World Environment Day 2026 Special: ಪ್ರಕೃತಿಯೇ ಪರಿವಾರ, ಮರ-ಗಿಡಗಳೇ ಬಂಧು-ಬಳಗ; ಪರಿಸರ ಸೇನಾನಿಗಳಿವರು
ಪ್ರತಿ ವರ್ಷ ಜೂನ್ 5 ಬಂದರೆ ಸಾಕು ಒಂದಷ್ಟು ಮಂದಿ ಸ್ಟೇಟಸ್ ಹಾಕಿಕೊಂಡು ಪರಿಸರ ದಿನದ ಸಂದೇಶ ಸಾರಿ ಕೈತೊಳೆದು ಬಿಡುತ್ತಾರೆ. ಪರಿಸರ ಉಳಿಸಲು ಒಂದಾದರೂ ಗಿಡ ನೆಡಬೇಕು ಎನ್ನುವ ಚಿಂತನೆಯೇ ಹಲವರ ಮನಸ್ಸಿನಲ್ಲಿಯೇ ಮೂಡುವುದಿಲ್ಲ. ಗಿಡ ನೆಡವುದು ಬಿಡಿ, ಪರಿಸರಕ್ಕೆ ಪ್ಲಾಸ್ಟಿಕ್ ಎಸೆಯದಿರುವುದೇ ನಾವು ಸಲ್ಲಿಸಬಹುದಾದ ದೊಡ್ಡ ಕೊಡುಗೆ ಎನ್ನುವುದನ್ನು ಹಲವರು ಮರೆತಿದ್ದಾರೆ. ಆದರೆ ನಮ್ಮ ನಡುವಿನಲ್ಲೇ ಯಾವುದೇ ಪ್ರಚಾರವಿಲ್ಲದೆ ಪರಿಸರಕ್ಕೆ ಗಮನಾರ್ಹ ಕೊಡುಗೆ ನೀಡಿದವರಿದ್ದಾರೆ. ಪ್ರಕೃತಿಯೇ ಬದುಕು ಎಂದುಕೊಂಡವರು ಇವರು. ಪರಿಸರ ದಿನಾಚರಣೆಯ ಅಂಗವಾಗಿ ಅಂತಹ ಮಹನೀಯರಾದ ದುಶರ್ಲ ಸತ್ಯನಾರಾಯಣ, ಜಾದವ್ ಮೊಲಾಯ್ ಪಾಯೆಂಗ್, ಧನೇಶ್ವರ ಬಾರಿಕ್, ಕನ್ನಡಿಗರಾದ ಸಾಲುಮರದ ತಿಮ್ಮಕ್ಕ, ತುಳಸಿ ಗೌಡ ಅವರ ಕಿರು ಪರಿಚರ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಸಾಲುಮರದ ತಿಮ್ಮಕ್ಕ
ಪದ್ಮಶ್ರೀ ಪುರಸ್ಕೃತ, ಖ್ಯಾತ ಪರಿಸರವಾದಿ ಸಾಲುಮರದ ತಿಮ್ಮಕ್ಕ ಮರಗಳಲ್ಲಿ ತಮ್ಮ ಮಕ್ಕಳನ್ನು ಕಂಡವರು. ವೃಕ್ಷಮಾತೆ ಎಂದೇ ಖ್ಯಾತಿ ಪಡೆದ ಅವರು ರಸ್ತೆ ಬದಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸಾಲು ಗಿಡಗಳನ್ನು ನೆಡುವ ಮೂಲಕ ಪರಿಸರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. 1911ರ ಜೂನ್ 30ರಂದು ಅವರು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದ ಅವರು 2025ರ ನವೆಂಬರ್ 14ರಂದು 114ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ರಾಮನಗರದ ಹುಲಿಕಲ್ ಮತ್ತು ಕುದೂರು ನಡುವಿನ ಹೆದ್ದಾರಿಯ ಸುಮಾರು 45 ಕಿ.ಮೀ. ಉದ್ದಕ್ಕೂ ತಮ್ಮ ಪತಿ ಚಿಕ್ಕಯ್ಯ ಅವರೊಂದಿಗೆ 385ಕ್ಕೂ ಹೆಚ್ಚು ಆಲದ ಮರ ನೆಟ್ಟಿದ್ದಾರೆ. ಜತೆಗೆ ಇತರ ಸುಮಾರು 8 ಸಾವಿರ ಗಿಡ ಪೋಷಿಸಿದ್ದಾರೆ. ತಿಮ್ಮಕ್ಕ ಮತ್ತು ಚಿಕ್ಕಯ್ಯ ದಂಪತಿಗೆ ಹಲವು ವರ್ಷಗಳ ಕಾಲ ಮಕ್ಕಳಿರಲಿಲ್ಲ. ಈ ಬಗ್ಗೆ ಕೊರಗುತ್ತ ಕುಳಿತುಕೊಳ್ಳದ ಅವರು ಗಿಡಗಳನ್ನು ನಡುವ ಮೂಲಕ ಅದರಲ್ಲೇ ತಮ್ಮ ಮಕ್ಕಳನ್ನು ಕಂಡರು. ತಿಮ್ಮಕ್ಕ ಮಕ್ಕಳಿಲ್ಲದ ದುಃಖವನ್ನು ಮರೆಯಲು ರಸ್ತೆಯ ಬದಿಗಳಲ್ಲಿ ಆಲದ ಸಸಿಗಳನ್ನು ನೆಡಲು ಆರಂಭಿಸಿದರು. ಈಗಲೂ ಅವು ಪ್ರಯಾಣಿಕರಿಗೆ ನೆರಳಾಗುತ್ತಿವೆ.
