IND vs ENG: ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಸ್ಥಾನ ತುಂಬಬಲ್ಲ ಟಾಪ್ 5 ಆಟಗಾರರು!
ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಮೇ 12 ರಂದು ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಆ ಮೂಲಕ ತಮ್ಮ14 ವರ್ಷಗಳ ರೆಡ್ ಬಾಲ್ ವೃತ್ತಿ ಜೀವನವನ್ನು ಪೂರ್ಣಗೊಳಿಸಿದ್ದಾರೆ. ಇದೀಗ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿಯ ಸ್ಥಾನವನ್ನು ಯಾರು ತುಂಬಲಿದ್ದಾರೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.



ಕೊಹ್ಲಿ ಸ್ಥಾನ ತುಂಬಬಲ್ಲ ನಾಲ್ವರು ಆಟಗಾರರ ವಿವರ
ಭಾರತ ತಂಡ ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಸ್ಥಾನದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಇಂಗ್ಲೆಂಡ್ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕೊಹ್ಲಿಯ ಸ್ಥಾನವನ್ನು ತುಂಬಬಲ್ಲ ಸಾಮರ್ಥ್ಯ ಹೊಂದಿರುವ ಅಗ್ರ ಐವರು ಬ್ಯಾಟ್ಸ್ಮನ್ಗಳನ್ನು ಇಲ್ಲಿ ವಿವರಿಸಲಾಗಿದೆ.

1.ಸರ್ಫರಾಝ್ ಖಾನ್
ರಣಜಿ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ಮುಂಬೈನ ಸರ್ಫರಾಝ್ ಖಾನ್ 2024ರಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಚೊಚ್ಚಲ ಅವಕಾಶವನ್ನು ಪಡೆದುಕೊಂಡಿದ್ದಾರೆ. ನಂತರ ಅವರು ನ್ಯೂಜಿಲೆಂಡ್ ಎದುರು ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನೂ ಬಾರಿಸಿದ್ದರು. ಆದರೆ, ಆಸ್ಟ್ರೇಲಿಯಾದಲ್ಲಿ ಅವರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಕೊಹ್ಲಿಯ ಸ್ಥಾನವನ್ನು ತುಂಬಬಲ್ಲ ಆಟಗಾರರ ಸಾಲಿನಲ್ಲಿ ಸರ್ಫರಾಝ್ ಖಾನ್ ಕೂಡ ಇದ್ದಾರೆ.

2.ಕೆಎಲ್ ರಾಹುಲ್
ಭಾರತ ಟೆಸ್ಟ್ ತಂಡದಲ್ಲಿ ಅಗತ್ಯ ತಕ್ಕಂತೆ ಕೆಎಲ್ ರಾಹುಲ್ ಬ್ಯಾಟ್ ಮಾಡುತ್ತಿದ್ದಾರೆ. ಆರಂಭಿಕ ಬ್ಯಾಟಿಂಗ್ ಕ್ರಮಾಂಕದಿಂದ 5 ಹಾಗೂ 6ನೇ ಕ್ರಮಾಂಕಗಳಲ್ಲಿಯೂ ಆಡಿದ್ದಾರೆ. ಇದೀಗ ಕೊಹ್ಲಿ ವಿದಾಯ ಹೇಳಿದ್ದು, ಹಿರಿಯ ಬ್ಯಾಟ್ಸ್ಮನ್ ಆಗಿ ರಾಹುಲ್ಗೆ ನಾಲ್ಕನೇ ಕ್ರಮಾಂಕದಲ್ಲಿ ಅವಕಾಶ ನೀಡಬಹುದು.

3. ರಜತ್ ಪಾಟಿದಾರ್
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಜತ್ ಪಾಟಿದಾರ್ ಕೂಡ ಟೆಸ್ಟ್ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಬಹುದು. ದೇಶಿ ಕ್ರಿಕೆಟ್ನಲ್ಲಿ ಅದ್ಭುತ ದಾಖಲೆಯನ್ನು ಹೊಂದಿರುವ ಪಾಟಿದಾರ್, ಸ್ಪಿನ್ಗೆ ಅತ್ಯುತ್ತಮ ಕೌಶಲವನ್ನು ಕರಗತ ಮಾಡಿಕೊಂಡಿದ್ದಾರೆ.

4 ಶ್ರೇಯಸ್ ಅಯ್ಯರ್
ಈ ವರ್ಷ ಶ್ರೇಯಸ್ ಅಯ್ಯರ್ ಪಾಲಿಗೆ ಅದ್ಭುತವಾಗಿದೆ. ಅವರು ದೇಶಿ ಕ್ರಿಕೆಟ್ನಲ್ಲಿ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದರು ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹಲವು ಉತ್ತಮ ಇನಿಂಗ್ಸ್ಗಳನ್ನು ಆಡಿದ್ದರು. ಟೆಸ್ಟ್ನಲ್ಲಿಯೂ ಉತ್ತಮ ಅನುಭವ ಹೊಂದಿರುವ ಅವರಿಗೆ ನಾಲ್ಕನೇ ಕ್ರಮಾಂಕ ನೀಡಬಹುದು.

5. ಸಾಯಿ ಸುದರ್ಶನ್
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಾಯಿ ಸುದರ್ಶನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ಭಾರತೀಯ ಕ್ರಿಕೆಟ್ನಲ್ಲಿ ಅತ್ಯಂತ ಭರವಸೆಯ ಬ್ಯಾಟ್ಸ್ಮನ್ ಎಂಬ ಹೆಸರನ್ನು ತಮಿಳುನಾಡು ಬ್ಯಾಟ್ಸ್ಮನ್ ಮೂಡಿಸಿದ್ದಾರೆ. ಇಂಗ್ಲೆಂಡ್ನಲ್ಲಿ ಕೌಂಟಿ ಆಡಿರುವ ಅನುಭವ ಹೊಂದಿರುವ ಅವರನ್ನು ಭಾರತ ಟೆಸ್ಟ್ ತಂಡದ ನಾಲ್ಕನೇ ಕ್ರಮಾಂಕದಲ್ಲಿ ಆಡಿಸಿದರೂ ಅಚ್ಚರಿ ಇಲ್ಲ.