IPL 2025: ಗೆಲ್ಲುವ ಪಂದ್ಯವನ್ನು ಲಖನೌ ಸೂಪರ್ ಜಯಂಟ್ಸ್ಗೆ ಬಿಟ್ಟು ಕೊಟ್ಟ ರಾಜಸ್ಥಾನ್ ರಾಯಲ್ಸ್!
RR vs LSG Match Highlights: ರಾಜಸ್ಥಾನ್ ರಾಯಲ್ಸ್ ತಂಡ ಸುಲಭವಾಗಿ ಗೆಲ್ಲಬಹುದಾಗಿದ್ದ ಮತ್ತೊಂದು ಪಂದ್ಯದಲ್ಲಿ ಸೋಲು ಅನುಭವಿಸಿದೆ. ಯಶಸ್ವಿ ಜೈಸ್ವಾಲ್ (74) ಅವರ ಅರ್ಧಶತಕದ ಹೊರತಾಗಿಯೂ ಆವೇಶ್ ಖಾನ್ (37ಕ್ಕೆ 3) ಪರಿಣಾಮಕಾರಿ ಬೌಲಿಂಗ್ ದಾಳಿಗೆ ನಲುಗಿದ ರಾಜಸ್ಥಾನ್ ರಾಯಲ್ಸ್ ತಂಡ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 36ನೇ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಕೇವಲ ಎರಡು ರನ್ನಿಂದ ಸೋಲಿನ ಆಘಾತ ಅನುಭವಿಸಿದೆ.



ಲಖನೌ ಸೂಪರ್ ಜಯಂಟ್ಸ್ಗೆ ರೋಚಕ ಜಯ
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಗಣದಲ್ಲಿ ಶನಿವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಲಖನೌ ಸೂಪರ್ ಜಯಂಟ್ಸ್ ತಂಡ, ಏಡೆನ್ ಮಾರ್ಕ್ರಮ್ ಹಾಗೂ ಆಯುಷ್ ಬದೋನಿ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್ಗಳಿಗೆ 5 ವಿಕೆಟ್ ನಷ್ಟಕ್ಕೆ 180 ರನ್ಗಳನ್ನು ಕಲೆ ಹಾಕಿತ್ತು. ಬಳಿಕ 181 ರನ್ಗಳ ಗುರಿಯನ್ನು ಹಿಂಬಾಲಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡ 17ನೇ ಓವರ್ವರೆಗೂ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದಾದ ಅವಕಾಶವನ್ನು ಹೊಂದಿದ್ದಾರೆ. ಆವೇಶ್ ಖಾನ್ ಅವರ 18 ಮತ್ತು 20ನೇ ಓವರ್ನಲ್ಲಿ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಲಖನೌ ಸೂಪರ್ ಜಯಂಟ್ಸ್ ಕೇವಲ 2 ರನ್ ರೋಚಕ ಗೆಲುವು ಸಾಧಿಸಿತು.

ಟಾಸ್ ಗೆದ್ದಿದ್ದ ಲಖನೌ ಸೂಪರ್ ಜಯಂಟ್ಸ್
2025ರ ಐಪಿಎಲ್ ಟೂರ್ನಿಯ 36ನೇ ಪಂದ್ಯದಲ್ಲಿ ಟಾಸ್ ಗೆದ್ದ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ ರಿಷಭ್ ಪಂತ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆ ಮೂಲಕ ದೊಡ್ಡ ಮೊತ್ತವನ್ನು ಕಲೆ ಹಾಕುವ ಯೋಜನೆಯನ್ನು ಹಾಕಿಕೊಂಡಿದ್ದರು. ಆ ಮೂಲಕ ಎದುರಾಳಿ ರಾಜಸ್ಥಾನ್ ರಾಯಲ್ಸ್ಗೆ ಬೌಲಿಂಗ್ಗೆ ಆಹ್ವಾನ ನೀಡಿದ್ದರು.

180 ರನ್ ಕಲೆ ಹಾಕಿದ್ದ ಲಖನೌ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಲಖನೌ ಸೂಪರ್ ಜಯಂಟ್ಸ್ ತಂಡ, ಏಡೆನ್ ಮಾರ್ಕ್ರಮ್, ಆಯುಷ್ ಬದೋನಿ ಹಾಗೂ ಅಬ್ದುಲ್ ಸಮದ್ ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್ಗಳಿಗೆ 5 ವಿಕೆಟ್ಗಳನ್ನು ಕಳೆದುಕೊಂಡು 180 ರನ್ಗಳನ್ನು ಗಳಿಸಿತ್ತು. ಆ ಮೂಲಕ ಎದುರಾಳಿ ರಾಜಸ್ಥಾನ್ ರಾಯಲ್ಸ್ಗೆ 181 ರನ್ಗಳ ಗುರಿಯನ್ನು ನೀಡಿತ್ತು.

