ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನನ್ನ ಹಾಗೂ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿದ ಪಿತಾಮಹ ಯಾರು ಎಂದು ಗೊತ್ತು; ಸಿಎಂ ಡಿ.ಕೆ. ಶಿವಕುಮಾರ್

CM DK Shivakumar: ಮಾರುವೇಷದ ಕಾರ್ಯಾಚರಣೆಗಳನ್ನು ನನ್ನ ಮೇಲಿಂದಲೇ ಶುರು ಮಾಡಲು ಪ್ರಯತ್ನ ಮಾಡಿದ್ದಾರೆ. ನನ್ನ ಬಳಿ ಈ ಬಗ್ಗೆ ಎಲ್ಲ ಸಾಕ್ಷ್ಯಗಳೂ ಇವೆ. ನಾನು ಜವಾಬ್ದಾರಿ ಸ್ಥಾನದಲ್ಲಿದ್ದೇನೆ. ನಾನು ಏನೇ ಮಾತನಾಡಬೇಕಾದರೂ ಸುಮ್ಮನೆ ಮಾತನಾಡುವುದಿಲ್ಲ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ಬಳಿಕ ನನ್ನ ಹಾಗೂ ಇತರೆ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ (Sting Operation) ಪ್ರಯತ್ನ ನಡೆದಿದ್ದು, ಇದರ ಪಿತಾಮಹ ಯಾರು? ಇದಕ್ಕೆ ಹಣಕಾಸಿನ ನೆರವು ಯಾರು ನೀಡುತ್ತಿದ್ದಾರೆ ಹಾಗೂ ಹೇಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ತಿಳಿಸಿದ್ದಾರೆ. ನವದೆಹಲಿಯ ಕರ್ನಾಟಕ ಭವನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಅವರು ಪ್ರತಿಕ್ರಿಯೆ ನೀಡಿದರು.

ಸಚಿವರ ಮೇಲೆ ಗುಪ್ತ ಕಾರ್ಯಾಚರಣೆ ಮಾಡುತ್ತಿರುವ ಬಗ್ಗೆ ನೀಡಿರುವ ಎಚ್ಚರಿಕೆ ಬಗ್ಗೆ ಕೇಳಿದಾಗ, ʼಮಾರುವೇಷದ ಕಾರ್ಯಾಚರಣೆಗಳನ್ನು ನನ್ನ ಮೇಲಿಂದಲೇ ಶುರು ಮಾಡಲು ಪ್ರಯತ್ನ ಮಾಡಿದ್ದಾರೆ. ನನ್ನ ಬಳಿ ಈ ಬಗ್ಗೆ ಎಲ್ಲ ಸಾಕ್ಷ್ಯಗಳೂ ಇವೆ. ನಾನು ಜವಾಬ್ದಾರಿ ಸ್ಥಾನದಲ್ಲಿದ್ದೇನೆ. ನಾನು ಏನೇ ಮಾತನಾಡಬೇಕಾದರೂ ಸುಮ್ಮನೆ ಮಾತನಾಡುವುದಿಲ್ಲʼ ಎಂದರು.

ಈ ಕಾರ್ಯಾಚರಣೆ ಸಿಎಂ ಆಗುವ ಮುನ್ನವೇ ಅಥವಾ ಸಿಎಂ ಆದ ಬಳಿಕ ನಡೆದಿದೆಯೇ ಎಂದು ಕೇಳಿದಾಗ, ʼಮುಖ್ಯಮಂತ್ರಿಯಾದ ಬಳಿಕ ನಡೆದಿರುವ ಪ್ರಯತ್ನಗಳ ಬಗ್ಗೆ ಹೇಳುತ್ತಿದ್ದೇನೆ. ನನ್ನನ್ನು ಸೇರಿಸಿ ಬೇರೆ ಯಾವ, ಯಾವ ನಾಯಕರ ವಿರುದ್ಧ ಕಾರ್ಯಾಚರಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದೂ ತಿಳಿದಿದೆ. ಆದರೆ, ಈ ಎಲ್ಲ ವಿಚಾರಗಳನ್ನು ಈಗ ಬಹಿರಂಗವಾಗಿ ಮಾತನಾಡುವ ಅಗತ್ಯವಿಲ್ಲʼ ಎಂದು ತಿಳಿಸಿದರು. ತಮ್ಮ ವಿರುದ್ಧದ ಪ್ರಯತ್ನಗಳ ಹಿಂದೆ ಕರ್ನಾಟಕದವರೇ ಇದ್ದಾರೆಯೇ ಅಥವಾ ಬೇರೆ ರಾಜ್ಯದವರೂ ಇದ್ದಾರೆಯೇ ಎಂಬ ಬಗ್ಗೆ ಕೇಳಿದಾಗ, ʼನಾನು ನಿಮ್ಮ ಬಳಿ ಎಲ್ಲವನ್ನೂ ಬಹಿರಂಗಪಡಿಸಲು ಹೋಗುವುದಿಲ್ಲ. ಕಾಲ ಬಂದಾಗ ಉತ್ತರ ಕೊಡುತ್ತೇನೆʼ ಎಂದು ಹೇಳಿದರು.

