ಕಲರ್ಸ್ ಕನ್ನಡ 'ಅನುಬಂಧ ಅವಾರ್ಡ್ಸ್': ಕಿರುತೆರೆ ಕಲಾವಿದರ ಸಂಭ್ರಮಕ್ಕೆ ಮೆರುಗು ತುಂಬಿದ ಸ್ಯಾಂಡಲ್‌ವುಡ್ ದಿಗ್ಗಜರು
ಕನ್ನಡ ಕಿರುತೆರೆಯ ಜನಪ್ರಿಯ 'ಕಲರ್ಸ್ ಕನ್ನಡ' ವಾಹಿನಿ ತನ್ನ 12ನೇ ವರ್ಷದ 'ಅನುಬಂಧ ಅವಾರ್ಡ್ಸ್' ಸಂಭ್ರಮಕ್ಕೆ ಸಜ್ಜಾಗಿದೆ. ಜನವರಿ 24, 25 ಮತ್ತು 26ರಂದು ಸತತ ಮೂರು ದಿನಗಳ ಕಾಲ ಸಂಜೆ 7ಕ್ಕೆ ಈ ಅದ್ಧೂರಿ ಕಾರ್ಯಕ್ರಮ ಪ್ರಸಾರವಾಗಲಿದ್ದು, ಮನರಂಜನೆಯ ಮಹಾಪೂರವೇ ಹರಿಯಲಿದೆ. ಈ ಬಾರಿಯ ಅವಾರ್ಡ್ಸ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಅನುಬಂಧ ಅವಾರ್ಡ್ಸ್ ಕೇವಲ ಒಂದು ಪ್ರಶಸ್ತಿ ಪ್ರದಾನ ಸಮಾರಂಭವಲ್ಲ, ಬದಲಿಗೆ ಕಲರ್ಸ್ ಕನ್ನಡ ಮತ್ತು ಅದರ ಕೋಟ್ಯಂತರ ವೀಕ್ಷಕರ ನಡುವಿನ ಅವಿನಾಭಾವ ಸಂಬಂಧದ ಸಂಭ್ರಮ. ನಮ್ಮ ಕಥೆಗಳನ್ನು ತಮ್ಮದೇ ಕಥೆಗಳಂತೆ ಸ್ವೀಕರಿಸಿ ಅಪ್ಪಿಕೊಂಡಿರುವ ಪ್ರೇಕ್ಷಕರು ಮತ್ತು ನಮ್ಮ ನಡುವಿನ ಅಳಿಸಲಾಗದ ಬಂಧಕ್ಕೆ ಸಲ್ಲುವ ಗೌರವವೇ ಈ 'ಅನುಬಂಧ ಅವಾರ್ಡ್ಸ್'.
ಮುಖ್ಯಮಂತ್ರಿ ಚಂದ್ರುಗೆ ವಿಶೇಷ ಗೌರವ
ಕಲರ್ಸ್ ಕನ್ನಡದ 'ಭಾಗ್ಯಲಕ್ಷ್ಮೀ' ಧಾರಾವಾಹಿಯ ಇಬ್ಬರು ಪ್ರಮುಖ ಕಲಾವಿದರು ಈ ಬಾರಿ ವಿಶೇಷ ಮೈಲಿಗಲ್ಲು ತಲುಪಿದ್ದಾರೆ. ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಬಣ್ಣದ ಲೋಕದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ. ಈ ಸಾಧನೆಯನ್ನು ಗುರುತಿಸಿ ವೇದಿಕೆಯ ಮೇಲೆ ಅದ್ಧೂರಿಯಾಗಿ ಗೌರವ ಸಲ್ಲಿಸಲಾಯಿತು.
