ಸುದೀರ್ಘ ಅವಧಿಗೆ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಎರಡನೇ ನಾಯಕ ನರೇಂದ್ರ ಮೋದಿ: ನಂಬರ್ ಒನ್ ಪಟ್ಟ ಯಾರಿಗೆ?
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ಭಾರತದ ಪ್ರಧಾನಿಯಾಗಿದ್ದವರಲ್ಲಿ ಅತೀ ಹೆಚ್ಚು ಕಾಲ ಸೇವೆ ಸಲ್ಲಿಸಿದ ಎರಡನೇ ಪ್ರಧಾನಿಯಾಗಿ ಈಗ ಗುರುತಿಸಿಕೊಂಡಿದ್ದಾರೆ. ಜವಾಹರ್ ಲಾಲ್ ನೆಹರೂ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೇ ಸುದೀರ್ಘ ಅವಧಿಗೆ ದೇಶದ ಪ್ರಧಾನಿಯಾಗಿದ್ದಾರೆ. ಈ ಮೂಲಕ ಇಂದಿರಾ ಗಾಂಧಿ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಸಂಗ್ರಹ ಚಿತ್ರ -
ಭಾರತ ಸ್ವಾತಂತ್ರ್ಯಗೊಂಡ ಮೇಲೆ ಸುದೀರ್ಘ ಅವಧಿಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ 10 ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇಯವರಾಗಿ ಗುರುತಿಸಿಕೊಂಡಿದ್ದಾರೆ. ಇಂದಿರಾ ಗಾಂಧಿ ಅವರ ದಾಖಲೆಯನ್ನು ಮುರಿದು ಜವಾಹರ್ ಲಾಲ್ ನೆಹರೂ ಬಳಿಕ ಪ್ರಧಾನಿ ಮೋದಿ ಅವರೇ ದೇಶದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿಯಾಗಿದ್ದಾರೆ.
ಭಾರತವು ಈವರೆಗೆ ಒಟ್ಟು 14 ಪ್ರಧಾನ ಮಂತ್ರಿಗಳನ್ನು ಕಂಡಿದೆ. ಇವರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಇಂದಿರಾ ಗಾಂಧಿಯನ್ನು ಹಿಂದಿಕ್ಕಿ ಭಾರತದ ಅತ್ಯಂತ ದೀರ್ಘಾವಧಿಯ ಪ್ರಧಾನಿಯಾಗಿದ್ದಾರೆ. ಪ್ರಧಾನಿ ಮೋದಿ ಅವರ ಈ ಸಾಧನೆಯು ಕಾಂಗ್ರೆಸ್ ಯುಗದ ಪ್ರಾಬಲ್ಯದಿಂದ ಬಿಜೆಪಿ ನೇತೃತ್ವದ ಪರಿವರ್ತನಾ ಆಡಳಿತ ಮಾದರಿಗೆ ಆಗಿರುವ ಬದಲಾವಣೆಯನ್ನು ಸೂಚಿಸುತ್ತದೆ.
ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಸುಮಾರು 17 ವರ್ಷಗಳ ಕಾಲ ಪ್ರಧಾನಿಯಾಗಿದ್ದರು. 1947ರ ಆಗಸ್ಟ್ 15ರಿಂದ 1964ರ ಮೇ 27ರ ವರೆಗೆ ಪ್ರಧಾನಿಯಾಗಿದ್ದ ಅವರ ನಾಯಕತ್ವವು ಸ್ವಾತಂತ್ರ್ಯದ ಅನಂತರ ವೈವಿಧ್ಯಮಯ ರಾಷ್ಟ್ರವನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.
2014ರಲ್ಲಿ ಅಧಿಕಾರ ವಹಿಸಿಕೊಂಡ ಪ್ರಧಾನಿ ಮೋದಿ 2014ರ ಮೇ 26ರಿಂದ ಅಧಿಕಾರದಲ್ಲಿದ್ದಾರೆ. ಇವರು ಇಂದಿರಾ ಗಾಂಧಿಯವರ ಬಳಿಕ ನಿರಂತರ ಅಧಿಕಾರಾದಲ್ಲಿರುವ ಪ್ರಧಾನಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಸ್ವಚ್ಛ ಭಾರತ್ ಮಿಷನ್ನಂತಹ ಯೋಜನೆಗಳಿಂದ ಭಾರತದ ರಾಜಕೀಯ ಭೂದೃಶ್ಯವನ್ನು ಸಂಪೂರ್ಣ ಬದಲಾಯಿಸಿದ್ದಾರೆ.
ಭಾರತದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಿಯಾಗಿರುವ ಇಂದಿರಾ ಗಾಂಧಿ 1966ರ ಜನವರಿ 24ರಿಂದ 1977ರ ಮಾರ್ಚ್ 24ರವರೆಗೆ ಅಧಿಕಾರದಲ್ಲಿದ್ದು, ಹಸಿರು ಕ್ರಾಂತಿ, ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದರು. ಇವರ ಅವಧಿಯು ಅಧಿಕಾರದ ಕೇಂದ್ರೀಕರಣ ಮತ್ತು ರಾಷ್ಟ್ರೀಯ ಏಕತೆಯನ್ನು ಬಲಪಡಿಸುವ ಪ್ರಯತ್ನವಾಗಿ ಗುರುತಿಸಲ್ಪಟ್ಟಿದೆ.
ಅರ್ಥಶಾಸ್ತ್ರಜ್ಞರಾದ ಮನಮೋಹನ್ ಸಿಂಗ್ ಅವರು 2004ರ ಮೇ 22ರಿಂದ 2014ರ ಮೇ 26ರವರೆಗೆ ಪ್ರಧಾನಿಯಾಗಿದ್ದು, ಭಾರತದ ಆರ್ಥಿಕ ಉದಾರೀಕರಣವನ್ನು ಹಣಕಾಸು ಸಚಿವರಾಗಿ ಮುನ್ನಡೆಸಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ದೇಶವು ಸ್ಥಿರವಾದ ಆರ್ಥಿಕ ಬೆಳವಣಿಗೆ, ಜಾಗತಿಕ ಸಂಬಂಧಗಳ ವಿಸ್ತರಣೆ, ಸಾಮಾಜಿಕ ಕಲ್ಯಾಣ ಯೋಜನೆಗಳಿಂದ ಗುರುತಿಸಲ್ಪಟ್ಟಿತು.
ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದಲ್ಲಿ ರಾಷ್ಟ್ರೀಯತೆ ಹೆಚ್ಚು ಪ್ರಬಲವಾಯಿತು. 1998 ರಲ್ಲಿ ಪರಮಾಣು ಪರೀಕ್ಷೆ ಇವರ ಆಡಳಿತದ ಒಂದು ಮೈಲುಗಲ್ಲು. 1998ರ ಮಾರ್ಚ್ 19ರಿಂದ 2004ರ ಮೇ 22ರ ವರೆಗೆ ಇವರು ದೇಶದ ಪ್ರಧಾನಿಯಾಗಿ ಅಧಿಕಾರದಲ್ಲಿದ್ದರು.
ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ಅಧಿಕಾರಕ್ಕೆ ಬಂದ ರಾಜೀವ್ ಗಾಂಧಿ ಭಾರತದ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದರು. ಇವರ ಕಾಲದಲ್ಲಿ ತಾಂತ್ರಿಕ ಪ್ರಗತಿ, ಆಧುನೀಕೃತ ಟೆಲಿಕಾಂ ಮೂಲಸೌಕರ್ಯ ಮತ್ತು ಆರ್ಥಿಕ ಸುಧಾರಣೆಗಳಾಯಿತು. 1984ರ ಅಕ್ಟೋಬರ್ 31ರಿಂದ 1989ರ ಡಿಸೆಂಬರ್ 2ರವರೆಗೆ ಇವರು ಅಧಿಕಾರದಲ್ಲಿದ್ದರು.
ಭಾರತೀಯ ಆರ್ಥಿಕ ಸುಧಾರಣೆಗಳ ಪಿತಾಮಹ ಎಂದೇ ಕರೆಯಲ್ಪಡುವ ಪಿ.ವಿ. ನರಸಿಂಹ ರಾವ್ ಅವರ ಸರ್ಕಾರವು ಆರ್ಥಿಕತೆಯನ್ನು ಉದಾರೀಕರಣಗೊಳಿಸಿತು. ಪರವಾನಗಿ ನಿಯಂತ್ರಣಗಳನ್ನು ಕಡಿಮೆ ಮಾಡಿ ದೇಶದಲ್ಲಿ ವಿದೇಶಿ ಹೂಡಿಕೆಗೆ ಅಹ್ವಾನ ನೀಡಿತ್ತು.
ಇವರಿಷ್ಟೇ ಅಲ್ಲ ಕಾಂಗ್ರೆಸ್ಸೇತರ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ, ಅಲ್ಪಾವಧಿಯಾದರೂ ಪರಿಣಾಮಕಾರಿ ಆಡಳಿತ ನಡೆಸಿದ ಲಾಲ್ ಬಹದ್ದೂರ್ ಶಾಸ್ತ್ರಿ , ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿಯನ್ನು ಪರಿಚಯಿಸುವ ಮೂಲಕ ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದ ವಿಶ್ವನಾಥ್ ಪ್ರತಾಪ್ ಸಿಂಗ್ ಅವರು ದೇಶದಲ್ಲಿ ಸುದೀರ್ಘ ಅವಧಿಗೆ ಪ್ರಧಾನಿಯಾಗಿ ಗುರುತಿಸಿಕೊಂಡ ಹತ್ತು ನಾಯಕರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.