ಐಪಿಎಲ್ ಇತಿಹಾಸದಲ್ಲಿಯೇ ಪಂದ್ಯದಲ್ಲಿ ಎರಡೂ ತಂಡಗಳು ಆಲ್ಔಟ್ ಆದ 5 ಪ್ರಸಂಗಗಳು!
ಚಂಡೀಗಢದಲ್ಲಿ ಏಪ್ರಿಲ್ 15 ರಂದು ನಡೆದಿದ್ದ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಣ ಕಡಿಮೆ ಸ್ಕೋರಿಂಗ್ ರೋಮಾಂಚಕ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಎರಡೂ ತಂಡಗಳು ಆಲ್ ಔಟ್ ಆಗಿದ್ದವು. ಆದರೆ ಈ ಪಂದ್ಯವನ್ನು ಪಂಜಾಬ್ ಕಿಂಗ್ಸ್ 16 ರನ್ಗಳಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡ 111 ರನ್ಗಳಿಗೆ ಆಲ್ಔಟ್ ಆಗಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಕೇವಲ 95 ರನ್ಗಳಿಗೆ ಆಲ್ಔಟ್ ಆಗಿತ್ತು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಕಡಿಮೆ ಮೊತ್ತಕ್ಕೆ ಎದುರಾಳಿ ತಂಡವನ್ನು ಕಟ್ಟಿ ಹಾಕಿದ ಮೊದಲ ತಂಡ ಎಂಬ ದಾಖಲೆಯನ್ನು ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಬರೆದಿದೆ.



ಪಂದ್ಯವೊಂದರಲ್ಲಿ ಎರಡೂ ತಂಡಗಳು ಆಲ್ಔಟ್ ಆದ ಘಟನೆಗಳು
ಐಪಿಎಲ್ ಟೂರ್ನಿಯ ಇತಿಹಾಸದಲ್ಲಿಯೇ ಪಂದ್ಯವೊಂದರಲ್ಲಿ ಎರಡೂ ತಂಡಗಳು ಆಲ್ಔಟ್ ಆಗಿರುವ ಘಟನೆಗಳು ನಡೆದಿವೆ. 2008 ರಿಂದ 2025ರ ಐಪಿಎಲ್ ಟೂರ್ನಿಗಳವರೆಗೂ ಪಂದ್ಯವೊಂದರಲ್ಲಿ ಎರಡೂ ತಂಡಗಳು ಆಲ್ಔಟ್ ಆದ ಐದು ಘಟನೆಗಳನ್ನು ಇಲ್ಲಿ ವಿವರಿಸಲಾಗಿದೆ. ಈ ಘಟನೆಗಳಿಗೆ ಆರ್ಸಿಬಿ, ಕೆಕೆಆರ್, ಮುಂಬೈ ಸೇರಿದಂತೆ ಹಲವು ತಂಡಗಳು ಭಾಗಿಯಾಗಿವೆ.

ಕೆಕೆಆರ್ vs ಆರ್ಸಿಬಿ, 2017
2017ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಆಲ್ ಔಟ್ ಆಗಿದ್ದವು. ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್ 131 ರನ್ ಗಳಿಗೆ ಆಲ್ಔಟ್ ಆಗಿತ್ತು. ಬಳಿಕ 132 ರನ್ಗಳ ಗುರಿ ಹಿಂಬಾಲಿಸಿದ್ದ ಆರ್ಸಿಬಿ ಕೇವಲ 49 ರನ್ಗಳಿಗೆ ಆಲೌಟ್ ಆಗಿತ್ತು.

ಹೈದರಾಬಾದ್ vs ಮುಂಬೈ, 2018
2018ರ ಐಪಿಎಲ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ನಡೆಸಿ ಕೇವಲ 118 ರನ್ಗಳಿಗೆ ಆಲ್ಔಟ್ ಆಗಿತ್ತು. ನಂತರ 119 ರನ್ಗಳ ಸಾಧಾರಣ ಗುರಿಯನ್ನು ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್ 18.5 ಓವರ್ಗಳಲ್ಲಿ 87 ರನ್ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ ಈ ಲೋಸ್ಕೋರಿಂಗ್ ಪಂದ್ಯವನ್ನು ಸನ್ರೈಸರ್ಸ್ ಹೈದರಾಬಾದ್ ಗೆದ್ದುಕೊಂಡಿತ್ತು.

ಪಂಜಾಬ್ vs ಕೋಲ್ಕತ್ತಾ, 2025
ಕಳೆದ ಮಂಗಳವಾರ (ಏಪ್ರಿಲ್ 15) ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆದಿತ್ತು. ಚಂಡೀಗಢದ ಬ್ಯಾಟಿಂಗ್ ಪಿಚ್ನಲ್ಲಿ ರನ್ ಹೊಳೆ ಹರಿಯಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ 111 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಕೆಕೆಆರ್ ಕೇವಲ 95 ರನ್ಗಳಿಗೆ ಆಲೌಟ್ ಆಗಿತ್ತು.

ಕೋಲ್ಕತ್ತಾ vs ಮುಂಬೈ, 2024
2024ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಆಲ್ ಔಟ್ ಆಗಿದ್ದವು. ಮೊದಲ ಇನಿಂಗ್ಸ್ನಲ್ಲಿ ಕೆಕೆಆರ್ 169 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಮುಂಬೈ ಇಂಡಿಯನ್ಸ್ 18.5 ಓವರ್ಗಳಲ್ಲಿ 145 ರನ್ಗಳಿಗೆ ಸರ್ವಪತನ ಕಂಡಿತ್ತು.

ರಾಜಸ್ಥಾನ್ ರಾಯಲ್ಸ್ vs ಡೆಕ್ಕನ್ ಚಾರ್ಜರ್ಸ್, 2010
2010ರ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಕ್ಕನ್ ಚಾರ್ಜರ್ಸ್ ಕಾದಾಟ ನಡೆಸಿದ್ದವು. ರಾಜಸ್ಥಾನ್ ತಂಡ ಪ್ರಥಮ ಇನಿಂಗ್ಸ್ನಲ್ಲಿ 159 ರನ್ಗಳಿಗೆ ಆಲೌಟ್ ಆಗಿತ್ತು. ಪ್ರತಿಯಾಗಿ ಡೆಕ್ಕನ್ ಚಾರ್ಜರ್ಸ್ 19.5 ಓವರ್ಗಳಲ್ಲಿ 157 ರನ್ ಸರ್ವಪತನ ಕಂಡಿತ್ತು. ಅಂತಿಮವಾಗಿ ರಾಜಸ್ಥಾನ್ 2 ರನ್ ರೋಚಕ ಗೆಲುವು ಸಾಧಿಸಿತ್ತು.