ರವಿಯನ್ನು ಅಪ್ಪಿಕೊಂಡ ಚಂದ್ರು
ವೇದಿಕೆ ಮೇಲೆ ನಟ ರವಿಚಂದ್ರನ್ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡ ಮುಖ್ಯಮಂತ್ರಿ ಚಂದ್ರು
ಕಲರ್ಸ್ ವೇದಿಕೆ ಮೇಲೆ ಪ್ರದೀಪ್ ಈಶ್ವರ್
ಶಾಸಕರಾದ ಪ್ರದೀಪ್ ಈಶ್ವರ್ ರಾಜಕೀಯ ಭಾಷಣ ಬದಿಗಿಟ್ಟು, ಅನುಬಂಧ ವೇದಿಕೆ ಮೇಲೆ ಕಾಮಿಡಿ ಕಚಗುಳಿ ಇಡುತ್ತಲೇ ಕಲರ್ಸ್ ಕಲಾವಿದ ಬಳಗಕ್ಕೆ ಮೋಟಿವೇಟ್ ಸಹ ಮಾಡಿದರು.
ರವಿಚಂದ್ರನ್ ಸಮ್ಮುಖದಲ್ಲಿ ಸಾವಿರದ ಸಂಭ್ರಮ
ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿಸಿದ 'ರಾಮಾಚಾರಿ' ಧಾರಾವಾಹಿ 1000 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲು 'ಕ್ರೇಜಿಸ್ಟಾರ್' ವಿ. ರವಿಚಂದ್ರನ್ ಆಗಮಿಸಿದ್ದು ವಿಶೇಷವಾಗಿತ್ತು. ಸೀನಿಯರ್ ರಾಮಾಚಾರಿ ಮತ್ತು ಜೂನಿಯರ್ ರಾಮಾಚಾರಿ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದು ವೀಕ್ಷಕರಿಗೆ ಹಬ್ಬದಂತಿರಲಿದೆ.
ರಾಜ್ ಬಿ. ಶೆಟ್ಟಿಗೆ ಅಮ್ಮನ ಸರ್ಪ್ರೈಸ್
ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರಿಗೆ ವಾಹಿನಿಯು ಅವರ ತಾಯಿಯನ್ನು ವೇದಿಕೆಗೆ ಕರೆಸುವ ಮೂಲಕ ಸರ್ಪ್ರೈಸ್ ನೀಡಿದೆ.
ಚಂದನವನದ ಚೆಂದದ ಜೋಡಿಗಳ ಆಗಮನ
ಇನ್ನು ಇದಷ್ಟೇ ಅಲ್ಲ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿ ಜೋಡಿ ಈ ಸಲದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದ ಕಳೆ ಹೆಚ್ಚಿಸಿದ್ದರು. ನಿರ್ದೇಶಕ ತರುಣ್ ಸುಧೀರ್- ಸೋನಲ್ ಮೊಂತೇರೋ ಮುದ್ದಾಗಿ ಕಾನಣಿಸಿಕೊಂಡರು.
'ಸು ಫ್ರಂ ಸೋ' ಚಿತ್ರತಂಡಕ್ಕೆ ವಿಶೇಷ ಪ್ರಶಸ್ತಿ
ಕಳೆದ ವರ್ಷ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ 'ಸು ಫ್ರಂ ಸೋ' ಸಿನಿಮಾ ತಂಡಕ್ಕೂ ಈ ಬಾರಿ ಅನುಬಂಧದ ವೇದಿಕೆಯಲ್ಲಿ ಮನ್ನಣೆ ಸಿಕ್ಕಿದೆ. ಚಿತ್ರಮಂದಿರ ಹಾಗೂ ಒಟಿಟಿಯಲ್ಲಿ ಸದ್ದು ಮಾಡಿದ್ದ ಈ ಚಿತ್ರದ ನಿರ್ದೇಶಕ ಜೆ.ಪಿ. ತೂಮಿನಾಡ್ ಮತ್ತು ಕಲಾವಿದರಾದ ಶನೀಲ್ ಗೌತಮ್, ಪುಷ್ಪರಾಜ್ ಬೋಳಾರ್ ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದರು.