ತುಳಸಿ ಗೌಡ
ʼವೃಕ್ಷಮಾತೆʼ ಎಂದೇ ಜನಪ್ರಿಯರಾದವರು ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ. 1937ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾಳಿಯಲ್ಲಿ ಜನಿಸಿದ ಅವರು 2024ರ ಡಿಸೆಂಬರ್ 16ರಂದು ಕೊನೆಯುಸಿರೆಳೆದರು. ಆಗ ಅವರಿಗೆ 86 ವರ್ಷ ವಯಸ್ಸಾಗಿತ್ತು. ಇಡೀ ಬದುಕನ್ನು ಪ್ರಕೃತಿ ಪೋಷಣೆಗಾಗಿ ಮುಡಿಪಾಗಿಟ್ಟು, ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರಕ್ಕೆ ಅವರು ಗಣನೀಯ ಕೊಡುಗೆ ನೀಡಿದ್ದಾರೆ. 14ಕ್ಕೂ ಹೆಚ್ಚು ವರ್ಷಗಳಿಂದ ಗಿಡಗಳನ್ನು ನೆಟ್ಟು ಬೆಳೆಸುವ ಕಾಯಕದಲ್ಲಿ ಅವರು ತೊಡಗಿದ್ದರು. ಮನೆಯಲ್ಲಿ ತೀರಾ ಬಡತನವಿದ್ದೂ ಕುಟುಂಬಕ್ಕಾಗಿ ಕೂಲಿ ಕೆಲಸವನ್ನು ಮಾಡುತ್ತಲೇ ಹಸಿರು ಕ್ರಾಂತಿ ಮಾಡಿದ್ದ ಪರಿಸರ ಪ್ರೇಮಿ ತುಳಸಿಗೌಡ ಅವರ ಪರಿಸರ ಪ್ರೇಮವನ್ನು ಪರಿಗಣಿಸಿ ಭಾರತ ಸರ್ಕಾರ 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿತು. ಪರಿಸರದ ಜತೆ ಉತ್ತಮ ಒಡನಾಟವನ್ನು ಹೊಂದಿರುವ ಅವರು ಅಪರೂಪದ ಬೀಜ, ಗಿಡ, ಬಳ್ಳಿಗಳನ್ನು ಸಂಗ್ರಹಿಸಿ ಬಿತ್ತಿ ಬೆಳೆಸಿರುವುದಷ್ಟೇ ಅಲ್ಲದೆ ರಸ್ತೆ ಬದಿಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸಿದವರು.
ಜಾದವ್ ಮೊಲಾಯ್ ಪಾಯೆಂಗ್
ʼಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾʼ ಎಂದು ಜನಪ್ರಿಯರಾಗಿರುವ ಜಾದವ್ ಮೊಲಾಯ್ ಪಾಯೆಂಗ್ ಅಸ್ಸಾಂನವರು. 1959ರಲ್ಲಿ ಜನಿಸಿದ ಅವರು ಸುಮಾರು 1,390 ಎಕ್ರೆ ಕಾಡು ಬೆಳೆಸಿದ್ದಾರೆ. ಜಾದವ್ ವಿವಿಧ ರೀತಿಯ ಗಿಡಗಳನ್ನು ನೆಟ್ಟಿದ್ದಾರೆ. ವಾಲ್ಕೋಲ್, ಅರ್ಜುನ್, ಎಜರ್, ಗೋಲ್ಡ್ ಮೊಹರ್, ಕೊರೊಯಿ, ಬಿದಿರು ಸೇರಿದಂತೆ ನಾನಾ ತಳಿಯ ಗಿಡಗಳನ್ನು ನೆಟ್ಟು ದಟ್ಟ ಅರಣ್ಯ ಸೃಷ್ಟಿಸಿದ್ದಾರೆ. ಸುಮಾರು 40 ವರ್ಷ ಗಿಡ ನೆಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಜಾದವ್ ಅವರ ಸಾಮಾಜಿಕ ಕಾರ್ಯವನ್ನು ಗುರುತಿಸಿ ಕೇಂದ್ರ ಸರ್ಕಾರ 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿತು. ಜತೆಗೆ ವಿವಿಧ ವಿಶ್ವ ವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡಿವೆ. ಮೆಕ್ಸಿಕೋ ಕೂಡ ಅವರ ಸೇವೆಯನ್ನು ಗುರುತಿಸಿ ಮಾರ್ಗದರ್ಶನ ನೀಡಲು ತಮ್ಮ ದೇಶಕ್ಕೆ ಕರೆಸಿಕೊಂಡಿದೆ.
