ಶಬರಿಮಲೆಗೆ ಮಹಿಳೆಯರಿಗೆ ನಿಷೇಧವಾದ್ರೆ ಈ ದೇವಾಲಯಗಳಿಗೆ ಪುರುಷರು ಪ್ರವೇಶಿಸುವಂತಿಲ್ಲ; ಇಲ್ಲಿದೆ ದೇಶದ ವಿಶಿಷ್ಟ ದೇವಸ್ಥಾನಗಳ ವಿವರ
ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯಕ್ಕೆ ಸಂಬಂಧಿಸಿ ಕೇರಳದ ಶಬರಿಮಲೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ದೇಶಾದ್ಯಂತ ಇರುವ ಹಲವು ದೇವಾಲಯಗಳಲ್ಲಿ ಪುರುಷರಿಗೆ ಕೂಡ ಪ್ರವೇಶ ನಿಷೇಧಿಸಿರುವ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಮೆಹ್ತಾ ಅವರು ನ್ಯಾಯಾಲಯದಲ್ಲಿ ಉಲ್ಲೇಖಿಸಿರುವ ಆ ದೇವಾಲಯಗಳು ಯಾವುದು ಇಲ್ಲಿದೆ ಸಂಪೂರ್ಣ ಮಾಹಿತಿ.
ಸಂಗ್ರಹ ಚಿತ್ರ -
ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನ ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ದೇಶಾದ್ಯಂತ ಹಲವಾರು ದೇವಾಲಯಗಳಿಗೆ ಪುರುಷರನ್ನು ಕೂಡ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
10- 50 ವರ್ಷದೊಳಗಿನ ಮಹಿಳೆಯರ ದೇವಾಲಯ ಪ್ರವೇಶದ ಮೇಲಿನ ನಿಷೇಧವನ್ನು ತೆಗೆದುಹಾಕಿರುವ 2018ರ ಶಬರಿಮಲೆ ತೀರ್ಪು ಪುರುಷರು ಶ್ರೇಷ್ಠರು ಎಂಬ ಊಹೆಯನ್ನು ಆಧರಿಸಿದೆ ಎಂದು ವಾದಿಸಿದ ಅವರು ದೇಶದ ಆರು ದೇವಾಲಯಗಳ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿ ಲಿಂಗವನ್ನು ಆಧರಿಸಿದ ಪ್ರವೇಶದ ಅನುಮತಿ 'ಲಿಂಗ ತಾರತಮ್ಯದ' ಅಂಶವಲ್ಲ. ಇದು ಧಾರ್ಮಿಕ ಆಚರಣೆ, ನಂಬಿಕೆಯ ಒಂದು ಭಾಗವಾಗಿದೆ ಎಂದು ತಿಳಿಸಿದರು.
ಅಟ್ಟುಕಲ್ ಭಗವತಿ ದೇವಾಲಯ
ಕೇರಳದ ತಿರುವನಂತಪುರಂನಲ್ಲಿರುವ ಅಟ್ಟುಕಲ್ ಭಗವತಿ ದೇವಾಲಯ ಭದ್ರಕಾಳಿ ದೇವಿಗೆ ಸಮರ್ಪಿತವಾಗಿದೆ. ಅಟ್ಟುಕಲ್ ಅಮ್ಮ ಅಥವಾ ಕಣ್ಣಗಿ ಎಂದು ಕರೆಯಲಾಗುವ ಇಲ್ಲಿನ ದೇವಿಗೆ ನಡೆಸುವ ಅಟ್ಟುಕಲ್ ಪೊಂಗಲ ಹಬ್ಬದ ಸಂದರ್ಭದಲ್ಲಿ ದೇವಾಲಯಕ್ಕೆ ಪುರುಷರು ಬರುವಂತಿಲ್ಲ. ಈ ದೇವಾಲಯವು ಅತಿ ಹೆಚ್ಚು ಮಹಿಳೆಯರು ಸೇರುವ ಏಕೈಕ ಸ್ಥಳವೆಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ.
ಚಕ್ಕುಲತುಕಾವು ದೇವಾಲಯ
ಕೇರಳದ ಚಕ್ಕುಲತುಕಾವು ದೇವಾಲಯದಲ್ಲಿ ಭಗವತಿ ದೇವಿಯನ್ನು ಪೂಜಿಸಲಾಗುತ್ತದೆ. ಇಲ್ಲಿ ವರ್ಷದಲ್ಲೊಮ್ಮೆ ನಡೆಯುವ 'ನಾರಿ ಪೂಜೆ' ವೇಳೆ ಪುರುಷ ಅರ್ಚಕನು 10 ದಿನಗಳ ಕಾಲ ಉಪವಾಸವಿರುವ ಮಹಿಳಾ ಭಕ್ತರ ಪಾದಗಳನ್ನು ತೊಳೆಯುತ್ತಾನೆ. ಈ ದಿನವನ್ನು ಧನು ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶಿಸಲು ಅವಕಾಶವಿದೆ.
