೊಳಿಸಿದರು.

ಅಭಿಷೇಕ್ ಪೊರೆಲ್ 30 ರನ್
ಕೆಎಲ್ ರಾಹುಲ್ಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ್ದ ಅಭಿಷೇಕ್ ಪೊರೆಲ್ 30 ರನ್ ಗಳಿಸಿದರು. ಇವರು ವಿಕೆಟ್ ಒಪ್ಪಿಸಿದ ಬಳಿಕ ಅಕ್ಷರ್ ಪಟೇಲ್ 18 ರನ್ ಗಳಿಸಿ ಔಟ್ ಆದರು. ಆದರೆ, ಕೊನೆಯಲ್ಲಿ ಸ್ಪೋಟಕ ಬ್ಯಾಟ್ ಮಾಡಿದ ಟ್ರಿಸ್ಟನ್ ಸ್ಟಬ್ಸ್ ಅವರು ಕೇವಲ 10 ಎಸೆತಗಳಲ್ಲಿ ಅಜೇಯ 21 ರನ್ ಬಾರಿಸಿದರು.