ಅಧಿಕಾರಿಗಳು, ಸಚಿವರಿಗೆ ಎಚ್ಚರಿಕೆಯಿಂದಿರಲು ಸೂಚನೆ

ಸಚಿವರನ್ನು ಸಿಕ್ಕಿ ಹಾಕಿಸಲು ಏಜೆಂಟರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, ʼಕೆಲವರು ನನ್ನ ಬಳಿ ಬಂದಿದ್ದರು, ನಾನು ಫೋಟೋಗಳನ್ನು ಬಿಡುಗಡೆ ಮಾಡಲು ಸಿದ್ಧ. ಸದ್ಯಕ್ಕೆ ಅದರ ಅವಶ್ಯಕತೆ ಇಲ್ಲ. ಯಾರು ಏನೇನು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತು. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ನನ್ನ ಬಳಿ ಯಾರು ಬಂದಿದ್ದರೋ ಅವರ ಮೇಲೆ ಅನುಮಾನ ಬಂದು ಪೊಲೀಸರಿಗೆ ತಿಳಿಸಿ, ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೇನೆ. ಅದನ್ನು ಈಗಲೇ ಬಹಿರಂಗ ಮಾಡಲು ಸಾಧ್ಯವಿಲ್ಲ. ಇದಕ್ಕೆ ಪಿತಾಮಹರು ಯಾರು ಎಂದು ತಿಳಿದಿದೆ. ಅದಕ್ಕೆಲ್ಲಾ ಉತ್ತರಿಸಲು ಹೋಗುವುದಿಲ್ಲ. ಅಧಿಕಾರಿಗಳನ್ನು ಸುಮ್ಮನೆ ಸಿಕ್ಕಿಹಾಕಿಸಲು ಪ್ರಯತ್ನ ಮಾಡುತ್ತಿದ್ದು, ಅವರು ಹುಷಾರಾಗಿರಬೇಕು ಎಂದು ಎಚ್ಚರಿಕೆ ನೀಡಿದೆ. ಹಿಂದೆ ಮಾಧ್ಯಮದಿಂದ ಸ್ಟಿಂಗ್ ಆಪರೇಷನ್ ಮಾಡಲು ಬಂದಿದ್ದರು. ಹಾಗಾಗಿ ಈಗಲೇ ಎಚ್ಚರಿಕೆ ನೀಡಲಾಗಿದೆ. ಕೆಲವು ನಾಯಕರು ಈ ಕಾರ್ಯಾಚರಣೆಗೆ ಖಾಸಗಿ ಏಜೆಂಟರನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಪಕ್ಕಾ ಮಾಹಿತಿ ಇದೆʼ ಎಂದರು.