ಪುಷ್ಕರ್ನ ಬ್ರಹ್ಮ ದೇವಾಲಯ
ಹಿಂದೂ ಪುರಾಣಗಳಲ್ಲಿ ಸೃಷ್ಟಿಕರ್ತ ಎಂದು ಪರಿಗಣಿಸಲಾಗಿರುವ ಬ್ರಹ್ಮನಿಗಾಗಿ 14 ನೇ ಶತಮಾನದಲ್ಲಿ ನಿರ್ಮಿಸಲಾದ ಏಕೈಕ ದೇವಾಲಯವಾಗಿರುವ ಪುಷ್ಕರ್ನ ಬ್ರಹ್ಮ ದೇವಾಲಯದ ಒಳಗೆ ವಿವಾಹಿತ ಪುರುಷರು ಪ್ರವೇಶಿಸುವಂತಿಲ್ಲ.
ಭಗವತಿ ಅಮ್ಮನ್ ದೇವಾಲಯ
ಕನ್ಯಾಕುಮಾರಿಯಲ್ಲಿರುವ ಭಗವತಿ ಅಮ್ಮನ್ ದೇವಾಲಯದಲ್ಲಿ ದೇವಿ ಕನ್ಯಾ ಕುಮಾರಿಯನ್ನು ಪೂಜಿಸಲಾಗುತ್ತದೆ. ದೇವಿ ಕನ್ಯಾಕುಮಾರಿಯು ಧ್ಯಾನಕ್ಕಾಗಿ ಸಮುದ್ರದ ಮಧ್ಯದಲ್ಲಿರುವ ಪ್ರತ್ಯೇಕ ಪ್ರದೇಶಕ್ಕೆ ಹೋಗಿದ್ದರು ಎನ್ನಲಾಗುತ್ತದೆ. ಇಲ್ಲಿ ಪಾರ್ವತಿಯ ಅವತಾರಗಳಲ್ಲಿ ಒಂದಾದ ಸತಿ ದೇವಿಯ ಬೆನ್ನುಮೂಳೆಯು ಬಿದ್ದಿತ್ತು ಎನ್ನುವ ನಂಬಿಕೆ ಇದೆ. ಕನ್ಯಾ ಕುಮಾರಿಯನ್ನು ಸನ್ಯಾಸದ ದೇವತೆ ಎಂದು ಕರೆಯಲಾಗುತ್ತದೆ. ಹೀಗಾಗಿ ಇಲ್ಲಿ ಪುರುಷರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
ಮಾತಾ ದೇವಾಲಯ
ಬಿಹಾರದ ಮುಜಫರ್ಪುರನಲ್ಲಿರುವ ಮಾತಾ ದೇವಾಲಯದಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಕಟ್ಟುನಿಟ್ಟಾಗಿ ಪುರುಷರ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ಪುರುಷ ಪುರೋಹಿತರಿಗೂ ಆವರಣ ಪ್ರವೇಶಕ್ಕೆ ಅನುಮತಿ ಇಲ್ಲ. ಆದರೆ ಈ ಅವಧಿಯಲ್ಲಿ ಮಹಿಳೆಯರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅವಕಾಶವಿದೆ.
ಕೊಟ್ಟಂಕುಲರ ಶ್ರೀ ದೇವಿ ದೇವಾಲಯ
ಕೇರಳದ ಕೊಟ್ಟಂಕುಲರ ಶ್ರೀ ದೇವಿ ದೇವಾಲಯದಲ್ಲಿ ನಡೆಯುವ ಚಮಯವಿಳಕ್ಕು ಎಂಬ ವಿಶಿಷ್ಟ ಸಂಪ್ರದಾಯದ ವೇಳೆ ಪುರುಷರು ಮಹಿಳೆಯರ ಉಡುಪನ್ನು ಧರಿಸಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರಿಗೆ ಮಾತ್ರ ಹುಡುಗಿಯರಂತೆ ವೇಷ ಧರಿಸಿ ಸಂಪ್ರದಾಯದಲ್ಲಿ ಭಾಗಿಯಾಗುವ ಅವಕಾಶವಿದೆ.
ಕಾಮಾಕ್ಯ ದೇವಾಲಯ
ಅಸ್ಸಾಂನ ಕಾಮರೂಪ ಕಾಮಾಕ್ಯ ದೇವಾಲಯದಲ್ಲಿ ಅಂಬುಬಾಚಿ ಸಮಯದಲ್ಲಿ ಪುರುಷರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ದೇವಿ ಋತುಮತಿಯಾಗುತ್ತಾಳೆ ಎನ್ನುವ ನಂಬಿಕೆ ಇದ್ದು, ಈ ಸಂದರ್ಭದಲ್ಲಿ ಮಹಿಳಾ ಅರ್ಚಕರು ಮಾತ್ರ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಾರೆ.