Operation Sindoor 2.0: ಉಗ್ರರ ವಿರುದ್ಧ ಸಮರ ಮುಂದುವರಿಸಿದ ಭಾರತ; ಪಾಕ್ ಡ್ರೋನ್ ದೊಡೆದುರುಳಿಸಿದ ಸೇನೆ
ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ ಮೇಲೆ ದಾಳಿ ನಡೆಸಿ ಉಗ್ರರು 26 ಅಮಾಯಕರನ್ನು ಹತ್ಯೆಗೈದ ಬಳಿಕ ಪಾಕ್ನ ಅವನತಿ ಆರಂಭವಾಗಿದ್ದು, ಭಾರತ ಶಕ್ತವಾಗಿ ಪ್ರತಿಕ್ರಿಯೆ ನೀಡಿದೆ. ಮೇ 7ರಂದು ಭಾರತ ಆಪರೇಷನ್ ಸಿಂದೂರ್ ಮೂಲಕ ಸುಮಾರು 100 ಭಯೋತ್ಪಾದಕರನ್ನು ಹೊಡೆದುರುಳಿದಿದೆ. ಮೇ 8ರಂದೂ ಭಾರತೀಯ ಸೇನೆ ಆಪರೇಷನ್ ಸಿಂದೂರ ಮುಂದುವರಿಸಿದೆ.



ಉಗ್ರವಾದವನ್ನು ಮಟ್ಟ ಹಾಕಲು ಸಜ್ಜಾಗಿರುವ ಭಾರತೀಯ ಸೇನೆ ಈಗಾಗಲೇ ಆಪರೇಷನ್ ಸಿಂದೂರ್ ಮೂಲಕ ದಿಟ್ಟ ಉತ್ತರ ನೀಡಿದೆ. ಇದೀಗ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಮೇ 7ರಂದು ಭಾರತ ನಡೆಸಿದ ಆಪರೇಷನ್ ಸಿಂದೂರಕ್ಕೆ ಪ್ರತಿಯಾಗಿ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಾಗರಿಕರ ಮೇಲೆ ಶೆಲ್ ದಾಳಿ ನಡೆಸಿ 16 ಅಮಾಯಕರನ್ನು ಹತ್ಯೆ ಮಾಡಿತ್ತು. ಅಲ್ಲದೆ ಭಾರತದ ಇನ್ನೂ 15 ನಗರಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗೆ ಯೋಜನೆ ರೂಪಿಸಿತ್ತು.

ಪಾಕ್ನ ಈ ದಾಳಿಯ ಪ್ರಯತ್ನವನ್ನು ಮೆಟ್ಟಿ ನಿಂತಿರುವ ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್, ಕರಾಚಿ, ಸಿಯೋಲ್ ಕೋಟ್ ಮೇಲೆ ಪ್ರತಿ ದಾಳಿ ನಡೆಸಿದೆ. ಅಲ್ಲದೆ ಸುದರ್ಶನ ಚಕ್ರ ಎಂದು ಕರೆಯಲ್ಪಡುವ ರಷ್ಯಾ ನಿರ್ಮಿತ ಎಸ್-400 (S-400) ಏರ್ ಡಿಫೆನ್ಸ್ ಸಿಸ್ಟಂ ಮೂಲಕ ಡ್ರೋನ್ ಮತ್ತು ಕ್ಷಿಪಣಿಯನ್ನು ಹೊಡೆದುರುಳಿಸಲಾಗಿದೆ.

ಆಪರೇಷನ್ ಸಿಂದೂರ್ 2.0 ಅನ್ನು ಪ್ರಶಂಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ʼʼಮತ್ತೆ ತಾಳ್ಮೆ ಪರೀಕ್ಷಿಸಿದರೆ ಪರಿಣಾಮ ನೆಟ್ಟಗಿರಲ್ಲ. ನಿನ್ನೆ ನಮ್ಮ ಸೇನೆ ತೆಗೆದುಕೊಂಡ ಕ್ರಮ ಮತ್ತು ಅವರು ತೋರಿಸಿದ ಧೈರ್ಯ ಮತ್ತು ಶೌರ್ಯಕ್ಕಾಗಿ ನಾನು ಸಶಸ್ತ್ರ ಪಡೆಗಳನ್ನು ಅಭಿನಂದಿಸುತ್ತೇನೆ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ತಟಸ್ಥಗೊಳಿಸಲಾಗಿದೆ, ಇದು ನಮಗೆ ಹೆಮ್ಮೆಯ ವಿಷಯ" ಎಂದು ಹೇಳಿದ್ದಾರೆ.

ಪೇಶಾವರ್ ಝಲ್ಮಿ ವರ್ಸಸ್ ಕರಾಚಿ ಕಿಂಗ್ಸ್ ಪಿಎಸ್ಎಲ್ 2025 ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದ ಬಳಿ ಡ್ರೋನ್ ದಾಳಿ ನಡೆದಿದೆ. ಇದರಿಂದ ಕಂಗಾಲಾಗಿರುವ ಪಿಸಿಬಿ (ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್) ಕೂಡಲೇ ರಾವಲ್ಪಿಂಡಿ ತೊರೆಯುವಂತೆ ಎಲ್ಲ ಕ್ರಿಕೆಟ್ ಆಟಗಾರರಿಗೆ ಕರೆ ನೀಡಿತ್ತು. ಸದ್ಯ ಎಲ್ಲ ಆಯೋಜಿತ ಕ್ರಿಕೆಟ್ ಪಂದ್ಯಗಳನ್ನು ರದ್ದುಪಡಿಸಲಾಗಿತ್ತು.

ಸುದರ್ಶನ ಚಕ್ರ ಸುಮಾರು 60 ಶತ್ರು ಗುರಿಗಳನ್ನು ಏಕಕಾಲಕ್ಕೆ ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಒಂದೇ ಬಾರಿಗೆ ಕ್ಷಿಪಣಿ, ಡ್ರೋನ್, ಹೆಲಿಕಾಪ್ಟರ್, ಸಾರಿಗೆ ವಿಮಾನ, ಯುದ್ಧ ವಿಮಾನ, ಕ್ಷಿಪಣಿಗಳನ್ನು ಇದು ಎದುರಿಸುತ್ತದೆ. ಭಾರತೀಯ ಪುರಾಣದ ಪ್ರಕಾರ ಸುದರ್ಶನ ಚಕ್ರ ಅತ್ಯಂತ ಶಕ್ತಿಯುತ ಆಯುಧವಾಗಿದ್ದು, ಇದಕ್ಕಾಗಿ ಈ ರಕ್ಷಣಾ ವ್ಯವಸ್ಥೆ ಇದೇ ಹೆಸರನ್ನು ಇಡಲಾಗಿದೆ.