ದಾಖಲೆ ಯಾವಾಗ ಬಿಡಬೇಕು ಗೊತ್ತಿದೆ

ಜಿಎಸ್ ಟಿ ಸಭೆ ಬಳಿಕ ಮಾಧ್ಯಮದವರು, ಸ್ಟಿಂಗ್ ಆಪರೇಷನ್ ಮಾಡಿದವರು ಯಾರ ಎಂದು ಗೊತ್ತಿದ್ದರೆ ಮಾಹಿತಿ ಬಿಡುಗಡೆ ಮಾಡಲಿ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ʼಅವರಿಗೆ ನಾನೇಕೆ ಬಿಡುಗಡೆ ಮಾಡಲಿ. ನಾನು ಯಾರಿಗೆ ಬಿಡುಗಡೆ ಮಾಡಬೇಕೋ ಮಾಡುತ್ತೇನೆ. ಇಂತಹ ಕೆಲಸಕ್ಕೆ ಯಾರು ಯಾರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬ ದಾಖಲೆ ನನ್ನ ಬಳಿ ಇದೆ. ಯಾರನ್ನು ಊರು ಬಿಟ್ಟು ಓಡಿಸಿದ್ದಾರೆ ಎಂಬುದೂ ಗೊತ್ತಿದೆ. ಯಾರನ್ನು ಎಲ್ಲಿಗೆ ಕಳುಹಿಸಿದ್ದಾರೆ ಎಂಬ ದಾಖಲೆಯೂ ಇದೆ. ಅದರ ಬಗ್ಗೆ ನೀವು ಯಾಕೆ ಇಷ್ಟು ಯೋಚಿಸುತ್ತಿದ್ದೀರಿ? ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ? ನನ್ನ ವಿರುದ್ಧವೇ ಈ ರೀತಿ ಷಡ್ಯಂತ್ರ ಮಾಡುತ್ತಿದ್ದು, ನೀವು ಎಚ್ಚರಿಕೆಯಿಂದ ಇರಿ ಎಂದು ನಾನು ನಮ್ಮ ಮಂತ್ರಿಗಳಿಗೆ ಹೇಳಿದ್ದೇನೆ. ಅದು ನನ್ನ ಕರ್ತವ್ಯʼ ಎಂದರು.

ನೈಸ್ ಯೋಜನಾ ಪ್ರದೇಶದಲ್ಲಿ ಯಾರು ಎಷ್ಟು ಆಸ್ತಿ ಮಾಡಿದ್ದಾರೆ, ಸಮಯ ಬಂದಾಗ ಮಾತನಾಡುವೆ

“ಇದು ಯಾರ ಹೆಗಲಿಗೆ ಬರುತ್ತದೆ ಎಂದು ಕಾಲ ನಿರ್ಣಯ ಮಾಡುತ್ತದೆ. ಮಾತೆತ್ತಿದರೆ ನೈಸ್ ಎನ್ನುತ್ತಾರೆ. ಎಲ್ಲವೂ ಬೋಗಸ್. ಅದು ಅವರ ಪಾಪದ ಕೂಸು. ನಾನು ಎಲ್ಲೆಂದರಲ್ಲಿ ಮಾತನಾಡುವುದಿಲ್ಲ. ಸಮಯ ಬಂದಾಗ ಸದನದಲ್ಲಿ ಎಲ್ಲವನ್ನು ಬಿಚ್ಚಿಡುವೆ. ರಾಜ್ಯಕ್ಕೆ ಒಂದು ಯೋಜನೆ ಎನ್ನುವುದು ಬಿಟ್ಟರೆ, ನನಗೂ ನೈಸ್ ಸಂಸ್ಥೆಗೂ ಯಾವ ಸಂಬಂಧವಿದೆ? ನಮ್ಮ ಶಾಸಕರಾಗಿದ್ದವರು, ರಾಜ್ಯದ ಉದ್ಯಮಿಗೆ ನಾನು ಯಾವ ಗೌರವ ನೀಡಬೇಕೋ ನೀಡುವೆ. ಕಾನೂನು ಏನಿದೆ ಅದರ ಪ್ರಕಾರ ನಡೆಯಲಾಗುವುದು. ಇವರು ಅಧಿಕಾರದಲ್ಲಿದ್ದಾಗ, ಇವರ ಕೈಯಲ್ಲಿ ಯಾಕೆ ಏನೂ ಮಾಡಲು ಆಗಲಿಲ್ಲ? ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ? ಇವರು ಮತ್ತು ಅವರ ವ್ಯವಹಾರ ಸೆಟ್ ಆಗಲಿಲ್ಲ ಎಂದು ಈಗ ಮಾತನಾಡುತ್ತಿದ್ದಾರೆ. ಇವರ ಆಸ್ತಿ ಎಷ್ಟು ಇದೆ. ಇವರ ಕುಟುಂಬದವರು ಎಷ್ಟು ಆಸ್ತಿ ಮಾಡಿದ್ದಾರೆ? ಯೋಜನಾ ಪ್ರಾಧಿಕಾರದಲ್ಲಿ ಯಾರ ಆಸ್ತಿ ಇದೆ ಎಂದು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಇದೆಲ್ಲವನ್ನು ಸಮಯ ನೋಡಿ ಮಾತನಾಡುವೆ ಈಗ ಸಮಯ ವ್ಯರ್ಥ ಮಾಡುವುದಿಲ್ಲ. ಸಮಯ ಬಂದಾಗ ಅವರಷ್ಟು ಜ್ಞಾನ ಭಂಡಾರ ಇಲ್ಲದಿರಬಹುದು, ನಾನು ಪ್ರಧಾನಿ ಮಗನಲ್ಲದಿರಬಹುದು. ಆದರೆ ಅಷ್ಟೋ ಇಷ್ಟೋ ಅನುಭವವಿದೆ ನೋಡೋಣ” ಎಂದರು.

