Kancha Gachibowli Land Row: ತೆಲಂಗಾಣ ಸರ್ಕಾರದಿಂದ ಮರಗಳ ಮಾರಣ ಹೋಮ; ಸುಪ್ರೀಂ ಕೋರ್ಟ್ನಿಂದ ಚಾಟಿ: ಏನಿದು ವಿವಾದ?
Hyderabad Central University: ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ಪಕ್ಕದಲ್ಲಿರುವ ಕಂಚ ಗಚ್ಚಿಬೌಲಿಯ ಸುಮಾರು 400 ಎಕ್ರೆಯನ್ನು ಪುನರಾಭಿವೃದ್ಧಿ ಮಾಡುವ ಕಾಂಗ್ರೆಸ್ನ ಯೋಜನೆಗಳ ಸುತ್ತ ಇದೀಗ ವಿವಾದ ಸುತ್ತಿಕೊಂಡಿದೆ. ಜೆಸಿಬಿ ಕಾಡಿಗೆ ನುಗ್ಗಿ ಅಲ್ಲಿನ ಗಿಡ ಮರಗಳನ್ನು ಅಪೋಶನ ತೆಗೆದುಕೊಳ್ಳುತ್ತಿರುವ ಫೋಟೊ, ವಿಡಿಯೊ ವೈರಲ್ ಆಗಿದೆ. ಆತುರಾತುರವಾಗಿ ಅರಣ್ಯ ನಾಶ ಮಾಡಿರುವುದರ ಬಗ್ಗೆ ಬುಧವಾರ (ಏ. 16) ಸುಪ್ರೀಂ ಕೋರ್ಟ್ ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.



ರಾಜ್ಯ ಸರ್ಕಾರದ ವಿರುದ್ಧ ಟೀಕೆ
ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಸಂಚಲನ ಸೃಷ್ಟಿಸಿದ ಪ್ರಕರಣಗಳಲ್ಲಿ ತೆಲಂಗಾಣದ ಕಂಚ ಗಚ್ಚಿಬೌಲಿಯ ಭೂ ವಿವಾದವೂ ಒಂದು. ಹೈದರಾಬಾದ್ ವಿಶ್ವವಿದ್ಯಾಲಯದ ಪಕ್ಕದಲ್ಲಿರುವ ಕಂಚ ಗಚ್ಚಿಬೌಲಿಯ ಅರಣ್ಯವನ್ನು ನಾಶಪಡಿಸಿ ಅಭಿವೃದ್ಧಿ ಕಾಮಗಾರಿ ನಡೆಸಲು ಮುಂದಾದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ಕೇಳಿ ಬಂದಿದೆ.

ವಿಡಿಯೊ ವೈರಲ್
ಜೆಸಿಬಿ ಅರಣ್ಯಕ್ಕೆ ನುಗ್ಗಿ ಅರಣ್ಯ ನಾಶಪಡಿಸುವ ವಿಡಿಯೊ ಇತ್ತೀಚೆಗೆ ಭಾರಿ ಸಂಚಲನ ಸೃಷ್ಟಿಸಿದೆ. ಜಿಂಕೆ, ನವಿಲು ಸೇರಿದಂತೆ ವಿವಿಧ ಪ್ರಾಣಿ-ಪಕ್ಷಿಗಳು ಒದ್ದಾಡುವ ದೃಶ್ಯ ಪರಿಸರ ಪ್ರೇಮಿಗಳಲ್ಲಿ ಕಳವಳ ಹುಟ್ಟುಹಾಕಿದೆ. ಜತೆಗೆ ವಿದ್ಯಾರ್ಥಿಗಳು ಸೇರಿದಂತೆ ಹಲವರು ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

ಸುಪ್ರೀಂ ಕೋರ್ಟ್ ಕದ ತಟ್ಟಿದ ಪರಿಸರ ಪ್ರೇಮಿಗಳು
ರೇವಂತ್ ರೆಡ್ಡಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಪರಿಸರ ಪ್ರೇಮಿಗಳು ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ತೆಲಂಗಾಣ ಸರ್ಕಾರಕ್ಕೆ ಚಾಟಿ ಬೀಸಿದೆ. ಸುಮಾರು 100 ಎಕರೆ ಅರಣ್ಯವನ್ನು ಅಧಿಕಾರಿಗಳ ಅನುಮತಿಯಿಲ್ಲದೆ ನಾಶ ಮಾಡಲಾಗುತ್ತಿದೆ. ಇಲ್ಲಿ ಏನಾದರೂ ನಿರ್ಮಾಣ ಕಾರ್ಯ ನಡೆಸಬೇಕಿದ್ದರೆ ಮೊದಲು ಅನುಮತಿಯನ್ನು ಪಡೆಯಬೇಕಿತ್ತು ಎಂದು ಕೋರ್ಟ್ ಹೇಳಿದೆ.

ಸುಪ್ರೀಂ ಕೋರ್ಟ್ ಎಚ್ಚರಿಕೆ
ಈ ಅರಣ್ಯದೊಳಗೆ ಇದ್ದ ಪ್ರಾಣಿಗಳು ಆಶ್ರಯಕ್ಕಾಗಿ ಓಡಾಡುತ್ತಿವೆ. ಬೀದಿ ನಾಯಿಗಳಿಂದ ಕಚ್ಚಲ್ಪಡುತ್ತಿವೆ ಎಂದ ಸುಪ್ರೀಂ ಕೋರ್ಟ್, ಪ್ರಾಣಿಗಳನ್ನು ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯದ ವನ್ಯಜೀವಿ ವಿಭಾಗಗಳಿಗೆ ಸೂಚಿಸಿದೆ. ಜತೆಗೆ ನಾಶವಾದ ಅರಣ್ಯ ಪ್ರದೇಶದಲ್ಲಿ ಸ್ಥಾಪನೆಯಾಗುವ ಕಟ್ಟಡ ಯೋಜನೆಯನ್ನು ಶೀಘ್ರದಲ್ಲಿ ಮಂಡಿಸದೇ ಇದ್ದರೆ ಮುಖ್ಯ ಕಾರ್ಯದರ್ಶಿಯಿಂದ ಹಿಡಿದು ಕೆಳಗಿನ ಹಂತದ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಕೆಯನ್ನೂ ನೀಡಿದೆ.

ಏನಿದು ವಿವಾದ?
ಹೈದರಾಬಾದ್ ವಿಶ್ವವಿದ್ಯಾಲಯದ ಪಕ್ಕದಲ್ಲಿರುವ 400 ಎಕ್ರೆ ಅರಣ್ಯ ಪ್ರದೇಶವನ್ನು ಬಳಸಿ ಅಭಿವೃದ್ಧಿ ಕಾಮಗಾರಿ ನಡೆಸಲು ಕಾಂಗ್ರೆಸ್ ಸರ್ಕಾರ ಮುಂದಾಗುವುದರೊಂದಿಗೆ ವಿವಾದ ದೇಶದ ಗಮನ ಸೆಳೆದಿದೆ. ಯೋಜನೆಗೆ ವಿದ್ಯಾರ್ಥಿಗಳು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿ ಬುಲ್ಡೋಜರ್ಗಳ ಬಳಕೆಯು ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲಂಘಿಸುತ್ತದೆ ಮತ್ತು ಈ ಪ್ರದೇಶದಲ್ಲಿನ ವನ್ಯಜೀವಿಗಳಿಗೆ ಅಪಾಯ ಉಂಟು ಮಾಡುತ್ತದೆ ಎಂದು ಆರೋಪಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.