IPL 2025: ಆರ್ಸಿಬಿಗೆ ಇನ್ನು ಗೆಲುವು ಬೇಕು? 7 ತಂಡಗಳ ಪ್ಲೇಆಫ್ಸ್ ಲೆಕ್ಕಾಚಾರ!
IPL 2025 Playoffs scenarios: ಮೇ 17 ರಂದು ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಕಾದಾಟ ನಡೆಸುವ ಮೂಲಕ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಪುನರಾರಂಭವಾಗಲಿದೆ. ಲೀಗ್ ಹಂತದಲ್ಲಿ ಇನ್ನೂ 17 ಪಂದ್ಯಗಳು ಬಾಕಿ ಇವೆ. ಮೂರು ತಂಡಗಳು ಈಗಾಗಲೇ ಪ್ಲೇಆಫ್ಸ್ ರೇಸ್ನಿಂದ ಹೊರ ಬಿದ್ದಿವೆ. ಇದೀಗ ನಾಕ್ಔಟ್ ಹಂತಕ್ಕೆ ಅರ್ಹತೆ ಪಡೆಯಲು 7 ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತದೆ.



7 ತಂಡಗಳ ಪ್ಲೇಆಫ್ಸ್ ಲೆಕ್ಕಾಚಾರ ಹೇಗಿದೆ?
ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಲಿಮಿನೇಟ್ ಆಗಿವೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟನ್ಸ್ ಸೇರಿದಂತೆ ಒಟ್ಟು 7 ತಂಡಗಳ ಪ್ಲೇಆಫ್ಸ್ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿವೆ. ಈ ಏಳೂ ತಂಡಗಳ ಪ್ಲೇಆಫ್ಸ್ ಲೆಕ್ಕಾಚಾರವನ್ನು ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

1. ಗುಜರಾತ್ ಟೈಟನ್ಸ್
ಗುಜರಾತ್ ಟೈಟನ್ಸ್ ತಂಡ 11 ಪಂದ್ಯಗಳಿಂದ 16 ಅಂಕಗಳನ್ನು ಕಲೆ ಹಾಕಿದ್ದು, ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಜಿಟಿ ಇನ್ನುಳಿದ ಮೂರೂ ಪಂದ್ಯಗಳನ್ನು ಗೆದ್ದರೆ 22 ಅಂಕಗಳ್ನು ಕಲೆ ಹಾಕಲಿದೆ. ಇನ್ನುಳಿದ ಮೂರರಲ್ಲಿ ಒಂದು ಗೆದ್ದರೂ ಗುಜರಾತ್ ನಾಕ್ಔಟ್ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಎರಡು ಗೆದ್ದರೂ ಜಿಟಿ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸಲಿದೆ.

2. ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 11 ಪಂದ್ಯಗಳಿಂದ 16 ಅಂಕಗಳನ್ನು ಕಲೆ ಹಾಕದ್ದು, ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಆರ್ಸಿಬಿಗೆ ಇನ್ನೂ ಮೂರು ಪಂದ್ಯಗಳನ್ನು ಆಡುವುದು ಬಾಕಿ ಇದೆ. ಇವುಗಳಲ್ಲಿ ಒಂದರಲ್ಲಿ ಗೆದ್ದರೆ ಆರ್ಸಿಬಿ ಪ್ಲೇಆಫ್ಸ್ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಎರಡರಲ್ಲಿ ಗೆದ್ದರೆ ಆರ್ಸಿಬಿ ಅಗ್ರ ಎರಡು ಸ್ಥಾನಗಳಲ್ಲಿ ಅರ್ಹತೆ ಪಡೆಯಲಿದೆ.

3. ಪಂಜಾಬ್ ಕಿಂಗ್ಸ್
ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಆಡಿದ 11 ಪಂದ್ಯಗಳಲ್ಲಿ 15 ಅಂಕಗಳನ್ನು ಕಲೆ ಹಾಕಿದೆ. ಪಂಜಾಬ್ಗೆ ಇನ್ನೂ ಮೂರು ಪಂದ್ಯಗಳು ಬಾಕಿ ಇದ್ದು, 21 ಅಂಕಗಳನ್ನು ಕಲೆ ಹಾಕಲು ಅವಕಾಶವಿದೆ. ಎರಡು ಪಂದ್ಯಗಳನ್ನು ಗೆದ್ದರೆ ಪಂಜಾಬ್ ಕಿಂಗ್ಸ್ ಪ್ಲೇಆಫ್ಸ್ಗೆ ತನ್ನ ಸ್ಥಾನವನ್ನು ಅಲಂಕರಿಸಲಿದೆ.

4. ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್ ತಂಡ 12 ಪಂದ್ಯಗಳಲ್ಲಿ 14 ಅಂಕಗಳನ್ನು ಕಲೆ ಹಾಕಿದೆ. ಇನ್ನು ಆಡುವುದು ಎರಡು ಪಂದ್ಯಗಳು ಬಾಕಿ ಇದೆ. ಅವರು 18 ಅಂಕಗಳನ್ನು ಪಡೆಯುವ ಸಾಧ್ಯತೆ ಇದೆ. ಪ್ಲೇಆಫ್ಸ್ಗೆ ಅರ್ಹತ ಪಡೆಯಬೇಕೆಂದರೆ ಮುಂಬೈ ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲ್ಲಬೇಕಾದ ಅಗತ್ಯವಿದೆ. ಒಂದು ವೇಳೆ ಒಂದರಲ್ಲಿ ಸೋತರೂ ಐದು ಬಾರಿ ಚಾಂಪಿಯನ್ಸ್ ಪ್ಲೇಆಫ್ಸ್ ಭವಿಷ್ಯ ಇತರೆ ತಂಡಗಳನ್ನು ಅವಲಂಬಿಸಬೇಕಾಗುತ್ತದೆ.

5. ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿದ 11 ಪಂದ್ಯಗಳಿಂದ 13 ಅಂಕಗಳನ್ನು ಕಲೆ ಹಾಕಿದೆ. ಇನ್ನೂ 3 ಪಂದ್ಯಗಳು ಬಾಕಿ ಇರುವ ಕಾರಣ, ಡೆಲ್ಲಿಗೆ 19 ಅಂಕಗಳನ್ನು ಕಲೆ ಹಾಕಲು ಸಾಧ್ಯತೆ ಇದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಪಡೆದರೆ, ಡೆಲ್ಲಿ ಪ್ಲೇಆಫ್ಸ್ಗೆ ಅರ್ಹತೆ ಪಡೆಯಲಿದೆ. ಆದರೆ, ಪಂಜಾಬ್ ಕಿಂಗ್ಸ್ ವಿರುದ್ದ ಮುಂಬೈ ಇಂಡಿಯನ್ಸ್ ಸೋಲಬೇಕಾಗುತ್ತದೆ.

6. ಕೋಲ್ಕತಾ ನೈಟ್ ರೈಡರ್ಸ್
ಕೋಲ್ಕತಾ ನೈಟ್ ರೈಡರ್ಸ್ ತಂಡ ಆಡಿದ 12 ಪಂದ್ಯಗಳಿಂದ 11 ಅಂಕಗಳನ್ನು ಕಲೆ ಹಾಕಿದೆ. ಇನ್ನುಳಿದ ಎರಡೂ ಪಂದ್ಯಗಳನ್ನು ಉತ್ತಮ ರನ್ರೇಟ್ನೊಂದಿಗೆ ಗೆದ್ದರೂ ಕೆಕೆಆರ್ನ ಪ್ಲೇಆಫ್ಸ್ ಭವಿಷ್ಯ ಇತರೆ ತಂಡಗಳ ಫಲಿತಾಂಶವನ್ನು ಅಲಂಬಿಸಿದೆ. ಇದರಲ್ಲಿ ಒಂದು ಪಂದ್ಯದಲ್ಲಿ ಸೋತರೂ ಕೆಕೆಆರ್ ಟೂರ್ನಿಯಿಂದ ಹೊರಬೀಳಲಿದೆ.

7. ಲಖನೌ ಸೂಪರ್ ಜಯಂಟ್ಸ್
ಲಖನೌ ಸೂಪರ್ ಜಯಂಟ್ಸ್ ತಂಡ ಆಡಿದ 11 ಪಂದ್ಯಗಳಿಂದ 10 ಅಂಕಗಳನ್ನು (NRR -0.469) ಕಲೆ ಹಾಕಿದೆ. ಇನ್ನುಳಿದ ಮೂರು ಪಂದ್ಯಗಳು ಬಾಕಿ ಇರುವ ಕಾರಣ ಎಲ್ಎಸ್ಜಿ ಒಟ್ಟು 16 ಅಂಕಗಳನ್ನು ಸೇರಿಸಬಹುದು. ಆದರೂ ಎಲ್ಎಸ್ಜಿ ತಂಡದ ಪ್ಲೇಆಫ್ಸ್ ಭವಿಷ್ಯ ಇತರೆ ತಂಡಗಳ ಫಲಿತಾಂಶವನ್ನು ಅವಲಂಭಿಸಿದೆ. ಇದರಲ್ಲಿ ಒಂದರಲ್ಲಿ ಸೋತರೂ ಲಖನೌ ಅಭಿಯಾನ ಮುಗಿಯಲಿದೆ.