ವಿಧಾನ ಪರಿಷತ್ ಚುನಾವಣೆಯಲ್ಲಿ 12 ಜನ ಶಾಸಕರು ಅಡ್ಡಮತದಾನ ಮಾಡಿದರು. ಈ ಅಡ್ಡಮತದಾನ ಮಾಡಿದವರು ಬಿಜೆಪಿಯವರೋ, ಜೆಡಿಎಸ್ ನವರೋ ನನಗೆ ಗೊತ್ತಿಲ್ಲ. ನೀವು ಅಭ್ಯರ್ಥಿ ಕಣಕ್ಕಿಸಿದ್ದಕ್ಕೆ ಅಡ್ಡಮತದಾನಕ್ಕೆ ಅವಕಾಶವಾಯಿತು ಎಂದು ಬಿಜೆಪಿಯವರು ಉಗಿಯುತ್ತಿದ್ದಾರೆ. ಇದರಿಂದ ಎರಡೂ ಪಕ್ಷಗಳು ಮುಜುಗರಕ್ಕೆ ಒಳಗಾಗಿದ್ದು, ಅದನ್ನು ವಿಷಯಾಂತರ ಮಾಡಲು ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ಮಾಡಲಿ ಬಿಡಿ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಭಾರತೀಯರ ಮತಗಳನ್ನು ರಕ್ಷಣೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ

ಎಸ್‌ಐಆರ್ ಬಗ್ಗೆ ಕಳೆದ ಎರಡು ದಿನಗಳಿಂದ ಹೋರಾಟ ನಡೆದಿರುವ ಬಗ್ಗೆ ಕೇಳಿದಾಗ, ʼಬಾಂಗ್ಲಾದೇಶ ಹಾಗೂ ಬೇರೆಡೆಗಳಿಂದ ಬಂದು ಜನರು ಇಲ್ಲಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಿದ್ದರೆ ದೇಶದ ಗಡಿಯಲ್ಲಿ ಬಾಂಗ್ಲಾದೇಶದಿಂದ ನುಸುಳಿಕೋರರನ್ನು ತಡೆಗಟ್ಟುವುದು ಕೇಂದ್ರ ಸರ್ಕಾರದ ಕರ್ತವ್ಯವಲ್ಲವೇ? ಬಿಜೆಪಿಯ ಸಂಸದರೂ ಹಾಗೂ ಶಾಸಕರು, ನಾವು ಬಾಂಗ್ಲಾದೇಶದವರನ್ನು ಮತಪಟ್ಟಿಯಿಂದ ತೆಗೆಯಲು ಅರ್ಜಿ ಸಲ್ಲಿಸಿದ್ದೇವೆ ಎಂದಿದ್ದಾರೆ. ಭಾರತೀಯರ ಮತಗಳ ರಕ್ಷಣೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ. ನಮ್ಮಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದರೆ ಅವರ ಮತದಾನದ ಹಕ್ಕು ಕಸಿಯುವುದು ಮಾತ್ರವಲ್ಲ, ಅವರನ್ನೇ ದೇಶದಿಂದ ಹೊರಗೆ ಹಾಕಲಿ. ಆ ಕೆಲಸ ಯಾಕೆ ಮಾಡುತ್ತಿಲ್ಲ?ʼ ಎಂದು ಪ್ರಶ್ನಿಸಿದರು.

