Taylor Swift: ಏಕಕಾಲದಲ್ಲಿ ಖ್ಯಾತ ಗಾಯಕಿಯ ಬರೋಬ್ಬರಿ 13 ಮೇಣದ ಪ್ರತಿಮೆ ಅನಾವರಣ
ಗಾಯಕಿ ಟೇಲರ್ ಸ್ವಿಫ್ಟ್ ಅವರ 'ದಿ ಎರಾಸ್ ಟೂರ್' (The Eras Tour) ಯಶಸ್ಸನ್ನು ಸ್ಮರಿಸುವ ನಿಟ್ಟಿನಲ್ಲಿ, ಮೇಡಂ ಟುಸ್ಸಾಡ್ಸ್ ಸಂಸ್ಥೆ ಇದೀಗ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಿಶ್ವದಾದ್ಯಂತ 13 ಪ್ರಮುಖ ನಗರ ಗಳಲ್ಲಿ, ಏಕಕಾಲದಲ್ಲಿ 13 ಹೊಸ ಟೇಲರ್ ಸ್ವಿಫ್ಟ್ ಅವರ ಮೇಣದ ಪ್ರತಿಮೆಗಳನ್ನು ಅದ್ಧೂರಿಯಾಗಿ ಅನಾವರಣಗೊಳಿಸಲಾಗಿದೆ.



ಐಕಾನಿಕ್ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ತನ್ನ 250 ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಒಬ್ಬ ಸೆಲೆಬ್ರಿಟಿಗೆ 13 ಹೊಸ ಮೇಣದ ಪ್ರತಿಮೆಗಳನ್ನು ಅನಾವರಣ ಮಾಡಿದೆ. ಹೌದು ಟೇಲರ್ ಸ್ವಿಫ್ಟ್ 'ಎರಾಸ್ ಟೂರ್' ನಲ್ಲಿ ಧರಿಸಿದ ಭಿನ್ನ ಲುಕ್ ಗಳ ಪ್ರತಿಮೆಗಳನ್ನು ಸಿದ್ದ ಪಡಿಸಿದೆ.

ಆಯ್ದ ನಗರಗಳಲ್ಲಿ ಈ ಪ್ರತಿಮೆಗಳು ಅಭಿಮಾನಿಗಳ ವೀಕ್ಷಣೆಗೆ ಲಭ್ಯವಿವೆ. ಸುಮಾರು 40ಕ್ಕೂ ಹೆಚ್ಚು ಕಲಾವಿದರು ಹಾಗೂ ತಜ್ಞರ ತಂಡವು ಕಳೆದ 14 ತಿಂಗಳುಗಳಿಂದ ನಿರಂತರವಾಗಿ ಶ್ರಮಿಸಿ, ಈ ಪ್ರತಿಮೆಗಳನ್ನು ಸಿದ್ಧಪಡಿಸಿದೆ.

ಪ್ರತಿಯೊಂದು ಪ್ರತಿಮೆಯೂ ಟೇಲರ್ ಸ್ವಿಫ್ಟ್ ಅವರು 'ಎರಾಸ್ ಟೂರ್' ಸಂಗೀತ ಕಛೇರಿಯಿಂದ ಆಯ್ದ ಪ್ರಸಿದ್ಧ ಮತ್ತು ಸ್ಮರಣೀಯ ಉಡುಗೆಗಳನ್ನು ಧರಿಸಿದ್ದು, ಅವರ ವಿವಿಧ ಸಂಗೀತ ಜರ್ನಿ ಯನ್ನು ಪ್ರತಿನಿಧಿಸುತ್ತಿವೆ.

ಈ ವಿಶೇಷ ಪ್ರತಿಮೆಗಳು ನ್ಯೂಯಾರ್ಕ್, ಲಂಡನ್, ಲಾಸ್ ಏಂಜಲೀಸ್, ಸಿಡ್ನಿ, ಆಮ್ಸ್ಟರ್ ಡ್ಯಾಮ್, ಶಾಂಘೈ ಸೇರಿದಂತೆ ವಿಶ್ವದ ಪ್ರಮುಖ ನಗರಗಳಲ್ಲಿ ಅನಾವರಣಗೊಂಡಿವೆ.

ಟೇಲರ್ ಸ್ವಿಫ್ಟ್ ಅವರ ಮೇಣದ ಪ್ರತಿಮೆಗಳ ಈ ಭವ್ಯ ಅನಾವರಣವು, ಅವರ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಕಲಾವಿದೆಯ ವಿವಿಧ ಸಂಗೀತ ಯುಗಗಳನ್ನು ಹತ್ತಿರದಿಂದ ನೋಡುವ ಮತ್ತು ಸೌಂದರ್ಯವನ್ನು ಮೆಲುಕು ಹಾಕುವ ವಿಶಿಷ್ಟ ಅವಕಾಶವನ್ನು ಒದಗಿಸಿದೆ.

ಹೊಸ 13 ಪ್ರತಿಮೆಗಳನ್ನು ಸೇರಿಸಿ ಟೇಲರ್ ಸ್ವಿಫ್ಟ್ ಅವರ ಒಟ್ಟು ಪ್ರತಿಮೆಗಳ ಸಂಖ್ಯೆ 14ಕ್ಕೆ ಏರಿದೆ. ಮೊದಲ ಪ್ರತಿಮೆ 2010ರಲ್ಲಿ ಲಂಡನ್ನಲ್ಲಿ ಅನಾವರಣಗೊಂಡಿತ್ತು. ಹೊಸ ಪ್ರತಿಮೆಗಳು ಜುಲೈ 24ರಿಂದ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಲಭ್ಯವಾಗಿವೆ.