BJP Protest: ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಆಕ್ರೋಶ; ಬೆಳಗಾವಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ
ಕಾಂಗ್ರೆಸ್ಸಿನ ರೈತ ವಿರೋಧಿ ನೀತಿಗಳಿಂದಾಗಿ ನಮ್ಮ ಅನ್ನದಾತರು ಬೀದಿಗೆ ಬರುವಂತಾಗಿದೆ. ರೈತಪರ ಕಾಳಜಿ ಪ್ರದರ್ಶಿಸದೆ, ಕಾಂಗ್ರೆಸ್ ಸರ್ಕಾರ ಪ್ರತಿಭಟನಾ ನಿರತರನ್ನು ಬಂಧಿಸುವ, ನಮ್ಮ ಧ್ವನಿ ಕುಗ್ಗಿಸುವ ದರ್ಪ ಮೆರೆದಿದೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ರೈತರೊಂದಿಗೆ ಬಿಜೆಪಿ ಪ್ರತಿಭಟನೆ. -
ಕಾಂಗ್ರೆಸ್ ಸರ್ಕಾರವು ರೈತವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಳಿಕ ರೈತರೊಂದಿಗೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಸೇರಿ ಹಲವು ಬಿಜೆಪಿ ನಾಯಕರು ಮತ್ತು ರೈತ ಮುಖಂಡರನ್ನು ಪೊಲೀಸರು ಬಂಧಿಸಿದರು.
ಪ್ರತಿಭಟನೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಕಾಂಗ್ರೆಸ್ಸಿನ ಈ 2.5 ವರ್ಷಗಳ ಆಡಳಿತದಲ್ಲಿ ಬಿಜೆಪಿ ಸರ್ಕಾರ ನೀಡುತ್ತಿದ್ದ ರೈತಪರ ಯೋಜನೆಗಳಿಗೆ ಬೆಂಕಿ ಹಚ್ಚಿದ್ದು ಮಾತ್ರವಲ್ಲದೆ, ರೈತರ ಆತ್ಮಹತ್ಯೆಗಳನ್ನು ಹೆಚ್ಚು ಮಾಡಿರುವುದೇ ಸಿದ್ದರಾಮಯ್ಯನವರ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ಕಿಡಿಕಾರಿದರು.
ರೈತರ ಸಂಕಷ್ಟವನ್ನು ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ.. ಧಿಕ್ಕಾರ... ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ರೈತರ ಸಂರಕ್ಷಣೆ ನಮ್ಮ ಬದ್ಧತೆ, ರೈತರ ಹಿತ ಕಾಯಲು, ಭಾರತೀಯ ಜನತಾ ಪಾರ್ಟಿ ಎಲ್ಲ ಹೋರಾಟಕ್ಕೂ ಸಿದ್ಧ. ಕಾಂಗ್ರೆಸ್ಸಿನ ರೈತ ವಿರೋಧಿ ನೀತಿಗಳಿಂದಾಗಿ ನಮ್ಮ ಅನ್ನದಾತರು ಬೀದಿಗೆ ಬರುವಂತಾಗಿದೆ ಎಂದು ಬಿಜೆಪಿ ನಾಯಕರು ಅಸಮಾಧಾನ ಹೊರಹಾಕಿದರು.
ರೈತಪರ ಕಾಳಜಿ ಪ್ರದರ್ಶಿಸದೆ, ಕಾಂಗ್ರೆಸ್ ಸರ್ಕಾರ ಪ್ರತಿಭಟನಾ ನಿರತರನ್ನು ಬಂಧಿಸುವ, ನಮ್ಮ ಧ್ವನಿ ಕುಗ್ಗಿಸುವ ದರ್ಪ ಮೆರೆದಿದೆ. ದುರಾಡಳಿತ, ಭ್ರಷ್ಟಾಚಾರ, ಜನವಿರೋಧಿ ನೀತಿ, ರೈತವಿರೋಧಿ ನಿಲುವುಗಳನ್ನು ಮುಂದುವರಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ. ರೈತರ ಹಿತರಕ್ಷಣೆ ನಿಟ್ಟಿನಲ್ಲಿ, ನಮ್ಮ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ ಎಂದು ಕಮಲ ನಾಯಕರು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ವಿರುದ್ಧ ಸಹಸ್ರಾರು ರೈತರೊಂದಿಗೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ತೆರಳಿದ ವೇಳೆ ಬಿಜೆಪಿಯ ನಾಯಕರು ಹಾಗೂ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಶಾಸಕರು, ವಿಧಾನಪರಿಷತ್ ಸದಸ್ಯರು, ಪಕ್ಷದ ಮುಖಂಡರು, ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ಪ್ರತಿಭಟನಾ ಸಮಾವೇಶ ನಡೆದ ಮಾಲಿನಿ ಸಿಟಿ ಮೈದಾನದಿಂದ ಪಾದಯಾತ್ರೆ ಆರಂಭಿಸಿ, ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಮುಂದಾದರು. 3 ಕಿ.ಮೀ ಕ್ರಮಿಸಿದ ಬಳಿಕ ಸರ್ವಿಸ್ ರಸ್ತೆ ದಾಟಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕುನುಗ್ಗಲು ಉಂಟಾಯಿತು. ಬ್ಯಾರಿಕೇಡ್ಗಳನ್ನು ಕಿತ್ತು ಸೌಧದತ್ತ ನುಗ್ಗಲು ಯತ್ನಿಸಿದ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
ಹೆದ್ದಾರಿ ಬಲಬದಿಯ ಸರ್ವಿಸ್ ರಸ್ತೆಯಲ್ಲೂ ರೈತರು ತಾಸುಗಟ್ಟಲೇ ಧರಣಿ ಕುಳಿತರು. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿಬೇಕು, ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರ ತೆರೆಯಬೇಕು ಎಂಬುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು. ಮುಖ್ಯಮಂತ್ರಿ ಅವರೇ ಸ್ಥಳಕ್ಕೆ ಬರುವವರೆಗೆ ಹೋರಾರ ಕೈ ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಇದರಿಂದ ಒಂದು ತಾಸು ವಾಹನ ಸಂಚಾರ ಬಂದ್ ಆಯಿತು.