ಕೇಂದ್ರದಲ್ಲಿ ಪ್ರತಿಪಕ್ಷಗಳ ಹೋರಾಟದ ಬಗ್ಗೆ ಪೊಲೀಸರ ಕ್ರಮದ ಬಗ್ಗೆ ಕೇಳಿದಾಗ, ʼಹೋರಾಟಗಾರರ ವಿರುದ್ಧ ಪೊಲೀಸರೂ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರು ದೇಶದ ಪ್ರಜಾಪ್ರಭುತ್ವ ಹಾಗೂ ಜನರ ರಕ್ಷಣೆಗಾಗಿ ಹೋರಾಡುತ್ತಿದ್ದಾರೆʼ ಎಂದರು.

ಅರ್ಹ ಮತಗಳನ್ನು ಅಳಿಸಿ ಹಾಕದಂತೆ ಚುನಾವಣಾ ಆಯೋಗದ ಸ್ಪಷ್ಟ ಸೂಚನೆ

ರಾಜ್ಯದಲ್ಲಿ ಬಿಜೆಪಿಯವರು ತಮ್ಮ ಬಡ ಬಿಜೆಪಿ ಕಾರ್ಯಕರ್ತರ ಹೆಸರಿನಲ್ಲಿ ಪೂರ್ವಮುದ್ರಿತ ಫಾರಂ 7 ಗಳನ್ನು ನೀಡುತ್ತಿದ್ದಾರೆ. ವಿಶೇಷವಾಗಿ ಅಲ್ಪಸಂಖ್ಯಾತ ಮತದಾರರ ಪೂರ್ವ ಮುದ್ರಿತ ಅರ್ಜಿಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿ ಸಲ್ಲಿಸಲಾಗುತ್ತಿದೆ. ಕೆಲವು ಬಿಜೆಪಿ ಕಾರ್ಯಕರ್ತರು ತಪ್ಪೊಪ್ಪಿಗೆ ಮಾಡಿಕೊಂಡು ಅರ್ಜಿಗಳನ್ನು ವಾಪಸ್ಸು ಪಡೆದಿದ್ದಾರೆ. ಕೇಂದ್ರ ಸರ್ಕಾರದವರು ಈ ಮತಗಳ್ಳತನವನ್ನು ಒಂದು ದೊಡ್ಡ ಕ್ರಿಮಿನಲ್ ಸಂಚು ಎಂದು ಏಕೆ ಪರಿಗಣಿಸಲಿಲ್ಲ? ರಾಜ್ಯದಲ್ಲಿ ನಮ್ಮ ಹೋರಾಟದ ನಂತರ ಚುನಾವಣಾ ಆಯೋಗವೂ, ಸೂಕ್ತ ಪರಿಶೀಲನೆಯಿಲ್ಲದೇ ಯಾವುದೇ ಅರ್ಹ ಮತವನ್ನು ತೆಗೆದುಹಾಕಬಾರದೆಂದು ಸ್ಪಷ್ಟ ಸೂಚನೆ ನೀಡಿದೆ. ನಾವು ಆ ಹೋರಾಟ ಮಾಡದೇ ಇದ್ದಿದ್ದರೆ, ಬಡ ಹಳ್ಳಿಗರು, ಅನಕ್ಷರಸ್ಥರ ಮತಗಳನ್ನು ಡಿಲೀಟ್ ಮಾಡಲಾಗುತ್ತಿತ್ತು. ಈಗ ಚುನಾವಣಾ ಆಯೋಗವು, ದೇಶಾದ್ಯಂತ ಯಾವುದೇ ವಸತಿಯಿಲ್ಲದವರು, ಶೋಷಿತರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಒಂದು ತಿಂಗಳ ಕಾಲ ಅಭಿಯಾನದ ರೀತಿಯಲ್ಲಿ ಮತಗಳ ರಕ್ಷಣೆ ಮಾಡಬೇಕೆಂದು ತಿಳಿಸಿದೆʼ ಎಂದರು.