ದುಶರ್ಲ ಸತ್ಯನಾರಾಯಣ
1954ರಲ್ಲಿ ತೆಲಂಗಾಣದ ಮೊತೆ ಮಂಡಲ್ನ ರಾಘವಪುರಂ ಗ್ರಾಮದಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದ ದುಶರ್ಲ ಸತ್ಯನಾರಾಯಣ ಅವರಿಗೆ ಬಾಲ್ಯದಿಂದಲೇ ಪ್ರಕೃತಿ ಬಗ್ಗೆ ಅಪಾರ ಒಲವು. ಇದೇ ಕಾರಣಕ್ಕೆ ಅವರು ಪೂರ್ಜರಿಂದ ತಮಗೆ ಬಳುವಳಿಯಾಗಿ ಬಂದ 70 ಎಕ್ರೆ ಜಮೀನನ್ನು ಕಾಡಾಗಿ ಪರಿವರ್ತಿಸಿ ಭೂಮಿಗೆ ಹಸಿರಿನ ಹೊದಿಕೆ ಹೊದಿಸಿದ್ದಾರೆ. ಬಾಲ್ಯದಲ್ಲೇ ಪ್ರಕೃತಿಯೊಂದಿಗೆ ಒಡನಾಟ ಆರಂಭಿಸಿದ ಸೂರ್ಯನಾರಾಯಣ 27ನೇ ವರ್ಷದಲ್ಲಿ ರಾಘವಪುರಂನಲ್ಲಿ ತಮ್ಮ ಪಾಲಿಗೆ ಹಿರಿಯರಿಂದ ಬಂದ 70 ಎಕ್ರೆಯಲ್ಲಿ ಕಾಡು ಬೆಳೆಸಲು ಆರಂಭಿಸಿದರು. ಅದು ಈಗ ದಟ್ಟಕಾಡಾಗಿ ಹಲವು ಜೀವ ಸಂಕುಲಗಳನ್ನು ಪೋಷಿಸುತ್ತಿದೆ. ಅವರು ದೇಶಾದ್ಯಂತ ಓಡಾಡಿ ಅಪರೂಪದ ಮರಗಳ ಬಿತ್ತನೆ ಬೀಜವನ್ನು ಸಂಗ್ರಹಿಸಿದರು. ಅಲ್ಲದೆ ಕಾಡಿನ ಮಧ್ಯೆ ಕೊಳಗಳನ್ನು ನಿರ್ಮಿಸಿ ಪ್ರಾಣಿ-ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿದ್ದಾರೆ.
ಧನೇಶ್ವರ ಬಾರಿಕ್
ಒಡಿಶಾದ 85 ವರ್ಷದ ಧನೇಶ್ವರ ಬಾರಿಕ್ ಕೂಡ ಪರಿಸರಕ್ಕೆ ಗಣನೀಯ ಕೊಡುಗೆ ನೀಡಿ ಗಮನ ಸೆಳೆದಿದ್ದಾರೆ. ಕೇಂದ್ರಪಾರದ ನಿಕಿರಾಯ್ ಪಾಟ್ನಾ ಗ್ರಾಮದ ಅವರು ಭುಜದ ಮೇಲೆ ಸಲಿಕೆ ಹೊತ್ತುಕೊಂಡು ಪ್ರತಿದಿನ ಮೈಲುಗಟ್ಟಲೆ ನಡೆದುಕೊಂಡು ಹೋಗಿ ತಾವು ನೆಟ್ಟ ಮರಗಳ ಆರೈಕೆ ಮಾಡಿ ಬರುತ್ತಾರೆ. ಸುಮಾರು 30 ವರ್ಷಗಳಿಂದ ಈ ಸೇವೆ ನಿರಂತರವಾಗಿ ಸಾಗುತ್ತಿದೆ. ಯಾರ ಬೆಂಬಲವೂ ಇಲ್ಲದೇ ನಿಕಿರೈ ಮತ್ತು ಕುತರಂಗ್ ಪಂಚಾಯತ್ ವ್ಯಾಪ್ತಿಯಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು ಮರಗಳನ್ನಾಗಿ ಬೆಳೆಸಿದ್ದಾರೆ. ಇವುಗಳನ್ನು ಅವರು ತಮ್ಮ ಖರ್ಚಿನಲ್ಲೇ ನಿಭಾಯಿಸುತ್ತಿದ್ದಾರೆ ಎನ್ನುವುದು ವಿಶೇಷ.