37 ಪ್ರಶಸ್ತಿಗಳು, 15ಕ್ಕೂ ಹೆಚ್ಚು ಮನಮೋಹಕ ಪ್ರದರ್ಶನಗಳಿವೆ
ಈ ಬಾರಿಯ ಕಾರ್ಯಕ್ರಮದಲ್ಲಿ ಒಟ್ಟು 37 ಪ್ರಶಸ್ತಿಗಳನ್ನು ವಿತರಿಸಲಾಗುತ್ತಿದ್ದು, 15ಕ್ಕೂ ಹೆಚ್ಚು ಮನಮೋಹಕ ಪ್ರದರ್ಶನಗಳಿವೆ. ಗಿಚ್ಚಿ ಗಿಲಿಗಿಲಿ ತಂಡದ ಕಾಮಿಡಿ ಸ್ಕಿಟ್‌ಗಳು ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿವೆ.
ವೇದಿಕೆ ಮೇಲೆ ಮಿಂಚಿದ ಅನು - ರಘು ಜೋಡಿ
ಅನು ಪ್ರಭಾಕರ್- ರಘು ಮುಖರ್ಜಿ, ಅನುಬಂಧ ವೇದಿಕೆ ಮೇಲೆ ಆಗಮಿಸಿ, ತಮ್ಮ ಮತ್ತು ಕಲರ್ಸ್ ಬಂಧದ ಬಗ್ಗೆ ಮಾತನಾಡಿದರು. ಇದಷ್ಟೇ ಅಲ್ಲದೇ ಇನ್ನೂ ಹತ್ತು ಹಲವು ಕೌತುಕಗಳು ಈ ಸಲದ ಅನುಬಂಧ ಅವಾರ್ಡ್ಸ್ ಶೋನ ಹೈಲೈಟ್.
ಪುನೀತ್ ಹೆಸರಿನ 'ಕಲರ್ಸ್ ಕನ್ನಡಿಗ' ಪ್ರಶಸ್ತಿ ಪ್ರದಾನ
ಪ್ರತಿವರ್ಷದಂತೆ ಈ ಬಾರಿಯೂ ದಿ. ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ನೀಡಲಾಗುವ 'ಕಲರ್ಸ್ ಕನ್ನಡಿಗ' ಪ್ರಶಸ್ತಿಯನ್ನು ಬಾಲ್ಯ ವಿವಾಹದ ವಿರುದ್ಧ ಹೋರಾಡುತ್ತಿರುವ ಬಾಗಲಕೋಟೆಯ ಗಟ್ಟಿಗಿತ್ತಿ ಗುರಮ್ಮ ಸಂಕಿನಮಠ ಅವರಿಗೆ ನೀಡಲಾಗಿದೆ. ಅವರ ಹೋರಾಟದ ಕತೆಯನ್ನು ಕೇಳಿ ಅಲ್ಲಿದ್ದ ಕಲಾವಿದರೆಲ್ಲರೂ ಭಾವುಕರಾದ ಕ್ಷಣ ಕಾರ್ಯಕ್ರಮದ ಅತ್ಯಂತ ಹೃದಯಸ್ಪರ್ಶಿ ಭಾಗವಾಗಿತ್ತು.
ನಾ. ಸೋಮೇಶ್ವರ್ ಪ್ರಶ್ನೆಗೆ ಥಟ್ ಅಂತ ಹೇಳಿದ ಕಲಾವಿದರು
ʻಥಟ್ ಅಂತ ಹೇಳಿʼ ಕಾರ್ಯಕ್ರಮದ ಮೂಲಕ ನಾಡಿನಾದ್ಯಂತ ಖ್ಯಾತಿ ಪಡೆದ ಡಾ. ನಾ. ಸೋಮೇಶ್ವರ್, ಇದೀಗ ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್ ವೇದಿಕೆ ಮೇಲೆ, ಗಂಭೀರವಾದ ಖಡಕ್ ಪ್ರಶ್ನೆ ಕೇಳುವ ಬದಲು ಫನ್ನಿಯಾಗಿಯೇ ಪ್ರಶ್ನೆ ಕೇಳಿ, ಕಲಾವಿದರಿಂದ ಸರಿ ಉತ್ತರ ಪಡೆದಿದ್ದಾರೆ.