ಮುಖ್ಯಮಂತ್ರಿಯಾಗಿ ರಾಜ್ಯದ ಪ್ರತಿಯೊಬ್ಬರ ಮತರಕ್ಷಣೆ ನನ್ನ ಕರ್ತವ್ಯ

ಮತಗಳನ್ನು ರಕ್ಷಿಸುವ ಕಾರ್ಯವು ಬೆಂಗಳೂರಿನಿಂದ ಪ್ರಾರಂಭವಾಗಿದ್ದು, ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ರಾಜ್ಯದ ಪ್ರತಿ ನಾಗರಿಕನ ಮತದ ಹಕ್ಕನ್ನು ರಕ್ಷಿಸುವುದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯವಲ್ಲವೇ? ಬಿಜೆಪಿಯವರು ಮತಗಳ್ಳತನ ಮಾಡಲು ಇಂತಹ ಹಂತಕ್ಕೆ ತಲುಪುವರೆಂಬ ಕಲ್ಪನೆ ನಮಗಿರಲಿಲ್ಲ. ಚುನಾವಣೆ ಗೆಲ್ಲಲು ಮೊದಲು ರಾಜ್ಯದ ಹಾಗೂ ದೇಶದ ಜನರ ಮನಸ್ಸನ್ನು ಗೆಲ್ಲಬೇಕು. ಆದರೆ ಬಿಜೆಪಿಯವರು ಚುನಾವಣಾ ಆಯೋಗದ ವ್ಯವಸ್ಥೆಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆʼ ಎಂದು ಆರೋಪಿಸಿದರು.

Karnataka drought: ಬರ ಹಿನ್ನೆಲೆ ರೈತರ ಸಾಲ ವಸೂಲಿ ಮುಂದೂಡಿಕೆ; ಬ್ಯಾಂಕ್‌ ನೋಟಿಸ್‌ಗೆ ಆತಂಕಪಡಬೇಕಿಲ್ಲ ಎಂದ ಡಿಸಿಎಂ

ಜಿಎಸ್‌ಟಿ ಮಂಡಳಿ ಸಭೆ: ರಾಜ್ಯದ ಹಿತದೃಷ್ಟಿಯಿಂದ ಪ್ರಸ್ತಾವನೆ ಸಲ್ಲಿಕೆ

ಕಳೆದ ಮೂರು ದಿನಗಳಿಂದ ಜಿ ಎಸ್ ಟಿ ಮಂಡಳಿ ಸಭೆ ನಡೆಯುತ್ತಿತ್ತು. ಇಂದಿನ ಸಭೆಯಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಇಂದು ನಾನು ಹಾಗೂ ಸಚಿವ ಕೃಷ್ಣ ಬೈರೇಗೌಡರು ಸಭೆಯಲ್ಲಿ ಭಾಗವಹಿಸುತ್ತಿದ್ದೇವೆ. ಬೆಂಗಳೂರಿನಲ್ಲಿಯೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ನಿನ್ನೆಯೂ ಸಭೆ ನಡೆಸಿ ನಮ್ಮ ನಿಲುವೇನು ಎಂದು ತಿಳಿಸಿದ್ದು, ತೆಲಂಗಾಣ ಸೇರಿದಂತೆ ಇತರೆ ರಾಜ್ಯಗಳ ಅಭಿಪ್ರಾಯ ತಿಳಿಸಲಾಗಿದೆ. ಅಧಿಕಾರಿಗಳು ಕೂಡ ಪ್ರಮುಖ ವಿಚಾರಗಳನ್ನು ತಿಳಿಸಿದ್ದು, ರಾಜ್ಯದ ಹಿತದೃಷ್ಟಿಯಿಂದ ಪ್ರಸ್ತಾವನೆ ಮಾಡಲಿದ್ದೇನೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.