ಮಾರ್ಕ್ರಮ್-ಬದೋನಿ ಅರ್ಧಶತಕ
ಲಖನೌ ಸೂಪರ್ ಜಯಂಟ್ಸ್ ಪರ ಅದ್ಭುತ ಪ್ರದರ್ಶನ ತೋರಿದ್ದ ಏಡೆನ್ ಮಾರ್ಕ್ರಮ್ 45 ಎಸೆತಗಳಲ್ಲಿ 66, ಆಯುಷ್ ಬದೋನಿ 34 ಎಸೆತಗಳಲ್ಲಿ 54 ರನ್ಗಳನ್ನು ಕಲೆ ಹಾಕಿದ್ದರು. ಆದರೆ, ಡೆತ್ ಓವರ್ಗಳಲ್ಲಿ ಅಬ್ಬರಿಸಿದ್ದ ಅಬ್ದುಲ್ ಸಮದ್ ಕೇವಲ 10 ಎಸೆತಗಳಲ್ಲಿ ಅಜೇಯ 30 ರನ್ಗಳನ್ನು ಬಾರಿಸಿದ್ದರು. ಇದರಲ್ಲಿ ಅವರು 4 ಸಿಕ್ಸರ್ ಬಾರಿಸಿದ್ದರು.

ರಾಜಸ್ಥಾನ್ ರಾಯಲ್ಸ್ : 178-5
ಬಳಿಕ 181 ರನ್ಗಳ ಗುರಿಯನ್ನು ಹಿಂಬಾಲಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ ಹಾಗೂ ರಿಯಾನ್ ಪರಾಗ್ ಅವರ ಬ್ಯಾಟಿಂಗ್ ಬಲದಿಂದ ಗೆಲುವಿನ ಸನಿಹ ಬಂದು ಕೇವಲ ಎರಡು ರನ್ಗಳಿಂದ ಸೋಲು ಅನುಭವಿಸಿತು. ತನ್ನ ಪಾಲಿನ 20 ಓವರ್ಗಳನ್ನು ಮುಗಿಸಿದರೂ 5 ವಿಕೆಟ್ ನಷ್ಟಕ್ಕೆ 178 ರನ್ಗಳಿಂದ ಸೀಮಿತವಾಯಿತು.

ಜೈಸ್ವಾಲ್, ವೈಭವ್ ಬ್ಯಾಟಿಂಗ್ ವ್ಯರ್ಥ
ಇನಿಂಗ್ಸ್ ಆರಂಭಿಸಿದ್ದ ಯಶಸ್ವಿ ಜೈಸ್ವಾಲ್ 52 ಎಸೆತಗಳಲ್ಲಿ 74 ರನ್, 20 ಎಸೆತಗಳಲ್ಲಿ 34 ರನ್ ಹಾಗೂ ರಿಯಾನ್ ಪರಾಗ್ 26 ಎಸೆತಗಳಲ್ಲಿ 39 ರನ್ ಗಳಿಸಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಆದರೆ, ರಾಜಸ್ಥಾನ ತಂಡದ ಗೆಲ್ಲುವ ಕನಸುನ್ನು ಆವೇಶ್ ಖಾನ್ ಭಗ್ನಗೊಳಿಸಿದರು.

ಆವೇಶ್ ಖಾನ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ
ರಾಜಸ್ಥಾನ್ ರಾಯಲ್ಸ್ ತಂಡ 17 ಓವರ್ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 156 ರನ್ಗಳನ್ನು ಗಳಿಸಿತ್ತು. ಕೊನೆಯ 3 ಓವರ್ಗಳಿಗೆ ಆರ್ಆರ್ಗೆ 25 ರನ್ ಅಗತ್ಯವಿತ್ತು. ಆದರೆ, 18ನೇ ಓವರ್ನಲ್ಲಿ ಅವೇಶ್ ಖಾನ್ ಕೇವಲ 5 ರನ್ ಕೊಟ್ಟು ಜೈಸ್ವಾಲ್ ಮತ್ತು ಪರಾಗ್ ಅವರನ್ನು ಔಟ್ ಮಾಡಿದರು. ಅಲ್ಲದೆ ಕೊನೆಯ ಓವರ್ನಲ್ಲಿ 9 ರನ್ ಬೇಕಿದ್ದಾಗ, ಕೇವಲ 6 ರನ್ ನೀಡಿ ಶಿಮ್ರಾನ್ ಹೆಟ್ಮಾಯರ್ರನ್ನು ಔಟ್ ಮಾಡಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.